ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಕೆ ಹಾವಳಿಗೆ ಹೆಸರು ಬೆಳೆ ನಾಶ: ಕಂಗಾಲಾದ ರೈತ

Last Updated 27 ಜೂನ್ 2012, 10:55 IST
ಅಕ್ಷರ ಗಾತ್ರ

ಗಜೇಂದ್ರಗಡ: ನಿರಂತರ ಬರದ ಭೀತಿಯನ್ನು ಎದುರಿಸುತ್ತಿರುವ ತಾಲ್ಲೂಕಿನ ರೈತರು ಬರದ ದವಡೆಯಿಂದ ಪಾರಾಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ, ಪ್ರಸಕ್ತ ವರ್ಷದ ಮುಂಗಾರು ಮಳೆಗಳು ಪೂರ್ಣ ಪ್ರಮಾಣದಲ್ಲಿ ಕೈಕೊಟ್ಟಿದ್ದರಿಂದ ಕಂಗೆಟ್ಟ ಕೆಲ ರೈತರು ಕೊಳವೆ ಬಾವಿಗಳ ಮೂಲಕ ಹೆಸರು ಬೆಳೆ ಬೆಳೆದಿದ್ದಾರೆ. ಆದರೆ, ಬೆಳೆಗೆ ಜಿಂಕೆ ಹಾವಳಿ ವ್ಯಾಪಕವಾಗಿದ್ದು, ಬೆಳೆ ರಕ್ಷಣೆ ಬೆಳೆಗಾರರಿಗೆ ಸವಾಲಾಗಿ ಪರಿಣಮಿಸಿದೆ.

ಕಳೆದ ವರ್ಷದ ಬರದ ನಷ್ಟವನ್ನು ನೀಗಿಸಿಕೊಳ್ಳಲು ಪ್ರಸಕ್ತ ವರ್ಷದ ಪ್ರಮುಖ ಮುಂಗಾರು ಮಳೆಗಳಾದ ರೋಹಿಣಿ ಮತ್ತು ಮೃಗಶಿರಾ ಮಳೆಗಳ ತೀವ್ರ ಮುನಿಸಿನಿಂದಾಗಿ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷವೂ ಬರದ ಛಾಯೆ ದಟ್ಟವಾಗುತ್ತಿದ್ದಂತೆ ರೈತರ ಜಂಘಾಬಲವೇ ಕುಸಿದಿದೆ. ರೈತರಿಗೆ ದಿಕ್ಕು ಕಾಣದಂತೆ ಆಗಿದ್ದು ಬದುಕು ದುಸ್ತರವಾಗುತ್ತಿದೆ.

ನಿರಂತರ ಬರದ ಸಂದಿಗ್ಧ ಪರಿಸ್ಥಿತಿಯಿಂದ ಹೊರ ಬರಲು ತಾಲ್ಲೂಕಿನ ಕೊಳವೆ ಬಾವಿ ಹೊಂದಿರುವ ಕೆಲ ರೈತರು ಇರೋ ಅಲ್ಪ ಪ್ರಮಾಣದ ಅಂತರ್ ಜಲವನ್ನು ಉಪಯೋಗಿಸಿ ಕೊಂಡು ಬರವನ್ನು ಮೆಟ್ಟಿ ನಿಲ್ಲಬೇಕು ಎಂಬ ಮಹದಾಸೆಯಿಂದ ದುಬಾರಿ ಮೊತ್ತದ ಬೀಜ, ಗೊಬ್ಬರ ಖರೀದಿಸಿ ರೋಹಿಣಿ ಮಳೆಯ ಸಮಯದಲ್ಲಿಯೇ ಹೆಸರು ಬಿತ್ತನೆ ಮಾಡಿ ಉತ್ತಮ ಬೆಳೆ ನಿರೀಕ್ಷಿಸಿದ್ದರು.

ರೈತರ ನಿರೀಕ್ಷೆಯಂತೆ ಉತ್ತಮ ಬೆಳೆ ಮೂಡಿ ಬಂದಿತ್ತು. ಆದರೆ, 20 ರಿಂದ 30 ಜಿಂಕೆಗಳ ತಂಡ ಹೆಸರು ಬೆಳೆಗೆ ಲಗ್ಗೆ ಇಟ್ಟು ಬೇರು ಸಹಿತ ಹೆಸರು ಬೆಳೆಯನ್ನು ತಿಂದು ಹಾಕುತ್ತಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಕ್ಷೀಣಿಸಿದ ಬಿತ್ತನೆ ಪ್ರಮಾಣ : ಪ್ರತಿ ವರ್ಷ 70,000 ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಹೆಸರು ಬೆಳೆ ಕಳೆದ ವರ್ಷದಿಂದ 3,000 ಹೆಕ್ಟೇರ್‌ಗೆ ಇಳಿಮುಖ ಗೊಂಡಿದೆ.

ಪ್ರಸಕ್ತ ವರ್ಷ ಬಿತ್ತನೆ ಭೂಮಿಗೆ ಅಗತ್ಯವಿರುವ ಕನಿಷ್ಠ 29.6 ಮಿಲಿ ಮೀಟರ್ ಪ್ರಮಾಣದ ಮಳೆ ಬೀಳದಿರುವುದ ರಿಂದ ರೈತರು ಬಿತ್ತನೆಯಿಂದ ದೂರ ಉಳಿದಿದ್ದಾರೆ. ಆದರೆ, ಕೊಳವೆ ಬಾವಿ ಹೊಂದಿರುವ ರೈತರು ಭಂಡ ಧೈರ್ಯದಿಂದ ಬಿತ್ತನೆಗೆ ಮುಂದಾಗಿದ್ದರಿಂದ ತಾಲ್ಲೂಕಿನಲ್ಲಿ ಕೇವಲ 1,500 ಹೆಕ್ಟೇರ್ ಹೆಸರು ಬಿತ್ತನೆಯಾಗಿದೆ. ಹಗಲು ರಾತ್ರಿ ಎನ್ನದೇ ಕಷ್ಟ ಪಟ್ಟು ಬೆಳೆದ ಹೆಸರು ಬೆಳೆ ಜಿಂಕೆಗಳ ಹಾವಳಿಯಿಂದ ನಲುಗಿ ಹೋಗಿದ್ದು, ಬೆಳೆಗಾರ ಮತ್ತೊಂದು ಸಂಕಷ್ಟದ ಸುಳಿಗೆ ಸಿಲುಕು ವಂತಾಗಿದೆ. 

ಲಾಭದ ಬೆಳೆ: ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಬೆಳೆ ಎಂದೇ ಕರೆಯಲ್ಪಡುವ ಹೆಸರು ಬೆಳೆ ಈ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಬೀಜ, ಗೊಬ್ಬರ ಸೇರಿದಂತೆ ಎಕರೆ ಹೆಸರು ಬಿತ್ತನೆಗೆ 1,800 ರಿಂದ 2,000 ರೂಪಾಯಿವರೆಗೆ ವೆಚ್ಚ ವಾಗುತ್ತದೆ. ಬಿತ್ತನೆಯ ಬಳಿಕ ಕಳೆ ನಿರ್ವಹಣೆ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದರೆ ಬೆಳೆ ಕೈಸೇರುವವರೆಗೂ ಯಾವುದೇ ಖಚು ಇರುವುದಿಲ್ಲ.

ಹಸಿರು ಹುಡುಕಿಕೊಂಡು ಪಯಣ...: ರೋಣ ತಾಲ್ಲೂಕು ನಿರಂತರ ಎರಡನೇ ವರ್ಷ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜಿಂಕೆಗಳಿಗೆ ಹೊಟ್ಟೆ ತುಂಬಿಸಿ ಕೊಳ್ಳಲು ಅಗತ್ಯವಿರುವ ಹಸಿರು ಭೂಮಿಯಲ್ಲಿ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೋಣ ತಾಲ್ಲೂಕಿನ ಎರಿ ಪ್ರದೇಶಗಳಾದ ನರೇಗಲ್, ಹಿರೇಹಾಳ, ಮಾರನಬಸರಿ, ಹಾಲಕೇರಿ, ದ್ಯಾಂಪುರ ಮುಂತಾದ ಗ್ರಾಮಗಳಲ್ಲಿ ವ್ಯಾಪಕವಾಗಿದ್ದ ಜಿಂಕೆಗಳು ಹಸಿರು ಅರೆಸಿ ಅಲೆಯುತ್ತಿರುವುದು ಒಂದೆಡೆಯಾದರೆ, ನೆರೆಯ ಯಲಬುರ್ಗಾ ತಾಲ್ಲೂಕಿನಲ್ಲಿ ನೆಲೆ ಕಂಡುಕೊಂಡಿದ್ದ ಜಿಂಕೆಗಳು ಸಹ ತಾಲ್ಲೂಕಿಗೆ ಲಗ್ಗೆ ಇಟ್ಟಿರುವುದೇ ಇಲ್ಲಿನ ಹೆಸರು ಬೆಳೆಗೆ ಕಂಟಕವಾಗಿ ಪರಿಣಮಿಸಿದೆ.

ಮರಿಚಿಕೆಯಾದ `ಜಿಂಕೆಧಾಮ~: ರೋಣ ಹಾಗೂ ಯಲಬುರ್ಗಾ ತಾಲ್ಲೂಕಿನ ರೈತ ಸಮುದಾಯದ ನೆಮ್ಮದಿಗೆ ನಿರಂತರ ಭಂಗವನ್ನುಂಟು ಮಾಡ್ತುತಿರುವ ಜಿಂಕೆಗಳ ಹಾವಳಿ ನಿಯಂತ್ರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗದಗ ಹಾಗೂ ಕೊಪ್ಪಳ ಜಿಲ್ಲಾಡಳಿತ 2006 ರಲ್ಲಿಯೇ `ಜಿಂಕೆಧಾಮ~ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿವೆ. ಹೀಗಿದ್ದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳದ ಪರಿಣಾಮ ಭೀಕರ ಬರದಲ್ಲಿಯೂ ಜಿಂಕೆಗಳ ಹಾವಳಿ ರೈತರಿಗೆ ಶಾಪವಾಗಿ ಪರಿಣಮಿಸಿದೆ.

2011-12ನೇ ಸಾಲಿನಲ್ಲಿ ಜಿಂಕೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ ಜಿಲ್ಲೆಯ 2,131 ರೈತರಿಗೆ ಸರ್ಕಾರ 24 ಲಕ್ಷ ಪರಿಹಾರವನ್ನು ನೀಡಿದೆ. ಪ್ರಸಕ್ತ ವರ್ಷವೂ ಜಿಂಕೆಹಾವಳಿ ಬಗ್ಗೆ ರೈತರು ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾನಿಗೊಳಗಾದ ಬೆಳೆಯ ಪ್ರದೇಶವನ್ನು ಸರ್ವೆ ನಡೆಸಿ, ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೆಸರು ಹೇಳ ಲಿಚ್ಛಿಸದ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT