ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಿ ಬಿದ್ದ ಜಾಣೆ!

ವೈದ್ಯ-ಹಾಸ್ಯ
Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಮ್ಮ ಸ್ನೇಹಿತರೊಬ್ಬರನ್ನು ಇತ್ತೀಚೆಗೆ ಆಸ್ಪತ್ರೆಗೆ ಸೇರಿಸಬೇಕಾಗಿ ಬಂತು. ಅವರು ಎರಡು ದಿನ ಅಲ್ಲಿದ್ದರು. ಅವರಿಗೆ ತಿಂಡಿ, ಊಟ ಕೊಡುವ ಸಲುವಾಗಿ ದಿನಕ್ಕೆ ನಾಲ್ಕಾರು ಸಲ ಹೋಗುತ್ತಿದ್ದೆ. ಹೀಗೆ ಹೋದಾಗ ಒಂದು ದಿನ ಒಬ್ಬ ನರ್ಸ್ ನನ್ನನ್ನು `ಹೇಗಿದ್ದೀರಿ?' ಎಂದು ಕೇಳಿದರು. ಅವರ ಈ ಪ್ರಶ್ನೆಯಿಂದ ಒಂದು ಕ್ಷಣ ತಬ್ಬಿಬ್ಬಾಗಿ ಏನು ಉತ್ತರಿಸಬೇಕೆಂದೇ ಹೊಳೆಯಲಿಲ್ಲ.

ಅಲ್ಲಿ ಮಂಚದ ಮೇಲೆ ಮಲಗಿದ್ದ ಸ್ನೇಹಿತೆಯನ್ನು ಏನೂ ಕೇಳದೆ ನನ್ನನ್ನು ಕೇಳುತ್ತಿದ್ದಾರಲ್ಲ? ಛೇ ನಾನು ಕಾಯಿಲೆಯವಳಂತೆ ಕಾಣುತ್ತಿದ್ದೇನಾ ಎನಿಸಿದರೂ `ಹ್ಹೆಹ್ಹೆ ಚೆನ್ನಾಗಿದ್ದೇನೆ' ಎಂದೆ. ಆ ಕೂಡಲೇ ಅವರು ಇನ್ನೊಂದು ಪ್ರಶ್ನೆ ಕೇಳಿದರು. `ಈಗಲೂ ಪೆಂಡ್ಯೂರು ಇಂಜೆಕ್ಷನ್ ತೆಗೆದುಕೊಳ್ಳುತ್ತೀರ?' ಎಂದಾಗ ನನ್ನ ತಲೆಯೊಳಗೆ ಇದ್ದ ಟ್ಯೂಬ್‌ಲೈಟ್ ಜಗ್ಗನೆ ಹೊತ್ತಿಕೊಂಡಿತು.

ಅವರು ನನ್ನನ್ನು ಚೆನ್ನಾಗಿದ್ದೀರ ಎಂದು ಕೇಳಲು ಕಾರಣ ಇತ್ತು. ಕೆಲವಾರು ವರ್ಷಗಳ ಹಿಂದೆ ನಾನು ಪ್ರತಿ ತಿಂಗಳೂ ಆ ಚುಚ್ಚುಮದ್ದನ್ನು ಚುಚ್ಚಿಸಿಕೊಳ್ಳುತ್ತಿದ್ದೆ. ಆಗ ಕೆಲವಾರು ಬಾರಿ ಈ ನರ್ಸ್ ನನಗೆ ಚುಚ್ಚುಮದ್ದು ನೀಡಿದ್ದರಂತೆ. ನನಗೆ ಮಾತ್ರ ಅವರನ್ನು ನೋಡಿದ ನೆನಪಿರಲಿಲ್ಲ. ಅಬ್ಬ ಅವರ ನೆನಪಿನ ಶಕ್ತಿಯೇ! ಅವರ ಮುಂದೆ ನಾನು ಸೋತು ಹೋದೆ. ದಿನದಲ್ಲಿ ಎಷ್ಟೋ ರೋಗಿಗಳಿಗೆ ಅವರು ಹೀಗೆ ಚುಚ್ಚುಮದ್ದು ನೀಡಿರಬಹುದು. ಈಗಲೂ ನೀಡುತ್ತಿದ್ದಾರೆ. ಅದೂ ನಾನು ಚುಚ್ಚುಮದ್ದು ತೆಗೆದುಕೊಳ್ಳುವುದು ಬಿಟ್ಟೇ ಐದು ವರ್ಷಗಳಾಯಿತು. ಇಷ್ಟು ವರ್ಷದ ನಂತರವೂ ನನ್ನನ್ನು ನೆನಪಿಟ್ಟು ವಿಚಾರಿಸಿದ್ದು ನೋಡಿ ನಿಜಕ್ಕೂ ದಂಗಾದೆ.
                               ***
ಮಹದೇವಮ್ಮ ಅದೇ ಆಸ್ಪತ್ರೆಯ ಆಯಾ. ಅವರು ನನ್ನನ್ನು ಆಸ್ಪತ್ರೆಯಲ್ಲಿ ಕಂಡು ನನ್ನ ಸ್ನೇಹಿತೆ ಇದ್ದ ಕೊಠಡಿಯೊಳಗೆ ಬಂದು ಮಾತಾಡಿಸಿದರು. ಮಾತಾಡುತ್ತ, `ನಿಮ್ಮ ಅಣ್ಣ ಚೆನ್ನಾಗಿದ್ದಾರ?' ಎಂದು ಕೇಳಿದರು. `ಚೆನ್ನಾಗಿದ್ದಾನೆ. ನಿಮಗೆ ನನ್ನ ಅಣ್ಣ ಗೊತ್ತ' ಎಂದು ಕೇಳಿದೆ. `ಗೊತ್ತು, ನೀವಿಲ್ಲಿದ್ದಾಗ ಬರುತ್ತಿದ್ದರಲ್ಲ' ಎನ್ನಬೇಕೆ. ಅವರು ಅಣ್ಣನನ್ನು ವಿಚಾರಿಸುವುದಕ್ಕೂ ಒಂದು ಕಾರಣ ಇದೆ.

ನಾನು ಈಗ್ಗೆ ಹತ್ತಾರು ವರ್ಷಗಳ ಹಿಂದೆ ಜ್ವರ ಬಂದು ಆ ಆಸ್ಪತ್ರೆಯಲ್ಲಿ ಒಂದು ವಾರ ಮಲಗಿದ್ದೆ. ಆಗ ದಿನಾ ಸಂಜೆ ನಮ್ಮಣ್ಣ ಬಂದು ನನ್ನೊಡನೆ ಕುಳಿತು ಕಾನೂನಿಗೆ ಸಂಬಂಧಿಸಿದ ಪುಸ್ತಕ ಓದುತ್ತಾ ಕೂತಿರುತ್ತಿದ್ದ. (ಅವನಾಗ ಎಲ್.ಎಲ್.ಬಿ ಓದುತ್ತಿದ್ದ.) ಅದನ್ನು ಅವರು ನೆನಪಿಟ್ಟುಕೊಂಡಿದ್ದರು. ಅಬ್ಬ, ಇವರಿಗೆಲ್ಲ ಹೇಗೆ ಇಷ್ಟು ನೆನಪಿನ ಶಕ್ತಿ ಇರುತ್ತದೆ ಎಂದು ಪರಮಾಶ್ಚರ್ಯ ಆಯಿತು.
***
ಈಗಿನ ಆಸ್ಪತ್ರೆಗಳ ನೆಲಕ್ಕೆ ಸಾಮಾನ್ಯವಾಗಿ ಟೈಲ್ಸ್ ಹಾಕಿರುವುದರಿಂದ ಲಕಲಕ ಹೊಳೆಯುತ್ತಿರುತ್ತದೆ. ಅಲ್ಲಲ್ಲಿ ಗೋಡೆಗಳ ಮೇಲೆ `ನೆಲ ನುಣುಪಾಗಿದೆ ಎಚ್ಚರವಿಟ್ಟು ನಡೆಯಿರಿ' ಎಂಬ ಫಲಕ ಹಾಕಿರುತ್ತಾರೆ. ಅದನ್ನು ಪ್ರಯೋಗಿಸಬೇಕೆಂಬ ಆಸೆ ನಿಜಕ್ಕೂ ನನಗಿರಲಿಲ್ಲ. ಆದರೆ ಅದಾಗಿಯೇ ಒದಗಿ ಬಂದಾಗ, ನಿಜಕ್ಕೂ ನೆಲ ನುಣುಪಾಗಿದೆ ಎಂಬ ವಿಷಯ ನನ್ನ ಅರಿವಿಗೆ ಬಂತು!

ನಾನು ಕಾಲು ಜಾರಿ, ಅಲ್ಲಲ್ಲ ನೆಲ ಜಾರಿ ಬಿದ್ದಿದ್ದೆ. ನರ್ಸ್‌ಗಳೆಲ್ಲ ಧಾವಿಸಿ ಬಂದು `ಮೆತ್ತಗೆ ಮೆತ್ತಗೆ, ಕೂತುಕೊಳ್ಳಿ, ನೀರು ಬೇಕಾ? ಜೋರಾಗಿ ಏಟಾಯಿತಾ' ಎಂದೆಲ್ಲ ನನ್ನ ಮೈಕೈ ಸವರಿ ಉಪಚರಿಸಲು ಬಂದರು. ನಾನು ಎದ್ದು ನಿಂತು `ಏನಾಗಿಲ್ಲ' ಎಂದು ಧೈರ್ಯ ಕೊಟ್ಟೆ. ಅವರ ನೆಲಕ್ಕೆ ಸಹಸ್ರನಾಮಾರ್ಚನೆ ಮಾಡುವುದನ್ನು ಮಾತ್ರ ಮರೆಯಲಿಲ್ಲ. ಯಾವುದನ್ನೇ ಆದರೂ ಪ್ರಾಮಾಣಿಸಿ ನೋಡಿದಾಗಲೇ ನಿಜ ಅರಿವಾಗುವುದು ತಾನೆ. ಹಾಗೇ ನಾನು ಬಿದ್ದು ನೆಲ ನುಣುಪಾಗಿದೆ ಎಂದು ಖಾತ್ರಿಪಡಿಸಿಕೊಂಡೆ. ಎಷ್ಟಾದರೂ ನಾನು ಇದ್ದದ್ದು ಆಸ್ಪತ್ರೆಯಲ್ಲೇ ತಾನೆ!     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT