ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಮಾರಾಟ ತಡೆಗೆ ಉಚಿತ ಮೇವು

Last Updated 24 ಸೆಪ್ಟೆಂಬರ್ 2011, 6:35 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಪೂರ್ಣ ವಿಫಲವಾಗಿದ್ದು, ದನ-ಕರುಗಳ ಮೇವಿಗೆ ಹಾಹಾಕಾರ ಉಂಟಾಗಿರುವುದನ್ನು ಅರಿತು ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಿಕೊಳ್ಳುವುದನ್ನು ತಡೆಯಲು ವೈಯಕ್ತಿಕವಾಗಿ ಮೇವು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಶಾಸಕ ಡಿ. ಸುಧಾಕರ್ ತಿಳಿಸಿದರು.

ತಾಲ್ಲೂಕಿನ ಹರ್ತಿಕೋಟೆಯಲ್ಲಿ ಶುಕ್ರವಾರ ರೈತರಿಗೆ ಮೇವು ವಿತರಣೆ ಮಾಡಿದ ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಣ ಕೊಟ್ಟರೂ ಮೇವು ಸಿಗುತ್ತಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾಗಿ ಬೆಳೆ ಹಾಳಾಗಿರುವ ಕಾರಣ ಅಲ್ಲಿಯೂ ಮೇವು ಲಭ್ಯವಿಲ್ಲ. ನೆರೆಯ ಆಂಧ್ರಪ್ರದೇಶದ ಗ್ರಾಮಗಳಲ್ಲಿ ಮೇವಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
 
ಎಲ್ಲೇ ಮೇವು ಸಿಕ್ಕರೂ ಖರೀದಿಸಿ ತರಲಾಗುತ್ತದೆ. ಸರ್ಕಾರಕ್ಕೆ ಜಿಲ್ಲೆಯಲ್ಲಿನ ಬರಗಾಲದ ಬಗ್ಗೆ ಮಾಹಿತಿ ನೀಡಿದ್ದರೂ ಇನ್ನೂ ನೆರವಿಗೆ ಬಂದಿಲ್ಲ. ಸರ್ಕಾರದ ನೆರವಿಗೆ ಕಾದು ಕುಳಿತರೆ ಜನ ಗುಳೇ ಹೋಗಬಹುದು, ಜಾನುವಾರು ಮಾರಾಟ ಮಾಡಿಕೊಳ್ಳಬಹುದು ಎಂಬ ಕಾರಣಕ್ಕೆ ತಕ್ಷಣ ಮೇವು ವಿತರಣೆ ಮಾಡಲು ಮುಂದಾಗಿರುವುದಾಗಿ ಹೇಳಿದರು.

ಕೆಲವು ಗ್ರಾಮಗಳಲ್ಲಿ ರೈತರು ಮೇವಿಗೆ ಮುಗಿಬಿದ್ದು, ಗೊಂದಲ ಉಂಟಾಗಿದೆ. ತಮ್ಮ ಜತೆ ರೈತರು ಶಾಂತ ರೀತಿಯಿಂದ ಸಹಕರಿಸಬೇಕು. ತಾಲ್ಲೂಕಿನ ಪ್ರತಿ ಹಳ್ಳಿಗೂ ಹಂತ ಹಂತವಾಗಿ ಮೇವು ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಚಂದ್ರಪ್ಪ, ತಾ.ಪಂ. ಸದಸ್ಯ ಚಂದ್ರಪ್ಪ, ಮಹಾಂತೇಶ್, ಎಂ.ಡಿ. ನಾಯಕ, ಬಾಲಶಂಕರ, ಮಾರೇನಹಳ್ಳಿ ಶಿವಣ್ಣ, ಬಿ.ವಿ. ಮಾಧವ, ಪ್ರಭಾಕರ್, ಪರಮೇಶಪ್ಪ, ಸಲಬೊಮ್ಮನಹಳ್ಳಿ ಪುಟ್ಟಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT