ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಟಿಕೆಟ್‌ಗಾಗಿ ಕಸರತ್ತು ಆರಂಭ

Last Updated 10 ಫೆಬ್ರುವರಿ 2012, 9:00 IST
ಅಕ್ಷರ ಗಾತ್ರ

ತಿಪಟೂರು: ರಂಗಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಫೆ. 26ರಂದು ನಡೆಯುವ ಉಪ ಚುನಾವಣೆಗೆ ಸ್ಪರ್ಧಿಸಲು ವಿವಿಧ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್‌ಗಾಗಿ ಕಸರತ್ತು ಆರಂಭಿಸಿದ್ದಾರೆ.

ಆ ಕ್ಷೇತ್ರಕ್ಕೆ ಸದಸ್ಯರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಕೆ.ರಾಜಶೇಖರ್ ನಿಧನರಾದ ಹಿನ್ನೆಲೆಯಲ್ಲಿ ವರ್ಷ ಕಳೆದು ಉಪ ಚುನಾವಣೆ ಘೋಷಣೆಯಾಗಿದೆ. ಕಳೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲೇ ಪ್ರತಿಷ್ಠಿತ ಕ್ಷೇತ್ರವೆಂದು ಗುರುತಿಸಿಕೊಂಡಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಕಂಡುಬಂದಿತ್ತು. ಮಾಜಿ ಶಾಸಕ ಕೆ.ಷಡಕ್ಷರಿ ಸೋದರರಾದ ಕೆ. ರಾಜಶೇಖರ್ ಕಾಂಗ್ರೆಸ್‌ನಿಂದ ಹಾಗೂ ತಾಲ್ಲೂಕಿನ ಪ್ರಮುಖ ರಾಜಕಾರಣಿಯೆಂದೇ ಗುರುತಿಸಿಕೊಂಡ ಎಚ್.ಬಿ.ದಿವಾಕರ್ ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದು ಕುತೂಹಲಕ್ಕೆ ಕಾರಣವಾಗಿತ್ತು.

ಅಣ್ಣನ ರಾಜಕಾರಣಕ್ಕೆ ಬೆಂಬಲವಾಗಿ ನಿಂತಿದ್ದ ರಾಜಶೇಖರ್ ನೇರ ಚುನಾವಣೆಗೆ ಇಳಿದಿದ್ದು, ಅಣ್ಣನ ಆಕ್ಷೇಪದ ನಡುವೆಯೂ ತನಗಿರುವ ಜನಬೆಂಬಲ ಪರೀಕ್ಷಿಸಿಕೊಳ್ಳ ಲೆಂದೇ ಸ್ಪರ್ಧಿಸಿದ್ದೇನೆಂದು ಹೇಳಿ ಕೊಂಡಿದ್ದ ರಾಜು ಗೆಲುವಿನ ಮೂಲಕ ಅದನ್ನು ದೃಢಪಡಿಸಿದ್ದರು. ಕಡಿಮೆ ಅಂತರದಿಂದ ಸೋಲುಂಡಿದ್ದ ಎಚ್.ಬಿ. ದಿವಾಕರ್ ಎಪಿಎಂಸಿ ಚುನಾವಣೆಯಲ್ಲಿ ಗೆದ್ದು, ನಂತರ ಅಧ್ಯಕ್ಷರಾಗಿದ್ದಾರೆ.

ಈಗ ಎದುರಾಗಿರುವ ಚುನಾವಣೆಗೆ ವಿವಿಧ ಪಕ್ಷಗಳ ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಕಸರತ್ತು ಆರಂಭಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆ.ರಾಜಶೇಖರ್ ಅವರ ಪತ್ನಿ ಹೇಮಾ ಅವರನ್ನು ಕಣಕ್ಕಿಳಿಸಲು ಕೆಲವರು ಒತ್ತಡ ತರುತ್ತಿದ್ದಾರೆ.

ಪತಿಯ ಸಾವಿನ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಅವರು ಸ್ಪರ್ಧೆಗಿಳಿಯಲು ಅರೆ ಮನಸ್ಕರಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಸ್ಪರ್ಧಿಸಲು ತಿರಸ್ಕರಿಸಿದರೆ ಕಾಂಗ್ರೆಸ್ ಟಿಕೆಟ್ ಪಡೆಯಲು ಹೊಗವನಘಟ್ಟ ಪ್ರಕಾಶ್ ಮತ್ತು ಹಾಲು ಒಕ್ಕೂಟದ ನಿರ್ದೇಶಕ ತ್ರಯಂಬಕ ಆಕಾಂಕ್ಷಿಗಳಾ ಗಿದ್ದಾರೆ ಎನ್ನಲಾಗಿದೆ.

ಬಿಜೆಪಿಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಸ್. ಶಿವಸ್ವಾಮಿ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಹಿಂದಿನ ಬಾರಿ ಹೊನ್ನವಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ಸಿದ್ದಾಪುರ ಸುರೇಶ್ ಅವರೊಂದಿಗೆ ಹೊಸಹಳ್ಳಿ ಸಿದ್ದಪ್ಪ, ಕೆರಗೋಡಿ ದೇವರಾಜು ಕೂಡ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಜೆಡಿಎಸ್ ಟಿಕೆಟ್‌ನಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಆಕಾಂಕ್ಷಿಗಳ ಪಟ್ಟಿ ಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಟಿ.ಎಸ್. ಗುರುಮೂರ್ತಿ ಹೆಸರು ಪ್ರಬಲವಾಗಿದೆ.

ಇವರೊಂದಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ. ರೇಣು ಕಾರ್ಯ, ಜೆಡಿಎಸ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಪ್ರಕಾಶ್, ಶಂಕರಮೂರ್ತಿ, ನಾಗೇಶ್, ಗುರುಪ್ರಸಾದ್ ಮತ್ತಿತರರು ಆಕಾಂಕ್ಷಿಗಳ ಪಟ್ಟಿಯಲ್ಲಿ ದಾರೆ. ಪ್ರಕಾಶ್ ಸೇರಿದಂತೆ ಒಂದಿಬ್ಬರು ಯುವಕರು ಸ್ಪರ್ಧೆಗೆ ಉತ್ಸಾಹ ತೋರುತ್ತಿರುವುದು ವಿಶೇಷ.
 
ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಈ ಪಕ್ಷದಲ್ಲಿ ಹೆಚ್ಚು ಗೊಂದಲವಿದ್ದು, ಸ್ಪರ್ಧಾಕಾಂಕ್ಷಿಗಳಿಂದ ಪಕ್ಷ ಅರ್ಜಿ ಆಹ್ವಾನಿಸಿದೆ. ಫೆ. 11ರ ಮಧ್ಯಾಹ್ನ 2ರೊಳಗೆ ಸ್ಪರ್ಧಾಕಾಂಕ್ಷಿಗಳು ವಿಧಾನ ಪರಿಷತ್ ಸದಸ್ಯ ಡಾ. ಹುಲಿನಾಯ್ಕರ್ ಅವರಿಗೆ ಅರ್ಜಿ ಸಲ್ಲಿಸಬಹುದೆಂದು ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT