ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಅಧ್ಯಕ್ಷ ಪಟ್ಟ: ಬಿಜೆಪಿ ಅಭ್ಯರ್ಥಿ ಯಾರು?

Last Updated 18 ಜನವರಿ 2011, 7:50 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅಭ್ಯರ್ಥಿ ಯಾರು ಎಂಬುದು ಸದ್ಯ ಜಿಲ್ಲೆಯಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ಪ್ರಶ್ನೆ.  ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಮಾಲೂರಿನ ಲಕ್ಕೂರು ಕ್ಷೇತ್ರದ ಮಂಜುಳಾ ಮತ್ತು ಬಂಗಾರಪೇಟೆಯ ಕಾಮಸಮುದ್ರ ಕ್ಷೇತ್ರದ ಸದಸ್ಯೆ ಸೀಮೌಲ್ ಅರ್ಹ ಬಿಜೆಪಿ ಸದಸ್ಯರು. ಅವರಲ್ಲಿ ಅಭ್ಯರ್ಥಿಯಾಗುವವರು ಯಾರು ಎಂಬುದು ಸದ್ಯ ಚರ್ಚೆಯ ಸಂಗತಿ.

ಮಂಜುಳಾ ಮಾಲೂರು ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟರ ಬೆಂಬಲಿಗರು. ಸೀಮೌಲ್ ಬಂಗಾರಪೇಟೆಯ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಮಗದ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಬೆಂಬಲಿಗರು. ತಮ್ಮ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿಸುವ ಯತ್ನ ಇಬ್ಬರೂ ಪ್ರಮುಖರಿಂದ ನಡೆದಿರುವುದು ವಿಶೇಷ. ಜಿಪಂ ಅಧ್ಯಕ್ಷ ಸ್ಥಾನದ ಚುನಾವಣೆ, ಹೀಗಾಗಿ ಈ ಮುಖಂಡರ ಪ್ರತಿಷ್ಠೆಯನ್ನುೂ ಕಣಕ್ಕಿಟ್ಟ ಸನ್ನಿವೇಶವನ್ನು ನಿರ್ಮಿಸಿದೆ. ಪಕ್ಷಾಂತರಿಗಳಿಗೆ ಮಣೆ ಹಾಕುವ ಬಿಜೆಪಿ ಸಂಪ್ರದಾಯ ಜಿಲ್ಲೆಯಲ್ಲಿ ಮುಂದುವರಿದರೆ ಸೀಮೌಲ್ ಅಭ್ಯರ್ಥಿಯಾಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಸ್ತುತ ಜಿಲ್ಲಾ ರಾಜಕಾರಣದ ಸಂದರ್ಭದಲ್ಲಿ ತೆರೆಮರೆಯಲ್ಲಿ ನಡೆಯುತ್ತಿರುವ ಚರ್ಚೆಗಳು ಎರಡು ಸಾಧ್ಯತೆಗಳ ಕಡೆಗೆ ಗಮನ ಸೆಳೆಯುತ್ತಿವೆ. ಒಂದನೇ ಸಾಧ್ಯತೆ: ಶಾಸಕ ಕೃಷ್ಣಯ್ಯಶೆಟ್ಟರು ಪಕ್ಷದ ಹಿತಕ್ಕಾಗಿ, ಪಕ್ಷಾಂತರಿಗಳಿಗಾಗಿ ಈಗಾಗಲೇ ಮುಜರಾಯಿ ಖಾತೆ ಸಚಿವ ಸ್ಥಾನವನ್ನೂ ತ್ಯಾಗ ಮಾಡಿ ಮುನಿಸು, ಅಸಂತೃಪ್ತಿ, ಅಸಮಾಧಾನವನ್ನು ಕಂಡೂಕಾಣದಂತೆ ಪಕ್ಷದ ಒಳ-ಹೊರಗೆ ಪ್ರದರ್ಶಿಸಿದವರು. ಇದೀಗ ಜಿಪಂ ಅಧ್ಯಕ್ಷ ಸ್ಥಾನ ತಮ್ಮ ಬೆಂಬಲಿಗರಿಗೆ ದೊರಕಬೇಕು ಎಂಬುದು ಅವರ ಆಗ್ರಹದಿಂದ ಕೂಡಿದ ಮನವಿ. ಅದನ್ನು ಮುಖ್ಯಮಂತ್ರಿಗಳು ಮನ್ನಿಸಿದರೆ ಮಂಜುಳಾ ಅಭ್ಯರ್ಥಿಯಾಗುತ್ತಾರೆ.

ಎರಡನೇ ಸಾಧ್ಯತೆ: ಬಂಗಾರಪೇಟೆಯ ಶಾಸಕರಾಗಿದ್ದ ಎಂ.ನಾರಾಯಣಸ್ವಾಮಿ ಆಪರೇಷನ್ ಕಮಲಕ್ಕೆ ತಮ್ಮನ್ನು ಒಪ್ಪಿಸಿಕೊಂಡು, ಕಾಂಗ್ರೆಸ್ ಬಿಟ್ಟು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದಾರೆ. ಪಕ್ಷವನ್ನು ಬಲಪಡಿಸುವ ಆಪರೇಷನ್‌ಗೆ ಸಹಕರಿಸಿದ ಅವರ ಮಾತಿಗೂ ಮುಖ್ಯಮಂತ್ರಿಗಳು ಮನ್ನಣೆ ನೀಡಬೇಕಾದ ಸನ್ನಿವೇಶವಿದೆ. ಹಾಗಾದರೆ ಸೀಮೌಲ್ ಅಭ್ಯರ್ಥಿಯಾಗುತ್ತಾರೆ.

ಈ ಇಬ್ಬರೂ ಪ್ರಮುಖರು ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನೆ ಅಧ್ಯಕ್ಷ ಸ್ಥಾನಕ್ಕೇರಿಸುವ ಪ್ರಯತ್ನದಲ್ಲಿದ್ದಾರೆ. ಆ ಕುರಿತು ಮುಖ್ಯಮಂತ್ರಿಗಳ ಗಮನವನ್ನೂ ಸಾಕಷ್ಟು ಸೆಳೆದಿದ್ದಾರೆ. ಪಕ್ಷಕ್ಕಾಗಿ ತ್ಯಾಗ ಮಾಡಿರುವ ಕೃಷ್ಣಯ್ಯಶೆಟ್ಟರನ್ನು ಸಮಾಧಾನಗೊಳಿಸಿ, ಇತ್ತೀಚೆಗಷ್ಟೆ ಪಕ್ಷವನ್ನು ಸೇರಿದ ನಾರಾಯಣಸ್ವಾಮಿಯವರನ್ನು ಮುಖ್ಯಮಂತ್ರಿಗಳು ಓಲೈಸುವ ಸಾಧ್ಯತೆ ಇದೆ ಎಂಬುದು ಬಲ್ಲ ಮೂಲಗಳ ನುಡಿ.

ವರ್ತೂರು ಪ್ರಯತ್ನ?: ಇಂಥ ಸನ್ನಿವೇಶದಲ್ಲಿಯೇ, ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವ ಶಾಸಕ ಆರ್.ವರ್ತೂರು ಪ್ರಕಾಶರ ಬಣದಲ್ಲಿ ಗೆದ್ದಿರುವ, ಜಿಪಂ ಅಧ್ಯಕ್ಷ ಹುದ್ದೆಯ ಪಕ್ಷೇತರ ಅಭ್ಯರ್ಥಿ ವೇಮಗಲ್ ಕ್ಷೇತ್ರದ ಭಾರತಿಯೂ ಸ್ಪರ್ಧೆಯಲ್ಲಿದ್ದಾರೆ.

ಜಿಪಂ ಚುಣಾವಣೆ ಫಲಿತಾಂಶ ಪ್ರಕಟಗೊಂಡ ದಿನವೇ ಶಾಸಕರು ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಆ ಪ್ರಕಾರ, ಅವರಿಗೆ ಸಚಿವ ಸ್ಥಾನ ನೀಡಿ, ಜಿಪಂ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಅಭ್ಯರ್ಥಿಗೆ ಮಾತ್ರ ಮೀಸಲಿರಿಸುವ ಸಾಧ್ಯತೆಯ ಕಡೆಗೂ ರಾಜಕೀಯ ಚಟುವಟಿಕೆಗಳು ಗಮನ ಸೆಳೆದಿವೆ. ಇಂಥ ಸನ್ನಿವೇಶದಲ್ಲಿ, ಭಾರತಿಯವರು ವರ್ತೂರರಿಗೇ ತಮ್ಮ ನಿಷ್ಠೆ ಮೀಸಲು ಎಂದು ಹೇಳಿಕೆಯನ್ನೂ ನೀಡಿದ್ದಾರೆ. ಹೀಗಾಗಿ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಕಡೆಗೆ ನಡೆಯುವ ಸಾಧ್ಯತೆ ಸದ್ಯಕ್ಕಿಲ್ಲ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ವರ್ತೂರರು ಅದನ್ನು ಸಾಧಿಸುವುದಕ್ಕಾಗಿ, ಜಿಪಂ ಅಧ್ಯಕ್ಷೆಯಾಗುವ ಭಾರತಿಯವರ ಆಕಾಂಕ್ಷೆಯನ್ನು ತಣ್ಣಗಾಗಿಸುವ ಪ್ರಯತ್ನವನ್ನೂ ನಡೆಸುವ ಸಾಧ್ಯತೆ ಇದೆ.
ಎರಡು ದಿನದ ಹಿಂದೆಯಷ್ಟೆ ಸೀಮೌಲ್ ಅವರನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು, ಅವರನ್ನೆ ಅಭ್ಯರ್ಥಿಯನ್ನಾಗಿಸಬೇಕೆಂಬ ಮನವಿಯನ್ನು ನಾರಾಯಣಸ್ವಾಮಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಕೃಷ್ಣಯ್ಯ ಶೆಟ್ಟರ ಯತ್ನವೂ ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ಯಾರೆಂಬ ಪ್ರಶ್ನೆ ಮಾತ್ರ ಜಿಲ್ಲಾ ರಾಜಕಾರಣದ ಅಂಗಳದಲ್ಲಿ ಹೊಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT