ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಪಂ ಸಭೆ: ಅಧ್ಯಕ್ಷ, ಉಪಾಧ್ಯಕ್ಷರೇ ಗೈರು!

Last Updated 4 ಅಕ್ಟೋಬರ್ 2011, 5:35 IST
ಅಕ್ಷರ ಗಾತ್ರ

ಮಂಡ್ಯ: ಅಧ್ಯಕ್ಷರು, ಉಪಾಧ್ಯಕ್ಷರು ಸೇರದಿಂತೆ ಆಡಳಿತರೂಢ ಜನತಾದಳದ ಬಹುತೇಕ ಸದಸ್ಯರು ಗೈರು ಹಾಜರಾಗುವುದರ ಮೂಲಕ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಮುಂದೂಡಿದ ಘಟನೆ ಸೋಮವಾರ ನಡೆಯಿತು.

ಮಳೆ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಹೋಬಳಿಗಳಲಿ ಬೆಳೆ ಒಣಗುತ್ತಿರುವುದು, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಗಂಭೀರ ಸ್ವರೂಪದ ವಿಷಯಗಳು ಚರ್ಚೆಗೆ ಬರಬೇಕಿತ್ತಾದರೂ ಆಡಳಿತ ಪಕ್ಷದ ಸದಸ್ಯರೇ ಸಭೆಯ ಬಗೆಗೆ ನಿರಾಸಕ್ತಿ ತೋರಿದರು.

ನಿಗದಿತ ಸಮಯ 11ಕ್ಕೆ ಸಭೆ ಆರಂಭವಾಗಬೇಕಿತ್ತು ಆದರೆ, 12 ಗಂಟೆ ಕಳೆದರೂ ಆಡಳಿತ ಪಕ್ಷದ ಸಾಲುಗಳು ಖಾಲಿ ಇದ್ದವು. ಅಧ್ಯಕ್ಷರೂ ಗೈರು ಹಾಜರಾಗಿದ್ದರು. ಉಪಾಧ್ಯಕ್ಷರೂ ಬಂದಿರಲಿಲ್ಲ.

ಇದು, ವಿರೋಧ ಪಕ್ಷವಾದ ಕಾಂಗ್ರೆಸ್‌ನ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಆದರೆ,ಸಭೆ ವಿಳಂಬಕ್ಕೆ ಸ್ಪಷ್ಟಿಕರಣ ನೀಡುವಂತೆ ವಿರೋಧಪಕ್ಷದ ಬಸವರಾಜು, ಹುಚ್ಚೇಗೌಡ, ಸಭೆಯಲ್ಲಿದ್ದ ಆಡಳಿತ ಪಕ್ಷದ ಡಾ. ಶಂಕರೇಗೌಡ ಅವರು ಕೇಳಿದರು.

ಆದರೆ, ಸಿಇಒ ಅನುಪಸ್ಥಿತಿಯಲ್ಲಿ ಸಭೆ ನಡೆಸುವ ಹೊಣೆ ಹೊತ್ತಿದ್ದ ಉಪ ಕಾರ್ಯದರ್ಶಿ-2 ನಾಗರಾಜು ಅವರು ಇದಕ್ಕೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ.

ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಮಾದಪ್ಪ, `ದಯವಿಟ್ಟು ಕ್ಷಮಿಸಿ. ಕೋರಂ ಇಲ್ಲ. ಸಭೆ ನಡೆಸಲು ಆಗುವುದಿಲ್ಲ. ಅಧ್ಯಕ್ಷರು, ಉಪಾಧ್ಯಕ್ಷರೂ ಆಗಮಿಸಿಲ್ಲ. ಅವರ ಗೈರು ಹಾಜರಿಗೂ ಅನೇಕ ಕಾರಣಗಳು ಇರುತ್ತವೆ. ಎಲ್ಲವನ್ನು ಹೇಳಲು ಆಗುವುದಿಲ್ಲ. ಮಾಡಿಸಿರೋ ತಿಂಡಿ ವೇಸ್ಟ್ ಆಗುವುದು ಬೇಡ. ತಿಂದು ಹೋಗಿ~ ಎಂದರು.

ವಿಪಕ್ಷ ಮುಖಂಡ ಬಸವರಾಜು, ಸುಮ್ಮನೇ ಕೋರಂ ಇಲ್ಲ ಎಂದು ಮುಂದೂಡುವುದು ಸರಿಯಲ್ಲ. ಕೋರಂಗೆ ಎಷ್ಟು ಜನ ಬೇಕು. ಈಗ ಎಷ್ಟು ಸದಸ್ಯರು ಇದ್ದಾರೆ ಎಂಬುದನ್ನು ತಿಳಿಸಿ ಉಪ ಕಾರ್ಯದರ್ಶಿ ಅವರು ರೆಕಾರ್ಡ್ ಮಾಡಬೇಕು ಎಂದು ಒತ್ತಾಯಿಸಿದರು.

ಹುಚ್ಚೇಗೌಡ ಅವರು, ನಾಗಮಂಗಲ ತಾಲ್ಲೂಕಿನಲ್ಲಿ ಬರದ ಛಾಯೆ ಇದೆ.  ಬೆಳೆ ಒಣಗುತ್ತಿದೆ. ಈ ಬಗೆಗೆ ಚರ್ಚೆ ನಡೆಸಬೇಕು. ಸಭೆ ಕರೆದು ಅಧ್ಯಕ್ಷರೇ ಗೈರು ಹಾಜರಾಗಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಜೆಡಿಎಸ್‌ನ ಡಾ. ಶಂಕರೇಗೌಡ ಅವರು, `ಇದು ಸಭೆಯನ್ನು ನಡೆಸುವ ರೀತಿಯೇ? ಅಧ್ಯಕ್ಷರು ಮತ್ತು ಉಪಾಧ್ಯಕ್ಷರೇ ಸಭೆಗೆ ಬಂದಿಲ್ಲ~ ಎಂದು ಟೀಕಿಸಿದರು.

ಗೈರು: ವಿವರಣೆ ನೀಡುವ ಸೌಜನ್ಯವೂ ಇಲ್ಲದ ಜೆಡಿಎಸ್!
ಮಂಡ್ಯ: ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಜೆಡಿಎಸ್‌ನ ಹೆಚ್ಚಿನ ಸದಸ್ಯರು ಜಿಪಂ ಸಾಮಾನ್ಯ ಸಭೆಗೆ ಗೈರು ಹಾಜರಾಗಲು ಕಾರಣವೇನು?

ಸದಸ್ಯರೊಬ್ಬರ ಪ್ರಕಾರ, ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಜಿಪಂ ಅಧ್ಯಕ್ಷರು ಹೋಗಬೇಕೋ, ಬೇಡವೋ ಎಂಬುದು  ನಿರ್ಧಾರವಾಗಿರಲಿಲ್ಲ. ಈ ಗೊಂದಲ ಅವರ ಗೈರು ಹಾಜರಿಗೆ ಕಾರಣ.

ಇದನ್ನು ತಳ್ಳಿಹಾಕಿದ ಇನ್ನೊರ್ವ ಸದಸ್ಯರು, ಅಧ್ಯಕ್ಷ ಶಿವಣ್ಣ ಅವರ ಕಾರ್ಯವೈಖರಿ ಬಗೆಗೆ ಸದಸ್ಯರಿಗೆ ಅಸಮಾಧನವಿದೆ. ಈ ಬಗೆಗೆ ವರಿಷ್ಠರಿಗೂ ದೂರು ನೀಡಲಾಗಿದೆ. ಅಧ್ಯಕ್ಷರ ವಿರುದ್ಧದ ಅಸಮಾಧಾನ ಹೊರಹಾಕುವ ಸಲುವಾಗಿಯೇ ಸಭೆಗೆ ಸದಸ್ಯರುಗೈರು ಹಾಜರಾಗಿದ್ದರು.

ಪಕ್ಷದ ವರ್ಚಸ್ಸು ಕುಗ್ಗುವುದನ್ನು ತಪ್ಪಿಸಲು ಸಂಸದ ಚಲುವರಾಯಸ್ವಾಮಿ ಅವರು ದೂರವಾಣಿ ಮೂಲಕವೇ ಸದಸ್ಯರನ್ನು ಸಮಾಧಾನ ಪಡಿಸಿ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದರೂ, ಆ ಯತ್ನವು ಯಶ ನೀಡಲಿಲ್ಲ ಎಂದು ತಿಳಿದುಬಂದಿದೆ.

ಆದರೆ ಮಳೆ ಕೊರತೆ, ಒಣಗುತ್ತಿರುವ ಬೆಳೆ ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸ ಬೇಕಾಗಿದ್ದ ಸಭೆಗೆ ಗೈರುಹಾಜರಾದ ಬಗೆಗೆ ವಿವರಣೆ ನೀಡುವ ಕನಿಷ್ಠ ಸೌಜನ್ಯವು ಜೆಡಿಎಸ್ ಪಕ್ಷದವರಿಗೆ ಇಲ್ಲ ಎಂಬ ಅಸಮಾಧಾನ ಕಾಂಗ್ರೆಸ್ ಸದಸ್ಯರಿಂದ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT