ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಟಿಜಿಟಿ ಮಳೆ: ಬರೆ ಕುಸಿತ, ಸಂಪರ್ಕ ಕಡಿತ

Last Updated 24 ಜುಲೈ 2013, 6:04 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಕೊಂಚ ತಗ್ಗಿದಂತೆ ಕಂಡುಬಂದರೂ ಮಡಿಕೇರಿ, ಸಂಪಾಜೆ, ಭಾಗಮಂಡಲ, ಸೋಮವಾರಪೇಟೆ, ಶಾಂತಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ಶ್ರೀಮಂಗಲ ಮತ್ತಿತರ ಕಡೆಗಳಲ್ಲಿ ಸಾಧಾರಣವಾಗಿ ಮಳೆ ಮುಂದುವರೆದಿದೆ.

ಜಿಲ್ಲೆಯಲ್ಲಿ ಕಳೆದ 50 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜಾನುವಾರು ಹಾನಿ, ರಸ್ತೆಗಳು, ವಿದ್ಯುತ್ ಕಂಬಗಳು ಮತ್ತು ತಂತಿಗಳು, ರಸ್ತೆ ಸಂಪರ್ಕ ಕಡಿತ, ಬರೆ ಕುಸಿತ ಹೀಗೆ ಸಾಕಷ್ಟು ಹಾನಿ ಉಂಟಾಗಿದೆ.

ಮಾದಾಪುರದಿಂದ ಸೂರ್ಲಬ್ಬಿ ರಸ್ತೆ ಮಾರ್ಗದ ಶಿರಂಗಳ್ಳಿ ಬಳಿ ರಸ್ತೆಬದಿ ಬರೆ ಕುಸಿತ ಉಂಟಾಗಿದೆ. ಗರ್ವಾಲೆ-ಸೂರ್ಲಬ್ಬಿ ನಡುವಿನ ಮಾರ್ಗ ಮಧ್ಯ ವಿದ್ಯುತ್ ಕಂಬ ಮತ್ತು ತಂತಿ ನೆಲಕುರುಳಿವೆ. 

ಸೂರ್ಲಬ್ಬಿಗೆ ತೆರಳುವಾಗ ಎಡಕ್ಕೆ ತಿರುಗಿದರೆ ಮುಟ್ಲು ಗ್ರಾಮದಲ್ಲಿನ ಬತ್ತದ ಗದ್ದೆಗಳು ಮಹಾಮಳೆಗೆ ಜಲಾವೃತವಾಗಿದೆ. ಜಾನುವಾರುಗಳು ಮಳೆಯ ಹೊಡೆತ ತಾಳಲಾರದೆ ಅಸುನೀಗಿವೆ. ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಟ್ಲು ಮತ್ತು ಹಮ್ಮಿಯಾಲ ಭಾಗಗಳಲ್ಲಿ ಮಹಾಮಳೆಯಿಂದ ಅಲ್ಲಿನ ನಾಗರಿಕರು ತತ್ತರಿಸಿದ್ದಾರೆ.

ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ನದಿ, ತೊರೆ, ಹಳ್ಳಕೊಳ್ಳಗಳು, ಜಲಪಾತಗಳು ಉಕ್ಕಿ ಹರಿಯುತ್ತಿರುವುದು ಒಂದು ಕಡೆ ಹರ್ಷ ತಂದರೆ, ಮತ್ತೊಂದೆಡೆ ಮಹಾಮಳೆಯಿಂದ ಜನ-ಜಾನುವಾರು ಹಾನಿ, ಭತ್ತದ ಗದ್ದೆಗಳು ಜಲಾವೃತವಾಗಿವೆ.

ಕಾಫಿ ಬೆಳೆಗೆ ಕೊಳೆ ರೋಗ, ಹಲವು ರಸ್ತೆ ಸಂಪರ್ಕ ಕಡಿತ, ವಿದ್ಯುತ್ ವ್ಯತ್ಯಯ, ಅಲ್ಲಲ್ಲಿ ಬರೆಕುಸಿತ, ಹಲವು ಕಟ್ಟಡಗಳು ಮಳೆಯಿಂದ ಸೋರುತ್ತಿವೆ. ಬೆಟ್ಟ-ಗುಡ್ಡ, ಕಾನನಗಳಲ್ಲಿ ವಾಸಿಸುವ ಜನರು ಮನೆಯ ಬಳಿ ಯಾವ ಸಂದರ್ಭದಲ್ಲಿ ಬರೆ ಕುಸಿಯುತ್ತದೆಯೇ ಎನ್ನುವ ಆತಂಕದಲ್ಲಿ ದಿನ ದೂಡುತ್ತಿದ್ದಾರೆ... ಹೀಗೆ ನಾನಾ ಸಂಕಷ್ಟಗಳು ತಲೆದೋರಿವೆ. 

ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಜನ-ಜಾನುವಾರು ಹಾನಿಗೆ ಸಂಬಂಧಿಸಿದಂತೆ ಆಯಾಯ ಸಂದರ್ಭ ಗಳಲ್ಲಿಯೂ ಪ್ರಕೃತಿ ವಿಕೋಪದಡಿ ಪರಿಹಾರ ವಿತರಿಸುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲು ಮಡಿಕೇರಿ ನಗರ  ಸೇರಿದಂತೆ ನೆಲ್ಯಹುದಿಕೇರಿ, ಕರಡಿಗೋಡು, ಮೊಣ್ಣಂಗೇರಿ, ನಾಪೋಕ್ಲು ಮತ್ತಿತರ ಕಡೆಗಳಲ್ಲಿ ಗಂಜಿಕೇಂದ್ರ ತೆರೆದಿದೆ. ಭಾಗಮಂಡಲದಲ್ಲಿ ಬೋಟ್ ವ್ಯವಸ್ಥೆ ಮಾಡಲಾಗಿದೆ.

ಮಕ್ಕಂದೂರು ಜಿಲ್ಲಾ ಪಂಚಾತಿ ಸದಸ್ಯರಾದ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಅನಿಲ್‌ಕುಮಾರ್, ಗಾಳಿಬೀಡು ಗ್ರಾ.ಪಂ.ಸದಸ್ಯರಾದ ಸುಭಾಸ್ ಸೋಮಯ್ಯ ಅವರು ಮಕ್ಕಂದೂರು ಜಿ.ಪಂ.ವ್ಯಾಪ್ತಿಯ ಮುಟ್ಲು, ಹಮ್ಮಿಯಾಲದ ನೆರೆ ಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿ ವೀಕ್ಷಣೆ ಮಾಡಿದರು.

ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಮಳೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗಿದ್ದು, ಕೂಡಲೇ 25 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಇಲ್ಲಿನ ರೈತರ ಬೆಳೆ ಸಾಲ ಮತ್ತು ಮನೆ ಕಂದಾಯ ಸಾಲವನ್ನು ಮನ್ನಾ ಮಾಡಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕು ಎಂದು ಅವರು ಮನವಿ ಮಾಡಿದರು. 

ಮುಟ್ಲು ಗ್ರಾಮದ ಗ್ರಾಮಸ್ಥರು ಮಾತನಾಡಿ, ಈ ವ್ಯಾಪ್ತಿಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಬತ್ತ ನಾಟಿ ಮಾಡಲಾಗಿದ್ದು, ವ್ಯಾಪಕ ಮಳೆಯಿಂದ ಬೆಳೆಹಾನಿಯಾಗಿದೆ. ಕೂಡಲೇ ಪರಿಹಾರ ವಿತರಿಸಬೇಕು. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಾನುವಾರುಗಳು ಮೃತಪಟ್ಟಿವೆ, ಜನರು ತತ್ತರಿಸಿದ್ದಾರೆ ಎಂದು ಅಳಲು ತೋಡಿಕೊಂಡರು. 

ಮುಟ್ಲು-ಹಮ್ಮಿಯಾಲ ವ್ಯಾಪ್ತಿಯಲ್ಲಿ 200 ರಿಂದ 300 ಇಂಚು ಮಳೆಯಾಗಿದ್ದು, ಕಳೆದ 15 ದಿನದಲ್ಲಿ ನಾಟಿ ಮಾಡಲಾಗಿರುವ ಬತ್ತದ ಕೃಷಿ ನೀರಿನಲ್ಲಿ ಮುಳುಗಿ ನಾಶವಾಗಿದ್ದು, ತಕ್ಷಣವೇ ಪರಿಹಾರ ವಿತರಿಸಬೇಕು ಎಂದು ಆಗ್ರಸಿದರು.

ತಹಶೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಮಳೆ ಹಾನಿ ಕುರಿತಂತೆ ತಕ್ಷಣವೇ ಪರಿಹಾರ ವಿತರಿಸಲು ಕ್ರಮವಹಿಸಲಾಗುವುದು. ಹೆಚ್ಚಿನ ಸೀಮೆಎಣ್ಣೆ ವಿತರಣೆ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು. ಕಂದಾಯ ನಿರೀಕ್ಷಕ ಪ್ರಕಾಶ್, ಕೃಷಿ ಇಲಾಖೆ ಅಧಿಕಾರಿಗಳು ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ಎಲ್ಲೆಲ್ಲಿ ಎಷ್ಟು ಮಳೆ
ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆ ಅವಧಿ ಅಂತ್ಯಗೊಂಡಂತೆ 24 ಗಂಟೆಯಲ್ಲಿ 34.63 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 18.89 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1924.28 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 809.05 ಮಿ.ಮೀ. ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 41.6 ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 17.45 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 44.83 ಮಿ.ಮೀ. ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 53 ಮಿ.ಮೀ., ನಾಪೋಕ್ಲು 18.2 ಮಿ.ಮೀ., ಸಂಪಾಜೆ 57.2 ಮಿ.ಮೀ., ಭಾಗಮಂಡಲ 38 ಮಿ.ಮೀ., ವೀರಾಜಪೇಟೆ ಕಸಬಾ 8.6 ಮಿ.ಮೀ., ಹುದಿಕೇರಿ 19.3 ಮಿ.ಮೀ., ಶ್ರಿಮಂಗಲ 42.6 ಮಿ.ಮೀ., ಪೊನ್ನಂಪೇಟೆ 17.2 ಮಿ.ಮೀ., ಅಮ್ಮತ್ತಿ 7 ಮಿ.ಮೀ., ಬಾಳಲೆ 10 ಮಿ.ಮೀ., ಸೋಮವಾರಪೇಟೆ ಕಸಬಾ 76.2 ಮಿ.ಮೀ., ಶನಿವಾರಸಂತೆ 40.6 ಮಿ.ಮೀ., ಶಾಂತಳ್ಳಿ 80 ಮಿ.ಮೀ., ಕೊಡ್ಲಿಪೇಟೆ 42 ಮಿ.ಮೀ., ಕುಶಾಲನಗರ 7.6 ಮಿ.ಮೀ., ಸುಂಟಿಕೊಪ್ಪ 22.6 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT