ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳಿಗೆ ಸಿಗದ ಮೇವು: ರೈತರ ಬವಣೆ

Last Updated 11 ಜನವರಿ 2014, 6:38 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ‘ಪಕ್ಕಕ್ಕ ತುಂಗಭದ್ರ ಹೊಳಿ ಹರೀತಿದ್ರೂ, ಮೂರು ವರ್ಸಾ ಆತ ನೋಡ್ರಿ ರೈತ್ರು ಬರೇ ಬರಗಾಲನಾ ನೋಡಾಕ್ಹತ್ಯಾರ. ದನ ಕರಕ್ಕ ಮೇವ ಸಿಗದಂಗಾಗೈತಿ. ಇದ್ದಂತೋರು ಒಳ್ಳೆ ಸುಗ್ಯಾಗ ಮೇವು ಖರೀದಿ ಮಾಡಿ ತಮ್ಮ ತಮ್ಮ ಕಣದಾಗ ಹೊಟ್ಟಿ­ಕೊಂಡ್ರು. ಇಲ್ಲದಂತೋರ ಗತಿ ಹೀನಾಯ ಆಗೈತಿ’’. 

ಪಟ್ಟಣದ ವಿಜಯನಗರ ಮಾರುಕಟ್ಟೆಯ ಜಾನುವಾರು ಸಂತೆಯಲ್ಲಿ ಪ್ರಜಾವಾಣಿಯೊಂದಿಗೆ ಮಾತನಾಡಿದ ತಾಲ್ಲೂಕಿನ ಕನ್ನಿಹಳ್ಳಿ ಗ್ರಾಮದ ರೈತ ಕೊಟ್ರೇಶಪ್ಪ ಮೇವಿನ ಬವಣೆ ಬಿಚ್ಚಿಟ್ಟಿದ್ದು ಹೀಗೆ.

ಮುಂದಿನ ಬೇಸಿಗೆ ದಿನಗಳ ಕಾಲಕ್ಕಾಗಿ ಜಾನುವಾರುಗಳಿಗಾಗಿ ಮೇವು ಖರೀದಿಸಿ ಸಂಗ್ರಹಿಸಬೇಕೆಂದಿರುವ ರೈತರಿಗೆ ಹಣ ನೀಡಿದರೂ ಮೇವು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಮೇವಿಗೆ ತಾಲ್ಲೂಕಿನಲ್ಲಿ ಚಿನ್ನದ ಬೆಲೆ ಬರಲಿದೆ. ಹಣ ಕೊಟ್ಟರೂ ಮೇವು ಸಿಗದಂತಾಗಿದೆ ಎಂದು ಹೈನುಗಾರಿಕೆಯಲ್ಲಿ ತೊಡಗಿಕೊಂಡವರೂ ನಿಟ್ಟುಸಿರು ಬಿಡುವಂತಾಗಿದೆ.

ತಾಲ್ಲೂಕಿನಲ್ಲಿ ನಾಲ್ಕು ಹೋಬಳಿಗಳಿದ್ದು, ಕೋಗಳಿ ಮತ್ತು ಹಗರಿಬೊಮ್ಮನಹಳ್ಳಿ ಹೋಬಳಿಗಳ ಬಹುತೇಕ ಗ್ರಾಮಗಳು ಪೂರಕ ನೀರಾವರಿ ಯೋಜನೆಗಳ ಅನುಷ್ಠಾನದಿಂದ ಶಾಶ್ವತವಾಗಿ ವಂಚಿತವಾಗಿವೆ. ಈ ಭಾಗದ ಮೇವಿನ ಬವಣೆ ತಾರಕಕ್ಕೇರಿದ್ದು, ಮೇವಿಗಾಗಿ ತುಂಗಭದ್ರಾ ನದಿಯ ಸೆರಗಂಚಿನ ತಂಬ್ರಹಳ್ಳಿ ಮತ್ತು ಹಂಪಸಾಗರ ಹೋಬ­ಳಿಗಳ ಗ್ರಾಮಗಳ ರೈತರನ್ನು ಆಶ್ರಯಿಸಬೇಕಾಗಿದೆ.

ಈ ಬಾರಿಯೂ ತಾಲ್ಲೂಕಿನಾದ್ಯಂತ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಲಿಲ್ಲ. ಮುಂಗಾರು ಸಮಯದಲ್ಲೇ ಮಳೆ ಕೈಕೊಟ್ಟು ನಿರೀಕ್ಷಿತ ವಿಸ್ತೀರ್ಣದಲ್ಲಿ ಬಿತ್ತನೆ  ಸಾಧ್ಯವಾಗ­ಲಿಲ್ಲ. ತಡವಾಗಿ ಸುರಿದ ಅಲ್ಪ ಮಳೆಗೆ ಬಿತ್ತನೆ ಪ್ರದೇಶದಲ್ಲಿ, ಮಳೆ ಕೊರತೆಯಿಂದಾಗಿ ಬೀಜ ಮೊಳಕೆ ಒಡೆಯಲಿಲ್ಲ. ತಡವಾಗಿ ಬಿತ್ತನೆ ಮಾಡಲಾದ ಕಡೆ ಮತ್ತೆ ಮಳೆ ಬಾರದೆ ಬೆಳೆ ಒಣಗಿ ಹಾಳಾಯಿತು ಎನ್ನುತ್ತಾರೆ ಕೃಷಿಕ ವಡಚನಾಳ ತೋಟಪ್ಪ.

ಜಾನುವಾರುಗಳಿಗೆ ಕಸುವು ನೀಡುವ ಕಾಳು ಕಡಿ ಬಿಟ್ಟು ಮೆಕ್ಕೆಜೋಳದ ಮೇವು ಬಾಡಿಗೆ ಹೊರತು ಪಡಿಸಿ ಬಂಡಿಗೆ ರೂ. 1200, ಟ್ರ್ಯಾಕ್ಟರ್‌ಗೆ ರೂ. 1500, ಜೋಳ ಕ್ರಮವಾಗಿ ರೂ. 2000 ಮತ್ತು ರೂ. 3000, ಭತ್ತದ ಹುಲ್ಲು ಕ್ರಮವಾಗಿ ರೂ. 2500, ಮತ್ತು ರೂ. 3500 ಹಾಗೂ ಶೇಂಗಾ ಹೊಟ್ಟು ಕ್ರಮವಾಗಿ ರೂ. 3000 ಮತ್ತು ರೂ. 5000 ಎಂದು ಮಾಹಿತಿ ನೀಡುವ ಸಾಲಮೂರುಹಳ್ಳಿಯ ರೈತ ಆನಂದಳ್ಳಿ ಪಾಯಪ್ಪ ತಮ್ಮ ಎರಡು ಎತ್ತುಗಳ ಮೇವಿಗಾಗಿ ವರ್ಷಕ್ಕೆ ರೂ. 25ಸಾವಿರ ಖರ್ಚಾಗುತ್ತೆ ಎನ್ನುತ್ತಾರೆ.

ನನ್ನವು ನೋಡ್ರಿ ಎರಡು ಎತ್ತ ಅದಾವ್ರಿ, ಮುಂಗಾರಿ ಹಂಗಾಮಿನಾಗ ಬರೇ 30ದಿನ ಗಳೇವು, ಬಿತ್ತಾಕಂತ ಎರಡೂ ದನ ಹೋದ್ರೆ, ದಿನಕ್ಕೆ ಸಾವಿರ ಅಂದ್ರೂ 30 ದಿನಕ್ಕೆ 30 ಸಾವ್ರ ದುಡಿತಾವ. ನಾವೇನು ದನಕ್ಕ ಮೇವು ಹಾಕಂಗಿಲ್ಲ ಅನ್ನಲ್ರಿ, ಆದ್ರ ರೊಕ್ಕ ಕೊಟ್ರೂ ಮೇವು ಇಲ್ಲ ನೋಡ್ರಿ. ಬರಗಾಲ ಬಿದ್ದೈತಿ ಅಂತಾ ಸರಕಾರನಾ ಹೇಳೇತಲ್ರಿ. ದನ ಎಮ್ಮಿಗೆ ಮೇವು ಕೊಟ್ರ ಪುಣ್ಯ ಬರತೈತಿ ಎಂದು ಹೇಳುವ ಆನೇಕಲ್ಲು ಗ್ರಾಮದ ಮಾಯಜ್ಜ ಸರಕಾರದ ನೆರವಿನ ಹಸ್ತ ಕೋರುತ್ತಾರೆ.

ತಾಲ್ಲೂಕಿನಲ್ಲಿ 60 ಸಾವಿರ ಜಾನುವಾರುಗಳಿವೆ. ಬರಗಾಲದ ಹಿನ್ನಲೆಯಲ್ಲಿ ಮೇವು ಮತ್ತು ನೀರು ಕೊರತೆಯಿಂದ 30 ಸಾವಿರ ಜಾನುವಾರುಗಳ ಸ್ಥಿತಿ ಗಂಭೀರವಾಗಲಿದೆ. ಪರಿಹಾರದ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಲಾಗುತ್ತದೆ. ಶೀಘ್ರದಲ್ಲಿ ಶಾಸಕ ಭೀಮಾನಾಯ್ಕ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ನೀರು ಲಭ್ಯವಾಗುವ ಕಡೆಗೆ ಮೇವು ಬ್ಯಾಂಕ್‌ ಮತ್ತು ಗೋಶಾಲೆ ಆರಂಭಿಸುವಂತೆ ಪ್ರಸ್ತಾವ ಸಲ್ಲಿಸಲಾಗುತ್ತದೆ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೂರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT