ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್ಎಸ್ ನಿಧನಕ್ಕೆ ಕಂಬನಿ ಮಿಡಿದ ದಾವಣಗೆರೆ

ಕನ್ನಡ ಭವನದ ಸಭಾಭವನಕ್ಕೆ ಜಿ.ಎಸ್‌.ಶಿವರುದ್ರಪ್ಪ ಹೆಸರು
Last Updated 24 ಡಿಸೆಂಬರ್ 2013, 5:46 IST
ಅಕ್ಷರ ಗಾತ್ರ

ದಾವಣಗೆರೆ: ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ನಿಧನಕ್ಕೆ ದಾವಣಗೆರೆ ಕಂಬನಿ ಮಿಡಿದಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಎಸ್ಎಸ್‌ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ, ಅವರ ಕೊಡುಗೆ ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎ.ಆರ್‌. ಉಜ್ಜನಪ್ಪ ಮಾತನಾಡಿ, ‘ಜಿ.ಎಸ್.ಶಿವರುದ್ರಪ್ಪ ಅವರಿಗೆ ಬಾಲ್ಯದಿಂದಲೂ ದಾವಣಗೆರೆಯೊಂದಿಗೆ ಅಪಾರ ನಂಟಿತ್ತು. ಕುವೆಂಪು ಕನ್ನಡ ಭವನದ ಸಭಾಭವನಕ್ಕೆ ಜಿಎಸ್‌ಎಸ್‌ ಹೆಸರಿಡಲು 2012ರ ನವೆಂಬರ್‌ನಲ್ಲಿ ನಿರ್ಧರಿಸಲಾಗಿತ್ತು’ ಎಂದು ತಿಳಿಸಿದರು. ಇದಕ್ಕೆ ದನಿಗೂಡಿಸಿದ ಪರಿಷತ್‌ನ ಕಾರ್ಯದರ್ಶಿ ಬಾ.ಮ. ಬಸವರಾಜಯ್ಯ, ‘ಶೀಘ್ರವೇ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡು, ಸಭಾಭವನ ಉದ್ಘಾಟಿಸಲಾಗುವುದು’ ಎಂದರು.

ಉದ್ಯಮಿ ಅಥಣಿ ಎಸ್‌.ವೀರಣ್ಣ, ‘1992ರಲ್ಲಿ ನಡೆದಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಎರಡು ದಿನ ಜಿಎಸ್‌ಎಸ್‌ ಅವರೊಂದಿಗೆ ಕಳೆದಿದ್ದೆ. ಮಿತ ಭಾಷಿ ಹಾಗೂ ಸದೃಹಯಿ. ಅವರು ಶಾಮನೂರು ಶಿವಶಂಕರಪ್ಪಗೆ ಗುರುವಾಗಿದ್ದರು ಎಂದು ನೆನೆದರು.

ಬಾ.ಮ. ಬಸವರಾಜಯ್ಯ ಮಾತನಾಡಿ, ಜಿಎಸ್‌ಎಸ್‌ ಅವರು ದಾವಣಗೆರೆ ನೆನಪು ಕವಿತೆಯಲ್ಲಿ ದಾವಣಗೆರೆಯ ಬಗ್ಗೆ ಬರೆದಿದ್ದಾರೆ. ಇಲ್ಲಿನ ಬೆಳೆ, ಮಂಡಿಪೇಟೆ, ಗಡಿಯಾರ ಕಂಬ, ಬಾತಿ ಗುಡ್ಡ, ಆನೆಕೊಂಡದ ಕಾರ್ತೀಕ ಮೊದಲಾದವನ್ನು ದಾಖಲಿಸಿದ್ದಾರೆ. ದಾವಣಗೆರೆ ಅವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.

‘ನಾನು ಅವರ ಶಿಷ್ಯನಾಗಿದ್ದೆ ಎಂಬುದೇ ಹೆಮ್ಮೆ. ಸಣ್ಣ ಕಥೆಗಳನ್ನು ಅದ್ಭುತವಾಗಿ ಪಾಠ ಮಾಡುತ್ತಿದ್ದರು. ಸಜ್ಜನಿಕೆ, ಮೃದುತ್ವದ ಗುರುವಾಗಿದ್ದರು. ಕನ್ನಡ ಪರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಉಪಸ್ಥಿತಿ ದೊಡ್ಡ ಶಕ್ತಿಯಂತಿತ್ತು ಎಂದು ನೆನೆದವರು ಕಾನೂನು ತಜ್ಞ  ಪ್ರೊ.ಎಸ್‌.ಎಚ್‌.ಪಟೇಲ್‌.
‘ಮೈಸೂರು ಮಹಾರಾಜ ಕಾಲೇಜಿನಲ್ಲಿ ಮೂರು ತಿಂಗಳ ಕಾಲ ನಮಗೆ ಪಾಠ ಮಾಡಿದ್ದರು. ಎಲ್ಲ ಕಡೆ ಅಗೆಯಬಾರದು, ಎಲ್ಲಿ ನೀರಿದೆ ಎಂಬುದನ್ನು ನೋಡಿಕೊಂಡು ಅಗೆಯಬೇಕು. ಅಂತೆಯೇ, ಪ್ರತಿ ಪದ್ಯವನ್ನೂ ಓದಬೇಕಿಲ್ಲ. ಅರ್ಥ ಗ್ರಹಿಸಬೇಕು ಎನ್ನುತ್ತಿದ್ದರು’ ಎಂದು ಜಿಎಸ್‌ಎಸ್‌ ಶಿಷ್ಯ ಪ್ರೊ.ಎಸ್‌.ಜಿ.ಶಿವಪ್ಪ ಸ್ಮರಿಸಿದರು.

ಬಿರಾದಾರ್‌ ಹಾಗೂ ಪ್ರಹ್ಲಾದ ಭಟ್‌ ಜಿಎಸ್‌ಎಸ್‌ ಕವನಗಳನ್ನು ಹಾಡಿದರು. 

ಸಂತಾಪ: ಜಿಲ್ಲಾ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಪ್ರೊ.ಎಸ್‌.ಬಿ.ರಂಗನಾಥ್‌ ಸಂತಾಪ ಸೂಚಿಸಿದ್ದಾರೆ.

ಅಮೂಲ್ಯ ಕೊಡುಗೆಗಳು...
ಜಿಎಸ್‌ಎಸ್‌ ಮಾನವತೆಯ ಸಂಕೇತದಂತಿದ್ದರು. ಮೃದು ಮಾತಾದರೂ ಖಚಿತತೆ ಇರುತ್ತಿತ್ತು. ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ತೆಗೆದುಕೊಂಡ ನಿಲುವು ಹಾಗೂ ಪ್ರಕಟಿಸಿದ ಪುಸ್ತಕಗಳು ಅಮೂಲ್ಯವಾದವು. ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಅವರ ಸದಾಶಯಗಳು ಈಡೇರಿದಾಗ ಅವರ ಆತ್ಮಕ್ಕೆ ಶಾಂತಿ ಸಿಕ್ಕೀತು.
– ಪ್ರೊ.ಎಂ.ಜಿ.ಈಶ್ವರಪ್ಪ, ಜಾನಪದ ವಿದ್ವಾಂಸ


ಜಿಎಸ್‌ಎಸ್‌ಗೆ ಜ್ಞಾನಪೀಠ ಬರಬೇಕಿತ್ತು
ಜಿ.ಎಸ್‌.ಶಿವರುದ್ರಪ್ಪ ಅವರ ನಿಧನದೊಂದಿಗೆ ಕುವೆಂಪು ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ. ಎಲ್ಲರಿಗೂ ಅರ್ಥವಾಗುವಂತೆ ಮನತಟ್ಟುವಂತೆ ಸಾಹಿತ್ಯ ರಚಿಸಿದವರವರು. ಭಾವನಾತ್ಮಕ ಲೋಕಕ್ಕೆ ಕರೆದೊಯ್ಯುವ ಸಾಹಿತ್ಯ ರಚಿಸಿದ್ದಾರೆ. ಅವರಿಗೆ ಜ್ಞಾನಪೀಠ ಬರಬೇಕಿತ್ತು. ಮುಂಬರುವ ದಾವಣಗೆರೆ ಉತ್ಸವದಲ್ಲಿ ಜಿಎಸ್‌ಎಸ್‌ ವೇದಿಕೆ ಮಾಡಿ, ಅವರ ಸಾಹಿತ್ಯದ ಅವಲೋಕನ ಮಾಡಿ ನಮನ ಸಲ್ಲಿಸಲಾಗುವುದು.
– ಎಸ್‌.ಟಿ.ಅಂಜನಕುಮಾರ್‌, ಜಿಲ್ಲಾಧಿಕಾರಿ

*ಜಿಎಸ್‌ಎಸ್‌ ನೆನಪಿನ ಚಿತ್ರಪಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT