ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಬ್‌ ಕಾರ್ಡ್ ಪರಿಷ್ಕರಣೆ

ಐತರಾಸನಹಳ್ಳಿ ಪಂಚಾಯತಿಯಲ್ಲಿ ವಿನೂತನ ಪ್ರಯತ್ನ
Last Updated 13 ಜುಲೈ 2014, 19:30 IST
ಅಕ್ಷರ ಗಾತ್ರ

ಐತರಾಸನಹಳ್ಳಿ ಗ್ರಾಮ ಪಂಚಾ­ಯಿತಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ­ಯಾಗಿ ವೈಶಾಲಿ­ಯವರು ಬರುವ ಹೊತ್ತಿಗೆ ಈ ಪಂಚಾಯಿತಿ ಸಾಕಷ್ಟು ‘ಪ್ರಖ್ಯಾತ’ವೇ ಆಗಿತ್ತು. ಕೋಲಾರ ಜಿಲ್ಲೆಯ ಅತಿ ಸೂಕ್ಷ್ಮ ಗ್ರಾಮ ಪಂಚಾ­ಯಿತಿಗಳಲ್ಲಿ ಇದೂ ಒಂದು ಎಂದು ಎಲ್ಲರೂ ಹೇಳಿದ್ದರು. ಹೊಸ ಕೆಲಸದ ಜೊತೆಗೆ ಹೊಸ ಭಯಗಳೂ ಇರು­ತ್ತವೆ ಎಂದುಕೊಂಡೇ ಅವರು ಕೆಲಸ ಆರಂಭಿಸಿ­ದರು. ಆಗಲೇ ಕಾಡಲಾರಂ­ಭಿ­ಸಿದ್ದು ದೊಡ್ಡ ಪ್ರಶ್ನೆ. ಉದ್ಯೋಗಖಾತ್ರಿ ಯೋಜ­ನೆಯ ಜಾಬ್‌ ಕಾರ್ಡ್‌ಗಳು ಎಷ್ಟು ಮಂದಿ ಕೂಲಿಗಳ ಬಳಿ ಇವೆ? ಎಷ್ಟು ಕಾರ್ಡ್‌ಗಳು ಗುತ್ತಿಗೆದಾರರ ಬಳಿ ಇವೆ? ಅಸಲಿಗೆ ಎಷ್ಟು ಜಾಬ್‌ ಕಾರ್ಡ್‌­ಗಳು ವಿತರಣೆಯಾಗಿವೆ? ಎಷ್ಟು ಮಂದಿ ಎಷ್ಟು ಕಾಮಗಾರಿಗಳಲ್ಲಿ ಕೆಲಸ ಮಾಡಿದ್ದಾರೆ?

ವೈಶಾಲಿ ಸಾಗರ್  ಎಂಬ 25ರ ಈ ಬಿ.ಎ. ಪದವೀಧರ ಯುವತಿಗೆ ಈ ಪ್ರಶ್ನೆಗಳಿಗೆ ದೊರೆತ ಉತ್ತರ ವಿಚಿತ್ರ­ವಾಗಿತ್ತು. ದಾಖಲೆ­ಗಳನ್ನೆಲ್ಲಾ ತಡಕಾಡಿ­ದಾಗ ಐತರಾಸ­ನಹಳ್ಳಿ ಪಂಚಾಯಿತಿ­ಯಲ್ಲಿ ಈವರೆಗೂ ಉದ್ಯೋಗ­ಖಾತ್ರಿ ಯೋಜನೆ ಅಡಿಯಲ್ಲಿ ವಿತರಿಸಲಾದ ಜಾಬ್ ಕಾರ್ಡ್‌ಗಳೆಷ್ಟೆಂಬ ಮಾಹಿ­ತಿಯೇ ಇರಲಿಲ್ಲ. 2400 ಜನಸಂಖ್ಯೆ ಇರುವ ಪಂಚಾ­ಯಿತಿ ವ್ಯಾಪ್ತಿಯ 12 ಹಳ್ಳಿಗಳಲ್ಲಿ ವಿತರಿಸ­ಲಾಗಿರುವ ಜಾಬ್‌ ಕಾರ್ಡ್‌ಗಳು ಇರಬೇಕಾ­ದವರ ಬಳಿಯೇ ಇಲ್ಲದಿರು­ವುದು ವೈಶಾಲಿ ಅವರನ್ನು ಅಚ್ಚರಿಗೆ ನೂಕಿತು. ಗುತ್ತಿಗೆದಾರರು ಕೊಟ್ಟ 100 ರೂಪಾ­ಯಿಗೆ ಜಾಬ್‌ ಕಾರ್ಡ್‌ಗಳನ್ನು ಮಾರಿಕೊಂಡ ಹಲ­ವರೂ ಕಾಣಿಸಿದರು. ಅದನ್ನು ಬಾಯಿ ಬಿಟ್ಟು ಹೇಳಿದರು. ಕೆಲವರ ಬಳಿ ಎರಡೆ­ರಡು ಜಾಬ್‌ ಕಾರ್ಡ್‌ಗಳಿರು­ವುದು ಬೆಳಕಿಗೆ ಬಂತು. ಭಿನ್ನ ಧರ್ಮದ ಹೆಸರು­ಳ್ಳ­ವರು ಒಂದೇ ಕುಟುಂಬದ ನಿವಾಸಿ­ಗ­ಳೆಂಬ ದಾಖಲೆ­ಗ­ಳನ್ನೂ ಜಾಬ್‌ ಕಾರ್ಡ್‌­­ಗಳು ಹೇಳುತ್ತಿ­ದ್ದವು.  ಪಂಚಾ­ಯಿತಿ­­­ಯಲ್ಲಿ ಎರಡು ವರ್ಷ­ದಿಂದ ಕ್ಯಾಷ್‌ ಬುಕ್ ನಿರ್ವಹಣೆಯನ್ನೇ ಮಾಡ­ದಿರು­ವುದು ಬೆಳಕಿಗೆ ಬಂತು. ಜನ­ರಲ್ಲಿ ಉದ್ಯೋಗ­ ಖಾತ್ರಿ ಯೋಜನೆ ಕಾಮ­ಗಾರಿ­ಗಳ ಬಗ್ಗೆಯೇ ನಂಬಿಕೆ ಕುಸಿದಿತ್ತು.

ಪದವಿ ಪಡೆದು ಏವಿಯೇಷನ್‌ನಲ್ಲಿ ಡಿಪ್ಲೊಮೊ ಮಾಡಿ ನಗರದಲ್ಲಿ ದೊರೆ­ಯ­ಬಹುದಾಗಿದ್ದ ಹೈಫೈ ಕೆಲಸಗಳನ್ನೆಲ್ಲಾ ಬಿಟ್ಟು  ಗ್ರಾಮ ಮಟ್ಟದಲ್ಲಿ ಅಧಿಕಾರಿ­ಯಾಗಿ ಕೆಲಸ–ಸೇವೆ ಮಾಡಬೇಕು ಎಂಬ ಮಹತ್ವಾ­ಕಾಂಕ್ಷೆ­ಯಿಂದ ಬಂದ ಯುವ­ತಿಯ ಮುಂದೆ ಇಂಥ ಅಯೋ­ಮಯ­­­ವಾದ ಗ್ರಾಮ ಪಂಚಾಯಿತಿ ಲೋಕ­ವೊಂದು ತೆರೆದು­ಕೊಂ­ಡಿತ್ತು. ‘ಎಲ್ಲವೂ ಹೇಗಿದೆಯೋ ಹಾಗೇ ಇರಲಿ ಎಂದು ಸುಮ್ಮನೇ ದಿನ ನೂಕಿದರೆ ನಿಮಗೇ ಒಳ್ಳೆ­ಯದು. ಎಲ್ಲವನ್ನೂ ಸರಿಪಡಿಸುವ ಉಸಾಬರಿ­ಯನ್ನು ಹೊತ್ತರೆ ನೀವು ನಿಮ್ಮ ನೆಮ್ಮದಿ ಕೆಡಿಸಿಕೊಳ್ಳೋದು ಗ್ಯಾರಂಟಿ’ ಎಂಬ ಸಲಹೆ­ಗಳು ಸಾಕಷ್ಟು ದೊರೆತವು. ಇವು­ಗಳನ್ನೆಲ್ಲಾ ಕೇಳಿಸಿಕೊಂಡಂತೆ ಮಾಡಿದ ವೈಶಾಲಿ ಏನಾದರೂ ಮಾಡಿ ಪಂಚಾ­ಯಿತಿ ಆಡಳಿತ ಮತ್ತು ಕಾರ್ಯ­ವೈಖರಿ­­ಯನ್ನು ಕೈಲಾದ ಮಟ್ಟಿಗೆ ಸರಿ­ದಾರಿಗೆ ತರುವ ನಿರ್ಧಾರ ಮಾಡಿ­ದ್ದರ ಪರಿ­­­ಣಾಮವೇ ಜಾಬ್ ಕಾರ್ಡ್
ಪರಿ­ಷ್ಕರಣೆ ಆಂದೋಲನ.

ಜಾಬ್‌ ಕಾರ್ಡ್‌ಗಳ ಅಯೋಮಯ ಸ್ಥಿತಿಯನ್ನು ಸರಿಪಡಿಸಲು ಹೀಗೊಂದು ಜಾಬ್ ಕಾರ್ಡ್ ಪರಿಷ್ಕರಣೆ ಆಂದೋ­ಲನ ನಡೆಸು­ವುದು ಅಗತ್ಯ ಎನ್ನಿಸಿದೆ. ಅನು­ಮತಿ ಕೊಡಿ ಎಂದು ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ­ಹಣಾ­ಧಿಕಾರಿ ಆರ್‌.ವಿನೋತ್ ಪ್ರಿಯಾ ಅವ­ರನ್ನು ಕೋರಿದರು. ಚರ್ಚೆಯ ಬಳಿಕ ಅನುಮತಿ ದೊರಕಿತು. ಆಮೇಲಿನದ್ದು ಮತ್ತೊಂದು ಸಾಹಸ. ಕಂದಾಯ ಅದಾ­ಲತ್ ಮೂಲಕ ರಾಜ್ಯದ ಗಮನ ಸೆಳೆದಿರುವ ಕೋಲಾರ ಜಿಲ್ಲೆಯು ಪೋಡಿ ಆಂದೋಲನಕ್ಕೆ ಸಿದ್ಧತೆ ನಡೆಸು­ತ್ತಿದೆ. ಇದೇ ವೇಳೆಯಲ್ಲಿಯೇ, ಉದ್ಯೋ­ಗ­­ಖಾತ್ರಿ ಯೋಜನೆಯ ಜಾಬ್‌ ಕಾರ್ಡ್ ಪರಿಷ್ಕ­ರಣೆಯ ಆಂದೋಲನ­ವನ್ನು ಐತ­ರಾಸನ­ಹಳ್ಳಿ ಗ್ರಾಮ ಪಂಚಾಯಿತಿ­ಯೊಂದು ಸದ್ದಿಲ್ಲದೆ ಶುರು ಮಾಡಿತು.

ಈ ಪಂಚಾಯಿತಿಗೆ ಅಭಿವೃದ್ಧಿ ಅಧಿ­ಕಾರಿ­­ಯಾಗಿ ಬರಲು ಬಹುತೇಕರು ಹೆದರುತ್ತಿರುವ ಸನ್ನಿವೇಶದಲ್ಲೇ ಬಂದ ವೈಶಾಲಿ­ಯವರು ಜಿಲ್ಲಾ ಪಂಚಾ­ಯಿತಿಯ ಸಹಕಾರ ಪಡೆದು ಉದ್ಯೋಗ­ಖಾತ್ರಿ ಜಾಬ್‌ ಕಾರ್ಡ್ ಪರಿ­ಶೀಲನೆ, ಪರಿಷ್ಕರಣೆಯ ಆಂದೋ­ಲನಕ್ಕೆ ಗ್ರಾಮದ ಸತ್ಯಮ್ಮ ದೇವಾ­ಲಯ­ದಲ್ಲಿ ಜುಲೈ 10ರಂದು ಚಾಲನೆ ನೀಡಿದರು. ಅಧ್ಯಕ್ಷೆ ನಾಗಮಣಿ, ಉಪಾ­ಧ್ಯಕ್ಷೆ ವನಿತಾ, ತಾಲ್ಲೂಕು ಪಂಚಾ­ಯಿತಿಯ ಸಹಾಯಕ ನಿರ್ದೇಶಕ ರಾಜಣ್ಣ ಅವರಿಗೆ ಬೆಂಬಲವಾಗಿ ನಿಂತಿ­ದ್ದಾರೆ, ಹಳೆಯ ಜಾಬ್‌ ಕಾರ್ಡ್‌­ಗಳನ್ನು ಈ ಮುಂಚೆ ದುಡ್ಡಿಗೆ ಮಾರಿಕೊಂಡಂತೆ ಹೊಸ ಕಾರ್ಡ್‌­ಗಳನ್ನು ಮಾರಿಕೊಳ್ಳ­ಬಾರದು ಎಂಬ ನಿರ್ಧಾರ­­ವನ್ನೂ ಗ್ರಾಮಸ್ಥರು ಮಾಡಿ­ದ್ದಕ್ಕೆ ಸತ್ಯಮ್ಮ ದೇವಿ ಸಾಕ್ಷಿ­­ಯಾ­ದಳು. 2009ರಿಂದ ಇಲ್ಲಿ­ವರೆಗೆ ಖಾತ್ರಿ ಯೋಜನೆಯಲ್ಲಿ ಕೋಟ್ಯಂ­ತರ ರೂಪಾಯಿ ಅವ್ಯವಹಾರ­ಗಳಿಂ­ದಲೇ ಗಮನ ಸೆಳೆಯುತ್ತಿರುವ ಕೋಲಾರ ಜಿಲ್ಲೆಯು ಈಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ­ಯೊಬ್ಬರ ಕೆಲಸದ ಪರಿಣಾಮ­ವಾಗಿ ಬೇರೆ ರೀತಿ ಗಮನ ಸೆಳೆಯುತ್ತಿದೆ.

ಅಭಿಯಾನಕ್ಕೆ ಶಾಲಾ ಮಕ್ಕಳು: ತಾಲ್ಲೂ­ಕಿನ ಐತರಾಸನಹಳ್ಳಿ ಗ್ರಾಮ ಪಂಚಾ­ಯಿತಿ ವ್ಯಾಪ್ತಿಯ 12 ಹಳ್ಳಿಗಳಲ್ಲಿ ಆಂದೋ­ಲನ ಜುಲೈ 24ರವರೆಗೂ ನಡೆಯ­ಲಿದೆ. ಅದಕ್ಕಾಗಿ ಅವರು ಆಯಾ ಗ್ರಾಮದ ಶಾಲೆಯ ವಿದ್ಯಾರ್ಥಿಗಳ ನೆರವನ್ನೂ ಪಡೆದಿ­ರುವುದು ವಿಶೇಷ. ಆಂದೋಲನ ನಡೆಯುವ ಹಿಂದಿನ ದಿನ ಗ್ರಾಮದಲ್ಲಿ ಡಂಗುರ ಹೊಡೆಸು­ವುದು ಸಾಮಾನ್ಯ. ಅದರೊಂದಿಗೆ ಶಾಲೆಗೆ ಭೇಟಿ ನೀಡುವ ವೈಶಾಲಿ ಅಲ್ಲಿನ ಮಕ್ಕಳಿಗೆ ಜಾಬ್ ಕಾರ್ಡ್ ಪರಿಷ್ಕರಣೆ ಕುರಿತು ವಿವ­ರಿಸಿ, ಆ ಬಗ್ಗೆ ಪೋಷಕರಿಗೆ ತಿಳಿಸು­ವಂತೆ ಹೇಳುತ್ತಾರೆ. ಮನೆಯಲ್ಲಿ ಮಕ್ಕ­ಳಿಂದ ಮಾಹಿತಿ ಪಡೆದ ಪೋಷಕರು ಪರಿ­ಷ್ಕರಣಾ ಕಾರ್ಯ ನಡೆ­ಯುವ ಸ್ಥಳಕ್ಕೆ ಬರು­­ತ್ತಾರೆ.

ಜಾಬ್‌ ಕಾರ್ಡ್‌ಗಳ ಮಾನ್ಯತೆ ಐದು ವರ್ಷದವರೆಗೂ ಇರಬೇಕು ಎಂಬುದು ನಿಯಮ. ಆದರೆ ಖಾತ್ರಿ ಯೋಜನೆ ಜಾರಿಗೆ ಬಂದಾಗಿನಿಂದಲೂ ಈ ನಿಯಮ ಜಾರಿ­ಯಾಗಲೇ ಇಲ್ಲ. ಆದರೆ ಈಗ ಪರಿಷ್ಕರಣಾ ಕ್ರಿಯೆ ನಡೆಸುತ್ತಿರುವು­ದ­ರಿಂದ ಎಷ್ಟು ಮಂದಿಯ ಬಳಿ ಕಾರ್ಡ್ ಇದೆ ಅಥವಾ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆಂದೋಲನ ಪೂರ್ಣ­ಗೊಂಡ ಬಳಿಕ ನಿಜವಾದ ಕಾರ್ಡು­ದಾರರ ಅಂಕಿ ಅಂಶಗಳು ಲಭ್ಯವಾಗಲಿವೆ ಎಂಬ ಭರವಸೆಯೂ ಅವರಲ್ಲಿದೆ.

ಮೊದಲ ದಿನ ಪಂಚಾಯಿತಿ ಕೇಂದ್ರದ ಸತ್ಯಮ್ಮ ದೇವಾಲಯದಲ್ಲಿ ಆಂದೋ­ಲನಕ್ಕೆ ಚಾಲನೆ ನೀಡುವ ಕಾರ್ಯಕ್ರಮ­ದಲ್ಲಿ ಕೆಲವರು ಗಲಾಟೆ ಮಾಡಬಹುದು ಎಂಬ ಆತಂಕವೊಂದು ಮೂಡಿತ್ತು. ಆದರೆ ಅಂಥದ್ದೇನೂ ಆಗಲಿಲ್ಲ. ಬದಲಿಗೆ ಹಳ್ಳಿಯ ಹಲವು ಜನ ಬಂದು ಫಾರ್ಮ್ ನಂ 1ನ್ನು ಸಲ್ಲಿಸಿದರು. ಇಂಥದೊಂದು ಕೆಲಸ ಇನ್ನೂ ಮುಂಚೆ ನಡೆಯಬೇಕಿತ್ತು ಎಂದು ಹೇಳಿದರು. ಶುಭ ಸೂಚನೆ ಎಂಬಂತೆ ಸಂಜೆ ವೇಳೆಗೆ ಮಳೆಯೂ ಬಂತು ಎಂದು ನಕ್ಕರು ವೈಶಾಲಿ. ಪಂಚಾ­ಯಿತಿಗೆ ಜನ ಬರಲಾರಂಭಿಸಿ­ದ್ದಾರೆ. ಪಂಚಾ­ಯಿತಿ ಬಗ್ಗೆ ಅವರಲ್ಲಿ ವಿಶ್ವಾಸ ಕುಡಿಯೊಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT