ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಿ.ಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಅಸ್ತು'

ವಿಶೇಷ ಸಭೆಗೆ 31 ಸದಸ್ಯರ ಪೈಕಿ 19 ಮಂದಿ ಹಾಜರು, ನಿರ್ಣಯದ ಪರ ಮತ
Last Updated 2 ಜುಲೈ 2013, 5:38 IST
ಅಕ್ಷರ ಗಾತ್ರ

ಬೀದರ್: ಬೀದರ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯ ವಿರುದ್ಧ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದು, ನಿರ್ಣಯದ ಪರವಾಗಿ 19 ಸದಸ್ಯರು ಮತ ನೀಡುವ ಮೂಲಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಬಿಜೆಪಿಯ ದೀಪಿಕಾ ಸಚಿನ್ ರಾಠೋಡ್ ತಮ್ಮ ಸ್ಥಾನದಿಂದ ಪದಚ್ಯುತಗೊಂಡರು.

ಜಿಲ್ಲಾ ಪಂಚಾಯಿತಿಯ ಸದಸ್ಯ ಬಲ ಒಟ್ಟು 31 ಆಗಿದ್ದು, ಸೋಮವಾರದ ಸಭೆಗೆ 19 ಮಂದಿ ಹಾಜರಾಗಿದ್ದು. ಅಷ್ಟು ಜನ ನಿರ್ಣಯದ ಪರವಾಗಿ ಮತ ನೀಡಿದ್ದು ಈ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಗೆಲುವಾಯಿತು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸದಸ್ಯ ಸಂಜುಕುಮಾರ್ ಕಾಳೇಕರ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಅಧ್ಯಕ್ಷೆ ವಿರುದ್ಧ ಅವಿಶ್ವಾಸ ತರುವ ಉದ್ದೇಶದೊಂದಿಗೆ ಸಭೆ ಕರೆಯಬೇಕು ಎಂದು ಈ ಹಿಂದೆ ಅಧ್ಯಕ್ಷೆಗೇ ಮನವಿ ಸಲ್ಲಿಸಲಾಗಿತ್ತು. ಅವರು ಸಭೆ ಕರೆದಿರಲಿಲ್ಲ.  ಜೂನ್ 20ರಂದು ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗೆ ಮನವಿ ಸಲ್ಲಿಸಿ ಕಾಯ್ದೆಯಲ್ಲಿ ದತ್ತವಾಗಿರುವ ನಿಯಮಾನುಸಾರ ಸಭೆ ಕರೆದಿರುವ ಬಗೆಗೆ ಮಾಹಿತಿ ನೀಡಲಾಗಿತ್ತು.

`ಪಂಚಾಯತಿ ರಾಜ್ ಕಾಯ್ದೆಯ 1993ರ ಸೆಕ್ಷನ್ 180 (2) (ಎ) ಅನುಸಾರ ಅಧ್ಯಕ್ಷರು ಮನವಿ ಪಡೆದ 15 ದಿನದಲ್ಲಿ ಸಭೆ ಕರೆಯಲು ವಿಫಲರಾದಲ್ಲಿ ಸದಸ್ಯರೂ ಸಭೆಯನ್ನು ಕರೆಯಲು ಅವಕಾಶವಿದೆ. ಅದರಂತೆ, ಇಂದು ಸಭೆ ಕರೆದು ಅವಿಶ್ವಾಸ ನಿರ್ಣಯ ತರಲಾಯಿತು' ಎಂದು ಸಂಜು ಕಾಳೇಕರ ವಿವರಿಸಿದರು.

ಜಿಲ್ಲಾ ಪಂಚಾಯಿತಿಯ ಸದಸ್ಯ ಬಲ 31 ಆಗಿದ್ದು, ಈ ಪೈಕಿ ಬಿಜೆಪಿಯ 18 ಜರು, ಜೆಡಿಎಸ್‌ನ 5 ಮತ್ತು ಕಾಂಗ್ರೆಸ್‌ನ ಇಬ್ಬರು ಮತ್ತು ಪಕ್ಷೇತರ ಸದಸ್ಯರು 6 ಮಂದಿ ಸೇರಿದ್ದರು. ಈಚಿನ ರಾಜಕೀಯ ಬೆಳವಣಿಗೆಯಲ್ಲಿ ಏಳು ಮಂದಿ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಜೊತೆಗೆ ಗುರುತಿಸಿಕೊಂಡಿದ್ದರು.

ಇವರ ಪೈಕಿ ಡಾ. ಶೈಲೇಂದ್ರ ಬೆಲ್ದಾಳೆ ಅವರು ಕೆಜೆಪಿ ಅಭ್ಯರ್ಥಿಯಾಗಿ ಬೀದರ್ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದರು.

ತದನಂತರ ಕೆಜೆಪಿಯ ಜೊತೆಗೆ ಗುರುತಿಸಿಕೊಂಡಿರುವ ಸದಸ್ಯರು ಜಿಲ್ಲಾ ಪಂಚಾಯಿತಿಯಲ್ಲಿ ತಮ್ಮನ್ನು ಪ್ರತ್ಯೇಕ ಗುಂಪಾಗಿ ಪರಿಗಣಿಸಿ, ಪ್ರತ್ಯೇಕ ಸ್ಥಳ ನಿಗದಿಪಡಿಸಬೇಕು ಎಂದು ಮನವಿ ಸಲ್ಲಿಸಿದ್ದರು.

ಈ ಬೆಳವಣಿಗೆಗಳ ನಂತರ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಒಡೆದ ಮನೆಯಾಗಿತ್ತು. ಈಗ ಅಧ್ಯಕ್ಷೆ ದೀಪಿಕಾ ಸಚಿನ್ ರಾಠೋಡ ಅವರ ವಿರುದ್ಧ ಅವಿಶ್ವಾಸ ತರುವ ಮೂಲಕ ಭಿನ್ನಮತ ತಾರಕಕ್ಕೇರಿದಂತಾಗಿದೆ.

ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಅವಿಶ್ವಾಸ ನಿರ್ಣಯದ ಬಳಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಸದಸ್ಯರೇ ಮಾಧ್ಯಮ ಪ್ರತಿನಿಧಿಗಳಿಗೆ ಬೆಳವಣಿಗೆ ಕುರಿತು ವಿವರಣೆಯನ್ನು ನೀಡಿದರು.

ಈ ಕುರಿತು ಅಧ್ಯಕ್ಷೆ ದೀಪಿಕಾ ಸಚಿನ್ ರಾಠೋಡ ಅವರ ಪ್ರತಿಕ್ರಿಯೆ ಪಡೆಯಲು ಯತ್ನಿಸಲಾಯಿತು. ಆದರೆ, ಅವರ ಮೊಬೈಲ್ ದೂರವಾಣಿ ಸ್ವಿಚ್ ಆಫ್ ಆಗಿದ್ದು, ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ವಿಶೇಷ ಸಭೆ ಕರೆಯಲು ತೀರ್ಮಾನಿಸಿ ಜೂನ್ 20ರಂದು ಸಿಇಒ ಅವರಿಗೆ ಸಲ್ಲಿಸಿದ್ದ ಮನವಿಗೆ ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಸಂತೋಷಮ್ಮಾ ಪುಂಡಲೀಕಪ್ಪ, ಶೈಲೇಂದ್ರ ಬೆಲ್ದಾಳೆ, ಪ್ರಭುಶೆಟ್ಟಿ ಮೆಂಗಾ, ಜಗದೇವಿ ಝರಣಪ್ಪ, ಚಂದ್ರಶೇಖರ ಪಾಟೀಲ, ಸಂಗೀತ ಮಾಧವರಾವ್, ಪ್ರಜಾದೇವಿ ಸಿದ್ರಾಮ, ವೀರಣ್ಣ ಪಾಟೀಲ್, ಮಹಾಂತಯ್ಯ ತೀರ್ಥ, ಸಂಜು ಕಾಳೇಕರ್, ದೈವಶೀಲಾ ಸುಧಾಕರ, ವಿಮಲಾಬಾಯಿ ಬಸವರಾಜ, ರೇಖಾ ಭಾಬುರಾವ್, ಕಸ್ತೂರಿಬಾಯಿ ಮಾರುತಿ, ರವೀಂದ್ರ ರೆಡ್ಡಿ, ಚಂದ್ರಮ್ಮ ಶಿವರಾಜ, ಹಜರತ್ ಬೇಗಂ ಮೈನೊದ್ದೀನ್, ವಸಂತ ಕಲ್ಯಾಣರಾವ್ ಅವರು ಸಹಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT