ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ

Last Updated 3 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಕೋಳಾಲ ಕ್ಷೇತ್ರದ ಪ್ರೇಮಾ ಮಹಾಲಿಂಗಯ್ಯ, ಉಪಾಧ್ಯಕ್ಷ ಸ್ಥಾನ ಹಾಗಲವಾಡಿ ಕ್ಷೇತ್ರದ ಮಮತಾ ಶಿವಲಿಂಗಯ್ಯ ಹೆಗಲಿಗೇರುವುದು ಬಹುತೇಕ ಖಚಿತವಾಗಿದೆ.

ಜಿ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನ ಬಿಸಿಎಂ (ಎ) ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಜೆಡಿಎಸ್‌ಗೆ ಸ್ಪಷ್ಟ ಬಹುಮತ ಇದೆ.

ಅಧ್ಯಕ್ಷರಾಗಿ ಪ್ರೇಮಾ ಮಹಾಲಿಂಗಪ್ಪ, ಉಪಾಧ್ಯಕ್ಷರಾಗಿ ಮಮತಾ ಶಿವಲಿಂಗಯ್ಯ ಅವರನ್ನು ಆಯ್ಕೆ ಮಾಡಲು ಮಂಗಳವಾರ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜಿಲ್ಲೆಯ ಶಾಸಕರು, ಮಾಜಿ ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ಈ ಇಬ್ಬರ ಆಯ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆಯ್ಕೆಯ ಹಿಂದೆ ಮುಂಬರುವ ವಿಧಾನಸಭಾ ಚುನಾವಣೆ ಕೆಲಸ ಮಾಡಿದೆ. ಗೊಲ್ಲ ಸಮುದಾಯದ ಪ್ರೇಮಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತಂದರೆ, ತಿಗಳ ಸಮುದಾಯ ಮುನಿಸು ತೋರಬಹುದು ಎಂಬ ಕಾರಣಕ್ಕಾಗಿಯೇ ಕಳೆದ ಸಾಲಿನಂತೆಯೇ 20 ತಿಂಗಳ ಅಧಿಕಾರವನ್ನು ತಲಾ ಹತ್ತು ತಿಂಗಳಿಗೆ `ಹಂಚುವ ಸೂತ್ರ~ ಸಿದ್ಧಪಡಿಸಲಾಗಿದೆ. ಹೀಗಾಗಿ ಕೇವಲ ಹತ್ತು ತಿಂಗಳಷ್ಟೇ ಪ್ರೇಮಾ ಅವಧಿ. ಉಳಿದ ಅವಧಿಗೆ ಬೆಳಗುಂಬ ಕ್ಷೇತ್ರದ ತಿಗಳ ಸಮುದಾಯದ ಸಾಕಮ್ಮ ನಾಗರಾಜು ಅವರಿಗೆ ನೀಡಲು ಸಭೆ ತೀರ್ಮಾನಿತು ಎಂದು ಮೂಲಗಳು ಪ್ರಜಾವಾಣಿಗೆ ಖಚಿತಪಡಿಸಿವೆ.

ಉಪಾಧ್ಯಕ್ಷ ಸ್ಥಾನಕ್ಕೂ ಇದೇ ಸೂತ್ರ ಅಳವಡಿಸಿದ್ದು, ಮೊದಲ ಹತ್ತು ತಿಂಗಳ ಅವಧಿಗೆ ಮಮತಾ, ಉಳಿದ ಅವಧಿಗೆ ದೊಡ್ಡೇರಿ ಕ್ಷೇತ್ರದ ಯಶೋಧಾ ಶ್ರೀನಿವಾಸ್‌ಗೆ ಅಧಿಕಾರ ಸಿಗಲಿದೆ.

ಶಾಸಕರ ಒತ್ತಡ: ಆಯಾ ಕ್ಷೇತ್ರದ ಸದಸ್ಯರನ್ನೇ ಜಿ.ಪಂ. ಅಧ್ಯಕ್ಷ ಗಾದಿಗೆ ತರುವ ಪ್ರಯತ್ನವನ್ನು ಶಾಸಕರು ಸಭೆಯಲ್ಲಿ ನಡೆಸಿದರು ಎನ್ನಲಾಗಿದೆ. ಆದರೆ ಈ ನಾಲ್ವರ ನಡುವೆ ಅಧಿಕಾರ ಹಂಚಿಕೆ ಸೂತ್ರಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕ ಸಿ.ಚನ್ನಿಗಪ್ಪ ಅವರ ಬಲವಾದ ಒತ್ತಡ ಕಾರಣ ಎಂದು ಹೇಳಲಾಗಿದೆ.
ಪಕ್ಷಗಳ ಬಲಾ ಬಲ: ಒಟ್ಟು 57 ಸದಸ್ಯ ಬಲದ ಜಿ.ಪಂ.ನಲ್ಲಿ ಜೆಡಿಎಸ್ 33 ಸದಸ್ಯರಿದ್ದು, ಸ್ಪಷ್ಟ ಬಹುಮತ ಹೊಂದಿದೆ. ಬಿಜೆಪಿ 13, ಕಾಂಗ್ರೆಸ್ 10, ಜೆಡಿಯು ಒಬ್ಬ ಸದಸ್ಯೆ ಇದ್ದಾರೆ.

ಅನಿತಾ ಆಗಮನ: ಸಭೆಯಲ್ಲಿ ಅಂತಿಮ ತೀರ್ಮಾನದಂತೆಯೇ ಬಹುತೇಕ ಆಯ್ಕೆ ನಡೆಯಲಿದ್ದು, ಎಚ್.ಡಿ.ಕುಮಾರಸ್ವಾಮಿ ಸೂಚಿಸಿರುವ ಹೆಸರು ಹೊತ್ತ ಲಕೋಟೆಯನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಖುದ್ದು ತರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಸದಸ್ಯರ ಸಭೆ: ಅಧ್ಯಕ್ಷೆ ಸ್ಥಾನದ ಅಭ್ಯರ್ಥಿ ಆಯ್ಕೆ ಸುಗಮವಾಗಿದ್ದರೂ ಉಪಾಧ್ಯಕ್ಷೆ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಇರುವ ಕಾರಣ ಜಿ.ಪಂ. ಸದಸ್ಯರನ್ನು ಒಪ್ಪಿಸುವ ಸಂಬಂಧ ನಗರದ ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಸದಸ್ಯರ ಸಭೆ ಕರೆಯಲಾಗಿದೆ. ಈ ಸಭೆಯಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಹೆಸರನ್ನು ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT