ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಅಧ್ಯಕ್ಷರಿಂದ ಅಧಿಕಾರಿಗಳಿಗೆ ತರಾಟೆ

ಉದ್ಯೋಗ ಖಾತರಿ- ಘನತ್ಯಾಜ್ಯ ಯೋಜನೆ ವಿಫಲ
Last Updated 18 ಜುಲೈ 2013, 9:57 IST
ಅಕ್ಷರ ಗಾತ್ರ

ಪುತ್ತೂರು: ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರವು ಬಡಜನತೆಗೆ ನೀಡುತ್ತಿರುವ ಸೌಲಭ್ಯಗಳು ಸಮರ್ಪಕವಾಗಿ ಮುಟ್ಟುತ್ತಿಲ್ಲ. ಇದರಿಂದಾಗಿ ಗ್ರಾಪಂಗಳಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಹಾಗೂ ಘನ ತ್ಯಾಜ್ಯ ವಿಲೇವಾರಿಯಂತಹ ಅಗತ್ಯ ಯೋಜನೆಗಳು ವಿಫಲವಾಗುತ್ತಿವೆ. ಇದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಕಾರಣ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ  ಕೊರಗಪ್ಪ ನಾಯ್ಕ  ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

6 ತಿಂಗಳ ಒಳಗಾಗಿ ತಾಲ್ಲೂಕಿನ ಎಲ್ಲಾ ಗ್ರಾಪಂಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು  ಸ್ಥಾಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪುತ್ತೂರು ತಾಪಂ ಸಭಾಂಗಣದಲ್ಲಿ ಬುಧವಾರ ಅವರು ಗ್ರಾಪಂಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಉದ್ಯೋಗ ಖಾತರಿ ಯೋಜನೆಯಲ್ಲಿ ಪುತ್ತೂರು ತಾಲ್ಲೂಕು ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪೇಟೆಗಳಲ್ಲಿ ಉದ್ಯೋಗ ಖಾತರಿಯ ಕೆಲಸಕ್ಕೆ ಜನ ಸಿಗುತ್ತಾರೆ. ಹಳ್ಳಿಗಳಲ್ಲಿ ಸಿಗುವುದಿಲ್ಲ ಎಂದರೆ ಇದಕ್ಕೆ ಅರ್ಥ ಇಲ್ಲ ಎಂದು ಆಕ್ಷೇಪಿಸಿದರು.

ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಬೇಕಾದ ಸ್ಥಳಗಳ ಬಗ್ಗೆ ಕೇವಲ ಪತ್ರ ವ್ಯವಹಾರ ಮಾಡಿದರೆ ಸಾಲದು. ನೀವೇ ಹೋಗಿ ಕಂದಾಯ ಇಲಾಖೆ ಜೊತೆ ಚರ್ಚೆ ಮಾಡಬೇಕು. ಅಭಿವೃದ್ಧಿ ಅಧಿಕಾರಿಗಳು ತಿಂಗಳಿಗೊಮ್ಮೆಯಾದರೂ ಗ್ರಾಮೀಣ ಭಾಗದ ಜನತೆ ಬದುಕುವ ಸ್ಥಿತಿಯನ್ನು ವೀಕ್ಷಿಸಬೇಕು ಎಂದರು.

ಗ್ರಾಪಂಗಳಲ್ಲಿ ಘನತ್ಯಾಜ್ಯಗಳ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಹಣದ ಕೊರತೆ ಇಲ್ಲ. ಕೆಲವೊಂದು ಗ್ರಾಪಂಗಳಲ್ಲಿ ಸ್ಥಳದ ಕೊರತೆ ಇದೆ. ಸ್ಥಳ ಇಲ್ಲ ಎನ್ನುವ ಕಾರಣ ಹೇಳಿ ಈ ಯೋಜನೆಯನ್ನು ನಿರ್ಲಕ್ಷ್ಯಿಸುವುದು ಬೇಡ ಎಂದು ತಿಳಿಸಿದರು.

12 ಲಕ್ಷ ಇದ್ದರೂ ಪೂಜೆ ಮಾಡ್ತೀರಾ?:
`ಬಜತ್ತೂರು ಗ್ರಾಪಂನಲ್ಲಿ ಸುವರ್ಣ ಗ್ರಾಮ ಯೋಜನೆ ಹಾಗೂ ನಿರ್ಮಲ ಗ್ರಾಮ ಯೋಜನೆಯಲ್ಲಿ ಒಟ್ಟು ರೂ 12 ಲಕ್ಷ ಹಣ ಇದೆ. ಇದನ್ನು ಇಟ್ಟುಕೊಂಡು ಪೂಜೆ ಮಾಡ್ತಾ ಇದ್ದೀರಾ' ಎಂದು ಪ್ರಶ್ನಿಸಿದರು. ಶಿರಾಡಿ ಹಾಗೂ ಕೆದಂಬಾಡಿ ಗ್ರಾಪಂಗಳು ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದರು.

ರಾಜೀವಗಾಂಧಿ ಸೇವಾ ಕೇಂದ್ರ ಸ್ಥಾಪನೆ ಬಗ್ಗೆ ನಿರ್ಲಕ್ಷ್ಯ
ಗ್ರಾಪಂಗಳು ರಾಜೀವಗಾಂಧಿ ಸೇವಾ ಕೇಂದ್ರ ಮಾಡುವಲ್ಲೂ ನಿರ್ಲಕ್ಷ್ಯ ತೋರುತ್ತಿದ್ದಾರೆ. 37 ಗ್ರಾಪಂಗಳ ಪೈಕಿ 23ರಲ್ಲಿ ಮಾತ್ರ ರಾಜೀವಗಾಂಧಿ ಸೇವಾ ಕೇಂದ್ರ ಸ್ಥಾಪನೆಯಾಗಿದೆ. ನಿಮ್ಮಲ್ಲಿರುವ ಸುವರ್ಣ ಗ್ರಾಮ ಯೋಜನೆಯ ಕಟ್ಟಡದ ಮೇಲೆ ಈ ಕೇಂದ್ರವನ್ನು ನಿರ್ಮಾಣ ಮಾಡಿ ಎಂದು ಹೇಳಿದರು. ಗ್ರಾಪಂ ಬಜೆಟ್‌ನಲ್ಲಿ ಶೇ 2 ನಿಧಿಯನ್ನು ಯುವಕ ಮತ್ತು ಯುವಕ ಮಂಡಲದ ಕಾರ್ಯಕ್ರಗಳಿಗೆ ಬಳಕೆ ಮಾಡಬೇಕು ಎಂದರು.

ಉಪ್ಪಿನಂಗಡಿಯಲ್ಲಿ ಮಿನಿ ಸೌಧ
ಉಪ್ಪಿನಂಗಡಿ ಗ್ರಾಪಂನಲ್ಲಿ ರಾಜೀವಗಾಂಧಿ ಸೇವಾ ಕೇಂದ್ರ ಮಾಡಿಲ್ಲ. ಇಲ್ಲಿ ಸ್ಥಳದ ಸಮಸ್ಯೆ ಇದೆ. ಹಾಗಾಗಿ ಅಲ್ಲಿನ ಗ್ರಾಪಂ ಕಟ್ಟಡವನ್ನು ತೆಗೆದು ಮಿನಿ ಸೌಧ ನಿರ್ಮಾಣ ಮಾಡಿದರೆ ಅನುಕೂಲ ಎಂದರು.

4 ಗಂಟೆಗೆ ಗ್ರಾ.ಪಂ ಕಚೇರಿ ಬಾಗಿಲು ಹಾಕುವವರ ವಿರುದ್ಧ ಕಠಿಣಕ್ರಮಕ್ಕೆ ಸೂಚನೆ ಜನಸಾಮಾನ್ಯ ಅಗತ್ಯಕ್ಕೆ ಇರುವ ಗ್ರಾಪಂಗಳ ಬಾಗಿಲನ್ನು 4 ಗಂಟೆಗೆ ಹಾಕುವ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಾ.ಪಂ.ಅಧಿಕಾರಿಯವರಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ತಾಪಂ ಅಧ್ಯಕ್ಷೆ ಶಶಿಪ್ರಭಾ ಸಂಪ್ಯ, ಉಪಾಧ್ಯಕ್ಷ ಬಾಬು ಮಾದೋಡಿ, ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಆಲಡ್ಕ, ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯ ಗೌಡ, ಜಿಲ್ಲಾ ನೆರವು ಘಟಕದ ಸಂಯೋಜಕಿ  ಮಂಜುಳಾ ಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT