ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲ ಭೇದಿಸಲು ತನಿಖೆಗೆ ನಿರ್ಧಾರ

ವನ್ಯಪ್ರಾಣಿ ಬೇಟೆಗೆ ಉರುಳು ಬಳಕೆ
Last Updated 6 ಏಪ್ರಿಲ್ 2013, 6:48 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಹುಲಿ ಬೇಟೆಯಾಡಿ ಅದರ ಉತ್ಪನ್ನಗಳನ್ನು ಕಳ್ಳಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಸ್ಥಳೀಯ ಬೇಟೆಗಾರರ ಜಾಲವನ್ನು ಭೇದಿಸಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಳ ತನಿಖೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಲ್ಲೇನಹಳ್ಳಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಗುರುವಾರ ರಾತ್ರಿ ಬಂಧಿಸಿರುವ ಇಬ್ಬರು ವನ್ಯಜೀವಿ ಬೇಟೆಗಾರರಿಂದ ವಶಪಡಿಸಿಕೊಂಡಿರುವ 4 ಹುಲಿ ಉಗುರು ಮತ್ತು ಹುಲಿ ಹಾಗೂ ಇತರ ವನ್ಯಜೀವಿಗಳನ್ನು ಬೇಟೆಯಾಡಲು ಬಳಸುತ್ತಿದ್ದ ಉರುಳು, ಪಾಜಿಗಳನ್ನು ಪ್ರದರ್ಶಿಸಿ, ಪ್ರಕರಣ ಭೇದಿ ಸಲು ಶ್ರಮಿಸಿದ ಪೊಲೀಸ್ ಸಿಬ್ಬಂದಿ ಮತ್ತು ವನ್ಯಜೀವಿ ಸಂಘಟನೆಗಳ ಸದಸ್ಯರ ಶ್ರಮವನ್ನು ಶ್ಲಾಘಿಸಿದರು.

ವನ್ಯಜೀವಿಗಳ ಉತ್ಪನ್ನ ಮಾರಾಟದಲ್ಲಿ ತೊಡಗಿದ್ದ ಉತ್ತರ ಕನ್ನಡ ಮೂಲದ ವ್ಯಕ್ತಿ ಮೂಲಕ ಸ್ಥಳೀಯ ವಾಗಿ ಸಕ್ರಿಯವಾಗಿದ್ದ ಜಾಲದ ಸಂಪರ್ಕ ಸಾಧಿಸಲಾ ಯಿತು. ಹುಲಿ ಚರ್ಮವೂ ಸಿಗಬೇಕಿತ್ತು. ಹುಲಿ ಚರ್ಮ ಹೊಂದಿದ್ದ ವ್ಯಕ್ತಿಗಳು ಮಾಲು ಸಮೇತ  ತಪ್ಪಿಸಿಕೊಂ ಡಿದ್ದಾರೆ. ಈಗ ಸೆರೆ ಸಿಕ್ಕಿರುವ ಆರೋಪಿಗಳಾದ ಕನಕ ಅಲಿಯಾಸ್ ಸೂರ್ಯ ಹಾಗೂ ಶ್ರವಣಕುಮಾರ್ ಸಹಚರರು ಹಾಸನ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ದಂಧೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಸಿದರು.

ಈ ಇಬ್ಬರು ಆರೋಪಿಗಳನ್ನು ಬಂಧಿಸಲು ಪೊಲೀಸ್ ಸಿಬ್ಬಂದಿ ಹೋದಾಗ ಆರೋಪಿಗಳು ಮತ್ತು ಅವರ ಸಂಬಂಧಿಕರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ಕಲ್ಲು ತೋರಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಪ್ಪಿತಸ್ಥರನ್ನು ಶೀಘ್ರವೇ ಪತ್ತೆಹಚ್ಚಿ, ಬಂಧಿಸಲಾಗುವುದು ಎಂದರು.

ಕೇರಳದಲ್ಲಿ ಇತ್ತೀಚೆಗೆ ಪತ್ತೆಯಾದ ಹುಲಿ ಚರ್ಮದ ಮೂಲ ಭದ್ರಾ ಅಭಯಾರಣ್ಯವಾಗಿದೆ. ಎನ್.ಆರ್.ಪುರ ಮೂಲದ ವ್ಯಕ್ತಿ ಹುಲಿ ಚರ್ಮವನ್ನು ಕೇರಳದ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವನ್ಯಜೀವಿ ಉತ್ಪನ್ನಗಳ ಕಳ್ಳಸಾಗಣೆ ಮತ್ತು ಮಾರಾಟದ ಜಾಲದ ಸಂಪರ್ಕಕೊಂಡಿ ಜಿಲ್ಲೆಯಲ್ಲಿ ಇರುವುದು ಗಮನಕ್ಕೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.    

ಹಳ್ಳಿಗಳಲ್ಲಿ ವನ್ಯಜೀವಿ ಬೇಟೆಗೆ ಮತ್ತು ವನ್ಯಜೀವಿ ಉತ್ಪನ್ನಗಳ ಮಾರಾಟಕ್ಕೆ ಯಾರಾದರೂ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ವನ್ಯಜೀವಿ ಸಂರಕ್ಷಣೆಗೆ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಸಿಪಿಐ ಮಧುಸೂದನ್, ಗ್ರಾಮಾಂತರ ವೃತ್ತದ ಸಿಪಿಐ ಕೃಷ್ಣಕುಮಾರ್, ಪಿಎಸ್‌ಐ ದೀಪಕ್ ಇದ್ದರು.
ಪೊಲೀಸ್ ಕಾರ್ಯಾಚರಣೆಗೆ ಶ್ಲಾಘನೆ: ಜಿಲ್ಲಾ ಪೊಲೀಸ್ ಇಲಾಖೆ ಚುರುಕಿನ ಕಾರ್ಯಾ ಚರಣೆ ನಡೆಸಿ ಹುಲಿ ಉಗುರು ಮಾರಾಟದಲ್ಲಿ ತೊಡಗಿದ್ದ ಮಲ್ಲೇನ ಹಳ್ಳಿ ಹಕ್ಕಿಪಿಕ್ಕಿ ಕ್ಯಾಂಪಿನ ಕನಕ ಮತ್ತು ಶ್ರವಣಕುಮಾರ ಎಂಬಿಬ್ಬರನ್ನು ಬಂಧಿಸಿ, 4 ಉಗುರು ವಶಪಡಿಸಿಕೊಂ ಡಿರುವುದು ಶ್ಲಾಘನೀಯ ಎಂದು ಸ್ಥಳೀಯ ವನ್ಯಜೀವಿ ಸಂರಕ್ಷಣಾ ಸಂಘಟನೆಗಳ ಮುಖಂಡರು ಶ್ಲಾಘಿಸಿದ್ದಾರೆ.

ಹುಲಿ ಉಗುರು ಪತ್ತೆಯಲ್ಲಿ ಮುಖ್ಯ ಪಾತ್ರ ವಹಿಸಿದ ಎಸ್ಪಿ ಎನ್.ಶಶಿಕುಮಾರ್, ನಗರ ಸರ್ಕಲ್ ಇನ್ಸ್‌ಪೆಕ್ಟರ್‌ರಾದ ಮಧುಸೂದನ್, ನಗರ ಪಿಎಸ್‌ಐ ರಾಕೇಶ್‌ಕುಮಾರ್, ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣರಾಜ್, ಪಿಎಸ್‌ಐ ಮಧು ಹಾಗೂ ಸಿಬ್ಬಂದಿ ಅಭಿನಂದನಾರ್ಹರು ಎಂದು ಪ್ರಶಂಸಿಸಿದ್ದಾರೆ.

ಜಿಲ್ಲೆಯಾದ್ಯಂತ ವನ್ಯಜೀವಿ ಕಳ್ಳಸಾಗಾಣೆ ಮತ್ತು ಮಾರಾಟ ದಂಧೆ ವ್ಯಾಪಕವಾಗಿದೆ. ಹುಲಿ, ಚಿರತೆ ಸೇರಿದಂತೆ ಸಣ್ಣಪುಟ್ಟ ವನ್ಯಜೀವಿಗಳನ್ನು ಬೇಟೆ ಯಾಡಿ ಅವುಗಳ ಚರ್ಮ, ಉಗುರು, ಕೊಂಬು, ಕೂದಲು ಇತ್ಯಾದಿಗಳನ್ನು ಬೇರೆ ಬೇರೆ ದೇಶಗಳಿಗೆ ಮಾರಾಟ ಮಾಡುವ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಚಿರತೆ, ಆನೆ ಸೇರಿದಂತೆ ಅನೇಕ ವನ್ಯಜೀವಿಗಳು ಬೇಟೆಗಾರರಿಗೆ ಬಲಿಯಾಗಿರುವ ನಿದರ್ಶನಗಳು ಕಣ್ಮುಂದೆ ಇವೆ. ಅರಣ್ಯ ಇಲಾಖೆ ಈ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಂಡಿಲ್ಲ. ವನ್ಯಜೀವಿ ಬೇಟೆಗಾರರು ಮತ್ತು ಕಳ್ಳಸಾಗಾಣೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು ಎಂದು ಭದ್ರಾ ವೈಲ್ಡ್‌ಲೈಫ್ ಕನ್ಸರ್‌ವೇಷನ್ ಟ್ರಸ್ಟ್‌ನ ಡಿ.ವಿ.ಗಿರೀಶ್, ವೈಲ್ಡ್‌ಕ್ಯಾಟ್-ಸಿ ಶ್ರೀದೇವ್ ಹುಲಿಕೆರೆ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸ.ಗಿರಿಜಾಶಂಕರ, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT