ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ 20 ರಾಷ್ಟ್ರಗಳ ಶೃಂಗ ಸಮ್ಮೇಳನ: ಕಾನ್ ತಲುಪಿದ ಪ್ರಧಾನಿ ಸಿಂಗ್

Last Updated 2 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕಾನ್ (ಫ್ರಾನ್ಸ್): ಜಿ 20 ರಾಷ್ಟ್ರಗಳ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಧಾನಿ ಡಾ. ಮನಮೋಹನ್ ಸಿಂಗ್ ಬುಧವಾರ ಸಂಜೆ ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ಫ್ರಾನ್ಸ್‌ನ ಸಾಂಸ್ಕೃತಿಕ ರಾಜಧಾನಿ ಸಮುದ್ರ ತೀರದ ಸುಂದರ ನಗರ ಕಾನ್‌ಗೆ ಬಂದಿಳಿದರು.

ಪತ್ನಿ ಗುರುಶರಣ್ ಕೌರ್ ಮತ್ತು ಹಿರಿಯ ಅಧಿಕಾರಿಗಳ ನಿಯೋಗದಲ್ಲಿ ನೈಸ್ ವಿಮಾನದಲ್ಲಿ ಬಂದಿಳಿದ ಸಿಂಗ್ ಅವರನ್ನು ಫ್ರಾನ್ಸ್ ಸರ್ಕಾರದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಗುರುವಾರದಿಂದ ಎರಡು ದಿನ ನಡೆಯಲಿರುವ ಸಮ್ಮೇಳನದಲ್ಲಿ ಸಿಂಗ್ ಪಾಲ್ಗೊಳ್ಳುವರು. ಸಮ್ಮೇಳನದ ಸಂದರ್ಭದಲ್ಲೇ ಅವರು ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಜತೆ ದ್ವಿಪಕ್ಷೀಯ ಸಂಬಂಧ ಕುರಿತು ಮಾತುಕತೆ ನಡೆಸುವರು.

ಕಾನ್‌ಗೆ ಹೊರಡುವ ಮುನ್ನ ನವದೆಹಲಿಯಲ್ಲಿ ಹೇಳಿಕೆ ನೀಡಿದ ಪ್ರಧಾನಿ,   ಐರೋಪ್ಯ ಮತ್ತಿತರ ರಾಷ್ಟ್ರಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರಲು ಹಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

ಹಿಮ್ಮುಖವಾಗಿರುವ ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಈ ಸಮ್ಮೇಳನ ಕಟ್ಟುನಿಟ್ಟಾದ ಸಮನ್ವಯದ ಕ್ರಮಗಳಿಗೆ ಮುಂದಾಗಬೇಕಿದೆ ಎಂದಿದ್ದಾರೆ.

ಯುರೋ ವಲಯದ ಬಿಕ್ಕಟ್ಟು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ನಡೆದ ಐರೋಪ್ಯ ಒಕ್ಕೂಟ ಹಾಗೂ ಯುರೋ ವಲಯದ ಸಮ್ಮೇಳನಗಳು ಮಾರುಕಟ್ಟೆಯಲ್ಲಿ ಕುಂದಿದ್ದ ವಿಶ್ವಾಸವನ್ನು ಮರಳಿ ಗಳಿಸುವ ನಿಟ್ಟಿನಲ್ಲಿ ಸಹಕಾರಿ ಆಗಿವೆ. ಬಿಕ್ಕಟ್ಟಿನಿಂದ ಪಾರಾಗಲು ಇಷ್ಟೇ ಸಾಲದು ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸಿಂಗ್  ಪ್ರತಿಪಾದಿಸಿದ್ದಾರೆ. 

`ಯುರೋ ವಲಯ ಒಂದು ಐತಿಹಾಸಿಕ ಯೋಜನೆ. ಈ ವಲಯದ ಸಮೃದ್ಧಿ ಭಾರತದ ಬಯಕೆ ಆಗಿದೆ. ಇದರ ಸಮೃದ್ಧಿಯ ಮೇಲೇ ನಮ್ಮ ಸಮೃದ್ಧಿಯೂ ನಿಂತಿದೆ. ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ವ್ಯವಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರ ಕಾಣಲು ಅನುಕೂಲಕರ ಆರ್ಥಿಕ ಪರಿಸರ ಇರಬೇಕು ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಹಣದುಬ್ಬರದ ಒತ್ತಡಕ್ಕೆ ಸಿಕ್ಕಿರುವ ನಮ್ಮಂಥ ದೇಶಗಳು ಮೂಲಸೌಲಭ್ಯ ಮತ್ತು ಇತರ ಯೋಜನೆಗಳಿಗೆ ಬಹುಪಕ್ಷೀಯ ಮೂಲಗಳ ಹೂಡಿಕೆಯನ್ನು ಅವಲಂಬಿಸಿದೆ. ಈ ನಿಟ್ಟಿನಲ್ಲಿ ಜಾಗತಿಕ ಆರ್ಥಿಕ ವ್ಯವಸ್ಥೆ ಸುಧಾರಣೆ ಆಗುವುದನ್ನು ಕಾತುರದಿಂದ ನಿರೀಕ್ಷಿಸುತ್ತಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ.

ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರಾನ್, ಜುಲಿಯಾ ಗಿಲಾರ್ಡ್, ಐರೋಪ್ಯ ರಾಷ್ಟ್ರಗಳ ಮುಖಂಡರಾದ ಹರ್ಮನ್ ವೆನ್ ರುಂಪ್ಯು, ಜೋಸ್ ಮ್ಯಾನ್ಯುಯಲ್ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT