ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡ್ಡುಗಟ್ಟಿದ ಆಡಳಿತಕ್ಕೆ ಬಿಸಿ ಮುಟ್ಟುವುದೇ?

Last Updated 10 ಅಕ್ಟೋಬರ್ 2011, 6:45 IST
ಅಕ್ಷರ ಗಾತ್ರ

ಬೆಳಗಾವಿ: ಒಂದರ ಹಿಂದೆ ಒಂದು ಹಗರಣಕ್ಕೆ ಹೆಸರಾದ ಮಹಾನಗರ ಪಾಲಿಕೆ, ಸಮರ್ಪಕವಾಗಿ ಬಳಕೆಯಾಗದ ನೂರು ಕೋಟಿ ರೂಪಾಯಿ ಅನುದಾನ, ಇನ್ನೂ ಕುಂಟುತ್ತಿರುವ ಸುವರ್ಣ ಸೌಧ ಕಾಮಗಾರಿ, ಬರದಿಂದ ಕಂಗಾಲಾದ ರೈತರು...

ಹೀಗೆ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳ ಸರಮಾಲೆಯೇ ಜನರನ್ನು ಸುತ್ತಿಕೊಂಡಿದೆ. ಆದರೆ, ಜಿಡ್ಡುಗಟ್ಟಿದ ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು `ನೆಮ್ಮದಿ~ಯನ್ನೇ ಕಳೆದುಕೊಳ್ಳುವಂತಾಗಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಡಿ.ವಿ. ಸದಾನಂದಗೌಡ ಸೋಮವಾರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಗಾಢ ನಿದ್ದೆಯಿಂದ ಎಚ್ಚೆತ್ತುಕೊಂಡಂತಿದೆ.

ಹಲವು ತಿಂಗಳುಗಳಿಂದ ರಸ್ತೆಗಳಲ್ಲಿ ಬಿದ್ದಿದ್ದ ತಗ್ಗುಗಳಲ್ಲಿ ಸಂಚರಿಸಲು ನಗರದ ಜನರು ಪರದಾಡುತ್ತಿದ್ದರೂ ಅವುಗಳತ್ತ ಅಧಿಕಾರಿಗಳು ಒಂದು ದಿನವೂ ಕಣ್ತೆರೆದು ನೋಡಿರಲಿಲ್ಲ. ಆದರೆ, ಇದೀಗ ಮುಖ್ಯಮಂತ್ರಿಗಳು ನಗರಕ್ಕೆ ಆಗಮಿಸುತ್ತಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣವೇ `ಚೇಳು~ ಕಡಿದಂತೆ ಎದ್ದುಕೊಂಡಿದ್ದಾರೆ. ಮುಖ್ಯಮಂತ್ರಿಗಳು ಸಂಚರಿಸುವ ಮುಖ್ಯರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ತರಾತುರಿಯಲ್ಲಿ ಮುಚ್ಚಿಸುತ್ತಿದ್ದಾರೆ. ಗಾಂಧಿನಗರದಲ್ಲಿ ಬೈಪಾಸ್‌ನ ಸರ್ವಿಸ್ ರಸ್ತೆ, ಅಶೋಕ ವೃತ್ತದಿಂದ ಸಂಗೊಳ್ಳಿ ವೃತ್ತ, ಚನ್ನಮ್ಮ ವೃತ್ತ ಹಾಗೂ ಕ್ಲಬ್ ರಸ್ತೆಗಳಲ್ಲಿ ಬಿದ್ದಿದ್ದ ದೊಡ್ಡ ದೊಡ್ಡ ಗುಂಡಿಗಳನ್ನು ಶನಿವಾರ ಹಾಗೂ ಭಾನುವಾರ `ತುರ್ತು~ ಕಾಮಗಾರಿ ಕೈಗೊಂಡು ಮುಚ್ಚಲಾಗಿದೆ. ಈ ರಸ್ತೆಗಳ ಮೂಲಕವೇ ಮುಖ್ಯಮಂತ್ರಿಗಳು ಸಂಚರಿಸುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಏಕಾಏಕಿ ದುರಸ್ತಿ ಕಾರ್ಯವನ್ನು ಕೈಗೊಂಡಿರುವುದು ಅವರ `ಜಾಣ್ಮೆ~ ಪ್ರದರ್ಶಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಗೆ ನೂರು ಕೋಟಿ ರೂಪಾಯಿ ಅನುದಾನ ನೀಡಿ ಹಲವು ತಿಂಗಳುಗಳೇ ಕಳೆದರೂ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಪಾಲಿಕೆಯ ಅಧಿಕಾರಿಗಳು ಮಾತ್ರ ಬಹುತೇಕ ಕೆಲಸಗಳನ್ನು ಮುಗಿಸಿದ್ದೇವೆ ಎಂದು ಬೀಗುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 4,741 ಕಾಮಗಾರಿಗಳನ್ನು ರೂ. 41 ಕೋಟಿ  ವೆಚ್ಚದಲ್ಲಿ ತುಂಡು ಗುತ್ತಿಗೆ ನೀಡುವ ಮೂಲಕ ತುಂಡು ಗುತ್ತಿಗೆಯ ಸಿಂಡಿಕೇಟ್‌ನ ಗುತ್ತಿಗೆದಾರರೊಂದಿಗೆ ಅಧಿಕಾರಿಗಳು `ಕೈ~ ಜೋಡಿಸಿದ್ದಾರೆ.

ಬರುವ ಡಿಸೆಂಬರ್‌ನಲ್ಲಿ ಸುವರ್ಣಸೌಧದಲ್ಲೇ ಚಳಿಗಾಲದ ಅಧಿವೇಶನ ನಡೆಸುತ್ತೇವೆ ಎಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅವಕಾಶ ಸಿಕ್ಕಾಗಲೆಲ್ಲ ಹೇಳಿಕೆ ನೀಡುತ್ತಲೇ ಇದ್ದರು. ನಿಗದಿಯಂತೆ ನಡೆದಿದ್ದರೆ ಸುವರ್ಣ ಸೌಧ ಕಾಮಗಾರಿ 2011ರ ಜನವರಿ ಒಳಗೆ ಪೂರ್ಣಗೊಳ್ಳಬೇಕಿತ್ತು. ನಂತರ ಸೆಪ್ಟೆಂಬರ್‌ನೊಳಗೆ ಪೂರ್ಣಗೊಳಿಸಿ ಡಿಸೆಂಬರ್‌ನಲ್ಲಿ ಅಧಿವೇಶನ ನಡೆಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಸುವರ್ಣ ಸೌಧದ ಕಾಮಗಾರಿ ಪೂರ್ಣಗೊಂಡಿಲ್ಲ. ಮೊನ್ನೆ ಮೊನ್ನೆಯಷ್ಟೇ ಸುವರ್ಣ ಸೌಧದ ಒಳಾಂಗಣ ಸಿದ್ಧಪಡಿಸಲು ಟೆಂಡರ್ ಕರೆಯಲಾಗಿದೆ. ಇನ್ನು ನಾಲ್ಕು ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಹೀಗೆ ಸುವರ್ಣಸೌಧ ಕಾಮಗಾರಿಯೂ ಕುಂಟುತ್ತಿರುವುದರಿಂದ ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಯುವುದು ಅನುಮಾನವಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರನ್ನು ಕಂಗಾಲು ಮಾಡಿದೆ. ಅಥಣಿ, ಸವದತ್ತಿ ಹಾಗೂ ರಾಯಬಾಗದಲ್ಲಿ ತೀವ್ರವಾದ ಬರದ ಛಾಯೆ ಕಾಣಿಸಿಕೊಂಡಿದ್ದು, ಸದ್ಯ ಅಥಣಿ ಹಾಗೂ ಸವದತ್ತಿಯನ್ನು ಮಾತ್ರ ಬರ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ಮುಂಗಾರು ಕೈಕೊಟ್ಟಿದ್ದರಿಂದ ಬೆಳೆ ಹಾನಿಯಾಗಿದ್ದು, ಜಿಲ್ಲೆಯ ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಮಳೆಯ ಕೊರತೆಯಿಂದಾಗಿ ಅಕ್ಟೋಬರ್ ತಿಂಗಳಿನಲ್ಲೇ ಜಿಲ್ಲೆಯ 11 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಮುಖ್ಯಮಂತ್ರಿ ಸದಾನಂದಗೌಡರು ಸೋಮವಾರ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಹೀಗೆ ಒಂದರ ಹಿಂದೆ ಒಂದು ಸಮಸ್ಯೆಗಳೇ ಜಿಲ್ಲೆಯಲ್ಲಿವೆ. ಇವುಗಳತ್ತ ಮುಖ್ಯಮಂತ್ರಿಗಳು ಕಣ್ತೆರೆದು ನೋಡಲಿದ್ದಾರೆಯೇ? ಜಿಡ್ಡುಗಟ್ಟಿದ ಆಡಳಿತಕ್ಕೆ ಚುರುಕು ಮುಟ್ಟಿಸಲಿದ್ದಾರೆಯೇ, ಕಾದುನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT