ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಪಿಎಸ್ ಎಂಬ ದಾರಿದೀಪ

Last Updated 24 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಇತ್ತೀಚೆಗೆ ಗೆಳೆಯರೊಬ್ಬರು ಅಮೆರಿಕದ ಷಿಕಾಗೋದಿಂದ ಕರೆ ಮಾಡಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಅಮೆರಿಕಾಕ್ಕೆ ಹೋಗಿದ್ದ ಅವರು ನಯಾಗರ ಜಲಪಾತಕ್ಕೆ ಹೋದ ಸಂದರ್ಭವನ್ನು ಹಂಚಿಕೊಂಡರು. ಅಮೆರಿಕದಲ್ಲಿ ಅವರು ಕಾರಿನಲ್ಲೇ ಸುಮಾರು 2,500 ಮೈಲು ದೂರ ಪ್ರಯಾಣ ಮಾಡಿದ್ದನ್ನು ವಿವರಿಸಿದರು. ಈ ಸಂದರ್ಭದಲ್ಲಿ ಅವರು ಜಿಪಿಎಸ್ ಎಂಬ ಸಾಧನ ಬಳಸಿ ಎಲ್ಲಿಯೂ ದಾರಿತಪ್ಪದೆ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ್ದನ್ನೂ ತಿಳಿಸಿದರು.

ಇದು ದೂರದ ಅಮೆರಿಕದ ಮಾತಾದರೆ, ಇನ್ನು ಬೆಂಗಳೂರಿನಲ್ಲಿ ನಡೆದ ಒಂದು ಪ್ರಸಂಗ. ಬನಶಂಕರಿಯಿಂದ ವೈಟ್‌ಫೀಲ್ಡ್‌ಗೆ ಸಮೀಪದ, ಟ್ರಾಫಿಕ್ ಇಲ್ಲದ ರಸ್ತೆ ಯಾವುದು ಎಂದು ಯಾರಾದರೊಬ್ಬರನ್ನು ಕೇಳಿದರೆ, ಅರೆ ಕ್ಷಣ ಯೋಚಿಸಿ ‘ನೇರವಾಗಿ ಹೋಗಿ, ಸರ್ಕಲ್‌ನಲ್ಲಿ ರೈಟ್‌ಗೆ ತಗೊಳ್ಳಿ, ಮುಂದೆ ದೊಡ್ಡ ನೀಲಿ ಕಲರ್ ಬಿಲ್ಡಂಗ್ ಬರ್ತದೆ, ಅಲ್ಲಿ ಲೆಫ್ಟ್ ತಗೊಳ್ಳಿ, ನೇರವಾಗಿ ಹೋಗಿ’ ಎನ್ನುವ ಗೊಂದಲಕಾರಿ ಉತ್ತರ ಬರುತ್ತದೆ. ಅಥವಾ ಏನು ಹೇಳಬೇಕೋ ತೋಚದೆ, ‘ಸಾರ್... ಕೇಳ್ತಾ ಹೋಗಿ ಸರ್. ಯಾರಾದ್ರೂ ಹೇಳ್ತಾರೆ’ ಎಂಬ ಉತ್ತರವೂ ಸಿಗಬಹುದು.

ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರ ‘ಮಾರ್ಗದರ್ಶಕ’ನಾಗಿ ಕಾರ್ಯ ನಿರ್ವಹಿಸುವುದು ಜಿಪಿಎಸ್ ವ್ಯವಸ್ಥೆ. ಗ್ಲೋಬಲ್ ಪೊಸಿಷನ್ ಸಿಸ್ಟಮ್ ಎಂಬ ಈ ಉಪಗ್ರಹ ಸಾಧನ ಪರಿಚಯವಿಲ್ಲದ ಊರಿನ ಮಾರ್ಗದರ್ಶಕನಿದ್ದಂತೆ. ವಿಳಾಸ ಕೇಳಿದರೆ ಮನೆಯವರೆಗೂ ಬಿಟ್ಟುಬರುವಂಥ ಸಹೃದಯಿಗಳಿರುವ ಬೆಂಗಳೂರಿನಲ್ಲೂ ಈಗ ಜಿಪಿಎಸ್ ಕಾಲಿಟ್ಟಿದೆ. ಜಾಗತಿಕ ಮಟ್ಟದಲ್ಲಿ ‘ಬ್ಯಾಂಗಲೂರ್’ ಎನಿಸಿಕೊಳ್ಳುತ್ತಾ ಹೊಸ ಹೊಸ ತಂತ್ರಜ್ಞಾನಗಳ ಅಳವಡಿಸಿಕೆಯಲ್ಲಿ ಮುಂಚೂಣಿಯಲ್ಲಿರುವ ಈ ಸಿಲಿಕಾನ್ ನಗರಿಯಲ್ಲಿ ಈಗ ಜಿಪಿಎಸ್ ಜಾಲ ವ್ಯಾಪಿಸುತ್ತಿದೆ.

ಈ ಹಿಂದೆ ಕೇವಲ ವಿಮಾನಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಜಿಪಿಎಸ್ ಈಗ ರಸ್ತೆ ಮೇಲೆ ಸಂಚರಿಸುವ ವಾಹನಗಳಿಗೂ ವಿಸ್ತರಿಸಿಕೊಂಡಿದೆ. ತಂತ್ರಜ್ಞಾನದ ಅಭಿವೃದ್ಧಿಯಾಗುತ್ತಿದ್ದಂತೆ ಪರಿಸರ, ಕೃಷಿ, ಹವಾಮಾನ, ವಿಮಾನ, ರಸ್ತೆ ಹಾಗೂ ರೈಲು ಸಾರಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ಈಗಾಗಲೆ ಇದು ಪ್ರಸಿದ್ಧಿಯಾಗಿದೆ. ಇಷ್ಟೇ ಏಕೆ, ನೂತನ ಜಿಪಿಎಸ್ ವ್ಯವಸ್ಥೆ ಇರುವ ಸಾಧನವೊಂದು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯವಾಗಿದೆ. ವಾಹನ ಕಳೆದು ಹೋದಲ್ಲಿ ತಮ್ಮ ವಾಹನ ಇರುವ ಸ್ಥಳದ ಮಾಹಿತಿ, ಅಲ್ಲಿಗೆ ಹೋಗಬೇಕಾದ ಹಾದಿಯ ಮಾಹಿತಿಯನ್ನು ಕೂಡ ನೀಡುವಷ್ಟು ಈ ತಂತ್ರಜ್ಞಾನ ಬೆಳೆದಿದೆ.

ಜಿಪಿಎಸ್ ವ್ಯವಸ್ಥೆಗೆ ಮೂರು ದಶಕಗಳ ಇತಿಹಾಸವಿದೆ. ಆದರೆ ಜನಸಾಮಾನ್ಯರಿಗೆ ಅದರ ಉಪಯೋಗ ತಿಳಿದದ್ದು ಮೊಬೈಲ್ ಹಾಗೂ ವಾಹನಗಳಲ್ಲಿ ಬಂದ ಜಿಪಿಎಸ್ ನ್ಯಾವಿಗೇಷನ್ ಮೂಲಕವೇ. ಉಪಗ್ರಹದ ಮೂಲಕ ಕಾರ್ಯ ನಿರ್ವಹಿಸುವ ಜಿಪಿಎಸ್ ವ್ಯಕ್ತಿ, ವಾಹನದಲ್ಲಿರುವ ಸಾಧನದ ಸ್ಥಳ, ಅಲ್ಲಿನ ಹವಾಗುಣ, ಸಾಗುತ್ತಿರುವ ವೇಗ ಮಾಹಿತಿಯನ್ನು ಪಡೆದು ಅದರ ಸುತ್ತಮುತ್ತಲಿನ ಮಾಹಿತಿ ಹಾಗೂ ಸಾಗಬೇಕಾದ ಹಾದಿಯ ವಿವರಗಳನ್ನು ನೀಡುತ್ತದೆ. ಇವುಗಳು ರೇಡಿಯೋ ತರಂಗಾಂತರದ ಮೂಲಕ ಉಪಗ್ರಹದಿಂದ ಸಾಧನಕ್ಕೆ ರವಾನೆಯಾಗುತ್ತದೆ.

ಸಾಧನ
ಜಿಪಿಎಸ್ ಸಾಧನಗಳು ಈಗಾಗಲೇ ಬೆಂಗಳೂರಿನ ಹಲವಾರು ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಲಭ್ಯವಿದೆ. ಮ್ಯಾಪ್ ಮೈ ಇಂಡಿಯಾ, ಗಾರ್ಮಿಣ್ ಸೇರಿದಂತೆ ಜಿಪಿಎಸ್ ನ್ಯಾವಿಗೇಷನ್ ಸೌಲಭ್ಯ ನೀಡುವ ಹಲವಾರು ಕಂಪೆನಿಗಳ ಸಾಧನಗಳು ಮಾರುಕಟ್ಟೆಯಲ್ಲಿವೆ. ಇವುಗಳಲ್ಲಿ ಜಿಪಿಎಸ್ ನ್ಯಾವಿಗೇಷನ್ ಜತೆಗೆ ಸಂಗೀತ ಹಾಗೂ ಚಲನಚಿತ್ರಗಳ ವೀಕ್ಷಣೆ ಸೌಲಭ್ಯ, ಹ್ಯಾಂಡ್ಸ್‌ಫ್ರೀ ಹಾಗೂ ಹಿಂಬದಿ ಕ್ಯಾಮೆರಾ ವ್ಯವಸ್ಥೆಯೂ ಲಭ್ಯ.

ಈ ಜಿಪಿಎಸ್ ಸಾಧನಗಳಲ್ಲಿ ಭಾರತದ 800ಕ್ಕೂ ಅಧಿಕ ನಗರಗಳು, ಐದು ಲಕ್ಷಕ್ಕೂ ಹೆಚ್ಚು ಹಳ್ಳಿಗಳು, 30 ಲಕ್ಷಕ್ಕೂ ಅಧಿಕ ಪಾಯಿಂಟ್ ಆಫ್ ಇಂಟ್ರಸ್ಟ್ (ಎಟಿಎಂ, ಪೆಟ್ರೋಲ್ ಬಂಕ್, ಹೋಟೆಲ್ ಇತ್ಯಾದಿಗಳ ಮಾಹಿತಿ)ಗಳು ಎಂಟು ಭಾಷೆಗಳಲ್ಲಿ ಲಭ್ಯ. ಇವುಗಳ ಬೆಲೆ 7500 ಸಾವಿರದಿಂದ 20 ಸಾವಿರ ರೂಪಾಯಿಗಳವರೆಗೂ ಲಭ್ಯ.

ಹೇಗೆ ಕಾರ್ಯ?
ಮೊಬೈಲ್‌ಗಳ ಮೂಲಕ ಜಿಪಿಎಸ್‌ನ ಬಳಕೆ ಹಾಗೂ ವಾಹನಗಳಲ್ಲಿ ಅಳವಡಿಸುವ ಜಿಪಿಎಸ್ ಸಾಧನಗಳು ಈಗ ಬೆಂಗಳೂರಿನಲ್ಲಿ ಪ್ರಚಲಿತ. ಮೊಬೈಲ್ ಫೋನ್‌ಗಳಾದಲ್ಲಿ ಆಯಾಯ ಸೇವಾದಾರರು ತಮ್ಮಲ್ಲಿರುವ ಜಿಪಿಎಸ್ ಮಾಹಿತಿಯನ್ನು ನಿಗದಿತ ದರದಲ್ಲಿ ಗ್ರಾಹಕರಿಗೆ ನೀಡುತ್ತಾರೆ. ವ್ಯಕ್ತಿ ಇರುವ ಸ್ಥಳದ ಮಾಹಿತಿ ಪಡೆದು ಅದರ ಸುತ್ತಮುತ್ತಲಿನ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ನೀಡುವ ಸಾಮರ್ಥ್ಯ ಇದಕ್ಕಿದೆ.

ಉದಾಹರಣೆಗೆ ಮೆಜೆಸ್ಟಿಕ್‌ನಲ್ಲಿ ನಿಂತು ‘ಇಲ್ಲಿ ಎಟಿಎಂ’ ಎಂಬ ಗುಂಡಿಯನ್ನು ಒತ್ತಿದರೆ ತಾವು ಇರುವ ಸ್ಥಳದ ಸುತ್ತಮುತ್ತ ಯಾವ ಬ್ಯಾಂಕ್‌ಗಳ ಎಟಿಎಂಗಳಿವೆ; ಅವುಗಳು ಇರುವ ಸ್ಥಳದಿಂದ ಎಷ್ಟು ದೂರದಲ್ಲಿವೆ ಎಂಬ ಮಾಹಿತಿಯನ್ನು ನೀಡುತ್ತದೆ. ಇವುಗಳಲ್ಲಿ ನಿಮಗೆ ಅನುಕೂಲವಾದ ಎಟಿಎಂ ಆಯ್ಕೆ ಮಾಡಿಕೊಂಡಲ್ಲಿ ಅಲ್ಲಿಗೆ ಸುಲಭವಾಗಿ ತಲುಪುವ ದಾರಿ ಯಾವುದು ಎಂಬಿತ್ಯಾದಿ ಮಾಹಿತಿಗಳು ಕ್ಷಣಮಾತ್ರದಲ್ಲಿ ಅಂಗೈಯಲ್ಲೇ ಲಭ್ಯ.

ಇದೇ ಮಾದರಿಯಲ್ಲಿ ಹೋಟೆಲ್, ಬಾರ್, ಪೆಟ್ರೋಲ್ ಬಂಕ್, ಪ್ರಸಿದ್ಧ ಸ್ಥಳಗಳು ಹಾಗೂ ಅವುಗಳ ಮಾಹಿತಿ ಇತ್ಯಾದಿ ಮಾಹಿತಿಗಳನ್ನು ನೀಡವ ಸಾಮರ್ಥ್ಯ ಜಿಪಿಎಸ್ ವ್ಯವಸ್ಥೆಯಲ್ಲಿದೆ. ಇದು ಒಂದು ಬಗೆಯದ್ದಾದರೆ, ಮತ್ತೊಂದು ನಾವಿಕನಂತೆ ಕೆಲಸ ನಿರ್ವಹಿಸಲಿದೆ.ಇದರಲ್ಲಿ ಬೆಂಗಳೂರಿಗೆ ಬರುವವರು ಬನಶಂಕರಿಗೆ ಹೋಗಬೇಕೆಂದರೆ, ಅಲ್ಲಿಯ ವಿಳಾಸ ನೀಡಿದರೆ ಸಾಕು.ನಕ್ಷೆಯೊಂದಿಗೆ ಸಾಗಬೇಕಾದ ಹಾದಿ, ಕ್ರಮಿಸಲು ಹಿಡಿಯುವ ಸಮಯ, ಒಟ್ಟು ದೂರ ಪ್ರತಿಯೊಂದು ವಿವರಗಳನ್ನೂ ಜಿಪಿಎಸ್ ನೀಡಲಿದೆ. ಇಷ್ಟೇ ಅಲ್ಲದೆ, ಸಾಗುತ್ತಾ ಹೋದಂತೆ ಮುಂದೆ ಕ್ರಮಿಸಬೇಕಾದ ರಸ್ತೆಯ ಮಾಹಿತಿಯನ್ನೂ ನೀಡುತ್ತಾ ನಿಮ್ಮೊಂದಿಗೆ ಸಾಗುವಷ್ಟು ವೇಗ ಇದರಲ್ಲಿದೆ.

ಇತ್ತೀಚಿನ ಮೊಬೈಲ್‌ಗಳಲ್ಲಿ ಇಂಥದ್ದೊಂದು ಸೌಲಭ್ಯ ಅಳವಡಿಸಲಾಗಿದೆ. ಜತೆಗೆ ದುಬಾರಿ ಕಾರುಗಳು ಜಿಪಿಎಸ್ ಜತೆಗೆ ಲಭ್ಯ. ಇಷ್ಟೇ ಅಲ್ಲದೆ, ವಾಹನಗಳಿಗಾಗಿ ಜಿಪಿಎಸ್ ಸೌಲಭ್ಯವುಳ್ಳ ಸಾಧನವೂ ಮಾರುಕಟ್ಟೆಯಲ್ಲಿವೆ. ಇವಿಷ್ಟು ಭೂಮಿಯ ಮೇಲಿನ ಮಾತಾದರೆ, ಇನ್ನು ಜಿಪಿಎಸ್ ಬಳಸಿ ಆಕಾಶದಲ್ಲಿ ಕಣ್ಣಿಗೆ ಕಾಣದ ನಕ್ಷತ್ರ ಪುಂಜಗಳು, ನೈಸರ್ಗಿಕ ಉಪಗ್ರಹಗಳು, ಗ್ರಹಗಳು ಇರುವ ನಿಖರವಾದ ಮಾಹಿತಿ ಪಡೆಯುವ ವ್ಯವಸ್ಥೆಯನ್ನೂ ಸಹ ಈಗ ಗೂಗಲ್ ಪರಿಚಯಿಸಿದೆ.

ಈಗಾಗಲೇ ಬೆಂಗಳೂರಿನ ಅನೇಕ ಖಗೋಳಶಾಸ್ತ್ರದ ಆಸಕ್ತರು ಇಂಥ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಜತೆಗೆ ಇಂಥದ್ದೊಂದು ಅಪ್ಲಿಕೇಷನ್ ಮೂಲಕ ಯುಗಾದಿ ಹಾಗೂ ಈದ್ ಸಂದರ್ಭದಲ್ಲಿ ಸೂಕ್ಷ್ಮ ಕಣ್ಣಿನಿಂದ ಚಂದ್ರನ ಹುಡುಕುವ ಗೋಜಿಲ್ಲ.ಮೊಬೈಲನ್ನು ಆಕಾಶದತ್ತ ಮುಖ ಮಾಡಿ ಚಂದ್ರನನ್ನು ಹುಡುಕಿದರೆ ಈಗ ಯಾವ ದಿಕ್ಕಿನಲ್ಲಿದ್ದಾನೆ ಎಂಬುದ ನಿಖರ ಮಾಹಿತಿ ಆ ತಕ್ಷಣವೇ ಸಿಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT