ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಅಧ್ಯಕ್ಷೆ ವಿರುದ್ಧ ಇಂದು ಅವಿಶ್ವಾಸ

Last Updated 22 ಫೆಬ್ರುವರಿ 2012, 6:25 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎನ್.ಬಿಲ್ಗಾರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗಾಗಿ ಕೊನೆಗೂ ವೇದಿಕೆ ಸಿದ್ಧಗೊಂಡಿದೆ. ಈ ನಿಟ್ಟಿನಲ್ಲಿ ನಡೆದ ಹಲವು ಪ್ರಯತ್ನಗಳು ವಿಫಲಗೊಂಡ ನಂತರ ಫೆ. 22ರಂದು ವಿಶೇಷ ಸಭೆ ಕರೆಯಲಾಗಿದ್ದು, ಹಲವಾರು ದೃಷ್ಟಿಯಿಂದ ನಾಳಿನ ಸಭೆ ಕುತೂಹಲ ಕೆರಳಿಸಿದೆ.

ಈ ವಿಶೇಷ ಸಭೆಗೆ ತಪ್ಪದೇ ಹಾಜರಾಗಬೇಕು ಎಂಬುದಾಗಿ ಬಿಜೆಪಿ ತನ್ನ ಎಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.  ಯಾವುದೇ ಕಾರಣಕ್ಕೂ ಈ ವಿಶೇಷ ಸಭೆಗೆ ಹಾಜರಾಗಬಾರದು ಎಂಬುದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿವೆ. ಹೀಗಾಗಿ ಆಯಾ ಪಕ್ಷಗಳು ನೀಡಿರುವ ವಿಪ್‌ನಂತೆ ಸದಸ್ಯರು ಎಷ್ಟರಮಟ್ಟಿಗೆ ನಡೆದುಕೊಳ್ಳುತ್ತಾರೆ ಎಂಬುದೇ ಈ ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಸದಸ್ಯರ ಸಂಖ್ಯೆ 12. ಆದರೆ, ಈ ಪೈಕಿ ಬಿಜೆಪಿಯ ಜ್ಯೋತಿ ಬಿಲ್ಗಾರ್ ಅಧ್ಯಕ್ಷೆ. ಜ್ಯೋತಿ ಬಿಲ್ಗಾರ್  ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡನೆಗೆ ಅದೇ ಪಕ್ಷದ ಸದಸ್ಯರು ಮನವಿ ಮಾಡಿದ್ದರಿಂದ ಈ ಸಭೆಯನ್ನು ಕರೆಯಲಾಗಿದೆ. ಹೀಗಾಗಿ ಎಲ್ಲ ಬಿಜೆಪಿ ಸದಸ್ಯರು ಪಕ್ಷ ನೀಡಿರುವ ವಿಪ್‌ಗೆ ತಲೆ ಬಾಗಲೇ ಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಆದರೆ, ತಮ್ಮ ವಿರುದ್ಧವೇ ಮತ ಚಲಾಯಿಸುವಂತೆ ಸೂಚನೆ ಇರುವ ಈ ವಿಪ್‌ನಂತೆ ಜ್ಯೋತಿ ಬಿಲ್ಗಾರ್ ನಡೆದುಕೊಳ್ಳುವರೇ ಎಂಬುದೇ ಈಗಿರುವ ಪ್ರಶ್ನೆ. ಅಧ್ಯಕ್ಷೆಯ ನಡೆ ಏನೇ ಆದರೂ ಅದು ಕಾನೂನಾತ್ಮಕ ಸಮಸ್ಯೆಗೆ ಕಾರಣವಾಗಬಹುದು. ಕೋರಂ ಅಭಾವ ಸೃಷ್ಟಿಸಿ ಸಭೆ ನಡೆಯದಂತೆ ಮಾಡುವುದೇ ಈ ಬಿಕ್ಕಟ್ಟಿನಿಂದ ಪಾರಾಗಲು ಜ್ಯೋತಿ ಬಿಲ್ಗಾರ್ ಮುಂದಿರುವ ಆಯ್ಕೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನು, ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವುದು ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಬೇಕಾಗಿಲ್ಲ ಎಂದು ಎಂದೇ ವಿಶ್ಲೇಷಿಸಲಾಗುತ್ತಿದೆ. ತಮ್ಮ ಪಕ್ಷಗಳಲ್ಲಿ ಅಧ್ಯಕ್ಷೆ ಸ್ಥಾನಕ್ಕಾಗಿ ಸದಸ್ಯರು ಇಲ್ಲ. ಹೀಗಾಗಿ ಜ್ಯೋತಿ ಅವರನ್ನು ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸುವುದು ಯಾವುದೇ ರೀತಿಯ ಲಾಭ ತರುವುದಿಲ್ಲ ಎಂಬುದು ಈ ಎರಡೂ ಪಕ್ಷಗಳ ಮುಖಂಡರ ಹೇಳಿಕೆ.
 
ಮೇಲ್ನೋಟಕ್ಕೆ ಇದು ನಿಜವೆಂದು ಕಂಡು ಬಂದರೂ, ಇದೇ ಪಕ್ಷಗಳ ಮುಖಂಡರು ಹೇಳುವಂತೆ ಅವಿಶ್ವಾಸ ನಿರ್ಣಯಕ್ಕೆ ಸೋಲು ಉಂಟಾಗಲಿ ಎಂಬ ಆಶಯವಂತೂ ಉಭಯ ಪಕ್ಷಗಳ ಮುಖಂಡರಲ್ಲಿದೆಯಂತೆ. ಅಲ್ಲದೇ, ಬಿಜೆಪಿಯ ಒಂದು ಗುಂಪಿಗೂ ಜ್ಯೋತಿ ಬಿಲ್ಗಾರ್ ಅವರೇ ಅಧ್ಯಕ್ಷೆಯಾಗಿ ಮುಂದುವರಿಯಬೇಕು ಎಂಬ ಇರಾದೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಆ ಪಕ್ಷದ ಮುಖಂಡರು ಹೇಳುತ್ತಾರೆ.

ಅವಿಶ್ವಾಸ ನಿರ್ಣಯಕ್ಕೆ ಗೆಲುವಾದರೆ, ಹಿರೇಮನ್ನಾಪುರ ಕ್ಷೇತ್ರದ ಅನ್ನಪೂರ್ಣಮ್ಮ ಕಂದಕೂರು ಅಧ್ಯಕ್ಷೆಯಾಗುತ್ತಾರೆ. ಹೀಗಾಗಿ ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮೇಲುಗೈ ಸಾಧಿಸಿದಂತಾಗುತ್ತದೆ. ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿ ಆ ಮೂಲಕ ದೊಡ್ಡನಗೌಡ ಪಾಟೀಲ ಅವರಿಗೆ ಮುಖಭಂಗವಾಗಬೇಕು ಎಂಬುದು ಬಿಜೆಪಿಯ ಒಂದು ಗುಂಪು ಹಾಗೂ ಕಾಂಗ್ರೆಸ್‌ನ ಜಿಲ್ಲಾ ಮುಖಂಡರೊಬ್ಬರ ಆಸೆ.

ಕೇವಲ ರಾಜಕೀಯವಾಗಿ ಮಾತ್ರವಲ್ಲ, ಜಿಲ್ಲಾ ಪಂಚಾಯಿತಿಯ ಆಡಳಿತ ಹಾಗೂ ಎಲ್ಲ ರೀತಿಯ ಹೊಂದಾಣಿಕೆ ದೃಷ್ಟಿಯಿಂದ ಇದು ಲಾಭಕರ ಎಂಬ ಲೆಕ್ಕಾಚಾರ ಉಭಯ ಪಕ್ಷಗಳ ಮುಖಂಡರದ್ದು ಎಂದು                         ಹೇಳಲಾಗುತ್ತಿದೆ.

ಇನ್ನು, ಜೆಡಿಎಸ್‌ನ ನಾಲ್ವರು ಸದಸ್ಯರ ಪೈಕಿ ವೀರೇಶ ಸಾಲೋಣಿ ಅವಿಶ್ವಾಸದ ಪರ ಇದ್ದಾರೆ.
 ಸಭೆಗೆ ಹೋಗದಂತೆ ವಿಪ್ ಸಹ ನೀಡಲಾಗಿದೆ. ವನಿತಾ ಗಡಾದ ಮತ್ತು ಭಾಗೀರಥಿ ಪಾಟೀಲ ಈಗಾಗಲೇ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಈಗ ಅಳವಂಡಿ ಕ್ಷೇತ್ರದ ನಾಗನಗೌಡ ಪಾಟೀಲ ಅವರ ಮತವೇ ನಿರ್ಣಾಯಕವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT