ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಕುಸಿತ:ಆರ್‌ಬಿಐ ಸ್ಪಷ್ಟನೆ

Last Updated 8 ಜೂನ್ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ/ಐಎಎನ್‌ಎಸ್): `ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಗಣನೀಯವಾಗಿ ಕುಸಿಯಲು ಬಡ್ಡಿ ದರ ಏರಿಕೆಯೊಂದೇ ಪ್ರಮುಖ ಕಾರಣವಲ್ಲ~ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಕೆ.ಸಿ ಚಕ್ರವರ್ತಿ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಕಳೆದ ಹಣಕಾಸು ವರ್ಷದ (2011-12) ನಾಲ್ಕನೆಯ ತ್ರೈಮಾಸಿಕ ಅವಧಿಯಲ್ಲಿ `ಜಿಡಿಪಿ~ 9 ವರ್ಷಗಳ ಹಿಂದಿನ ಮಟ್ಟವಾದ ಶೇ 5.3ಕ್ಕೆ ಇಳಿಕೆ ಕಂಡಿದೆ. ಈ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಆರ್‌ಬಿಐ~ ಬಡ್ಡಿ ದರ ಏರಿಕೆಯಿಂದ `ಜಿಡಿಪಿ~ ಕುಸಿದಿದೆ ಎನ್ನುವ ವಿಶ್ಲೇಷಣೆ ತಪ್ಪು. ಇದಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿದ್ದಾರೆ.          
                      
`ಜಿಡಿಪಿ~ ಕುಸಿಯಲು ಅಂತರರಾಷ್ಟ್ರೀಯ ಮತ್ತು ದೇಶೀಯ ಮಟ್ಟದ ಹಲವು ಸಂಗತಿಗಳು ಕಾರಣ. ಜಿಡಿಪಿ ಮತ್ತು ಹಣದುಬ್ಬರದ ನಡುವೆ ಸಮತೋಲನ ಕಾಯ್ದುಕೊಳ್ಳಲು `ಆರ್‌ಬಿಐ~ ಆಗಾಗ್ಗೆ ಅಲ್ಪಾವಧಿ ಬಡ್ಡಿ ದರಗಳಲ್ಲಿ ಪರಿಷ್ಕರಣೆ ಮಾಡುತ್ತಿರುತ್ತದೆ.

ದೇಶವೊಂದರ ಆರ್ಥಿಕ ಪ್ರಗತಿಗೆ ಇದು ಬಹಳ ಪ್ರಮುಖ ಸಂಗತಿ. ತಯಾರಿಕಾ ವಲಯದ ಹಿನ್ನಡೆ, ಹಣದುಬ್ಬರ ಏರಿಕೆ, ಉತ್ಪಾದನೆ ಮತ್ತು ಕಾರ್ಯಕ್ಷಮತೆಯಲ್ಲಿನ ಕೊರತೆ ಕೂಡ ಆರ್ಥಿಕ ವೃದ್ಧಿ ದರ ಕುಸಿಯುವಂತೆ ಮಾಡಿದೆ ಎಂದರು.

ಕಳೆದ ಹಣಕಾಸು ವರ್ಷದಲ್ಲಿ (2011-12) `ಜಿಡಿಪಿ~ ಶೇ 6.5ರಷ್ಟಾಗಿದೆ.  ಜಾಗತಿಕ ಆರ್ಥಿಕ ಹಿಂಜರಿತ ಇದ್ದ 2010-11ನೇ ಸಾಲಿನಲ್ಲಿ ಶೇ 6.7ರಷ್ಟು ಪ್ರಗತಿ ದಾಖಲಾಗಿತ್ತು. ಇದಕ್ಕಿಂತಲೂ ಈ ಬಾರಿ ವೃದ್ಧಿ ದರ ಕುಸಿದಿರುವುದು ಆತಂಕ ಹೆಚ್ಚಿದೆ. `ಆರ್‌ಬಿಐ~ ಮೇಲಿಂದ ಮೇಲೆ ಬಡ್ಡಿ ದರ ಹೆಚ್ಚಿಸುವ ಮೂಲಕ ಬಿಗಿ ವಿತ್ತಿಯ ಧೋರಣೆ ಅನುಸರಿಸಿದ್ದೇ `ಜಿಡಿಪಿ~ ಕುಸಿಯಲು ಪ್ರಮುಖ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದರು.

`ಜೂನ್ 18ರಂದು ಆರ್‌ಬಿಐ ತನ್ನ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ  ಪ್ರಕಟಿಸಲಿದೆ. `ಜಿಡಿಪಿ~ ಕುಸಿದಿರುವ ಹಿನ್ನೆಲೆಯಲ್ಲಿ ಈ ಬಾರಿ ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಇಳಿಸಬಹುದು ಎನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ. ಆದರೆ, ಹಣದುಬ್ಬರ ಗಣನೀಯವಾಗಿ ಇಳಿದರೆ ಮಾತ್ರ ಬಡ್ಡಿ ದರ ಕಡಿತ ಮಾಡುವುದಾಗಿ ಚಕ್ರವರ್ತಿ ಸ್ಪಷ್ಟಪಡಿಸಿದ್ದಾರೆ.  2010ರ ಮಾರ್ಚ್‌ನಿಂದ ಅಕ್ಟೋಬರ್ 2011ರ ನಡುವೆ `ಆರ್‌ಬಿಐ~ 13 ಬಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿತ್ತು.

ಬಡ್ಡಿ ದರ ಇಳಿಕೆ ವಿಶ್ವಾಸ 
 `ಆರ್‌ಬಿಐ~ ಜೂನ್ 18ರಂದು ಪ್ರಕಟಿಸಲಿರುವ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ತಗ್ಗಿಸಬಹುದು ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ಎಂ.ವಿ ಟಂಕಸಾಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. `ಜಿಡಿಪಿ~ ಕುಸಿದಿರುವ ಹಿನ್ನೆಲೆಯಲ್ಲಿ ಬಡ್ಡಿ ದರ ಇಳಿಕೆಗೆ `ಆರ್‌ಬಿಐ~ ಮುಂದಾಗಬಹುದು ಎನ್ನುವ ಅಭಿಪ್ರಾಯವನ್ನು ಆಂಧ್ರ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎ ಪ್ರಭಾಕರ್ ವ್ಯಕ್ತಪಡಿಸಿದ್ದಾರೆ. 

 `ರೆಪೊ ಮತ್ತು ರಿವರ್ಸ್ ರೆಪೊ ದರ ಇಳಿಕೆಯಾದರೆ ಅದರ ಲಾಭವನ್ನು  ಗ್ರಾಹಕರಿಗೆ ತಕ್ಷಣ ವರ್ಗಾಯಿಸುತ್ತೇವೆ ಎಂದು ಟಂಕಸಾಲೆ ಹೇಳಿದ್ದಾರೆ. ಕಚ್ಚಾ ತೈಲದ ಬೆಲೆ ಇಳಿದಿರುವ ಹಿನ್ನೆಲೆಯಲ್ಲಿ, `ಆರ್‌ಬಿಐ~ ಡೆಪ್ಯುಟಿ ಗವರ್ನರ್ ಸುಭೀರ್ ಗೋಕರ್ಣ ಈಗಾಗಲೇ ಬಡ್ಡಿ ದರ ಇಳಿಕೆ ಸುಳಿವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT