ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಅಕ್ಷರ ಜಾತ್ರೆಗೆ ಗಜೇಂದ್ರಗಡ ಸಜ್ಜು

Last Updated 11 ಫೆಬ್ರುವರಿ 2011, 8:35 IST
ಅಕ್ಷರ ಗಾತ್ರ

ಗಜೇಂದ್ರಗಡ: ಇಲ್ಲಿನ ಎ.ಪಿ.ಎಂ.ಸಿ. ಎದುರಿನ ಪುರಸಭೆಯ ಮೈದಾನ ಅಕ್ಷರ ಹಬ್ಬಕ್ಕೆ ಸಂಪೂರ್ಣ ಸಜ್ಜಾಗಿದ್ದು, ಪಟ್ಟಣದಲ್ಲಿ ಸಂಭ್ರಮದ ವಾತಾವರಣ ಉಂಟಾಗಿದೆ. ಸಮ್ಮೇಳನ ನಡೆಯುವ ದುರ್ಗಸಿಂಹ ಮಹಾದ್ವಾರ ಮತ್ತು ಪಂ.ಡಾ.ಭೀಮಸೇನ್ ಜೋಶಿ ಮಂಟಪ ಅಲಂಕಾರಗೊಂಡು ಕನ್ನಡ ಮನಸುಗಳನ್ನು ಕೈ ಬೀಸಿ ಕರೆಯುತ್ತಿವೆ.

ಅದ್ದೂರಿ ಮೆರವಣಿಗೆ: ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗುವ ಇಲ್ಲಿನ ದುರ್ಗಾವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತಗಳು ಬೃಹತ್ ಸ್ವಾಗತ ಕಟೌಟುಗಳಿಂದ ರಾರಾಜಿಸುತ್ತಿವೆ. ಮಧ್ಯಾಹ್ನ 2 ಗಂಟೆಗೆ ಇಲ್ಲಿನ ಮೈಸೂರಮಠದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಕನ್ನಡ ನಾಡಿನ ಕಲೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಜಗ್ಗಲಿಗೆ, ಕರಡಿ ಮಜಲು, ಕಂಸಾಳೆ, ನಂದಿಕೋಲು, ಪೂಜಾ ಕುಣಿತ, ವೀರಗಾಸೆ, ಡೊಳ್ಳುಕುಣಿತ, ಹೆಜ್ಜೆಮೇಳ, ಲಂಬಾಣಿ ನೃತ್ಯ ಸೇರಿದಂತೆ 15ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸುತ್ತಿವೆ. ಜೊತೆಗೆ 50 ಮಹಿಳೆಯರು ಕುಂಭ ಹೊತ್ತು ಸಾಗುವರು. ಅಲ್ಲದೇ ರಕ್ಷಣಾ ವೇದಿಕೆಯ 50ಜನರ ತಂಡವು ಪಥಸಂಚಲನ ಮಾಡಲಿದ್ದಾರೆ. ಒಟ್ಟಾರೆಯಾಗಿ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಗುವುದೆಂದು ಮೆರವಣಿಗೆ ಸಮಿತಿಯ ಅಧ್ಯಕ್ಷ, ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್.ಸೋಂಪೂರ ತಿಳಿಸಿದರು.

ಉದ್ಘಾಟನೆ ಮೊದಲ ದಿನ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿವೆ. ಫೆ.12ಮತ್ತು 13ರಂದು ಪ್ರತಿದಿನ ಮೂರು ಗೋಷ್ಠಿಗಳು ಮತ್ತು ಮೂರು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ.ಸೂಕ್ತ ಆಸನ ಮತ್ತು ಭೋಜನ ವ್ಯವಸ್ಥೆ: ಸಮ್ಮೇಳನಕ್ಕೆ ಆಗಮಿಸುವ ಜಿಲ್ಲೆಯ ಸಾಹಿತ್ಯ ಆಸಕ್ತರು ಮತ್ತು ಮತ್ತು ಕನ್ನಡ ಪ್ರೇಮಿಗಳಿಗೆ 5000 ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. 10ಸಾವಿರ ಜನರಿಗೆ ಮೂರು ದಿನಗಳ ಕಾಲ ಮಧ್ಯಾಹ್ನ ಮತ್ತು ರಾತ್ರಿ ಸಮಯದಲ್ಲಿ ರುಚಿಕಟ್ಟಾದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

20 ಪುಸ್ತಕ ಮಳಿಗೆ:      ಸಮ್ಮೇಳನದ ದುರ್ಗಸಿಂಹ ಮಹಾದ್ವಾರಕ್ಕೆ ಹೊಂದಿಕೊಂಡಂತೆ 20 ಪುಸ್ತಕ ಮಳೆಗೆಗಳನ್ನು ತೆರೆಯಲಾಗುವುದು. ಹೆಚ್ಚಿನ ಪುಸ್ತಕ ಮಳಿಗೆಗಳಿಗೆ ಬೇಡಿಕೆ ಬಂದಿದ್ದರೂ ಸಮಯ ಮತ್ತು ಸ್ಥಳದ ಕೊರತೆಯಿಂದಾಗಿ 20ಮಳಗೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಎ.ಬಿ.ಹಿರೇಮಠ ಹೇಳಿದರು.

ಶಾಲೆ-ಕಾಲೇಜುಗಳಿಗೆ ಸ್ಥಾನಿಕ ಬಿಡುವು : ಪಟ್ಟಣದಲ್ಲಿ ಇದೇ ಮೊದಲ ಭಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ನಮ್ಮೇಳನ ನಡೆಯುತ್ತಿರುವುದರಿಂದ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಶಾಲೆ ಕಾಲೇಜುಗಳಿಗೆ ರಜೆ ಕೊಡುವಂತೆ ಸಂಘಟಕರು ಮನವಿ ಮಾಡಿದ್ದರು. ಅದರಂತೆ ಉದ್ಘಾಟನೆಯ ದಿನ ಶುಕ್ರವಾರ (ಫೆ.11) ರೋಣ ತಾಲ್ಲೂಕಿನ ಶಾಲೆ-ಕಾಲೇಜುಗಳಲ್ಲಿ ಸ್ಥಾನಿಕ ಬಿಡುವು ಕೊಡಬಹುದೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಸಮ್ಮೇಳನ ನಡೆಯುವ ಮೂರು ದಿನಗಳು ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಮತ್ತು ಜಿಲ್ಲೆಯ ವಿವಿಧ ಕಲಾತಂಡಗಳ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ವಿಶೇಷ ಕಲಾ ತಂಡಗಳನ್ನು ಆಹ್ವಾನಿಸಿದ್ದು, ಒಟ್ಟು 58 ತಂಡಗಳು ಪ್ರತಿದಿನ ಸಂಜೆ 6 ಗಂಟೆಯಿಂದ ಮಧ್ಯರಾತ್ರಿ 12ಗಂಟೆಯ ವರೆಗೆ ಕಲಾ ಪ್ರದರ್ಶನ ಮಾಡಲಿವೆ.

ಸಾಹಿತಿಗಳ ಭಾವಚಿತ್ರವೇ ಇಲ್ಲ: ಸಮ್ಮೇಳನದ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಾಕಷ್ಟು ಬ್ಯಾನರ್ ಮತ್ತು ಪ್ರದರ್ಶನ ಫಲಕಗಳನ್ನು ಹಾಕಲಾಗಿದೆ. ಆದರೆ, ಆ ಫಲಕಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ನಾಡಿನ ಸಾಹಿತಿಗಳು, ಸಾಧಕರ ಭಾವಚಿತ್ರಗಳು ಇಲ್ಲವೇ ಇಲ್ಲ. ಎಲ್ಲೆಡೆ ಸ್ಥಳೀಯ ಮುಖಂಡರು, ವಿವಿಧ ಸಂಘಟನೆಗಳ ಕಾರ್ಯಕರ್ತರ ಚಿತ್ರಗಳನ್ನೇ ದೊಡ್ಡ ದೊಡ್ಡ ಗಾತ್ರಗಳಲ್ಲಿ ಹಾಕಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT