ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ.ನೂತನ ಅಧ್ಯಕ್ಷರ ಆಯ್ಕೆ

Last Updated 18 ಅಕ್ಟೋಬರ್ 2012, 9:50 IST
ಅಕ್ಷರ ಗಾತ್ರ

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಅದರಗುಂಚಿ ಕ್ಷೇತ್ರದ ರತ್ನವ್ವ ಗದಿಗೆಪ್ಪ ಕಳ್ಳಿಮನಿ, ಉಪಾಧ್ಯಕ್ಷರಾಗಿ ಶಲವಡಿ ಕ್ಷೇತ್ರದ ಫಕ್ಕೀರಪ್ಪ ಯಲ್ಲಪ್ಪ ಜಕ್ಕಣ್ಣವರ ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿಯ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಅವರು ಇವರಿಬ್ಬರ ಆಯ್ಕೆಯನ್ನು ಘೋಷಿಸಿದರು.

ಬೆಳಿಗ್ಗೆ 11ಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಆಯ್ಕೆಯು ಮೊದಲೇ ತೀರ್ಮಾನ ವಾಗಿದ್ದರಿಂದ ಬೇರೆ ಸದಸ್ಯರು ನಾಮಪತ್ರ ಸಲ್ಲಿಸಲಿಲ್ಲ. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ 10 ತಿಂಗಳು. ನಿಟಕಪೂರ್ವ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ 20 ತಿಂಗಳದಾಗಿತ್ತು. 10 ತಿಂಗಳ ಬಳಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಯಲ್ಲಪ್ಪ ದಾಸನಕೊಪ್ಪ ಅವರನ್ನು ಆಯ್ಕೆ ಮಾಡಲು ಬುಧವಾರ ಬೆಳಿಗ್ಗೆ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ರತ್ನವ್ವ ಹಾಗೂ ಯಲ್ಲಪ್ಪ ಅವರ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪಕ್ಷದ ವರಿಷ್ಠರ ಒಲವು ಯಲ್ಲಪ್ಪ ದಾಸನಕೊಪ್ಪ ಅವರ ಮೇಲಿತ್ತಾದರೂ ಕುಂದಗೋಳ ಶಾಸಕ ಎಸ್.ಐ. ಚಿಕ್ಕನಗೌಡರ ಅವರು ವರಸೆಯಲ್ಲಿ ತಮಗೆ ಮಗಳಾಗುವ (ಅಳಿಯ ಗದಿಗೆಪ್ಪ ಅವರ ಪತ್ನಿ) ರತ್ನವ್ವ ಅವರನ್ನೇ ಅಧ್ಯಕ್ಷೆಯನ್ನಾಗಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು.

ಅಂತಿಮವಾಗಿ ಸಂಸದ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕಿ ಸೀಮಾ ಮಸೂತಿ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಸಂಪರ್ಕಿಸಿ ಈ ಆಯ್ಕೆಗೆ ನಿರ್ದೇಶನ ಕೋರಿದರು. ಶೆಟ್ಟರ ಅವರ ಒಪ್ಪಿಗೆ ದೊರೆತ ಮೇಲೆ ರತ್ನವ್ವ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ನಿರ್ಧಾರಕ್ಕೆ ಬರಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT