ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್ ಉಕ್ಕು ಕಾರ್ಖಾನೆ ಸ್ಥಗಿತ?

Last Updated 27 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಅದಿರಿನ ಕೊರತೆಯಿಂದಾಗಿ ಜಿಲ್ಲೆಯ ತೋರಣಗಲ್ ಬಳಿಯಿರುವ ಜೆಎಸ್‌ಡಬ್ಲ್ಯೂ (ಜಿಂದಾಲ್) ಉಕ್ಕು ಕಾರ್ಖಾನೆಯಲ್ಲಿನ ಉತ್ಪಾದನೆ ಒಂದೆರಡು ದಿನಗಳಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.

ಅಕ್ರಮ ಗಣಿಗಾರಿಕೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಜಿಲ್ಲೆಯಲ್ಲಿ ಗಣಿಗಾರಿಕೆ ಹಾಗೂ ಅದಿರು ಸಾಗಣೆ ಸ್ಥಗಿತಗೊಳಿಸುವಂತೆ ಜುಲೈ 29ರಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಅದಿರಿನ ಕೊರತೆಯಿಂದಾಗಿ ಎರಡು ತಿಂಗಳಿಂದ ಉಕ್ಕು ಉತ್ಪಾದನೆ ಗಣನೀಯವಾಗಿ ಕುಸಿದಿದ್ದು, ಕಾರ್ಖಾನೆಯನ್ನು ಮುಚ್ಚದೆ ಅನ್ಯಮಾರ್ಗವಿಲ್ಲ ಎಂಬ ನಿರ್ಧಾರಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಬಂದಿದೆ.

ಅತಿದೊಡ್ಡ ಕಾರ್ಖಾನೆ
: ಒಟ್ಟು 30,000 ಉದ್ಯೋಗಿಗಳನ್ನು ಹೊಂದಿರುವ ಈ ಕಾರ್ಖಾನೆಯಲ್ಲಿ ವಾರ್ಷಿಕ 10 ದಶಲಕ್ಷ ಟನ್ ಉಕ್ಕು ಉತ್ಪಾದಿಸಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಉಕ್ಕು ಉತ್ಪಾದಿಸುತ್ತಿರುವ ಈ ಕಾರ್ಖಾನೆಗೆ ನಿತ್ಯ 60,000 ಟನ್ ಅದಿರಿನ ಅಗತ್ಯವಿದ್ದು, ಇದೀಗ ಕೇವಲ 5 ರಿಂದ 7 ಸಾವಿರ ಟನ್ ಅದಿರು ಮಾತ್ರ ಲಭ್ಯವಾಗುತ್ತಿದೆ.

`ರಾಷ್ಟ್ರೀಯ ಗಣಿ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)ಕ್ಕೆ ಸೇರಿದ ಜಿಲ್ಲೆಯ ಸಂಡೂರು ತಾಲ್ಲೂಕಿನ ದೋಣಿಮಲೆ ಬಳಿಯ ಗಣಿಗಳಿಂದ ಅದಿರನ್ನು ಇ- ಟೆಂಡರ್ ಮೂಲಕ ಪಡೆಯುವ ಅನಿವಾರ್ಯತೆ ಇದ್ದು, ಅಲ್ಲಿಂದ ಅಗತ್ಯ ಪ್ರಮಾಣದ ಅದಿರು ದೊರೆಯದಿರುವುದು, ಇಲ್ಲಿನ 6 ಬ್ಲಾಸ್ಟ್ ಫರ್ನೆಸ್‌ಗಳ ಪೈಕಿ ಒಂದರಲ್ಲಿ ಮಾತ್ರ ಸದ್ಯ ಉತ್ಪಾದನೆ ನಡೆಯುತ್ತಿದೆ ಎಂದು ಕಾರ್ಖಾನೆಯ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಡಾ.ವಿನೋದ್ ನೋವಲ್ ಅವರು ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಎನ್‌ಎಂಡಿಸಿ ಗಣಿಗಳಿಂದ ಸಂಜೆಯ ನಂತರ ಅದಿರನ್ನು ಸಾಗಿಸುವಂತಿಲ್ಲ ಎಂಬ ನಿಯಮವೂ ಇರುವುದರಿಂದ ಕಾರ್ಖಾನೆಯ ಅಗತ್ಯ ಪೂರೈಸುವಷ್ಟು ಅದಿರು ದೊರೆಯದಂತಾಗಿದೆ. ಅಲ್ಲದೆ, ಕಳೆದ ಮೂರು ದಿನಗಳಿಂದ ಎನ್‌ಎಂಡಿಸಿ ಗಣಿಗಳೂ ಕೆಲಸ ಸ್ಥಗಿತಗೊಳಿಸಿದ್ದು, ಅದಿರು ಸಿಗುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.

ಜುಲೈನಲ್ಲಿ 27,000 ಟನ್ ಉಕ್ಕು ಉತ್ಪಾದಿಲಾಗಿತ್ತು. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಈ ವಾರ ಕೇವಲ 7,000 ಟನ್ ಉಕ್ಕು ಉತ್ಪಾದಿಸಲಾಗಿದೆ. 20,000 ಉದ್ಯೋಗಿಗಳು ಉತ್ಪಾದನಾ ಘಟಕಗಳಲ್ಲಿ ಹಾಗೂ 10,000 ಉದ್ಯೋಗಿಗಳು ವಿವಿಧ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದು, ಸುಪ್ರೀಂ   ಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದಿರು ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಲ್ಲಿ ಉತ್ಪಾದನೆ ಮುಂದುವರಿಸಬಹುದಾಗಿದೆ ಎಂಬ ಆಶಯವ್ನೂ ಅವರು  ವ್ಯಕ್ತಪಡಿಸಿದ್ದಾರೆ.

ದುಪ್ಪಟ್ಟು ಖರ್ಚು: ಓಡಿಶಾದಲ್ಲಿರುವ ಗಣಿಗಳಿಂದ ಅದಿರು ಖರೀದಿಸಿದರೂ ಸರಕು ಸಾಗಣೆ ರೈಲುಗಳ ಲಭ್ಯತೆಯ ಕೊರತೆಯಿಂದಾಗಿ ಅದಿರು ಪೂರೈಕೆ ಆಗುತ್ತಿಲ್ಲ. ಒಂದು ರೇಕ್‌ನಲ್ಲಿ ಕೇವಲ 4ರಿಂದ 4800 ಟನ್ ಅದಿರು ಸಾಗಿಸಬಹುದಾಗಿದ್ದು, ನಿತ್ಯ ಒಂದು ರೇಕ್ ಮಾತ್ರ ಅಲ್ಲಿಂದ ಬಂದರೂ, ಇಲ್ಲಿನ ಅಗತ್ಯ ಪೂರೈಕೆಯಾಗುವುದಿಲ್ಲ. ಅಲ್ಲದೆ, ಅಲ್ಲಿಂದ ಅದಿರು ಖರೀದಿಸಿದರೆ ಸಾಗಣೆ ವೆಚ್ಚವೂ ಹೆಚ್ಚಿ, ಖರ್ಚು ದುಪ್ಪಟ್ಟಾಗಲಿದೆ ಎಂದು ಅವರು ಹೇಳುತ್ತಾರೆ.


ಉಕ್ಕಿನ ಬೆಲೆ ಏರಿಕೆ

ನವದೆಹಲಿ (ಪಿಟಿಐ):
ಕರ್ನಾಟಕದಲ್ಲಿನ ತನ್ನ ವಾರ್ಷಿಕ 10 ದಶಲಕ್ಷ ಟನ್ ಸಾಮರ್ಥ್ಯದ ಉಕ್ಕು ತಯಾರಿಕಾ ಘಟಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಸಾಧ್ಯತೆಗಳು ಇವೆ ಎಂದು `ಜೆಎಸ್‌ಡಬ್ಲ್ಯು~ನ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಮಂಗಳವಾರ ಇಲ್ಲಿ ಹೇಳಿದ್ದಾರೆ.

ಇದರಿಂದ ಉಕ್ಕಿನ ಬೆಲೆ ಏರಿಕೆಯಾಗಲಿದ್ದು, ದೇಶಿ ಅಗತ್ಯ ಪೂರೈಸಿಕೊಳ್ಳಲು ಆಮದು ಮಾಡಿಕೊಳ್ಳಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕರ್ನಾಟಕದಲ್ಲಿ ಕಬ್ಬಿಣ ಅದಿರು ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಉಕ್ಕು ಸ್ಥಾವರಗಳು ಬಾಗಿಲು ಹಾಕುತ್ತಿವೆ.

ಇದುವರೆಗೆ ಕರ್ನಾಟಕದಲ್ಲಿ ಎಷ್ಟು ಘಟಕಗಳು ಉತ್ಪಾದನೆ ಕಡಿತಗೊಳಿಸಿವೆ ಅಥವಾ ಸ್ಥಗಿತಗೊಳಿಸಿವೆ ಎನ್ನುವುದರ ವಾಸ್ತವಿಕ ವರದಿ ಕಳಿಸಿಕೊಡಲು ಉಕ್ಕು ಸ್ಥಾವರಗಳಿಗೆ ಕೇಳಿಕೊಳ್ಳಲಾಗಿದೆ. ಈ ವರದಿ ಆಧರಿಸಿ ಸುಪ್ರೀಂಕೋರ್ಟ್ ಮುಂದೆ ಇದೇ ಶುಕ್ರವಾರ ಮಂಡಿಸಲಾಗುವುದು ಎಂದು  ಉಕ್ಕು ಕಾರ್ಯದರ್ಶಿ  ಪಿ. ಕೆ. ಮಿಶ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT