ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಸೋಲು: ಕಾಂಗ್ರೆಸ್ ಆಕ್ರೋಶ

Last Updated 6 ಅಕ್ಟೋಬರ್ 2012, 10:25 IST
ಅಕ್ಷರ ಗಾತ್ರ

ಚಿಂತಾಮಣಿ: ಶಾಸಕರಿಂದ ಮೊದಲುಗೊಂಡು ಕ್ಷೇತ್ರದ ಎಲ್ಲ ಹಂತದ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಬೇಕು, ಪಕ್ಷದ ಸಹವಾಸವೇ ಬೇಡ ಎಂದು ಪಕ್ಷದ ಮುಖಂಡರು ತೀವ್ರ ಅಕ್ರೋಶ ವ್ಯಕ್ತಪಡಿಸಿದರು.

ಶಾಸಕ ಡಾ.ಎಂ.ಸಿ.ಸುಧಾಕರ್ ಮನೆಯಲ್ಲಿ ಶುಕ್ರವಾರ ತುರ್ತಾಗಿ ಸೇರಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು, ತಾಲ್ಲೂಕಿಗೆ ದೊರಕಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ತಪ್ಪಿಸಲು ಪಕ್ಷದ ಮುಖಂಡರೇ ಕುತಂತ್ರ ನಡೆಸಿದ್ದನ್ನು ತೀವ್ರವಾಗಿ ಖಂಡಿಸಿದರು.

ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಳು ಮಾಡಿದ ಮುಖಂಡರು ಚಿಕ್ಕಬಳ್ಳಾಪುರದಲ್ಲೂ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ. ಕೆಪಿಸಿಸಿ ಮತ್ತು ಎಐಸಿಸಿ ಮುಖಂಡರು ಕೈಕಟ್ಟಿ ಕೂತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಪಕ್ಷದ ಗತಿ ಏನಾಗಿದೆ ಎಂಬುದರ ಅವಲೋಕನ ಮಾಡಿಕೊಳ್ಳಬೇಕು ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೆ ಪಕ್ಷಕ್ಕೆ ಪೂರ್ಣ ಬಹುಮತವಿದ್ದರೂ ಕೇವಲ ಒಬ್ಬರೇ ಸದಸ್ಯರಿದ್ದ ಬಿಜೆಪಿಗೆ ಅಧ್ಯಕ್ಷ ಗಾದಿ ನೀಡಿರುವುದು ಪಕ್ಷವು ಯಾವ ಹಂತ ತಲುಪಿದೆ ಎಂಬುದನ್ನು ಸೂಚಿಸುತ್ತದೆ. ಇದರಿಂದ ಪಕ್ಷದ ಮರ್ಯಾದೆ ಹಾಳಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚಿನ್ನಪ್ಪ, ಕೈವಾರ ಶ್ರಿನಿವಾಸನ್, ಜಂಗಮಶೀಗೆಹಳ್ಳಿ ಮುನಿನಾರಾಯಣಪ್ಪ, ಸಂತೆಕಲ್ಲಹಳ್ಳಿ ಬೈರಪ್ಪ, ರಹಮತುಲ್ಲಾ ಎಂದರು.

ನಗರಸಭೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಬಹುತೇಕ ಚುನಾವಣೆಗಳಲ್ಲಿ ಇದೇ ರೀತಿ ತೊಂದರೆ ನೀಡುತ್ತಿದ್ದಾರೆ. 2007ರಲ್ಲೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಇದೇ ರೀತಿ ಆಯಿತು. ಪಕ್ಷದ ಸದಸ್ಯತ್ವದಿಂದ ಹಿಡಿದು ಎಲ್ಲ ಕೆಲಸಗಳಿಗೆ ನಾವು ಬೇಕು. ಅಧಿಕಾರ ಹಿಡಿಯುವಾಗ ಬೇರೆಯವರು ಬಂದು ಕೂರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದ ಚಿನ್ನಪ್ಪ, ಶಾಸಕರ ಮೇಲಿನ ವೈಯುಕ್ತಿಕ ದ್ವೇಷದಿಂದ ಕೆ.ಎಚ್.ಮುನಿಯಪ್ಪ ಮತ್ತು ವಿ.ಮುನಿಯಪ್ಪ ಕುತಂತ್ರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಯ ನಾಮಪತ್ರಕ್ಕೆ ಕೆಪಿಸಿಸಿ ಸದಸ್ಯರು ಸೂಚಕರಾಗಿದ್ದಾರೆ. ಕೆ.ಎಚ್.ಮುನಿಯಪ್ಪನವರ ಅಣ್ಣನ ಮಗ ಬಿಜೆಪಿಗೆ ಕೈ ಎತ್ತುತ್ತಾರೆ. ಇದರ ಅರ್ಥವೇನು ಎಂದು ಪ್ರಶ್ನಿಸಿದರು.

ಶಾಸಕ ಡಾ.ಸುಧಾಕರ್ ಮಾತನಾಡಿ, ಇದು ಪೂರ್ವ ನಿಯೋಜಿತ ಕೃತ್ಯ. ರಾಜೀನಾಮೆ ನಾಟಕ ಎಲ್ಲರಿಗೂ ಅರ್ಥವಾಗಿದೆ. ಶತಾಯಗತಾಯ ಚಿಂತಾಮಣಿಗೆ ಅಧ್ಯಕ್ಷ ಸ್ಥಾನ ನೀಡಬಾರದು ಎಂಬುದು ಅವರ ಗುರಿ. ಒಂದೊಂದು ಬಾರಿ ಒಬ್ಬೊಬ್ಬರ ಹೆಸರನ್ನು ಹೇಳಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದರು.

ಮುಖಂಡರ ನೋವು ನಮಗೆ ಅರ್ಥವಾಗಿದ್ದರೂ ತಾಳ್ಮೆಯಿಂದ ಕಾಯಬೇಕು. ಅಕ್ಟೋಬರ್ 8 ರಂದು ಕ್ಷೇತ್ರದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಕರೆದು, ಅಭಿಪ್ರಾಯಗಳನ್ನು ಪಡೆದು ತೀರ್ಮಾನ ಕೈಗೊಳ್ಳೋಣ. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT