ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ಯ್ನಾಸ್ಟಿಕ್ಸ್ `ಸ್ವರ್ಣ' ಸಂಭ್ರಮ

Last Updated 26 ಡಿಸೆಂಬರ್ 2012, 5:58 IST
ಅಕ್ಷರ ಗಾತ್ರ

ತವರು ನೆಲದಲ್ಲೇ ಸೋಲುಂಡ ಕಹಿ ಧಾರವಾಡ ಜಿಲ್ಲಾ ಜಿಮ್ಯ್ನಾಸ್ಟಿಕ್ಸ್ ಸ್ಪರ್ಧಿಗಳ ಪಾಲಾದರೆ; ರಾಜ್ಯದ ಜಿಮ್ಯ್ನಾಸ್ಟಿಕ್ ಕಣಜ ಎಂದೇ ಖ್ಯಾತರಾದ ಧಾರವಾಡದ ಜಿಮ್ಯ್ನಾಸಿಸ್ಟ್‌ಗಳನ್ನು ತವರಲ್ಲೇ ಮಣ್ಣು ಮುಕ್ಕಿಸಿ ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡು ವಿಜಯ ಪತಾಕೆ ಹಾರಿಸಿದ ಕೀರ್ತಿ ತುಮಕೂರು ಜಿಮ್ಯ್ನಾಸಿಸ್ಟ್‌ಗಳದ್ದು.

ನವೆಂಬರ್‌ನಲ್ಲಿ ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಜಿಮ್ಯ್ನಾಸ್ಟಿಕ್ಸ್ ಕ್ರೀಡಾಕೂಟದಲ್ಲಿ ತುಮಕೂರು ಬಾಲಕ-ಬಾಲಕಿಯರು ಏಳು ಚಿನ್ನ ಗೆಲ್ಲುವ ಜತೆ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿದರು. ಇದು ಜಿಲ್ಲೆಯ ಕ್ರೀಡಾಲೋಕವೇ ಹೆಮ್ಮೆ ಪಡುವಂಥ ಸಂಗತಿ. ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ಜಾನಕಿ ಪಾಟೀಲ್, ಪೂಜಾ ಇತರರೊಡನೆ ಸೆಣಸಿ ಚಿನ್ನ ಗೆದ್ದದ್ದು ವಿಶೇಷ ಸಾಧನೆ.

ಅಕ್ಟೋಬರ್‌ನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲೂ ಸಮಗ್ರ ಪ್ರಶಸ್ತಿ. 2012ರಲ್ಲಿ ನಡೆದ ಮೈಸೂರು ದಸರಾ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕ. ಇದರ ಜತೆ ರಾಜ್ಯ ಸಬ್ ಜೂನಿಯರ್ ಜಿಮ್ನ್ಯಾಸ್ಟಿಕ್ಸ್‌ನಲ್ಲಿ ನಾಲ್ಕು ಚಿನ್ನ ಗೆದ್ದ ಸಾಧನೆ ತುಮಕೂರು ಜಿಲ್ಲಾ ಜಿಮ್ಯ್ನಾಸ್ಟಿಕ್ಸ್ ತಂಡದ್ದು.
ಜಿಲ್ಲೆಯ ಹತ್ತು ಜಿಮ್ಯ್ನಾಸಿಸ್ಟ್ ಸ್ಪರ್ಧಿಗಳು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡು, ಪದಕಗಳ ಬೇಟೆ ನಡೆಸಿದ್ದಾರೆ. ಜತೆಗೆ ಅತ್ಯುತ್ತಮ ಪ್ರದರ್ಶನ ನೀಡಿ ದೇಶದ ಭವಿಷ್ಯದ `ಕ್ರೀಡಾ ತಾರೆ'ಗಳು ಎಂದು ಗುರುತಿಸಲ್ಪಟ್ಟಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿನಿ ಜಿ.ಅರ್ಚನಾ ರಾಷ್ಟ್ರದ ಐವರು ಶ್ರೇಷ್ಠ ಜಿಮ್ನ್ಯಾಸ್ಟ್‌ಗಳಲ್ಲಿ ಒಬ್ಬಾಕೆ. ವಿವಿಧ ವಿಭಾಗಗಳಲ್ಲಿ ರಾಜ್ಯ ಮಟ್ಟದಲ್ಲಿ ಐದು ಪದಕ ಗೆದ್ದ ಸಾಧನೆ ಈ ಬಾಲೆಯದ್ದು. ಮಹಾರಾಷ್ಟ್ರದ ಪೂನಾದ ಬಾಳೇವಾಡಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ 58ನೇ ಶಾಲಾ ಕ್ರೀಡಾಕೂಟದ ಜಿಮ್ನ್ಯಾಸ್ಟಿಕ್ಸ್ ವಿಭಾಗದಲ್ಲಿ ಪ್ರಮುಖ ಸ್ಪರ್ಧಿ.

ಪ್ರೌಢಶಾಲಾ ವಿಭಾಗದಲ್ಲಿ ಎಂ.ರಘುನಂದನ್ ಮೂರು, ಎಸ್.ಶ್ರೀಧರ್ ಒಂದು ಪದಕ ಗೆದ್ದ ದಾಖಲೆ ಹೊಂದಿದ್ದಾರೆ. ರಮೇಶ್‌ಬಾಬು, ಬಿ.ಎ.ರೋಹಿತ್ ಸಹ ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ಪಿಯು ವಿಭಾಗದಲ್ಲಿ ಜಿ.ಅಭಿಷೇಕ್ ಆರು ಚಿನ್ನ, ಎಂ.ಗಿರೀಶ್ ಐದು ಚಿನ್ನ, ಬಿ.ಎಂ.ಜೀವನ್ ಎರಡು ಚಿನ್ನ, ಶಿರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಿ.ಆರ್.ಮಮತಾ ಎರಡು ಚಿನ್ನ, ತಿಪಟೂರು ಕಲ್ಪತರು ಕಾಲೇಜಿನ ಎಂ.ಕೆ.ಮೇಘನಾ ಒಂದು ಚಿನ್ನದ ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದರ ಜತೆ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎಚ್.ಕೆ.ಲಕ್ಷ್ಮೀ ಎರಡು ಪದಕ ವಿಜೇತರಾಗಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದ್ದಾರೆ.

ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿಭಾಗದಿಂದ ಒಟ್ಟು ಹತ್ತು ಮಂದಿ ರಾಷ್ಟ್ರ ಮಟ್ಟದ ಜಿಮ್ಯ್ನಾಸ್ಟಿಕ್ಸ್ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದು, ಕನಿಷ್ಠ ಮೂರು ಪದಕ ಗೆಲ್ಲುವ ನಿರೀಕ್ಷೆಯಿದೆ ಎನ್ನುತ್ತಾರೆ ಜಿಮ್ಯ್ನಾಸ್ಟಿಕ್ಸ್ ತರಬೇತುದಾರ ಸುಧೀರ್ ದೇವದಾಸ್.

ತುಮಕೂರು ನಗರದಲ್ಲಿ ಜಿಮ್ನ್ಯಾಸ್ಟಿಕ್ ಕ್ರೀಡಾ ಶಾಲೆ ಆರಂಭಿಸಲಾಗಿದೆ. ಸೂಕ್ತ ಸಲಕರಣೆಗಳು ಇವೆ. ಸ್ಥಳಾವಕಾಶದ ಕೊರತೆಯಿಂದ ಮೂಲೆ ಸೇರಿವೆ. 5,6,7ನೇ ತರಗತಿಯ 40 ಮಕ್ಕಳು ಮುಂಜಾನೆ- ಮುಸ್ಸಂಜೆ ಕಸರತ್ತಿನಲ್ಲಿ ತೊಡಗಿವೆ. ಭವಿಷ್ಯ ಚೆನ್ನಾಗಿದೆ. ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ದೊರೆತರೆ `ಜಿಮ್ನ್ಯಾಸ್ಟಿಕ್' ಕ್ರೀಡೆಯಲ್ಲಿ ತುಮಕೂರು `ಚಿನ್ನದ ತೊಟ್ಟಿಲು' ಎಂದೇ ಹೆಸರಾಗುತ್ತದೆ. ಜತೆಗೆ ದೇಶಕ್ಕೂ ಉತ್ತಮ ಕೊಡುಗೆ ನೀಡುತ್ತದೆ ಎಂಬ ಅನಿಸಿಕೆ ತರಬೇತುದಾರರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT