ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನು ನಿರಾಕರಣೆ : ರೆಡ್ಡಿ 19ರವರೆಗೆ ಸಿಬಿಐ ವಶಕ್ಕೆ

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಅವರ ಬಾವ ಬಿ. ಶ್ರೀನಿವಾಸ ರೆಡ್ಡಿಯವರ ಜಾಮೀನು ಅರ್ಜಿಯನ್ನು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ವಜಾಗೊಳಿಸಿತು.

ನ್ಯಾಯಾಲಯ ಈ ಇಬ್ಬರೂ ಆರೋಪಿಗಳನ್ನು ಸೆಪ್ಟೆಂಬರ್ 19ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿತು. ತಕ್ಷಣ ಇಬ್ಬರನ್ನೂ ಅಕ್ರಮ ಗಣಿಗಾರಿಕೆಯ ಮುಂದಿನ ತನಿಖೆಗಾಗಿ ಸಿಬಿಐ ವಶಕ್ಕೆ ಒಪ್ಪಿಸುವಂತೆ ಚಂಚಲ್‌ಗುಡಾ ಕಾರಾಗೃಹ ಆಡಳಿತಕ್ಕೆ ನ್ಯಾಯಾಧೀಶ ಬಿ. ನಾಗಮಾರುತಿ ಶರ್ಮ ನಿರ್ದೇಶನ ನೀಡಿದರು.

ಇದಕ್ಕೂ ಮುನ್ನ, ಇಬ್ಬರನ್ನು 15 ದಿನಗಳ ಕಾಲ ತನ್ನ ವಶಕ್ಕೆ ಒಪ್ಪಿಸಲು ನ್ಯಾಯಾಲಯಕ್ಕೆ ಸಿಬಿಐ ಮನವಿ ಮಾಡಿತ್ತು. `ಆರೋಪಿಗಳು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳುದ್ದಕ್ಕೂ ನಡೆಯುತ್ತಿರುವ ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ವ್ಯವಹಾರಗಳನ್ನು ಚೆನ್ನಾಗಿ ಅರಿತಿರುವುದರಿಂದ, ಅವರನ್ನು ಹೆಚ್ಚು ದಿನ ತನ್ನ ವಶದಲ್ಲಿಟ್ಟುಕೊಂಡು ತನಿಖೆ ನಡೆಸುವ ಅವಶ್ಯಕತೆ ಇದೆ~ ಎಂದು ಸಿಬಿಐ ಇದಕ್ಕೆ ಕಾರಣ ನೀಡಿತ್ತು. ಇದರ ಜೊತೆ, ಈ ಹಗರಣದಲ್ಲಿ ಸರ್ಕಾರಿ ಅಧಿಕಾರಿಗಳೊಡನೆ ಶಾಮೀಲಾಗಿ ಸಂಚು ನಡೆಸಿರುವ ಮಾಹಿತಿ ಸಹ ಆರೋಪಿಗಳಿಂದ ಲಭ್ಯವಾಗಬಹುದು ಎಂಬ ಅಭಿಪ್ರಾಯವನ್ನು ಸಿಬಿಐ ವ್ಯಕ್ತಪಡಿಸಿತು.

ಆಂಧ್ರಪ್ರದೇಶ ಸರ್ಕಾರದ ಕೋರಿಕೆ ಮೇರೆಗೆ 2009ರ ಡಿಸೆಂಬರ್ 7ರಂದು ರೆಡ್ಡಿಯವರ ಓಬಳಾಪುರಂ ಗಣಿಗಾರಿಕೆ ಕಂಪೆನಿ (ಓಎಂಸಿ)ಯ ವಿರುದ್ಧ ಸಿಬಿಐ ಮೊಕದ್ದಮೆ ದಾಖಲಿಸಿತು. ರಾಜ್ಯದ ಅನಂತಪುರ ಜಿಲ್ಲೆಯ ಓಬಳಾಪುರಂ ಮತ್ತು ಮಾಲ್ಪನಗುಡಿ ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಇತರ ಅವ್ಯವಹಾರಗಳನ್ನು ನಡೆಸಲು ಓಎಂಸಿಗೆ ಗಣಿಗಾರಿಕೆ ಗುತ್ತಿಗೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರ ಸರ್ಕಾರ ಈ ಮನವಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಓಎಂಸಿ ಅಧ್ಯಕ್ಷ ಜನಾರ್ದನ ರೆಡ್ಡಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರನ್ನು ಸಿಬಿಐ ಸೆ. 5ರಂದು ಬಳ್ಳಾರಿಯಲ್ಲಿ ಬಂಧಿಸಿ, ಅವರ ನಿವಾಸ ಮತ್ತು ಕಚೇರಿಗಳಲ್ಲಿ ಕಾರ್ಯಾಚರಣೆ ಕೈಗೊಂಡು, ಸಾಕಷ್ಟು ದಾಖಲುಪತ್ರಗಳನ್ನು ವಶಪಡಿಸಿಕೊಂಡಿತು.

ನೆರೆಯ ರಾಜ್ಯಗಳಾದ ಆಂಧ್ರ ಮತ್ತು ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ, ಕಬ್ಬಿಣದ ಅದಿರನ್ನು ಕಳ್ಳಸಾಗಾಣಿಕೆ ಮೂಲಕ ಚೀನಾ, ಸಿಂಗಪುರ ಹಾಗೂ ಮಲೇಷ್ಯಾಕ್ಕೆ ರಫ್ತು ಮಾಡಿರುವ ಆರೋಪವೂ ಓಎಂಸಿ ಮೇಲಿದೆ.

“ಓಎಂಸಿ ತಾನು ಗುತ್ತಿಗೆ ಪಡೆದ 58.5 ಹೆಕ್ಟೇರ್ ಪ್ರದೇಶಗಳನ್ನೂ ಮೀರಿ ಅನೇಕ ಸ್ಥಳಗಳಲ್ಲಿ ಸುಮಾರು 29.30 ಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರಿನ ಗಣಿಗಾರಿಕೆ ಮತ್ತು ಸಂಗ್ರಹ ಮಾಡಿದೆ. ಇದರೊಂದಿಗೆ ಓಎಂಸಿ ಮಾಲೀಕತ್ವದ ಅಂತರಗಂಗಮ್ಮ ಕೊಂಡ ಗಣಿಯಲ್ಲಿನ ಖನಿಜದ ಅದಿರು ವಾಣಿಜ್ಯಕ ಗುಣಮಟ್ಟ ಹೊಂದಿಲ್ಲ ಮತ್ತು ಈ ಭೂಮಿಯಲ್ಲಿ ಯಾವುದೇ ಪ್ರಮುಖ ಗಣಿಗಾರಿಕಾ ಚಟುವಟಿಕೆ ನಡೆದಿಲ್ಲ” ಎಂದು ಸಿಬಿಐ ವಕೀಲರು ವಾದಿಸಿದರು.

ಗಣಿ ಮಾಲೀಕರು ಗುತ್ತಿಗೆ ಪಡೆದ ಆಂಧ್ರ ಭೂಮಿಯಲ್ಲಿ ಗಣಿಗಾರಿಕೆ ನಡೆಸದೆ, ನೆರೆಯ ಕರ್ನಾಟಕದಲ್ಲಿ ಗುತ್ತಿಗೆ ಪಡೆಯದೇ ಏಕೆ ಗಣಿಗಾರಿಕೆ ನಡೆಸಿದರು ಎಂಬುದರ ಬಗ್ಗೆ ತಿಳಿಯಲು ರೆಡ್ಡಿಗಳನ್ನು ತನ್ನ ವಶಕ್ಕೆ ನೀಡಬೇಕೆಂದು ಸಿಬಿಐ ವಕೀಲರು ಕೋರಿದರು.

ಆದರೆ ರೆಡ್ಡಿಗಳ ಪರ ವಕೀಲರು ಸಿಬಿಐ ಮನವಿಗೆ ವಿರೋಧ ವ್ಯಕ್ತಪಡಿಸಿ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಆರೋಪಗಳ ಬಗ್ಗೆ ಸಿಬಿಐಗೆ ಆಂಧ್ರದಲ್ಲಿ ಮಾತ್ರ ತನಿಖೆ ನಡೆಸಲು ಅನುಮತಿ ನೀಡಲಾಗಿದ್ದು, ಕರ್ನಾಟಕದಲ್ಲಿ ಅನುಮತಿ ನೀಡಿಲ್ಲ. ಅಲ್ಲದೆ, ಅಕ್ರಮ ಗಣಿಗಾರಿಕೆಯು ಎರಡೂ ರಾಜ್ಯಗಳ ಗಡಿ ವಿವಾದಕ್ಕೆ ಸಂಬಂಧಪಟ್ಟಿರುವುದರಿಂದ ಮತ್ತು ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇರುವುದರಿಂದ ಬಂಧಿತ ರೆಡ್ಡಿಗಳನ್ನು ಸಿಬಿಐ ವಶಕ್ಕೆ ನೀಡದಂತೆ ವಿನಂತಿಸಿದರು.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT