ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಪಿಎಸ್‌@ ಆಟೊ

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆಟೊರಿಕ್ಷಾ ಪ್ರಯಾಣಿಕರಿಗೂ, ಚಾಲಕರಿಗೂ ಸಿಹಿಸುದ್ದಿ. ಟ್ಯಾಕ್ಸಿಗಳಲ್ಲಿ ಇರುವಂತೆ ಆಟೊಗಳಲ್ಲಿ ಜಿಪಿಎಸ್ ಸೌಕರ್ಯವನ್ನು ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯೊಂದು ಸಿದ್ಧವಾಗುತ್ತಿದೆ. ಆಟೊ ಎಲ್ಲಿದೆ ಎಂದು ಮೊಬೈಲ್‌ನಲ್ಲೇ ಪತ್ತೆ ಹಚ್ಚಿ, ಇಂತಿಂಥ ವಿಳಾಸಕ್ಕೆ ಆಟೊ ಬರಲಿ ಎಂದು ಸಂದೇಶ ರವಾನಿಸಿದರೆ ನಿಮ್ಮ ಮುಂದೆ ಆಟೊ ಪ್ರತ್ಯಕ್ಷವಾಗುವ ದಿನ ದೂರವಿಲ್ಲ.

ನವದೆಹಲಿಯ ಆಟೊರಿಕ್ಷಾಗಳಿಗೆ ಕಡ್ಡಾಯವಾಗಿ ಗ್ಲೋಬಲ್ ಪ್ರೊಸೆಸಿಂಗ್ ಸಿಸ್ಟಮ್ (ಜಿಪಿಎಸ್) ಅಳವಡಿಸುವಂತೆ ಅಲ್ಲಿನ ಸಾರಿಗೆ ಅಧಿಕಾರಿಗಳು ಮತ್ತೆ ಎಚ್ಚರಿಕೆ ಕೊಟ್ಟಿದ್ದಾರೆ. ನರ್ಸಿಂಗ್ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಇಂತಹುದೊಂದು ಕ್ರಮವನ್ನು ಸಾರ್ವತ್ರಿಕವಾಗಿ ಅನುಷ್ಠಾನಕ್ಕೆ ತರಲು ಅಲ್ಲಿನ ರಾಜ್ಯ ಸರ್ಕಾರ ಮುಂದಾಗಿದೆ. ಸಿಲಿಕಾನ್ ಸಿಟಿಯ ಆಟೊಗಳಿಗೆ ಜಿಪಿಎಸ್ ಜರೂರತ್ತಾಗಿ ಬೇಕು ಎಂದು ಇಲ್ಲಿನವರಿಗೆ ಅನಿಸದೇ ಇರಬಹುದು. ಆದರೆ ಖಾಸಗಿ ಕಂಪೆನಿಯೊಂದು ಆಟೊಗಳಿಗೆ ಜಿಪಿಎಸ್ ಬಲ ಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಆಟೊರಿಕ್ಷಾಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸುವ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವ `ತ್ರಿ ವ್ಹೀಲ್ಸ್ ಯುನೈಟೆಡ್'ನ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಿದು.

‘ತ್ರಿ ವ್ಹೀಲ್ಸ್’ನ ’ನಮ್ಮ ಆಟೊ' ಯೋಜನೆಯಡಿ ಸದಸ್ಯರಾಗಿ 2 ಸ್ಟ್ರೋಕ್ ಎಂಜಿನ್ ಆಟೊರಿಕ್ಷಾಗಳಿಗೆ ಗುಡ್‌ಬೈ ಹೇಳಿ 4 ಸ್ಟ್ರೋಕ್ ಎಂಜಿನ್‌ನ ಸ್ವಂತ ಆಟೊರಿಕ್ಷಾ ಹೊಂದಿರುವ ಚಾಲಕರು ಮೊದಲ ಹಂತದಲ್ಲಿ ಜಿಪಿಎಸ್ ಸೌಲಭ್ಯದ ಅವಕಾಶವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಬಾಡಿಗೆಗೆ ಆಟೊ ಓಡಿಸುವ ಚಾಲಕರಿಂದ ಮತ್ತು ಹಳೆಯ ಆಟೊ ಹೊಂದಿರುವ ಮಾಲೀಕರಿಂದಲೂ ‘ನಮ್ಮ ಆಟೊ’ ಯೋಜನೆಗೆ ದಿನೇದಿನೇ ಉತ್ತಮ ಸ್ಪಂದನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಪಿಎಸ್ ಆಧರಿತ ಆಟೊ ಯೋಜನೆ ಯಶಸ್ವಿಯಾಗುವ ನಿರೀಕ್ಷೆಯಲ್ಲಿದೆ ‘ತ್ರಿ ವ್ಹೀಲ್ಸ್’.

ಆಟೊದಲ್ಲಿ ಜಿಪಿಎಸ್ ಹೇಗೆ?
ನವದೆಹಲಿಯಲ್ಲಿ ಆಟೊರಿಕ್ಷಾಗಳಲ್ಲಿ ಜಿಪಿಎಸ್ ಸಾಧನಗಳನ್ನೇ ಅಳವಡಿಸಿದ್ದರೆ ‘ನಮ್ಮ ಆಟೊ’ಗಳಲ್ಲಿ ಚಾಲಕರು ಜಿಪಿಎಸ್ ಸೌಲಭ್ಯವಿರುವ ಮೊಬೈಲ್ ಫೋನ್ ಹೊಂದಿದ್ದರೆ ಸಾಕು. ಸಾಧನಕ್ಕಾಗಿ ಪ್ರತ್ಯೇಕ ಹಣ ಪಾವತಿಸಬೇಕಾಗಿಲ್ಲ ಎನ್ನುತ್ತಾರೆ, ತ್ರಿ ವ್ಹೀಲ್ಸ್ ಯುನೈಟೆಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಪ್ರಭು.


‘ನಗರದಲ್ಲಿ ಈಗಾಗಲೇ ಕೆಲವು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು ಅದೇ ಮಾದರಿಯಲ್ಲಿ ಆಟೊಗಳಲ್ಲಿಯೂ ಜಿಪಿಎಸ್ ಕಾರ್ಯನಿರ್ವಹಿಸಲಿದೆ. ಇದು ಟ್ರ್ಯಾಕಿಂಗ್ ಮೆಕ್ಯಾನಿಸಂ (ಇದಕ್ಕೆ ಪ್ರಯಾಣಿಕರಲ್ಲಿಯೂ ಜಿಪಿಎಸ್ ಆಧರಿತ ಮೊಬೈಲ್ ಇರಬೇಕು). ಅಂದರೆ ಪ್ರಯಾಣಿಕರು ತಾವಿರುವ ಸ್ಥಳದಿಂದಲೇ ತ್ರಿ ವ್ಹೀಲ್ಸ್ ಯುನೈಟೆಡ್‌ನ ನಮ್ಮ ಆಟೊ ವೆಬ್‌ಸೈಟ್ ಮೂಲಕ ‘ಫೈಂಡ್ ಆನ್ ಆಟೊ’ ಅಂತ ಕ್ಲಿಕ್ ಮಾಡಿದರೆ ನೀವಿರುವ ಸ್ಥಳವೂ, ನಿಮಗೆ ಹತ್ತಿರದಲ್ಲಿರುವ, ‘ನಮ್ಮ ಆಟೊ’ಗಳೂ ಸ್ಕ್ರೀನ್‌ನಲ್ಲಿ ಡಿಸ್‌ಪ್ಲೇ ಆಗುತ್ತವೆ.

ಜತೆಗೆ, ರೈಟ್ ನೌ (ತಕ್ಷಣ) ಮತ್ತು ಲೇಟರ್ (ನಂತರ) ಎಂಬ ಎರಡು ಆಯ್ಕೆಗಳೂ ಇರುತ್ತವೆ. ಇದರಲ್ಲಿ ‘ತಕ್ಷಣ’ ಎಂದು ಕ್ಲಿಕ್ ಮಾಡಿದರೆ ಇಂತಿಷ್ಟು ನಿಮಿಷದೊಳಗೆ ಆಟೊ ನಿಮ್ಮಲ್ಲಿಗೆ ತಲುಪುತ್ತದೆ ಎಂಬ ಸಂದೇಶ ನಿಮಗೆ ಹತ್ತಿರದಲ್ಲಿರುವ ಆಟೊ ಚಾಲಕನ ಸಂಖ್ಯೆಯಿಂದ ಬರುತ್ತದೆ. ಅದನ್ನು ನೀವು ‘ಅಸ್ಸೆಪ್ಟ್’ ಕ್ಲಿಕ್ ಮಾಡಿದರೆ ಮೊದಲೇ ಹೇಳಿದ ಅವಧಿಯೊಳಗೆ ಆಟೊ ತಲುಪುತ್ತದೆ. ‘ಲೇಟರ್’ ಅಂತ ಕ್ಲಿಕ್ ಮಾಡಿದರೆ ಎಷ್ಟು ಸಮಯದ ನಂತರ ಎಂಬ ಆಯ್ಕೆಗೆ ಉತ್ತರಿಸಿ ನಿಮಗೆ ಬಂದ ಪ್ರತಿಕ್ರಿಯೆಗೆ ಮತ್ತೆ ಉತ್ತರಿಸಿದರೆ ನೀವು ಹೇಳಿದ ಸಮಯಕ್ಕೆ ಆಟೊ ಬರುತ್ತದೆ ಎಂದು ರಮೇಶ್ ಪ್ರಭು ಮಾಹಿತಿ ನೀಡುತ್ತಾರೆ.

ಜಿಪಿಎಸ್ ಆಟೊ ಬೆಂಗಳೂರಿನ ಧಾವಂತದ ಬದುಕಿಗೆ ಬಹಳ ಸಹಕಾರಿ. ಪ್ರತಿಯೊಂದು ಕ್ಷಣವನ್ನೂ ಅಳೆದು ತೂಗಿ ಖರ್ಚು ಮಾಡುವ ‘ಅಲಾರ್ಮ್’ ಬದುಕು ನಮ್ಮದು. ಹೀಗಿರುವಾಗ ಆಟೊಗಾಗಿ ಅಲೆದಾಡುವ, ಹತ್ತಾರು ಆಟೊಗಳನ್ನು ವಿಚಾರಿಸುವ, ಅವರಿಂದ ನಕಾರಾತ್ಮಕ ಅಥವಾ ಚೌಕಾಶಿಯ ಚರ್ಚೆಗಳಿಗೆ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸುತ್ತದೆ ಜಿಪಿಎಸ್ ಎಂಬುದು ಅವರ ಲೆಕ್ಕಾಚಾರ.

ಆಟೊಗಳಿಗೆ ಜಿಪಿಎಸ್ ಸೌಲಭ್ಯ ಅಳವಡಿಸಲು ಕನಿಷ್ಠ 700ರಿಂದ 800 ಆಟೊರಿಕ್ಷಾಗಳಾದರೂ ನಮ್ಮ ಆಟೊ ಯೋಜನೆಗೆ ಒಳಪಡಬೇಕು. ಸದ್ಯ ಈ ಪ್ರಮಾಣ 500ರ ಆಸುಪಾಸಿನಲ್ಲಿದೆ. ನಮ್ಮ ಯೋಜನೆಗಳಿಂದ ಆಕರ್ಷಿತರಾಗಿ ಹೊಸ ಸದಸ್ಯರು ಸೇರ್ಪಡೆಯಾಗುತ್ತಿದ್ದಾರೆ. ಈಗಾಗಲೇ ಸ್ವಂತ ಆಟೊ ಹೊಂದಿರುವವರು, ಬಾಡಿಗೆ ಆಧಾರದಲ್ಲಿ ಆಟೊ ಓಡಿಸುತ್ತಿರುವ ಚಾಲಕರೂ `ನಮ್ಮ ಆಟೊ'ಗೆ ಬರುತ್ತಿರುವುದು ಗಮನಾರ್ಹ ಅಂಶ. ನವೆಂಬರ್ ಇಲ್ಲವೇ ಡಿಸೆಂಬರ್ ವೇಳೆಗೆ ನಮ್ಮ ಗುರಿ ಮುಟ್ಟುವ ನಿರೀಕ್ಷೆಯಿದೆ ಎನ್ನುತ್ತಾರೆ ಅವರು.

ರಕ್ಷಣಾ ಸೂತ್ರ
ಆಟೊರಿಕ್ಷಾಗಳಲ್ಲಿ ರಾತ್ರಿ ವೇಳೆ ಒಂಟಿಯಾಗಿ ಮಹಿಳೆಯರಷ್ಟೇ ಅಲ್ಲ ಪುರುಷರೂ ಪ್ರಯಾಣಿಸಲು ಹಿಂದೇಟು ಹಾಕುತ್ತಾರೆ. ಸುರಕ್ಷೆ ಇಲ್ಲದಿರುವುದು ಇದಕ್ಕೆ ಕಾರಣ.

‘ಈ ಸಮಸ್ಯೆಗೆ ಜಿಪಿಎಸ್ ಅತ್ಯುತ್ತಮ ಪರಿಹಾರ. ಜಿಪಿಎಸ್ ಆಟೊ ಯಾವುದೇ ಭಾಗದಲ್ಲಿ ಸಂಚರಿಸುತ್ತಿದ್ದರೂ ಅದರ ಆ ಕ್ಷಣ ಇತಿವೃತ್ತಾಂತ `ತ್ರಿ ವ್ಹೀಲ್ಸ್'ನಲ್ಲಿ ದಾಖಲಾಗುತ್ತಲೇ ಇರುತ್ತದೆ. ಅದನ್ನು ನಮ್ಮ ಸಂಸ್ಥೆಯ ಸಿಬ್ಬಂದಿ 24 ಗಂಟೆಯೂ ಗಮನಿಸುತ್ತಲೇ ಇರುತ್ತಾರೆ. ಅಪಘಾತವೇ ಆಗಲಿ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾದರೂ ತಕ್ಷಣ ನಾವು ಅಲರ್ಟ್ ಆಗಿ ರಕ್ಷಣೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ವಿವರಿಸುತ್ತಾರೆ ಪ್ರಭು.

ಚಾಲಕರಿಗೂ ಲಾಭ
ತ್ರಿ ವ್ಹೀಲ್ಸ್ ಯುನೈಟೆಡ್ ಕಳೆದ ವರ್ಷ ನಗರದಲ್ಲಿ ಕೈಗೊಂಡ ಸಮೀಕ್ಷೆಯಲ್ಲಿ ಚಾಲಕನೊಬ್ಬ ಪ್ರತಿದಿನ 100 ಕಿ.ಮೀ. ಆಟೊ ಓಡಿಸಿದರೆ ಅದರಲ್ಲಿ 65 ಕಿ.ಮೀ. ಮಾತ್ರ ಆದಾಯದ ಬಾಬತ್ತಿನದ್ದು, ಉಳಿದ 35 ಕಿ.ಮೀ. ಪ್ರಯಾಣಿಕರ ಹುಡುಕಾಟ, ನಿಲ್ದಾಣ ತಲುಪುವುದು, ಗ್ಯಾಸ್/ಡೀಸೆಲ್ ತುಂಬಿಸುವುದು ಇತ್ಯಾದಿ ಓಡಾಟದಲ್ಲೇ ಕಳೆಯುತ್ತದೆ ಎಂಬ ಅಂಶ ತಿಳಿದುಬಂದಿದೆ.
ಜಿಪಿಎಸ್ ಆಟೊ ಅನುಷ್ಠಾನಕ್ಕೆ ಬಂದಾಗ ಚಾಲಕರಿಗೂ ಈ ಸಂಕಷ್ಟ ಇರುವುದಿಲ್ಲ!

ಸಂಜೆ ಅಥವಾ ರಾತ್ರಿ ಹೊತ್ತು ತಮಗೆ ಇಂತಿಂಥ ಪ್ರದೇಶದ ಪ್ರಯಾಣಿಕರನ್ನಷ್ಟೇ ಸಂಪರ್ಕಿಸಿಕೊಡಿ ಎಂದು ಚಾಲಕರು ಸಂದೇಶ ಕಳುಹಿಸಿದರೆ ಅವರಿಗೆ ತ್ರಿ ವ್ಹೀಲ್ಸ್ ಮೂಲಕ ಅದೇ ಪ್ರದೇಶಕ್ಕೇ ಬಾಡಿಗೆ ಗೊತ್ತುಮಾಡಿಕೊಡುವ ವ್ಯವಸ್ಥೆಯೂ ಇದೇ ಯೋಜನೆಯಲ್ಲಿ ಇರುತ್ತದೆ!

ಒಟ್ಟಿನಲ್ಲಿ ಈ ಯೋಜನೆ ಪ್ರಯಾಣಿಕರಿಗೂ ಆಟೊ ಚಾಲಕರಿಗೂ ವರದಾನವಾಗುವುದರಲ್ಲಿ  ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT