ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳಿಗೂ ಬೇಕು ಸೊಳ್ಳೆ ಪರದೆ!

Last Updated 14 ನವೆಂಬರ್ 2011, 9:05 IST
ಅಕ್ಷರ ಗಾತ್ರ

ಕೆಂಭಾವಿ: ಸೊಳ್ಳೆಗಳ ಉಪಟಳದಿಂದ ತಪ್ಪಿಸಿಕೊಳ್ಳಲು ಕಾಯಿಲ್ ಹಚ್ಚುವುದು, ಹೊಗೆ ಹಾಕುವುದು ಹೀಗೆ ಹತ್ತಾರು ಪ್ರಯೋಗಗಳನ್ನು ಮಾಡಲಾಗುತ್ತಿದೆ. ರೋಗಗಳಿಗೆ ತುತ್ತಾಗುವ ಭಯದಿಂದಾಗಿ ಸೊಳ್ಳೆಗಳ ನಿವಾರಣೆಗೆ ಹರಸಾಹಸವನ್ನೇ ಮಾಡಬೇಕಾಗುತ್ತದೆ. ಮನುಷ್ಯರ ಪಾಡೇ ಈ ರೀತಿ ಇರುವಾಗ, ಇನ್ನೂ ಬಯಲಲ್ಲಿಯೇ ಮಲಗುವ ಜಾನುವಾರುಗಳ ಪಾಡೇನು? ಎಂಬ ಯೋಚನೆ ಬರದೇ ಇರಲಿಕ್ಕಿಲ್ಲ.

ಅವೇನ ದನಗೋಳು ಹೆಂಗರೇ ಇರ‌್ತಾವ ಎನ್ನುವ ಜನರೇ ಹೆಚ್ಚು. ಆದರೆ ಪಟ್ಟಣದ ಸುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳೂ ಸೊಳ್ಳೆಗಳ ಕಾಟದಿಂದ ತತ್ತರಿಸಿ ಹೋಗಿವೆ.

ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪುರ ಎಡದಂಡೆ ಕಾಲುವೆಯಿಂದಾಗಿ ನೀರಾವರಿ ಸೌಲಭ್ಯ ಪಡೆದಿರುವ ಈ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮನುಷ್ಯರನ್ನು ಹೊತ್ತುಕೊಂಡೇ ಹೋಗುತ್ತವೆ ಏನೋ ಎಂಬಂತೆ ಸೊಳ್ಳೆಗಳ ಆರ್ಭಟ ನಡೆದಿರುತ್ತದೆ.

ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಅದೆಷ್ಟೋ ಹರಸಾಹಸ ಮಾಡಿದರೂ, ಅವೆಲ್ಲವೂ ವ್ಯರ್ಥವಾಗುತ್ತಿವೆ. ಸಂಜೆಯ ವೇಳೆ ಹೊಗೆ ಹಾಕಿ, ಬೇವಿನ ಸೊಪ್ಪನ್ನು ಇಟ್ಟು ಸೊಳ್ಳೆಗಳನ್ನು ಓಡಿಸಲು ಇಲ್ಲಿನ ಗ್ರಾಮಸ್ಥರು ಸಾಕಷ್ಟ ಪರಿಶ್ರಮವನ್ನೇ ಪಡಬೇಕಾಗುತ್ತಿದೆ. ಆದರೂ ಸೊಳ್ಳೆಗಳ ಕಾಟದಿಂದ ಮುಕ್ತಿ ಮಾತ್ರ ದೊರೆಯುತ್ತಿಲ್ಲ.

ಬತ್ತದ ಗದ್ದೆಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಈ ಭಾಗದಲ್ಲಿ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತಿವೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಈ ಸೊಳ್ಳೆಗಳಿಂದ ಮನುಷ್ಯರಷ್ಟೇ ತೊಂದರೆ ಅನುಭವಿಸುತ್ತಿದ್ದಾರೆ ಎಂದರೆ ಅದು ಅಕ್ಷರಶಃ ತಪ್ಪು ಲೆಕ್ಕಾಚಾರ. ಇಲ್ಲಿ ಜಾನುವಾರುಗಳೂ ಸೊಳ್ಳೆಗಳ ಉಪಟಳದಿಂದ ಬೇಸತ್ತು ಹೋಗಿವೆ.

ಇದೀಗ ಈ ಭಾಗದಲ್ಲಿ ಜಾನುವಾರುಗಳಿಗೂ ಸೊಳ್ಳೆ ಪರದೆ ಕಟ್ಟುವ ಪರಿಪಾಠ ಬೆಳೆಯುತ್ತಿದೆ. ಹೀಗಾದರೂ ಜಾನುವಾರುಗಳು ಸೊಳ್ಳೆಗಳ ಉಪಟಳದಿಂದ ಮುಕ್ತಿ ಕಾಣಲಿ ಎಂಬ ಇಚ್ಛೆ ರೈತರದ್ದು.

“ಏನ್ ಮಾಡ್ಲಾಕ ಆಗತೈತಿ ಹೇಳ್ರಿ. ದ್ವಾಮಿ ಕಾಟಕ್ಕೆ ಸಾಕ ಸಾಕಾಗೇ ಹೋಗೈತಿ. ಮನಷ್ಯಾರಿಗಂತೂ ಕುಂಡ್ರಾಕ ಕೊಡುದುಲ್ಲ. ಈಗ ನೋಡ್ರಿ ದನಗೋಳ್ದು ಗೋಳ ಹೆಚ್ಚಾಗೇತಿ. ರಾತ್ರಿ ಪೂರ್ತಿ ಎಮ್ಮೆ, ಎತ್ತು, ಆಕಳ ಬಾಲಾ ಝಾಡಸಬೇಕು. ಇಲ್ಲದ್ರ ಗೋಣ ಹಾಕಬೇಕು. ಹಿಂಗಾಗಿ ದನಗೋಳಿಗೂ ಭಾಳ ತ್ರಾಸ ಆಗೇತಿ. ರಾತ್ರಿ ದನದ ಹಕ್ಯಾಗ ಹೊಗಿ ಹಾಕತೇವ್ರಿ. ಬೇವಿನ ಸೊಪ್ಪ ಇಟ್ಟ ಹೊಗಿ ಹಾಕಿದ್ರು, ಈ ದ್ವಾಮಿ ಮಾತ್ರ ಹೋಗಂಗಿಲ್ರಿ. ಅದಕ ಸೊಳ್ಳಿ ಪರದೆ ತಂದ ಕಟ್ಟಿ ಬಿಟ್ಟೇವ ನೋಡ್ರಿ” ಎನ್ನುತ್ತಾರೆ ಪರಸನಳ್ಳಿಯ ರೈತ ರಾಮಪ್ಪ.

“ದನಕ್ಕನೂ ಭಾಳ ತ್ರಾಸ ಐತಿ ಈ ದ್ವಾಮಿಯಿಂದ. ಎಷ್ಟಂತರೇ ಮಾಡೋಣ ಹೇಳ್ರಿ. ದ್ವಾಮಿ ಕಚ್ಚೋದಕ್ಕ ದನಕ್ಕನೂ ಬ್ಯಾನಿ ಆಗ್ಲಾಕತೈತಿ. ಹಿಂಗಾಗಿ ಭಾಳ ತೊಂದ್ರಿ ಆಗೇತ ಬಿಡ್ರಿ” ಎನ್ನುವುದು ರೈತ ಮಹಿಳೆ ಮಲ್ಲಪ್ಪ ಅವರ ಗೋಳು.

ಕೇವಲ ಮನುಷ್ಯರಿಗಷ್ಟೇ ಕಚ್ಚಿ ತೊಂದರೆ ನೀಡುತ್ತಿದ್ದ ಸೊಳ್ಳೆಗಳಿಂದ ಈಗ ಜಾನುವಾರುಗಳು ತೊಂದರೆ ಅನುಭವಿಸುವಂತಾಗಿದೆ. ಸೊಳ್ಳೆಗಳ ಉಪಟಳದಿಂದ ಹೇಗಾದರೂ ಮಾಡಿ ಮುಕ್ತಿ ನೀಡಿ ಎಂದು ಮೂಕ ಭಾಷೆಯಲ್ಲಿ ಬೇಡಿಕೊಳ್ಳುತ್ತಿವೆ. ಇದಕ್ಕಾಗಿಯೇ ಮಾಲೀಕರು ಸೊಳ್ಳೆ ಪರದೆಗಳನ್ನು ತಂದು ಹಾಕುತ್ತಿದ್ದು, ಇದರಿಂದ ಸೊಳ್ಳೆ ಪರದೆ ಮಾರಾಟಗಾರರಿಗೆ ಮಾತ್ರ ಸಾಕಷ್ಟು ಲಾಭ ಆಗುತ್ತಿದೆ ಎನ್ನುತ್ತಿದ್ದಾರೆ ಇಲ್ಲಿಯ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT