ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ ್ಖಾನಾ ಮೈದಾನ ವಿವಾದ: ಸರ್ಕಾರದಿಂದ ಕ್ರಮ

Last Updated 3 ಜನವರಿ 2014, 8:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೇಶಪಾಂಡೆನಗರದಲ್ಲಿರುವ ಜಿಮ್ಖಾನಾ ಮೈದಾನ ವಿವಾದದ ಬಗ್ಗೆ ಧಾರವಾಡ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ರಹಸ್ಯ ತನಿಖಾ ವರದಿ ನೀಡಲಿದ್ದಾರೆ. ಇದನ್ನು ಆಧರಿಸಿ ಸರ್ಕಾರ ವಾರದ ಒಳಗೆ ತೀರ್ಮಾನ ಕೈಗೊಳ್ಳಲಿದ್ದು, ಮೈದಾನವನ್ನು ತನ್ನ ವಶಕ್ಕೆ ಪಡೆಯುವ ವಿಶ್ವಾಸವಿದೆ’ ಎಂದು ಪೀಪಲ್ಸ್‌ ಆ್ಯಕ್ಷನ್‌ ಕಮಿಟಿಯ ಸದಸ್ಯ ಎನ್‌.ಎಸ್‌. ನಾಡಿಗೇರ ತಿಳಿಸಿದರು.

‘ಮೈದಾನದ ವಿವಾದದ ಕುರಿತು ಕಮಿಟಿಯ ವತಿಯಿಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಹಾಗೂ ನ್ಯಾಯಮೂರ್ತಿ ಎಸ್‌,ಎನ್‌. ಸತ್ಯನಾರಾಯಣ ಅವರು, ಜಿಮ್ಖಾನಾ ಅಸೋಸಿಯೇಷನ್‌ ಸಲ್ಲಿಸಿದ್ದ ಕೇವಿಯಟ್‌ ಅನ್ನು ತೆರವುಗೊಳಿಸಿದರು.

‘ಪ್ರಕರಣವನ್ನು ಜಿಲ್ಲಾಧಿಕಾರಿಗಳು ತನಿಖೆ ನಡೆಸುತ್ತಿರುವ ಕಾರಣ  ಸದ್ಯ ಈ ಕುರಿತು ಯಾವುದೇ ಆದೇಶ ನೀಡಲಾಗದು. ಜಿಲ್ಲಾಧಿಕಾರಿಗಳು ತಮ್ಮ ತನಿಖೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು’ ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ಹೀಗಾಗಿ ನಮ್ಮ ಅರ್ಜಿಯನ್ನು ತತ್ಕಾಲಕ್ಕೆ ಇತ್ಯರ್ಥ ಮಾಡಲಾಗಿದೆಯೇ ಹೊರತು ವಜಾಗೊಳಿಸಿಲ್ಲ. ಜಿಲ್ಲಾಧಿಕಾರಿಗಳ ವರದಿಯ ಪ್ರತಿ ಕೈಸಿಕ್ಕ ನಂತರ ಅಗತ್ಯ ಬಿದ್ದಲ್ಲಿ ನಾವು ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ಮೈದಾನವು ಸಾರ್ವಜನಿಕ ಬಳಕೆಗೆ ಮುಕ್ತವಾಗುವವರೆಗೆ ಹೋರಾಟ ಮುಂದುವರಿಸುತ್ತೇವೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಮ್ಮ ಕಮಿಟಿಯು ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಕೆಜಿಎ ಪದಾಧಿಕಾರಿಯೊಬ್ಬರು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಅವರ ವಿರುದ್ಧ ಕಾನೂನು ಸಮರ ಸಾರಲಾಗುವುದು’ ಎಂದು ಅವರು ನುಡಿದರು. ‘ಮೈದಾನವನ್ನು ರಿಕ್ರಿಯೇಶನ್‌ ಕ್ಲಬ್‌ಗಾಗಿ ಪರಿವರ್ತಿಸಿಕೊಡಲು ಆಗಿನ ಅಧಿಕಾರಿಗಳು ಹಾಗೂ ಸಚಿವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಮೈದಾನ ನೀಡುವಂತೆ ಕೋರಿ ಜಿಮ್ಖಾನಾ ಕ್ಲಬ್‌ ಅರ್ಜಿ ಸಲ್ಲಿಸಿದ ಕೇವಲ ಇಪ್ಪತ್ತು ದಿನಗಳ ಒಳಗೆ ಇಡೀ ಪ್ರಕ್ರಿಯೆ ಮುಗಿದು ಅಂದಿನ ಜಿಲ್ಲಾಧಿಕಾರಿಗಳು ಆದೇಶವನ್ನೂ ಹೊರಡಿಸಿದ್ದಾರೆ.

ಇಷ್ಟು ತ್ವರಿತಗತಿಯಲ್ಲಿ ಇಂತಹ ಪ್ರಕ್ರಿಯೆ ನಡೆದಿರುವುದು ಬಹುಶಃ ದೇಶದಲ್ಲಿಯೇ ಇದೇ ಮೊದಲು. ಅಂತೆಯೇ 2013ರ ಜುಲೈ 6ರಂದು ರಿಕ್ರಿಯೇಶನ್‌ ಕ್ಲಬ್‌ನ ಕಟ್ಟಡ ಪರವಾನಗಿಯ ಪರಿಷ್ಕೃತ ಯೋಜನೆಗೆ ಒಂದೇ ದಿನದಲ್ಲಿ ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಹುಡಾದಿಂದ ಅನುಮತಿ ಪಡೆಯದೆಯೇ ನೇರವಾಗಿ ಪಾಲಿಕೆಯಿಂದ ಅನುಮತಿ ಪಡೆಯುವ ಮೂಲಕ ಕಾನೂನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಕಾಮಗಾರಿ ಸ್ಥಗಿತಗೊಳಿಸುವಂತೆ ಹುಡಾ ರಿಕ್ರಿಯೇಶನ್ ಕ್ಲಬ್‌ಗೆ ಪತ್ರ ಬರೆದಿದೆ. ಈ ಎಲ್ಲ ಅಂಶಗಳನ್ನು ಮತ್ತೊಮ್ಮೆ ನ್ಯಾಯಾಲಯದ ಗಮನಕ್ಕೆ ತರುತ್ತೇವೆ’ ಎಂದು ವಿನಾಯಕ ಶಿರೋಳಕರ ತಿಳಿಸಿದರು.

‘ಮೈದಾನದಲ್ಲಿ ಐಷಾರಾಮಿ ವ್ಯವಸ್ಥೆಗಳುಳ್ಳ ಕಟ್ಟಡದ ನಿರ್ಮಾಣಕ್ಕಾಗಿ ಕ್ಲಬ್‌ ₨ 20 ಕೋಟಿ ವ್ಯಯಿಸಿದೆ. ಆದಾಗ್ಯೂ ಕೇವಲ ₨4.36 ಕೋಟಿ ವೆಚ್ಚ ಮಾಡಿರುವುದಾಗಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದೆ. ₨ 100 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಖಾಸಗಿ ಕ್ಲಬ್‌ಗೆ ನೀಡುವ ಮೂಲಕ ಅಧಿಕಾರಿಗಳು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದು, ಅದನ್ನು ಅವರಿಂದಲೇ ವಸೂಲಿ ಮಾಡಬೇಕು’ ಎಂದು ಅರವಿಂದ ಮೇಟಿ ಆಗ್ರಹಿಸಿದರು.

‘ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಒಟ್ಟು 17 ಹೋರಾಟಗಾರರ ಮೇಲೆ 11 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಆದಾಗ್ಯೂ ನಾವು ಮನೋಸ್ಥೈರ್ಯ ಕಳೆದುಕೊಳ್ಳಲಾರೆವು. ಗೆಲ್ಲುವ ತನಕವೂ ಹೋರಾಟ ಮುಂದುವರಿಸುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT