ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಸಿಇಒ ವರ್ತನೆಗೆ ಆಕ್ರೋಶ

Last Updated 7 ಜೂನ್ 2011, 10:15 IST
ಅಕ್ಷರ ಗಾತ್ರ

ಸಿಂಧನೂರು: ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಪಂಚಾಯತರಾಜ್ ಎಂಜಿನಿಯರಿಂಗ್ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರಭಾರಿ ಜವಾಬ್ದಾರಿಯನ್ನು ಕಿರಿಯ ಅಧಿಕಾರಿಗಳಿಗೆ ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಆತಂಕವೊಡ್ಡಿದ್ದಾರೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಆಕ್ರೋಶ ವ್ಯಕ್ತಡಿಸಿದರು.

ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಎಂಜಿನಿಯರಿಂಗ್ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಹುದ್ದೆ ಖಾಲಿ ಇದ್ದು ತಮ್ಮ ಹಣತೆಯ ಪ್ರಕಾರ ನಡೆಯುವ ಕಿರಿಯ ಅಧಿಕಾರಿಗಳಿಗೆ ಪ್ರಭಾರಿ ಸ್ಥಾನವನ್ನು ನೀಡುವ ಮೂಲಕ ಸರ್ಕಾರದ ನಿಯಮಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಲ್ಲಂಘಿಸಿದ್ದಾರೆ ಎಂದು ಅವರು ಆಪಾದಿಸಿದರು.

ಈ ಹಿಂದೆ ರಾಯಚೂರಿನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗೆ ಪ್ರಭಾರಿ ಜವಾಬ್ದಾರಿ ನೀಡಿದ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಯೇ ಆಕ್ಷೇಪ ವ್ಯಕ್ತವಾಗಿತ್ತು. ಜಿಲ್ಲಾ ಕೇಂದ್ರದಲ್ಲಿರುವ ಅಧಿಕಾರಿಗೆ ಪ್ರಭಾರಿ ವಹಿಸಿಕೊಡುವುದರಿಂದ ಇಲಾಖೆಯ ಕಾರ್ಯಗಳು ಸುಲಲಿತವಾಗಿ ನಡೆಯುತ್ತವೆ ಎಂದು ಸಮುಜಾಯಿಷಿ ನೀಡಿದ್ದರು. ತದನಂತರ ಅವರನ್ನು ತೆರವುಗೊಳಿಸಿ ಮಾನ್ವಿಯ ಮತ್ತೊಬ್ಬ ಕಿರಿಯ ಅಧಿಕಾರಿಗೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಹುದ್ದೆಯ ಪ್ರಭಾರಿ ಜವಾಬ್ದಾರಿಯನ್ನು ನೀಡಿದ್ದಾರೆ. ಹಿರಿತನ ಹೊಂದಿದ ಅಧಿಕಾರಿಯನ್ನು ಬಿಟ್ಟು ಕಿರಿಯ ಅಧಿಕಾರಿಗೆ ಅಧಿಕಾರ ವಹಿಸಿಕೊಡುವುದರಿಂದ ಕಚೇರಿಯ ಕೆಲಸಗಳಿಗೆ ತೊಂದರೆಯಾಗುತ್ತದೆ. ಹೀಗೆ ನಿಯುಕ್ತಿ ಮಾಡುವುದರಿಂದ ಸರ್ಕಾರದ ನಿಯಮ ಉಲ್ಲಂಘನೆಯಾಗುವುದಿಲ್ಲವೇ ಎಂದು ಕೇಳಿದರೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಚಿವರ ಗಮನಕ್ಕೆ ತಂದು ಮಾನ್ವಿಯ ಎಇಇ ಪ್ರಕಾಶ ಅವರಿಗೆ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾರಣ ಮಂತ್ರಿಗಳಿಗೆ ಪತ್ರ ಬರೆದು ಜಿಲ್ಲೆಯ ಪಂಚಾಯತರಾಜ್, ಎಂಜಿನಿಯರಿಂಗ್ ಇಲಾಖೆಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು. ಅಲ್ಲದೇ ಈ ಕುರಿತು ಸಚಿವರನ್ನೂ ತಾವು ಸಂಪರ್ಕಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೆಂದು ಹೇಳಿದ್ದಾರೆ. ಆದರೆ ಸಿಇಒ ತಮ್ಮ ಮೂಗಿನ ನೇರಕ್ಕೆ ಆಡಳಿತ ನಿರ್ವಹಿಸುತ್ತಾ ಸಾರ್ವಜನಿಕರಿಗೆ ಮತ್ತು ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆಂದು ಶಾಸಕ ನಾಡಗೌಡ ಆರೋಪಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಸಿಂಧನೂರು ತಾಲ್ಲೂಕಿನ ದೇವರಗುಡಿ ಸೇತುವೆ ನಿರ್ಮಾಣದ ಕಾಮಗಾರಿ ನಿರ್ವಹಿಸಲು ಒಂದುವರ್ಷದ ಹಿಂದೆಯೇ ಗುತ್ತಿಗೆದಾರರಿಗೆ ಆದೇಶ ನೀಡಿದ್ದರೂ ಇಲ್ಲಿಯವರೆಗೆ ಕಾಮಗಾರಿ ಅನುಷ್ಠಾನಗೊಳ್ಳದಂತಾಗಿದೆ. ಹಾಗೆಯೇ ರಸ್ತೆ ನಿರ್ಮಾಣದ ಕಾರ್ಯವೂ ನೆನೆಗುದಿಗೆ ಬಿದ್ದಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಪದ್ದಮ್ಮ ಕರಿಯಪ್ಪ, ಉಪಾಧ್ಯಕ್ಷ ಎಂ.ಡಿ. ನದೀಮ್‌ಮುಲ್ಲಾ, ಮುಖಂಡರಾದ ಅಶೋಕ ಗದ್ರಟಗಿ, ರಸೂಲ್‌ಸಾಬ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT