ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಲೋಕಕ್ಕೆ ಹೊಸ ಆಯಾಮ

Last Updated 12 ಜೂನ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ಜಾನಪದ ಕಲೆ ಮತ್ತು ಸಂಸ್ಕೃತಿಯ ಸೊಬಗನ್ನು ಪಸರಿಸುತ್ತಿರುವ ಜಾನಪದ ಲೋಕ ತನ್ನ ಚಟುವಟಿಕೆಯನ್ನು ಇನ್ನಷ್ಟು ವಿಸ್ತರಿಸಲು ನೂತನ ವಸ್ತು ಸಂಗ್ರಹಾಲಯ ನೆರವಾಗಲಿದೆ. ಇದು ಲೋಕದ ಕಾರ್ಯ ಚಟುವಟಿಕೆಗೆ ನೂತನ ಆಯಾಮ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಜಾನಪದ ಲೋಕದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ಜಾನಪದ ವಸ್ತು ಸಂಗ್ರಹಾಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಲೋಕದಲ್ಲಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ಸಂಸದರು, ಶಾಸಕರು, ಮಾಜಿ ಸಚಿವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು ರಾಜ್ಯದ ಸಂಸ್ಕ್ರತಿ ಸಂವರ್ಧನೆಗೆ ಅನುಪಮ ಸೇವೆ ಸಲ್ಲಿಸುವ ಒತ್ತಾಸೆಯಿಂದ ಜಾನಪದ ಲೋಕ ನಿರ್ಮಿಸಿದ ಎಚ್.ಎಲ್.ನಾಗೇಗೌಡ ಅವರನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರನ್ನು ನೆನೆದರು.

ನಾಡಿಗೆ ಸ್ಪೂರ್ತಿ: ನಾಗೇಗೌಡರ ಬದ್ಧತೆ ಮತ್ತು ಪರಿಶ್ರಮದಿಂದಾಗಿ ಜಾನಪದ ಲೋಕ ಬೆಳೆದು ಹೆಮ್ಮರವಾಗಿ ನಿಂತಿದೆ. ಈ ಲೋಕವನ್ನು ನಾವೆಲ್ಲ ಒಟ್ಟಾರೆ ಸೇರಿ ಇನ್ನಷ್ಟು ಬೆಳೆಸಬೇಕಿದೆ. ಈ ಮೂಲಕ ಇದನ್ನು ನಾಡಿನ ಎಲ್ಲ ಭಾಗದ ಜನತೆಗೆ ಸ್ಫೂರ್ತಿ ನೀಡುವಂತೆ ರೂಪಿಸಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದರು.

ಜಾನಪದ ಲೋಕದ ಕಾರ್ಯ ನಿರ್ವಹಣೆ, ಯೋಜನೆ ಮತ್ತು ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ಕಳೆದ ಮೂರು ಸಾಲಿನಿಂದ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡುತ್ತಾ ಬಂದಿದೆ ಎಂದು ಹೇಳಿದರು.
ಆಧುನಿಕ ಭರಾಟೆಯಲ್ಲಿ ಜಾನಪದ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂಬ ಆತಂಕ ಎದುರಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯತ್ತ ದೇಶದ ಯುವ ಜನತೆ ಮಾರು ಹೋಗುತ್ತಿದ್ದಾರೆ. ಅವರಿಗೆ ನಮ್ಮ ಜಾನಪದ ಸಂಸ್ಕೃತಿ ಮತ್ತು ಕಲೆಯಲ್ಲಿ ಇರುವ ಶ್ರೇಷ್ಠತೆಯನ್ನು ಪರಿಚಯಿಸಿ, ತಿಳಿಹೇಳಬೇಕಾದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಜಾನಪದ ಲೋಕ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಶ್ವತ ಕೆಲಸ: ಮುಂದಿನ ಸಮಾಜವನ್ನು ಕಣ್ಮುಂದೆ ಇಟ್ಟುಕೊಂಡು ಎಚ್.ಎಲ್.ನಾಗೇಗೌಡ ಅವರು ನಮ್ಮ ಸಂಸ್ಕೃತಿ ಉಳಿಕೆಗೆ ಶಾಶ್ವತವಾದ ಕೆಲಸವನ್ನು ಜಾನಪದ ಲೋಕ ನಿರ್ಮಿಸುವ ಮೂಲಕ ಮಾಡಿದ್ದಾರೆ ಎಂದು ನೆನೆದರು.

ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸಲು ಮುಂದಾಗಿರುವ ರಾಜ್ಯ ಸರ್ಕಾರ ಕೂಡ ಶಾಶ್ವತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಭವಿಷ್ಯದ ಪ್ರಜೆಗಳನ್ನು ಗಮನದಲ್ಲಿ ಇಟ್ಟುಕೊಂಡು ಶಾಶ್ವತ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದರು.

`ನಾನು ಹೆಚ್ಚು ಮಾತನಾಡುವ ಅಗತ್ಯ ಇಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗ ಹೆಚ್ಚು ಮಾತನಾಡಿದ್ದೇನೆ. ಈಗ ಆಡಳಿತ ಪಕ್ಷದ ನಾಯಕನಾಗಿದ್ದು, ಮತನಾಡದೇ ಜನರಿಗೆ ಅಗತ್ಯವಿರುವ ಕೆಲಸಗಳನ್ನು ಮಾಡಿಕೊಡುತ್ತೇನೆ~ ಎಂದು ಅವರು ಭರವಸೆ ನೀಡಿದರು.

ರಾಜಶೇಖರನ್ ಬೆಂಬಲ: ಕೇಂದ್ರ ಸರ್ಕಾರದ ಮಾಜಿ ಸಚಿವರೂ ಆದ ವಿಧಾನ ಪರಿಷತ್ತಿನ ಸದಸ್ಯ ಎಂ.ವಿ.ರಾಜಶೇಖರನ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಕಷ್ಟು ನೆರವು ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಇಂತಹ ಸಾಕಷ್ಟು ಕೆಲಸಗಳು ಅವರಿಂದ ಆಗಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹಾಗೂ ಈ ಭಾಗ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿ (ಐದು ಕೋಟಿ ರೂಪಾಯಿ)ಯಿಂದ ಜಾನಪದ ಲೋಕದ ಅಭಿವೃದ್ಧಿಗೆ ನೆರವು ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ, ಶಾಸಕರಾದ ಕೆ.ರಾಜು, ಸಿ.ಪಿ.ಯೋಗೇಶ್ವರ್,ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಜಿ.ನಾರಾಯಣ, ಜಾನಪದ ಲೋಕದ ವ್ಯವಸ್ಥಾಪಕ ಟ್ರಸ್ಟಿ ಇಂದಿರಾ ಬಾಲಕೃಷ್ಣ, ಆದಿಚುಂಚನಗಿರಿಯ ಖಾ ಮಠದ ಸೋಮನಾಥ ಸ್ವಾಮೀಜಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಜಾತ ಶಿವಲಿಂಗಯ್ಯ, ಜಾನಪದ ಲೋಕದ ಕಾರ್ಯಾಧ್ಯಕ್ಷ ಟಿ. ತಿಮ್ಮೇಗೌಡ, ಕಾರ್ಯದರ್ಶಿ ಡಾ. ಚಕ್ಕೆರೆ ಶಿವಶಂಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT