ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಕೆವಿಕೆ: ರಾಷ್ಟ್ರೀಯ ಕೃಷಿ ಮೇಳ, ಅತಿ ಸಣ್ಣ ರೈತರಿಗೆ ವಿಶೇಷ ಗಮನ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ನವೆಂಬರ್ 16ರಿಂದ 20ರವರೆಗೆ ತನ್ನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಕೃಷಿ ಮೇಳದಲ್ಲಿ ಅತಿ ಸಣ್ಣ ಮತ್ತು ಸಂಪನ್ಮೂಲ ವಂಚಿತ ರೈತರಿಗೆ ವಿಶೇಷ ಗಮನ ನೀಡಲು ನಿರ್ಧರಿಸಲಾಗಿದೆ.

ಕೃಷಿ ಮೇಳದ ಪ್ರಯೋಜನ ಕಟ್ಟಕಡೆಯ ರೈತನನ್ನು ತಲುಪಬೇಕೆಂಬ ಉದ್ದೇಶದಿಂದಲೇ ಗ್ರಾಮ ಮಟ್ಟದ ಸಂಘ-ಸಂಸ್ಥೆಗಳು, ದಾನಿಗಳು, ಪ್ರಜ್ಞಾವಂತ ಗ್ರಾಮಸ್ಥರು ಅಂಥ ರೈತರನ್ನು ಗುರುತಿಸಿ ಮೇಳಕ್ಕೆ ಕರೆದುಕೊಂಡು ಬರಬೇಕು ಎಂದು ವಿ.ವಿ. ಮನವಿ ಮಾಡಿದೆ.

ಪ್ರತಿ ವರ್ಷ ಕೃಷಿ ಇಲಾಖೆ ಸೇರಿದಂತೆ ವಿವಿಧ ಅಭಿವೃದ್ಧಿ ಇಲಾಖೆಗಳೊಂದಿಗೆ ನೇರ ಸಂಪರ್ಕ ಹೊಂದಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ನಮ್ಮ ಉದ್ದೇಶ ಕಟ್ಟಕಡೆಯ ರೈತನಿಗೂ ಕೃಷಿ ಮೇಳದ ಪ್ರಯೋಜನ ಆಗಬೇಕೆಂಬುದಾಗಿದೆ. ಸಂಸ್ಥೆಗಳು ಮತ್ತು ದಾನಿಗಳಿಗೆ ತಮಗೆ ಪರಿಚಯವಿರುವ ಸಣ್ಣ ಹಿಡುವಳಿದಾರರನ್ನು ಕರೆತರುವಂತೆ ಕೋರಲಾಗಿದೆ ಎಂದು ವಿ.ವಿ.ಯ ವಿಸ್ತರಣಾ ವಿಭಾಗದ ನಿರ್ದೇಶಕ ಡಾ.ಆರ್.ಎಸ್.ಕುಲಕರ್ಣಿ ತಿಳಿಸಿದ್ದಾರೆ.

ಜಾಗತೀಕರಣದ ತೆಕ್ಕೆಯಿಂದ ಹೊರಬರಲು ಮಾಹಿತಿಯನ್ನು ಒಂದು ಮೂಲ ಸಂಪನ್ಮೂಲವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇದ್ದು, ಈ ಮಾಹಿತಿ ಕೇವಲ ಮೇಲ್‌ಸ್ತರದ ಕೃಷಿಕರಿಗೆ ಲಭ್ಯವಾಗದೇ ಅವಕಾಶ ವಂಚಿತ ವರ್ಗಕ್ಕೂ ತಲುಪಿಸುವ ವಿ.ವಿ. ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸಾರಿಗೆ, ಊಟದ ವ್ಯವಸ್ಥೆ: ರಾಷ್ಟ್ರೀಯ ಕೃಷಿ ಮೇಳಕ್ಕೆ ಈಗಾಗಲೇ ವ್ಯಾಪಕ ಸಿದ್ಧತೆ ಮಾಡಲಾಗಿದ್ದು, ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ರೈತರಿಗೆ ನಿಗದಿತ ದರದಲ್ಲಿ ಊಟದ ವ್ಯವಸ್ಥೆ, ವಾಸ್ತವ್ಯ ಹೂಡಲು ವಸತಿ ವ್ಯವಸ್ಥೆ ಹಾಗೂ ಜಿಕೆವಿಕೆಯ ಮುಖ್ಯ ಪ್ರವೇಶ ದ್ವಾರದಿಂದ ವಿವಿಧ ಪ್ರಾತ್ಯಕ್ಷಿಕೆ ತಾಕುಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಕೃಷಿಮೇಳಕ್ಕೆ ಆಗಮಿಸುವ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತಿದೆ.

ವಸ್ತು ಪ್ರದರ್ಶನ: ಒಟ್ಟು 600 ಮಳಿಗೆಗಳಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಕೃಷಿ ಪರಿಕರ ಸಂಘ-ಸಂಸ್ಥೆಗಳು, ಅಭಿವೃದ್ಧಿ ಇಲಾಖೆಗಳು, ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ವಿ.ವಿ.ಗಳು ಹಾಗೂ ಸಾಹಿತ್ಯ ಪ್ರಕಾಶನ ಸಂಸ್ಥೆಗಳು ಭಾಗವಹಿಸಿ ತಮ್ಮ ತಂತ್ರಜ್ಞಾನ, ಮಾದರಿ, ಪರಿಕರ ಹಾಗೂ ಪ್ರಕಟಣೆಗಳನ್ನು ಪ್ರದರ್ಶಿಸಲಿದ್ದಾರೆ.

ನ. 16ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮೇಳಕ್ಕೆ ಚಾಲನೆ ನೀಡುವರು. ನ.20ರಂದು ನಡೆಯುವ ಸಮಾರೋಪದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಮುಖ್ಯ ಅತಿಥಿಗಳಾಗಿ        ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT