ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಮೇವಿನ ಸಮಸ್ಯೆ ಉಲ್ಬಣ

Last Updated 24 ಮಾರ್ಚ್ 2011, 5:35 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದಲ್ಲಿ ಒಣ ಹುಲ್ಲು ಸಂಗ್ರಹ ಕಾರ್ಯ ಮುಂದುವರೆದಿದೆ. ರೈತರು ರಾಗಿ ಅಥವಾ ಭತ್ತದ ಕಾಳನ್ನು ಒಕ್ಕಿದ ಮೇಲೆ ಹುಲ್ಲನ್ನು ಬಣವೆಗೆ ಹಾಕುತ್ತಿದ್ದಾರೆ.ಈಗಾಗಲೆ ಬೇಸಿಗೆ ಪ್ರಾರಂಭವಾಗಿದ್ದು, ಹಸಿ ಮೇವಿನ ಸಮಸ್ಯೆ ಕಾಣಿಸಿಕೊಂಡಿದೆ. ಸೀಮೆ ಹಸುಗಳನ್ನು ಹೊಂದಿರು ರೈತರು ಜೋಳದ ದಂಟನ್ನು ಖರೀದಿಸಿ ತಂದು ತಮ್ಮ ಹಸುಗಳಿಗೆ ಹಾಕುತ್ತಿದ್ದಾರೆ.  ಈ ವರ್ಷ ರಾಗಿ ಬೆಳೆ ಕೈಕೊಟ್ಟ ಪರಿಣಾಮವಾಗಿ ಸಾಕಷ್ಟು ಒಣ ಹುಲ್ಲು ದೊರೆಯುತ್ತಿಲ್ಲ. ಆದರೆ ಇರುವ ದನಕರುಗಳಿಗಾಗಿ ನೆರೆಯ ಆಂಧ್ರಪ್ರದೇಶ ಮತ್ತು ಗಡಿ ಗ್ರಾಮಗಳಿಂದ ಒಣ ಹುಲ್ಲನ್ನು ಖರೀದಿಸಿ ತರಲಾಗುತ್ತಿದೆ.

ಒಣ ಹುಲ್ಲಿನ ಬೆಲೆಯೂ ಗಗನಕ್ಕೇರಿದೆ. ಗಿಡ್ಡರಾಗಿ ಕಟ್ಟುಗಳ ಬೆಲೆಯನ್ನು ಕೇಳುವಂತೆಯೇ ಇಲ್ಲ. ದನಕರುಗಳನ್ನು ಹೊಂದಿಲ್ಲದಿದ್ದವರು, ತಮ್ಮಲ್ಲಿನ ಅಷ್ಟಿಷ್ಟು ಹುಲ್ಲನ್ನು ಅಗತ್ಯ ಇರುವವರಿಗೆ ಮಾರಿಕೊಳ್ಳುತ್ತಿದ್ದಾರೆ. ಮಾರುವವರಿಗಿಂತ ಕೊಳ್ಳುವವರ ಸಂಖ್ಯೆ ಬೆಳೆದಿರುವುದರಿಂದ ಹುಲ್ಲಿನ ಬೆಲೆ ಹೆಚ್ಚಾಗಿದೆ. ಹುಲ್ಲನ್ನು ವಾಹನಕ್ಕೆ ತುಂಬುವ ಕೂಲಿ, ಸಾಗಾಣಿಕೆ ವೆಚ್ಚ ಸೇರಿಸಿದರೆ ಅದರ ಬೆಲೆ ಇನ್ನಷ್ಟು ಹೆಚ್ಚುತ್ತದೆ.

 ಹಾಲಿನ ಬೆಲೆಯನ್ನು ತುಸು ಹೆಚ್ಚಿಸಲಾಗಿದೆ. ಆದರೆ ಜಾನುವಾರು ಮೇವಿನ ಬೆಲೆ ದುಬಾರಿಯಾಗಿದೆ. ಇದರಿಂದ ರೈತರಿಗೆ ಏನೂ ಗಿಟ್ಟುತ್ತಿಲ್ಲ. ವೃತ್ತಿಯನ್ನು ಬಿಡಲಾಗದೆ ಹೆಣಗುತ್ತಿದ್ದೇವೆ ಎಂದು  ಹಾಲು ಉತ್ಪಾದಕರು ಅಭಿಪ್ರಾಯಪಡುತ್ತಾರೆ.

 ಹುಲ್ಲಿನ ಮೆದೆಗಳು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿದ್ದವು. ಆದರೆ ಈಗ ಅಲ್ಲೊಂದು ಇಲ್ಲೊಂದು ಮಾತ್ರ ಕಾಣಸಿಗುತ್ತವೆ. ಹೆಚ್ಚಿನವು ಖರೀದಿಸಿದ ಹುಲ್ಲಿನವು. ನೀರಿನ ಆಸರೆ ಇರುವ ರೈತರು ಮಾತ್ರ ಹಸಿರು ಮೇವನ್ನು ಬೆಳೆಯುತ್ತಿದ್ದಾರೆ. ತಮಗೆ ಆಗಿ ಉಳಿದಿದ್ದನ್ನು ಮಾತ್ರ ಹಣಕ್ಕಾಗಿ ಮಾರುತ್ತಿದ್ದಾರೆ. ಇನ್ನು ಕೆರೆ ಕುಂಟೆಗಳಲ್ಲಿ ನೀರು ಬತ್ತಿಹೋಗಿದ್ದು, ಜಾನುವಾರು ನೀರಿನ ಸಮಸ್ಯೆ ತಲೆದೋರಿದೆ. ಜಾನುವಾರು ಕುಡಿಯುವ ನೀರಿಗೂ ಕೊಳವೆ ಬಾವಿಗಳನ್ನು ಆಶ್ರಯಿಸಬೇಕಾಗಿ ಬಂದಿದೆ. ಆದರೆ ವಿದ್ಯುತ್ ಕಣ್ಣುಮುಚ್ಚಾಲೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT