ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನ್ ಕೆರ್ರಿ ವಿದೇಶಾಂಗ ಕಾರ್ಯದರ್ಶಿ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನಾಮಕರಣ
Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ಹಿರಿಯ ಸೆನೆಟರ್ ಜಾನ್ ಕೆರ್ರಿ ಅವರನ್ನು ನಾಮಕರಣ ಮಾಡಿದ್ದಾರೆ.

`ವಿದೇಶಾಂಗ ವ್ಯವಹಾರದಲ್ಲಿ ಕೆರ‌್ರಿ ಅವರಿಗೆ ಅಪಾರ ಅನುಭವ ಇದೆ. ಹಾಗಾಗಿ ಈ ಸ್ಥಾನಕ್ಕೆ ಅವರು ಸೂಕ್ತ ವ್ಯಕ್ತಿ' ಎಂದು ಒಬಾಮ ಬಣ್ಣಿಸಿದ್ದಾರೆ.
ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿರುವ 69 ವರ್ಷದ ಕೆರ‌್ರಿ ಅವರು ವಿದೇಶಾಂಗ ನೀತಿಗೆ ಸಂಬಂಧಿಸಿದ ವಿಷಯದಲ್ಲಿ ಒಬಾಮ ಅವರಿಗೆ ಅತ್ಯಂತ ಆಪ್ತರು. ಮೆಸಾಚುಸೆಟ್ಸ್ ಸಂಸದರಾದ ಕೆರ‌್ರಿ, 2004ರಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದರು.

ಸೆನೆಟ್‌ನಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವುದರಿಂದ ಹಾಗೂ ರಿಪಬ್ಲಿಕನ್ ಸಂಸದರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿರುವುದರಿಂದ ಕೆರ‌್ರಿ ನಾಮಕರಣವನ್ನು ಸೆನೆಟ್ ಸುಲಭವಾಗಿ ಅನುಮೋದಿಸುವ ನಿರೀಕ್ಷೆ ಇದೆ.

ಅಮೆರಿಕದ ಅದೃಷ್ಟ: `ಕೆರ‌್ರಿ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನಾಮಕರಣ ಮಾಡಿರುವುದು ಅಮೆರಿಕದ ಅದೃಷ್ಟ' ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಸುಸಾನ್ ರೈಸ್ ಬಣ್ಣಿಸಿದ್ದಾರೆ. `ಜಗತ್ತಿನಾದ್ಯಂತ ಅಮೆರಿಕದ ಹಿತಾಸಕ್ತಿ ಹಾಗೂ ಮೌಲ್ಯಗಳನ್ನು ವೃದ್ಧಿಸುವಲ್ಲಿ ಕೆರ‌್ರಿ ಅವಿರತವಾಗಿ ಶ್ರಮಿಸಿದ್ದಾರೆ' ಎಂದೂ ಶ್ಲಾಘಿಸಿದ್ದಾರೆ.

ರಿಪಬ್ಲಿಕನ್ ಹಾಗೂ ಸೆನೆಟ್‌ನ ಪ್ರಮುಖ ಸಂಸದರೆಲ್ಲ ಕೆರ‌್ರಿ ನಾಮಕರಣವನ್ನು ಸ್ವಾಗತಿಸಿದ್ದಾರೆ. ಅತ್ಯುತ್ತಮ ಆಯ್ಕೆ: `ಒಬಾಮ, ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ಅಸಾಧಾರಣ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ' ಎಂದು ಹಾಲಿ  ಕಾರ್ಯದರ್ಶಿ ಹಿಲರಿ ಶ್ಲಾಘಿಸಿದ್ದಾರೆ.

ಭಾರತದ ನಿಜವಾದ ಮಿತ್ರ...
`ಕೆರ‌್ರಿ ಭಾರತದ ನಿಜವಾದ ಮಿತ್ರ' ಎಂದು ಪರಿಗಣಿಸಲಾಗಿದೆ. ಹಿಲರಿ ಕ್ಲಿಂಟನ್ ಅವರಿಗೆ ಭಾರತ-ಅಮೆರಿಕ ಸಂಬಂಧವು `ಮನಸ್ಸಿಗೆ ಸಂಬಂಧಿಸಿದ ವಿಷಯ'ವಾದರೆ, ಕೆರ‌್ರಿ ಅವರಿಗೆ ಭಾರತವು ನಿಸ್ಸಂಶಯವಾಗಿಯೂ `ಅಮೆರಿಕದ ವಿದೇಶಾಂಗ ನೀತಿಯಲ್ಲಿ ಬಹುಮುಖ್ಯ ಪಾಲುದಾರ ರಾಷ್ಟ್ರ'.
`ಜಾಗತಿಕವಾಗಿ ಗಂಭೀರ ಸವಾಲುಗಳನ್ನು ಎದುರಿಸುವಲ್ಲಿ ಭಾರತವು ನಮಗೆ ಬಹುಮುಖ್ಯ'ಎಂದು ಕೆರ‌್ರಿ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ವತ್ವ ಪಡೆಯುವ ಭಾರತದ ಹಂಬಲವನ್ನು ಕೆರ‌್ರಿ ಕೂಡ ಬೆಂಬಲಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT