ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ.ಸಭೆಯಲ್ಲಿ ಸದಸ್ಯರ ಆರೋಪ

Last Updated 22 ಫೆಬ್ರುವರಿ 2012, 8:30 IST
ಅಕ್ಷರ ಗಾತ್ರ

ಹಾವೇರಿ: ಬಿ.ಇಡಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲೆಗೆ ಬಡ್ತಿ ನೀಡುವಲ್ಲಿ ಸಾಕಷ್ಟು ಗೋಲ್‌ಮಾಲ್ ನಡೆಸಲಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಜಿ.ಪಂ. ಸದಸ್ಯರು ಮಂಗಳವಾರ ಜಿ.ಪಂ.ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.

ಜಿ.ಪಂ. ಸದಸ್ಯೆ ಬಸಮ್ಮ ಅಬಲೂರು ಅವರು, ಶಿಕ್ಷಣ ಇಲಾಖೆಯಲ್ಲಿ ಬಿ.ಇಡಿ.ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ ಪ್ರಕ್ರಿಯೆ ನಡೆದಿಲ್ಲ ಏಕೆ? ಎಂದು ಪ್ರಶ್ನಿಸಿದರು.ಇದಕ್ಕೆ ಪೂರಕವಾಗಿ ಸದಸ್ಯ ಶಿವಕುಮಾರ ಮುದ್ದಪ್ಪಳವರ ಅವರು ಸಹ 2009ರಿಂದ ಜಿಲ್ಲೆಯಲ್ಲಿ ಬಡ್ತಿ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಅರ್ಹ ಶಿಕ್ಷಕರು ಬಡ್ತಿಯಿಂದ ವಂಚಿತರಾಗಿದ್ದಾರೆ.

ಹಿಂದಿನ ವರ್ಷದ ಬಡ್ತಿಯನ್ನು ಬಿಟ್ಟು ಹೊಸ ಬಡ್ತಿ ಪಟ್ಟಿ ತಯಾರಿಸುವ ಮೂಲಕ ಉದ್ದೇಶಪೂರ್ವಕವಾಗಿಯೇ ಹಿರಿಯ ಪದವೀಧರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಪಾದಿಸಿದರು.ಇದಕ್ಕೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ  ಎಸ್.ಬಿ.ಕೊಡ್ಲಿ ಅವರು, 2008-09 ರಲ್ಲಿ 60 ಜನರಿಗೆ ಬಡ್ತಿ ನೀಡಲಾಗಿದೆ. 2009-10 ರಲ್ಲಿ ಯಾವುದೇ ಬಡ್ತಿ ನೀಡಲಾಗಿಲ್ಲ. 2010-11 ರಲ್ಲಿ 16 ಜನರಿಗೆ ಬಡ್ತಿ ನೀಡಿ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದರಿಂದ ಆ ಪಟ್ಟಿಯಲ್ಲಿದ್ದವರಿಗೆ ಬಡ್ತಿ ನೀಡಲಾಗಲಿಲ್ಲ ಎಂದು ತಿಳಿಸಿದರು.

ಬೇರು ಬಿಟ್ಟ ಸಿಬ್ಬಂದಿ:
ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಚೇರಿಯಲ್ಲಿ ಕಳೆದ 10-15 ವರ್ಷಗಳಿಂದ ಕೆಲ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಅವರೇ ಬಡ್ತಿ ಪ್ರಕ್ರಿಯೆ ತಡೆ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸರ್ಕಾರದ ನಿಯಮಾವಳಿ ಮೀರಿ ಬಡ್ತಿ ಪ್ರಕ್ರಿಯೆ ನಡೆಸಲಾಗುತ್ತಿದೆ.

ಕಳೆದ ಒಂದು ವರ್ಷದಿಂದ ಈ ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ತನ್ನ ಪರವಾಗಿ ಇಲಾಖೆ ಈವರೆಗೆ ಒಂದೇ ಒಂದು ಅರ್ಜಿ ಸಲ್ಲಿಸಿಲ್ಲ. ಗೋಲ್‌ಮಾಲ್ ನಡೆಸುವ ಉದ್ದೇಶದಿಂದಲೇ ಈ ಕೆಲಸ ಮಾಡಲಾಗಿದೆ ಎಂದು ಸದಸ್ಯ ಶಿವಕುಮಾರ ಆರೋಪಿಸಿದರು.ತಕ್ಷಣವೇ ಅಲ್ಲಿನ ಸಿಬ್ಬಂದಿಯನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿ, ಅನ್ಯಾಯಕ್ಕೊಳಗಾದ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಸದಸ್ಯೆ ಬಸಮ್ಮ ಅಬಲೂರ ಅವರು ಸಹ 2008ರಿಂದಲೇ ಬಡ್ತಿ ಪ್ರಕ್ರಿಯೆ ನಡೆಸಬೇಕೆಂದು ಆಗ್ರಹಿಸಿದರು.
ಸದಸ್ಯರ ಆಗ್ರಹಕ್ಕೆ ಮಣಿದ ಜಿ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ ಅವರು, ಇಲಾಖೆಯಲ್ಲಿನ ಸಿಬ್ಬಂದಿ ವರ್ಗಾವಣೆಗೆ ಸಮ್ಮತಿ ಸೂಚಿಸಿದರಲ್ಲದೇ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಅವರಿಗೆ ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT