ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನುದಾರರ ಮುಂಜಾಗ್ರತೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

(ಹಿಂದಿನ ಸಂಚಿಕೆಯಿಂದ)

1. ಬರೀ ಬಾಯಿಮಾತಿನಲ್ಲಿ  ನಿಮ್ಮ ಹೊಣೆ ಎಷ್ಟೆಂಬುದನ್ನು ಹೇಳಿದಾಗ ಅದನ್ನು ನಂಬಿ ಜಾಮೀನು ಕರಾರಿಗೆ ಸಹಿ ಹಾಕಬೇಡಿ. ಬರಹದಲ್ಲಿ  ನಿಮ್ಮ ಹೊಣೆ ಎಷ್ಟಿದೆ ಎಂಬುದನ್ನು, ಜಾಮೀನು ಕರಾರಿನಲ್ಲಿ ಇರುವ ಷರತ್ತುಗಳನ್ನು ಓದಿ ಖಚಿತಪಡಿಸಿಕೊಂಡು ಸಹಿ ಹಾಕಿ. ನಿಮಗೆ ಷರತ್ತುಗಳು ಅರ್ಥವಾಗದಿದ್ದರೆ ತಜ್ಞರಿಂದ (ವಕೀಲರಿಂದ) ಅದರ ಅರ್ಥವನ್ನು ಕೇಳಿ ತಿಳಿದುಕೊಂಡು  ನಂತರ ಅದಕ್ಕೆ ಸಹಿ ಹಾಕಿ.

2. ನೀವು ಎಷ್ಟು ಹಣಕ್ಕೆ, ಎಷ್ಟು ಅವಧಿಗೆ ಜಾಮೀನುದಾರರಾಗಿರುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

3. ನೀವು ಯಾರ ಕೋರಿಕೆಯ ಮೇರೆಗೆ ಜಾಮೀನು ಕರಾರಿಗೆ ಸಹಿ ಹಾಕುತ್ತೀರೊ ಆತ ತಪ್ಪಿತಸ್ಥನಾದರೆ ಮೊದಲು ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅಥವಾ ವಿಲೇವಾರಿ ಮಾಡಿ ಆನಂತರ  ಬಾಕಿ ಹಣಕ್ಕೆ ಮಾತ್ರ ನಿಮ್ಮನ್ನು ಹೊಣೆಗಾರರಾಗಿ ಮಾಡಬಹುದೆಂಬ ಷರತ್ತಿರುವ ಜಾಮೀನು ಕರಾರಿಗೆ ಮಾತ್ರ ಸಹಿ ಹಾಕಿ.

4. ದೀರ್ಘಾವಧಿ ಜಾಮೀನು ಕರಾರಿಗೆ ಸಹಿ ಹಾಕುವ ಮುನ್ನ ಹತ್ತು ಬಾರಿ ಯೋಚಿಸಿ.

5.  ಒಂದೇ ಸಲಕ್ಕೆ ಹಲವಾರು ಜಾಮೀನು ಕರಾರುಗಳಿಗೆ ಸಹಿ ಹಾಕಬೇಡಿ.

6.  ನೀವು ಯಾರ ಕೋರಿಕೆಯ ಮೇರೆಗೆ ಜಾಮೀನು ಕೊಟ್ಟಿರುತ್ತೀರೋ ಆತನ ಆರ್ಥಿಕ ಸ್ಥಿತಿ ಹದಗೆಟ್ಟಲ್ಲಿ  ಇಲ್ಲವೇ ವ್ಯವಹಾರ ಅವನತಿಯ ಹಾದಿ ಹಿಡಿದಲ್ಲಿ, ಆತ ಈಗ ಪ್ರಾಮಾಣಿಕವಾಗಿ ಉಳಿದಿಲ್ಲ ಎನ್ನುವ ವಾಸನೆ ನಿಮಗೆ ಹತ್ತಿದಲ್ಲಿ, ನಿಮ್ಮಿಂದ ಜಾಮೀನು ಪಡೆದಿರುವ ಸಂಸ್ಥೆ ಅಥವಾ ವ್ಯಕ್ತಿಗೆ ನಿಮ್ಮ ಜಾಮೀನನ್ನು ರದ್ದುಗೊಳಿಸುವ ನಿಮ್ಮ ಇಚ್ಚೆಯನ್ನು ವ್ಯಕ್ತಪಡಿಸಿ.  ಇದಾದ ನಂತರ ಅವರು ನಿಮ್ಮ ಸ್ನೇಹಿತ ಇಲ್ಲವೇ ಸಂಬಂಧಿಯಜೊತೆ  ವ್ಯವಹಾರ ನಡೆಸಿದರೆ ನೀವು  ಅದಕ್ಕೆ ಜವಾಬ್ದಾರರಲ್ಲ ಎಂದು ಲಿಖಿತ ಹೇಳಿಕೆ ಕೊಡಿ.  

ಜಾಮೀನುದಾರನ ಹೊಣೆ ಯಾವಾಗ ಕೊನೆಗೊಳ್ಳುತ್ತದೆ?
1. ಸಾಲ ಕೊಟ್ಟಾತ ಸಾಲ ಪಡೆದಾತನ ಜೊತೆ ಷಾಮೀಲಾಗಿ ಜಾಮೀನುದಾರನ ಅನುಮತಿಯಿಲ್ಲದೇ ಅವನಿಗೆ ಧಕ್ಕೆಯಾಗುವಂತೆ, ನಿಯಮಗಳನ್ನು ಸಡಿಲಿಸಿದರೆ, ಜಾಮೀನುದಾರ ತನ್ನ ಹೊಣೆಯಿಂದ ಮುಕ್ತನಾಗುತ್ತಾನೆ. ನಿರ್ದಿಷ್ಟ ಅವಧಿಗೆ ಮಾತ್ರ ಜಾಮೀನುದಾರನಾಗಿದ್ದರೆ ಆ ಅವಧಿಯ ನಂತರ ಸಾಲ ಪಡೆದಾತ ತಪ್ಪಿತಸ್ಥನಾದರೆ ಜವಾಬ್ದಾರನಾಗುವುದಿಲ್ಲ.

2. ಸಾಲ ಪಡೆದಾತ, ಸಾಲ ತೆಗೆದುಕೊಳ್ಳುವಾಗ, ಸಾಲ ಕೊಟ್ಟವನಿಗೆ ಒದಗಿಸಿದ ಭದ್ರತೆಗಳ (ಸೆಕ್ಯೂರಿಟೀಸ್) ಬೆಲೆ, ಸಾಲ ಕೊಟ್ಟವನ ಬೇಜವಾಬ್ದಾರಿಯಿಂದ ಅಥವಾ ಸಾಲ ತೆಗೆದುಕೊಂಡಾತನ ಜೊತೆ ಆತ ಶಾಮೀಲಾಗಿ ಕಡಿಮೆಯಾದರೆ, ಸಾಲ ಪಡೆದಾತ ತಪ್ಪಿತಸ್ಥನಾದಾಗ ಅವನು ಒದಗಿಸಿದ್ದ ಭದ್ರತೆಗಳನ್ನು  ಸಾಲ ಕೊಟ್ಟಾತ, ಜಾಮೀನುದಾರನ ಗಮನಕ್ಕೆ ತರದೆ, ಅವನ ಸಮ್ಮತಿಯಿಲ್ಲದೇ, ಮಾರಿ ಅದರಿಂದ ಜಾಮೀನುದಾರನಿಗೆ ನಷ್ಟವಾದರೆ, ಅಷ್ಟರಮಟ್ಟಿಗೆ ಜಾಮೀನುದಾರನ ಹೊಣೆ ಕಡಿಮೆಯಾಗುತ್ತದೆ.

3. ನಿರ್ದಿಷ್ಟ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತ್ರ ಜಾಮೀನುದಾರನಾಗಿದ್ದರೆ  ಆ ವ್ಯವಹಾರ ಮುಗಿದ ನಂತರ ಜಾಮೀನುದಾರ ತನ್ನ ಹೊಣೆಯಿಂದ ಮುಕ್ತನಾಗುತ್ತಾನೆ.

4.  ಜಾಮೀನು ಕರಾರಿನಲ್ಲಿ  ಯಾವ ಅವಧಿಯವರೆಗೆ ಆ ಕರಾರು ಚಾಲ್ತಿಯಲ್ಲಿ ಇರುತ್ತದೆ ಎಂದು ಸಹಿ ಹಾಕಿದವರು ಒಪ್ಪಿಕೊಂಡಿರುತ್ತಾರೋ ಆ ಅವಧಿಯೊಳಗೆ ಸಾಲ ಕೊಟ್ಟವನು ಸಾಲ ಪಡೆದಾತ ತಪ್ಪಿತಸ್ಥನಾದರೆ, ಜಾಮೀನುದಾರನಿಗೆ ತನ್ನ ತಗಾದೆ ಸಲ್ಲಿಸಬೇಕು. 

ಜಾಮೀನುದಾರನ ಹಕ್ಕುಗಳು : ತಪ್ಪಿತಸ್ಥ ವ್ಯಕ್ತಿಯು ಕೊಡಬೇಕಾದ ಹಣವನ್ನು ಜಾಮೀನುದಾರನು ಪಾವತಿಸಿದ ನಂತರ  ಸಾಲ ಪಡೆದಾತ ಸಾಲ ನೀಡಿದವನಿಗೆ, ಸಾಲ ತೆಗೆದುಕೊಳ್ಳುವಾಗ ಮತ್ತು ಆನಂತರ ಆ ವ್ಯವಹಾರಕ್ಕೆ ಸಂಬಂಧಿಸಿದಂತೆ ಒದಗಿಸಿದ್ದ ಭದ್ರತೆಗಳ (ಸೆಕ್ಯೂರಿಟಿ) ಮೇಲೆ ಸಂಪೂರ್ಣ  ಹಕ್ಕು ಪಡೆಯುವುದಲ್ಲದೇ ತಾನು ಪಾವತಿಸಿದ ಹಣವನ್ನು ಪಡೆಯುವುದಕ್ಕಾಗಿ ಸಾಲ ತೆಗೆದುಕೊಂಡವನ ಮೇಲೆ ಕಾನೂನಿನ ಕ್ರಮ ಜರುಗಿಸಬಹುದಾಗಿದೆ. 

 ಒಂದು ವ್ಯವಹಾರದಲ್ಲಿ  ಒಬ್ಬರಿಗಿಂತ ಹೆಚ್ಚು ಜನ ಜಾಮೀನುದಾರರಿದ್ದರೆ, ತಪ್ಪಿತಸ್ಥ ಕಟ್ಟಬೇಕಿದ್ದ ಹಣವನ್ನು ಪಾವತಿಸುವ ಜಾಮೀನುದಾರ ಉಳಿದ ಜಾಮೀನುದಾರರು ತಮ್ಮ ಭಾಗದ ಹಣವನ್ನು ತನಗೆ ಕೊಡುವಂತೆ ತಗಾದೆ ಮಾಡಿ ಮೊಕದ್ದಮೆ ಹೂಡುವ ಹಕ್ಕನ್ನು ಪಡೆಯುತ್ತಾನೆ.   ಜಾಮೀನುದಾರ ಯಾವ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಾಮೀನು ಕರಾರಿಗೆ ಸಹಿ ಹಾಕಿರುತ್ತಾನೊ ಆ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಲ ತೆಗೆದುಕೊಂಡಾತ ಮಾಡುವ ವ್ಯವಹಾರಗಳ ಬಗ್ಗೆ ವಿವರಗಳನ್ನು, ಸಾಲ ಕೊಟ್ಟವನನ್ನು ಕೇಳಿ ಪಡೆಯುವ, ಹಕ್ಕನ್ನು ಹೊಂದಿರುತ್ತಾನೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT