ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಸಾಗಾಟ: ಘರ್ಷಣೆ; ಐವರ ಬಂಧನ

Last Updated 3 ಅಕ್ಟೋಬರ್ 2011, 6:15 IST
ಅಕ್ಷರ ಗಾತ್ರ

ಭಟ್ಕಳ: ಅಕ್ರಮ ಜಾನುವಾರು ಸಾಗಾಟದ ಶಂಕೆಯ ಹಿನ್ನೆಲೆಯಲ್ಲಿ ಗುಂಪೊಂದು ಮಿನಿ ಲಾರಿಯನ್ನು ಅಡ್ಡಗಟ್ಟಿ ಚಾಲಕನನ್ನು ಮನಸ್ಸಿಗೆ ಬಂದಂತೆ ಥಳಿಸಿದ್ದಲ್ಲದೆ, ಹಲ್ಲೆಯನ್ನು ತಡೆಯಲು ಬಂದ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಮೇಲೂ ಹಲ್ಲೆ ನಡೆಸಲು ಮುಂದಾದ ಘಟನೆ ತಾಲ್ಲೂಕಿನ ಸರ್ಪನಕಟ್ಟೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸರ್ಪನ ಕಟ್ಟೆಯ ಆನಂದ ನಾಯ್ಕ, ಶರತ್‌ನಾಯ್ಕ, ಉದಯ ನಾಯ್ಕ, ಗಣೇಶ ನಾಯ್ಕ ಮತ್ತು ಹನುಮಂತ ನಾಯ್ಕ ಎಂದು ಗುರುತಿಸಲಾಗಿದೆ.ಹಲ್ಲೆಗೆ ಮುಂದಾದ ಗುಂಪಿನಲ್ಲಿದ್ದ ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ.

ಹಲ್ಲೆಗೊಳಗಾದವರನ್ನು ವೆಂಕಟಾಪುರದ ಐಸ್‌ಫ್ಯಾಕ್ಟರಿ ಸಮೀಪದ ನಿವಾಸಿ ಲಾರಿ ಚಾಲಕ ರೆಹೆಮತ್ ಉಲ್ಲಾ ಮತ್ತು ಕಾನ್ಸಟೇಬಲ್‌ಗಳಾದ ಅಶೋಕ ಗಾಂವಕರ್ ಹಾಗೂ ಬಾಬು ಪಟಗಾರ್ ಎಂದು ಗುರುತಿಸಲಾಗಿದೆ.
ತೀವ್ರ ಗಾಯಗೊಂಡ ಚಾಲಕ ರೆಹೆಮತ್ ಉಲ್ಲಾನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಕಾನ್ಸ್‌ಟೇಬಲ್‌ಗಳು ಇಲ್ಲಿನ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯಿಂದ ಸರ್ಪನಕಟ್ಟೆ ಮತು ಸುತ್ತಮುತ್ತಲ ಪ್ರದೇಶಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿ ರುವ ಹಿನ್ನೆಲೆಯಲ್ಲಿ, ಮುಂಜಾಗೃತ ಕ್ರಮವಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹೆಚ್ಚುವರಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಭಟ್ಕಳಕ್ಕೆ ಕರೆಸಿಕೊಳ್ಳಲಾಗಿದೆ.

ಹಲ್ಲೆಗೊಳಗಾದ ಲಾರಿ ಚಾಲಕನನ್ನು ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ತಡರಾತ್ರಿಯಾಗಿದ್ದರೂ ನೂರಾರು ಜನರು ಆಸ್ಪತ್ರೆಯ ಮುಂದೆ ಜಮಾಯಿಸಿ, ಹಲ್ಲೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಡಿಎಸ್‌ಪಿ ಎಂ. ನಾರಾಯಣ, ಸಿ.ಪಿ.ಐ. ಶಿವಪ್ರಕಾಶ ನಾಯ್ಕ ಮತ್ತು ಸಿಬ್ಬಂದಿ ಆಕ್ರೋಶಿತರನ್ನು ಸಮಾಧಾನ ಪಡಿಸಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು.

ಹೆಚ್ಚುವರಿ ಎಸ್.ಪಿ.ಭೇಟಿ : ಸರ್ಪನ ಕಟ್ಟೆಯಲ್ಲಿ ಹಲ್ಲೆ ಘಟನೆಯಿಂದ ಉಂಟಾದ ತ್ವೇಷಮಯ ವಾತಾವರಣದ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್.ಪಿ. ಸುಭಾಸ್ ಗುಡಿಮನೆ ಶನಿವಾರ ರಾತ್ರಿಯೇ ಕಾರವಾರದಿಂದ ಭಟ್ಕಳಕ್ಕೆ ಬಂದು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಎರಡು ದೂರು ದಾಖಲು: ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿವೆ.

ಖಂಡನೆ: ಶನಿವಾರ ರಾತ್ರಿ ಖಾಲಿ ಲಾರಿಯನ್ನು ಚಲಾಯಿಸಿಕೊಂಡು ಬರುತ್ತಿದ್ದ ಲಾರಿಚಾಲಕನ ಮೇಲೆ ವಿನಾ ಕಾರಣ ಗುಂಪೊಂದು ಹಲ್ಲೆ ನಡೆಸಿದ ಘಟನೆಯನ್ನು ಇಲ್ಲಿನ ಮುಸ್ಲಿಮರ ಪರಮೋಚ್ಚ ಸಂಸ್ಥೆ ಖಂಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT