ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಎಸ್‌ ಜಾತಿ, ಧರ್ಮ ಮೀರಿದ ರಾಷ್ಟ್ರಕವಿ

ವಿಚಾರ ಸಂಕಿರಣದಲ್ಲಿ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅಭಿಮತ
Last Updated 2 ಜನವರಿ 2014, 10:29 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರು ಯಾವುದೇ ಜಾತಿ, ಧರ್ಮ, ಸಮುದಾಯ ಅನುಸರಿಸದೇ ಮಾನವ ಧರ್ಮ ಅನುಸರಿಸಿದ್ದರಿಂದ ಹೆಚ್ಚಿನ ಜನಪ್ರಿಯತೆ ಗಳಿಸಲು ಸಾಧ್ಯವಾಯಿತು ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ನಗರದ ಭೋವಿ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಡಾ.ಜಿ.ಎಸ್.ಶಿವರುದ್ರಪ್ಪ ಮತ್ತು ವೈಚಾರಿಕತೆ ವಿಷಯ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಜಿ.ಎಸ್. ಶಿವರುದ್ರಪ್ಪ ಅವರು ನಮ್ಮನ್ನು ಅಗಲಿದ್ದರೂ ಅಪಾರ ಸಾಹಿತ್ಯ ಸಂಪತ್ತನ್ನು ಬಿಟ್ಟು ಹೋಗಿದ್ದಾರೆ. ಜಿಎಸ್ಎಸ್ ಅಪರೂಪದ ವ್ಯಕ್ತಿ ಅಷ್ಟೇ ಅಲ್ಲ. ಕವಿ, ವಿಮರ್ಶಕರಾಗಿ ಕಾವ್ಯ ಮತ್ತು ವಿಮರ್ಶಾ ಕ್ಷೇತ್ರಕ್ಕೆ ಶಾಶ್ವತ ಕೊಡುಗೆ ನೀಡಿದ ಮಹಾನುಭಾವ ಎಂದು ಬಣ್ಣಿಸಿದರು.

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿ ಅಲ್ಲಿ ಉತ್ತಮ ರೀತಿಯ ವಾತಾವರಣ ಸೃಷ್ಟಿ ಮಾಡಿದರು. ಇದರಿಂದ ಅವರು ಎಲ್ಲರ ಮನೆಮಾತಾಗುವುದರ ಮೂಲಕ ಉತ್ತಮ ಕವಿ ಎಂಬುದಾಗಿ ನಾಮಾಂಕಿತರಾದರು. ಅವರ ಕವಿತೆಯಲ್ಲಿ ವಿಸ್ಮಯ ಮತ್ತು ಆಶ್ಚರ್ಯಗಳು ಒಳಗೊಂಡಿದ್ದವು. ಶಿವರುದ್ರಪ್ಪ ಜಾತಿ, ಮತ ಮೀರಿ ಬೆಳೆದವರು. ಅವರು ಯಾವುದೇ ಒಂದು ಕಟ್ಟುಪಾಡಿಗೆ ಒಳಗಾಗಿರಲಿಲ್ಲ.

ಇದರಿಂದಾಗಿಯೇ ಅವರ ಅಂತಿಮ ಸಂಸ್ಕಾರವನ್ನು ಯಾವುದೇ ಸಮುದಾಯ, ಜಾತಿಗೆ ಸೀಮಿತಗೊಳಿಸದೆ ಅವರಿಚ್ಛೆಯಂತೆ ಮಾಡಲಾಯಿತು. ಅಲ್ಲದೆ ಅವರ ಶವಸಂಸ್ಕಾರ ಸಮಯದಲ್ಲಿ ನೆರದಿದ್ದ ಜನಸಂದಣಿ ಅವರ ಜನಪ್ರಿಯತೆಗೆ ಸಾಕ್ಷಿಯಾಯಿತು ಎಂದು ತಿಳಿಸಿದರು.

‘ಪ್ರಸ್ತುತ ಎಲ್ಲೆಡೆ ಅಂಧಕಾರ, ಮೂಢನಂಬಿಕೆ ಹೆಚ್ಚಾಗುತ್ತಿದೆ. ಅನೇಕರು ತಮ್ಮ ಪ್ರಭಾವ ಬೀರುವ ಮೂಲಕ ಜನಸಾಮಾನ್ಯರನ್ನು ಅಂಧಕಾರದಲ್ಲಿ ಮುಳುಗಿಸಿದ್ದಾರೆ. ಆದರೆ, ಅದನ್ನು ನೀವು ಪಾಲಿಸಬೇಡಿ. ಶಿಕ್ಷಕರಾಗಿರಲಿ, ಪೋಷಕರಾಗಿರಲಿ ಹಾಗೂ ಸ್ನೇಹಿತರಾಗಿರಲಿ ಯಾರೇ ಏನೇ ಹೇಳಿದರೂ ಅದರ ಬಗ್ಗೆ ಪ್ರಶ್ನೆ ಮಾಡದೇ ಒಪ್ಪಿಕೊಳ್ಳಬೇಡಿ. ಸುಮ್ಮನೆ ಹೇಳಿದ್ದನ್ನು ಒಪ್ಪಿಕೊಳ್ಳುವವರು ಅಜ್ಞಾನಿಗಳು. ಹೇಳಿದ್ದನ್ನು ಪ್ರಶ್ನೆ ಮಾಡುವವರು ಜ್ಞಾನಿಗಳು’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪತ್ರಕರ್ತ ಕ.ಮ.ರವಿಶಂಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲವರು ತಮ್ಮ ಮಕ್ಕಳ ಮದುವೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ದುಂದು ವೆಚ್ಚ ಮಾಡುವ ಮೂಲಕ ವೈಭೋಗದ ಮದುವೆ ಮಾಡುತ್ತಿದ್ದಾರೆ. ಇದನ್ನು ನೋಡಿದ ಬೇರೆಯವರು ಸಾಲ ಮಾಡಿ ಮದುವೆ ಮಾಡುವ ಪರಿಪಾಠಕ್ಕೆ ಒಳಗಾಗಿದ್ದಾರೆ. ಸರಳತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ನೇತೃತ್ವ ವಹಿಸಿದ್ದ ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಜ್ಞಾನ ಸಂಪಾದನೆ ಮಾಡುವಾಗ ನೈಜವಾದ ಮನಸ್ಸು ಅಗತ್ಯವಾಗಿದ್ದು, ಯಾವುದೇ ರೀತಿಯ ಆಡಂಬರದ ಅಗತ್ಯವಿಲ್ಲ. ಶಿಕ್ಷಣ ಬರೀ ಬದುಕನ್ನು ನಡೆಸುವಂತಿರದೇ ಅದು ಜನರ ಹೃದಯ ತೆರದಿಡುವಂತಿರಬೇಕಿದೆ. ಮಾನವ ಸರಿ, ತಪ್ಪುಗಳನ್ನು ಅರಿತು ಜೀವನ ಸಾಗಿಸಬೇಕು.

ಧರ್ಮ, ಪ್ರಾಮಾಣಿಕತೆ ಮತ್ತು ರಾಜಕೀಯದಲ್ಲಿ ತೆಗೆದುಕೊಳ್ಳುವ ತೀರ್ಮಾನ ತೂಕವಾಗಿದ್ದಾಗ ಮಾತ್ರ ಉತ್ತಮ ಫಲಿತಾಂಶ ಲಭ್ಯವಾಗಲು ಸಾಧ್ಯ ಎಂದು ಹೇಳಿದರು. ಭೋವಿ ಸಮುದಾಯದ ಮುಖಂಡರಾದ ಭೀಮರಾಜ್, ರುದ್ರಪ್ಪ, ಈರಣ್ಣ, ಸತ್ಯಪ್ಪ, ಪಾಳ್ಯ ಬಸಪ್ಪ, ಗುರಪ್ಪ ಹಾಜರಿದ್ದರು. ಗೌನಹಳ್ಳಿ ಗೋವಿಂದಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT