ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಅಧ್ಯಕ್ಷರ ಸ್ಥಾನಕ್ಕೆ ಕ್ಯಾಬಿನೆಟ್ ಸಚಿವರ ಸ್ಥಾನ ನೀಡಲು ಒತ್ತಾಯ

Last Updated 4 ಜೂನ್ 2011, 6:55 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನವನ್ನು ಕ್ಯಾಬಿನೆಟ್ ಸಚಿವರ ದರ್ಜೆಗೆ ಹಾಗೂ ಉಪಾಧ್ಯಕ್ಷರ ಸ್ಥಾನವನ್ನು ರಾಜ್ಯ ಸಚಿವರ ದರ್ಜೆಗೆ ಏರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯವನ್ನು ಕೊಡಗು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ತೆಗೆದುಕೊಂಡಿದೆ.

ನಗರದ ಕೋಟೆ ಹಳೇ ವಿಧಾನಸಭಾಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ವಿಶೇಷವೆಂದರೆ ಈ ಪ್ರಸ್ತಾವವನ್ನು ವಿರೋಧ ಪಕ್ಷವಾದ ಕಾಂಗ್ರೆಸ್‌ನ ಸದಸ್ಯರು ಮಂಡಿಸಿದರು. ಇದಕ್ಕೆ ಆಡಳಿತರೂಢ ಬಿ.ಜೆ.ಪಿ ಸದಸ್ಯರು ಸೇರಿದಂತೆ ಜಿ.ಪಂ.ನ ಸರ್ವ ಸದಸ್ಯರು ಒಮ್ಮತ ವ್ಯಕ್ತಪಡಿಸಿದರು.

ಎರಡೂ ಹುದ್ದೆಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಸಭೆ ತೀರ್ಮಾನಿಸಿತು. ಇದರೊಂದಿಗೆ ಮೂರನೇ ಹಣಕಾಸು ಆಯೋಗದ ವರದಿಯನ್ನು ಶೀಘ್ರವೇ ಜಾರಿಗೆ ತರುವುದು ಹಾಗೂ ಕೊಡಗು ಜಿ.ಪಂ. ಸಾಮಾನ್ಯ ಸಭೆಯನ್ನು ಪ್ರತಿ ತಿಂಗಳು ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

50 ಕೋಟಿ ವಿಶೇಷ ಅನುದಾನ
ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರು ಪ್ರಕಟಿಸಿರುವ ರೂ 50 ವಿಶೇಷ ಅನುದಾನವನ್ನು ಬಳಸಿಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿಗಳು ಪ್ರಸ್ತಾವ ಸಲ್ಲಿಸಬೇಕು ಎಂದು ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಸದಸ್ಯರಿಗೆ ಸೂಚಿಸಿದರು.

ರೂ 50 ಕೋಟಿಯಲ್ಲಿ ಲೋಕೋಪಯೋಗಿ ಇಲಾಖೆಗೆ ರೂ 30 ಕೋಟಿ ಹಾಗೂ ಜಿಲ್ಲಾ ಪಂಚಾಯಿತಿಗೆ ರೂ 20 ಕೋಟಿ ನೀಡಲಾಗಿದೆ. ರೂ 20 ಕೋಟಿ ಅನುದಾನವನ್ನು ಬಳಸಿಕೊಳ್ಳಲು ಇನ್ನು ಕೆಲವು ಪಂಚಾಯಿತಿಗಳು ಪ್ರಸ್ತಾವನೆ ಸಲ್ಲಿಸಿಲ್ಲ ಎನ್ನುವ ಮಾಹಿತಿಯನ್ನು ಜಿ.ಪಂ. ಕಾರ್ಯನಿರ್ವಾಹಕ ಎಂಜಿನಿಯರ್ ಕೇಶವಮೂರ್ತಿ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ರವಿ ಕುಶಾಲಪ್ಪ ಅವರು, ಇನ್ನುಳಿದಿರುವ ಪಂಚಾಯಿತಿಗಳು ಆದಷ್ಟು ಬೇಗನೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚನೆ ನೀಡಿದರು.

15ರೊಳಗೆ ಕೃಷಿ ಸಭೆ
ಮುಂಗಾರು ಮಳೆ ಆರಂಭವಾಗಿರುವುದರಿಂದ ಜಿಲ್ಲೆ ಯಾದ್ಯಂತ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆ ಯುತ್ತಿವೆ. ಆದರೆ, ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಗಣಪತಿ ಕೊಡಂದೇರ (ಬಾಂಡ್) ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ದೇವದಾಸ್ ಮಾತನಾಡಿ, ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇನ್ನುಳಿದಂತೆ ಎಲ್ಲ ಪ್ರದೇಶಗಳಲ್ಲಿ ಸಮರ್ಪಕವಾಗಿ ಪೂರೈಕೆ ಮಾಡಲಾಗಿದೆ. ಎಲ್ಲಿಯೂ ಅಭಾವದ ದೂರುಗಳು ಬಂದಿಲ್ಲ ಎಂದು ತಿಳಿಸಿದರು.

ಕೃಷಿಗೆ ಸಂಬಂಧಿಸಿದಂತೆ ರಸಗೊಬ್ಬರ ಪೂರೈಕೆದಾರರ ಸಭೆಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕರೆಯಬೇಕೆಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಸಮ್ಮತಿಸಿದ ಅಧ್ಯಕ್ಷ ರವಿ ಕುಶಾಲಪ್ಪ ಜೂನ್ 15ರೊಳಗೆ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಹೋಂ ಸ್ಟೇ, ರೆಸಾರ್ಟ್ ವಿರುದ್ಧ ಕ್ರಮ
ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ರೆಸಾರ್ಟ್ ಹಾಗೂ ಹೋಂಸ್ಟೇಗಳನ್ನು ಮುಚ್ಚಿಸ ಬೇಕೆಂದು ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದರು.

ಹೊರರಾಜ್ಯದವರು ಬಂದು ಇಲ್ಲಿರುವ ಹೊಲ, ಗದ್ದೆಗಳು ಹಾಗೂ ಕಾಫಿ ತೋಟಗಳನ್ನು ಖರೀದಿ ಮಾಡಿ, ಅದರಲ್ಲಿ ಕಾನೂನು ಬಾಹಿರವಾಗಿ ರೆಸಾರ್ಟ್, ಹೋಂ ಸ್ಟೇಗಳನ್ನು ನಡೆಸುತ್ತಿದ್ದಾರೆ. ಇದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕೆ ಪಕ್ಷಭೇದ ಮರೆತು ಎಲ್ಲ ಸದಸ್ಯರು ಸಮ್ಮತಿಸಿದರು.

ನೀರು ಪೂರೈಕೆಗೆ ನಿಯೋಗ
ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಗಳನ್ನು ಕೊರೆಸುವುದು ಸೂಕ್ತವಾದುದಲ್ಲ. ಇಲ್ಲಿರುವ ಹೊಂಡ, ಕೆರೆಗಳನ್ನು ಪುನರುಜ್ಜೀವನಗೊಳಿಸಲು ಕ್ರಮಕೈಗೊಳ್ಳಿ ಎಂದು ಗಣಪತಿ ಕೊಡಂದೇರ ಸಭೆಯ ಗಮನ ಸೆಳೆದರು.

ಪ್ರತಿ ಜಿ.ಪಂ ಕ್ಷೇತ್ರದಲ್ಲಿ ರೂ50 ಲಕ್ಷ ಕ್ರಿಯಾ ಯೋಜನೆ ತಯಾರಿಸೋಣ. ಅನುದಾನಕ್ಕಾಗಿ ಗ್ರಾಮೀ ಣಾಭಿವೃದ್ಧಿ ಸಚಿವರ ಬಳಿ ನಿಯೋಗ ತೆಗೆದುಕೊಂಡು ಹೋಗೋಣ ಎಂದು ಸಲಹೆ ನೀಡಿದರು.
ಇದಕ್ಕೆ ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ಉತ್ತಮ ಸಲಹೆ ಇದಾಗಿದೆ ಎಂದು ಪ್ರಶಂಸಿಸಿದರು. ಶೀಘ್ರದಲ್ಲಿಯೇ ಕ್ರಿಯಾ ಯೋಜನೆ ಸಿದ್ಧಪಡಿಸಿ, ನಿಯೋಗ ತೆಗೆದುಕೊಂಡು ಬೆಂಗಳೂರಿಗೆ ಹೋಗೋಣ ಎಂದರು.

3 ತಿಂಗಳಿಂದ ಸಂಬಳ ಇಲ್ಲ
ಜಿಲ್ಲೆಯ ಹಲವು ಜನ ಅಂಗನವಾಡಿ ಕಾರ್ಯಕರ್ತೆ ಯರಿಗೆ 3 ತಿಂಗಳಿನಿಂದ ಸಂಬಳವಾಗಿಲ್ಲ ಎಂದು ಕಾಂಗ್ರೆಸ್‌ನ ಶಕುಂತಲ ರವೀಂದ್ರ ಹಾಗೂ ಪ್ರತ್ಯು ಅವರು ಸಭೆಯ ಗಮನಕ್ಕೆ ತಂದರು.

ಹಣದ ಕೊರತೆ ಇಲ್ಲ. ಇದು ಕಂಪ್ಯೂಟರ್ ಸಮಸ್ಯೆ ಯಿಂದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಿಜಯಲಕ್ಷ್ಮಿ ತಿಳಿಸಿದರು.

ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ ನೀಡುತ್ತಿಲ್ಲ. ಇದು ಕಾರ್ಯಕರ್ತೆಯರ ಮನೆಗೆ ಹೋಗುತ್ತಿದೆ ಎಂದು ಶರೀನ್ ಸುಬ್ಬಯ್ಯ ಚೋಡುಮಾಡ ಆರೋಪಿಸಿದರು.

ಜಿಲ್ಲೆಯ ಮೂರು ತಾಲ್ಲೂಕಿನ ಶಿಶು ಅಭಿವೃದ್ಧಿ ಕಾರ್ಯಕ್ರಮದ ಅಧಿಕಾರಿಗಳನ್ನು ಸೇರಿಸಿಕೊಂಡು ಶಾಲೆಗಳಿಗೆ ಭೇಟಿ ಮಾಡೋಣ, ನಾನು ನಿಮ್ಮಂದಿಗೆ ಬರುತ್ತೇನೆ. ಎಲ್ಲರೂ ಒಟ್ಟಾಗಿ ಹೋಗೋಣ ಎಂದು ಅಧ್ಯಕ್ಷ ರವಿ ಕುಶಾಲಪ್ಪ ತಿಳಿಸಿದರು.

ಮೊಬೈಲ್ ದೃಶ್ಯ ಪ್ರದರ್ಶನ
ಬಿ.ಶೆಟ್ಟಿಗೇರಿ ಗ್ರಾಮದಲ್ಲಿರುವ ಅಂಗನವಾಡಿ ಶಾಲೆ ಯಲ್ಲಿ ಆರು ಮಕ್ಕಳನ್ನು ಕೂಡಿಹಾಕಿದ ಘಟನೆ ಸಭೆ ಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಈ ವಿಷಯ ಪ್ರಸ್ತಾಪಿಸಿದ ಗಣಪತಿ ಕೊಡಂದೇರ ಅವರು ತಮ್ಮ ಮೊಬೈಲ್‌ನಲ್ಲಿ ತೆಗೆದ ಮಕ್ಕಳ ಬಂಧನದ ದೃಶ್ಯವನ್ನು ಸಭೆಗೆ ತೋರಿಸಿದರು.

ಏಕೆ ಮಕ್ಕಳನ್ನು ಕೂಡಿಹಾಕಲಾಗಿತ್ತು. ಇಂತಹ ಘಟ ನೆಗೆ ಕಾರಣರಾದವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಾಂತ್ವನ ಕೇಂದ್ರದಿಂದ ಯುವತಿಯನ್ನು ಹೊರದಬ್ಬಿದ್ದಕ್ಕೆ ಆಕ್ರೋಶ
ವಿರಾಜಪೇಟೆಯಲ್ಲಿರುವ ಸಾಂತ್ವನ ಕೇಂದ್ರದಲ್ಲಿ ಇತ್ತೀಚೆಗೆ ಬುದ್ಧಿಮಾಂದ್ಯ ಹೆಣ್ಣುಮಗಳನ್ನು ಅಲ್ಲಿನ ಅಧಿಕಾರಿಗಳು ಏಕಾಏಕಿ ಹೊರಹಾಕಿದ್ದಾರೆ ಎಂದು ಉಪಾಧ್ಯಕ್ಷೆ ಎಚ್.ಎಂ.ಕಾವೇರಿ ಸಭೆಯ ಗಮನಕ್ಕೆ ತಂದರು.

ಬೇರೊಬ್ಬರಿಗೆ ಸ್ಥಳಾವಕಾಶ ಕಲ್ಪಿಸುವುದಕ್ಕಾಗಿ ಬುದ್ಧಿಮಾಂದ್ಯ ಹೆಣ್ಣುಮಗಳನ್ನು ಹೊರಹಾಕಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆ ಹೆಣ್ಣುಮಗಳಿಗೆ ಮಡಿಕೇರಿಯಲ್ಲಿ ಸ್ಥಳಾವಕಾಶ ಮಾಡಿಕೊಡಲು ತಾವು ಪಟ್ಟಕಷ್ಟದ ಬಗ್ಗೆಯೂ ಅವರು ತಿಳಿಸಿದರು.

ಇಂತಹ ಘಟನೆ ಮರುಕಳಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪುಂಡಾನೆ ಸೆರೆ
`ತಿತಿಮತಿ ವಲಯದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆಹಿಡಿದ ಆನೆಯು ಪುಂಡಾನೆಯೇ? ಇದಕ್ಕೆ ದಾಖಲೆ ನೀಡಿ~ ಎಂದು ಪ್ರತ್ಯು ಕೇಳಿದಾಗ ಸದಸ್ಯರು ನಗೆಗಡಲಲ್ಲಿ ತೇಲಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂತಿ ಬೆಳ್ಯಪ್ಪ, `ಇದು ನಗುವ ವಿಷಯವಲ್ಲ. ಸ್ಥಳೀಯ ಜನರ ಜೀವದ ಪ್ರಶ್ನೆ. ಪುಂಡಾನೆ ದಾಳಿಗೆ ಸಿಕ್ಕು ಬಲಿಯಾದರೆ ಯಾರು ಜವಾಬ್ದಾರಿ? ಸರ್ಕಾರ ಪ್ರಾಣ ಹಾನಿಗೆ ಪರಿಹಾರ ಹೆಚ್ಚಿಸಿರಬಹುದು. ಆದರೆ ಹಣಕ್ಕಿಂತ ಜೀವ ಮುಖ್ಯ~ ಎಂದರು.

`ಇಲ್ಲಿ ಹಿಡಿದಿರುವ ಆನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸಮೀಪದ ಬಂಡೀಪುರ ಅರಣ್ಯದಲ್ಲಿ ಬಿಟ್ಟುಬಂದಿದ್ದಾರೆ. ಕೆಲವು ದಿನಗಳ ಅದು ವಾಪಸ್ ಬಂದರೆ ಏನು ಮಾಡಬೇಕು?~ ಎಂದು ಅಧ್ಯಕ್ಷ ರವಿ ಕುಶಾಲಪ್ಪ ಆತಂಕ ವ್ಯಕ್ತಪಡಿಸಿದರು. 

`ಆನೆಗಳು ನಾಡಿಗೆ ಬರದಂತೆ ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕು. ಕಾಡಿನಲ್ಲಿಯೇ ಅವುಗಳಿಗೆ ಹೇರಳವಾಗಿ ಆಹಾರ, ನೀರು ಸಿಗುವಂತಹ ವ್ಯವಸ್ಥೆ ಮಾಡಬೇಕು~ ಎಂದು ಸರ್ವ ಸದಸ್ಯರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಯಾವೊಬ್ಬ ಸಿಬ್ಬಂದಿಯೂ ಸಭೆಯಲ್ಲಿ ಹಾಜರಿರಲಿಲ್ಲ. ಇದು ಸದಸ್ಯರನ್ನು ಕೆರಳಿಸಿತು. ಇನ್ನು ಚರ್ಚೆ ಮಾಡಿ ಪ್ರಯೋಜನ ಇಲ್ಲ ಎಂದು ಚರ್ಚೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಈ ಅನುದಾನ ನಮಗಿರಲಿ
`ಶಾಲಾ ಆಟದ ಮೈದಾನ ನಿರ್ಮಿಸಲು ಈ ಸಲ ರೂ 7 ಲಕ್ಷ ಮಂಜೂರಾಗಿದೆ. ಈ ಹಣವನ್ನು ನಾವು ಸ್ಥಾಯಿ ಸಮಿತಿಯ ಸದ ಸ್ಯರು ಹಂಚಿಕೊಳ್ಳುತ್ತೇವೆ (ಕ್ಷೇತ ವಾರು). ಮುಂದಿನ ವರ್ಷ ಬರುವ ಅನುದಾನವನ್ನು ಆ ಸಾಲಿನ ಸದಸ್ಯರು ಹಂಚಿಕೊಳ್ಳಲಿ~ ಎಂದು ಜಿ.ಪಂ. ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ ಹೇಳಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಅವಶ್ಯಕತೆ ಇರುವ ಶಾಲೆಗಳಿಗೆ ಆದ್ಯತೆ ಮೇರೆಗೆ ನೀಡಬೇಕು. ನೀವು ಹಾಗೂ ಸ್ಥಾಯಿ ಸಮಿತಿ ಸದಸ್ಯರು ಹಂಚಿಕೊಂಡರೆ ಹೇಗೆ? ಎಂದು ಕಾಂಗ್ರೆಸ್‌ನ ವೆಂಕಟೇಶ್ ಪ್ರಶ್ನೆ ಎತ್ತಿದರು.

ದುಬಾರೆ ಬಳಿಯ ಗಿರಿಜನರ ಶಾಲೆಯ ಮಕ್ಕಳಿಗೆ ಆಟದ ಮೈದಾನವಿಲ್ಲ. ಅಲ್ಲಿ ಮೊದಲು ಮಾಡಿ ಎಂದು ಒತ್ತಾಯಿಸಿದರು. ಆದ್ಯತೆ ಮೇರೆಗೆ ಹಣ ಹಂಚಿಕೆಯಾಗಲಿ ಎಂದು ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಚರ್ಚೆಗೆ ತೆರೆ ಎಳೆದರು.

 ತಪ್ಪು ಮಾಹಿತಿ
ಜಿ.ಪಂ. ಸಭೆ ಅನುಮೋದನೆ ನೀಡಬೇಕಾಗಿದ್ದ ಕ್ರಿಯಾ ಯೋಜನೆಗಳ ಕುರಿತು ತಪ್ಪು ಅಂಕಿಅಂಶಗಳನ್ನು ನೀಡ ಲಾಗಿದೆ ಎಂದು ಎಲ್ಲ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು. ಇದು ಮುದ್ರಣ ದೋಷ ಎಂದು ಅಧಿಕಾರಿ ಗಳು ಸಮಜಾಯಿಷಿ ನೀಡಲು ಪ್ರಯತ್ನಿಸಿದರು.

ಮುದ್ರಣಕ್ಕೆ ಹೋಗುವ ಮುಂಚೆ ಹಾಗೂ ಮುದ್ರ ಣದ ಮೊದಲ ಪ್ರತಿಯನ್ನು ಏಕೆ ಪರಿಶೀಲಿಸಲಿಲ್ಲ ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು. 26 ಕೋಟಿ ಮೊತ್ತದ ಕಾಮಗಾರಿಗಳಿಗೆ ಹೇಗೆ ಅನುಮೋದನೆ ನೀಡುವುದು ಎಂದು ಅವರು ಪ್ರಶ್ನಿಸಿದರು.

ಅಂತಿಮವಾಗಿ ಉಪಾಧ್ಯಕ್ಷೆ ಕಾವೇರಿ ಅವರ ಸಲಹೆಯಂತೆ ಬದಲಾವಣೆಗೆ ಒಳಪಟ್ಟು ಎನ್ನುವ ಷರತ್ತಿನೊಂದಿಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
 

ನಗುತ್ತಲೇ ಸಮಸ್ಯೆ ಹೇಳಿಕೊಂಡ ಸದಸ್ಯೆ...
ಮಡಿಕೇರಿ-ಮೈಸೂರು ರಸ್ತೆಯನ್ನು ಚೆನ್ನಾಗಿ ಮಾಡಿದ್ದಾರೆ. ಆದರೆ, ರಸ್ತೆ ಪಕ್ಕದಲ್ಲಿ ಅಗೆದಿರುವ ಮಣ್ಣನ್ನು ಹಾಗೆಯೇಬಿಟ್ಟಿದ್ದಾರೆ. ಸಾಕಷ್ಟು ಜನರು ನನ್ನ ಬಳಿ ದೂರು ಹೇಳಿಕೊಂಡಿದ್ದಾರೆ. ಇದರ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳು ಗಮನ ಹರಿಸಬೇಕೆಂದು ಸದಸ್ಯೆ ಅಲ್ಲಾರಂಡ ಬೀನಾ ಬೊಳ್ಳಮ್ಮ ಸೂಚಿಸಿದರು. ನಗುನಗುತ್ತಲೇ ಸಮಸ್ಯೆ ಹೇಳಿಕೊಂಡಿದ್ದು ಸಭೆಯ ಗಮನ ಸೆಳೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT