ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ತಪಾಸಣೆಗೆ ಸೂಚನೆ!

Last Updated 4 ಫೆಬ್ರುವರಿ 2011, 6:15 IST
ಅಕ್ಷರ ಗಾತ್ರ

ಕೋಲಾರ: ಶುಶ್ರೂಷಕಿಯರ ನೇಮಕದಲ್ಲಿ ಅವ್ಯವಹಾರ ನಡೆಸಿರುವ ಗುರುತರ ಆರೋಪಕ್ಕೆ ಗುರಿಯಾಗಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಸಿ.ರಮೇಶ್ ಮತ್ತು ಅವರ ಕಚೇರಿ ಇದೀಗ ಜಿಲ್ಲಾ ಪಂಚಾಯಿತಿಯ ಕೋಪಕ್ಕೆ ತುತ್ತಾಗಿದೆ.

‘ಅವ್ಯವಹಾರ ನಡೆಸಿರುವ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು?’ ಎಂದು ಕಾರಣ ಕೇಳಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ  ನೋಟಿಸ್ ನೀಡಿ 37 ದಿನವಾದರೂ ಜಿಲ್ಲಾ ಆರೋಗ್ಯಾಧಿಕಾರಿ ಉತ್ತರವನ್ನೆ ನೀಡಿಲ್ಲ. ಉತ್ತರಕ್ಕೆ ಕಾದು ಅಸಮಾಧಾನಗೊಂಡಿರುವ ಸಿಇಓ ಇದೀಗ ಆರೋಗ್ಯಾಧಿಕಾರಿಯ ಇಡೀ ಕಚೇರಿಯ ಎಲ್ಲ ಕಡತಗಳನ್ನೂ ತಪಾಸಣೆ ಮಾಡಲು ನಿರ್ಧರಿಸಿದ್ದಾರೆ. ಅದರ ಸಲುವಾಗಿ ಇಬ್ಬರು ಅಧಿಕಾರಿಗಳ ತಂಡವನ್ನು ಈಗಾಗಲೇ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ಮತ್ತು ಯೋಜನಾಧಿಕಾರಿಗಳ ತಂಡ ಕೆಲವೇ ದಿನಗಳಲ್ಲಿ ಕಚೇರಿ ತಪಾಸಣೆ ನಡೆಸಲಿದೆ.

ವಿವರ: ಜಿಲ್ಲೆಯ ಫಸ್ಟ್ ರೆಫರಲ್ ಯೂನಿಟ್ (ಎಫ್‌ಆರ್‌ಯು-ತಾಲ್ಲೂಕು ಆಸ್ಪತ್ರೆ)ಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ ಮಾಲೂರು ಮತ್ತು ಶ್ರೀನಿವಾಸಪುರ ಎಫ್‌ಆರ್‌ಯುಗಳ ನವಜಾತ ಶಿಶು ನಿಗಾ ಘಟಕಗಳಲ್ಲಿ (ಎನ್‌ಬಿಯುಸಿ) ಕೆಲಸ ಮಾಡಲು ಶುಶ್ರೂಷಕಿಯರನ್ನು ನೇಮಿಸುವ ಸಂದರ್ಭದಲ್ಲಿ ವರ್ಗಾವಣೆ/ನೇಮಕಾತಿಯಾಗಿ ಬಂದವರಿಗೆ ಆದ್ಯತೆ ನೀಡಬೇಕು. ನಂತರ ಗುತ್ತಿಗೆ ಆಧಾರದ ಶುಶ್ರೂಷಕಿಯರಿಗೆ 2ನೇ ಆದ್ಯತೆ ನೀಡಬೇಕು ಎಂಬ ಪ್ರಸ್ತಾವನೆಯನ್ನು ಕಳೆದ ನ.4ರಂದು ನಡೆದ ಅಭಿಯಾನ ಮತ್ತು ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಸಭೆಯಲ್ಲಿ ಸಲ್ಲಿಸಲಾಗಿತ್ತು. ಅದಕ್ಕೆ ಅನುಮೋದನೆಯೂ ದೊರೆತಿತ್ತು.

ನಿಯಮಾನುಸಾರ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ನೇಮಕಾತಿ ಆದೇಶ ನೀಡುವ ಮುನ್ನ ಸೊಸೈಟಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಆರೋಗ್ಯಾಧಿಕಾರಿ ಅನುಮೋದನೆ ಪಡೆಯಬೇಕು. ಆದರೆ ಅನುಮೋದನೆ ಸಲುವಾಗಿ ಕಡತಗಳನ್ನು ಮಂಡಿಸದೆ ಆರೋಗ್ಯಾಧಿಕಾರಿ ಕಳೆದ ಡಿ.3ರಂದು ಆದೇಶ ಹೊರಡಿಸಿ 10 ಶೂಶ್ರೂಷಕಿಯರ ನೇಮಕಕ್ಕೆ ಆದೇಶ ಹೊರಡಿಸಿದ್ದರು. ಅಲ್ಲದೆ, ಸಭೆಯ ತೀರ್ಮಾನದಂತೆ ಮೊದಲು ಖಾಯಂ ಶುಶ್ರೂಷಕಿಯರಿಗೆ ಅವಕಾಶ ನೀಡದೆ, ನೇರವಾಗಿ ನೇಮಕ ಮಾಡಿಕೊಳ್ಳಲಾಗಿತ್ತು.

ಸಿಇಓ ನೋಟಿಸ್:  ಈ ಅಂಶ ತಮ್ಮ ಗಮನಕ್ಕೆ ಬಂದ ಕೂಡಲೇ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ ಡಿ.27ರಂದು ಆರೋಗ್ಯಾಧಿಕಾರಿಗೆ ನೋಟಿಸ್ ನೀಡಿದ್ದರು.  ‘ನಿಯಮಗಳನ್ನು ಉಲ್ಲಂಘಿಸಿ ಶುಶ್ರೂಷಕಿಯರ ನೇಮಕಾತಿ ಆದೇಶವನ್ನು ಹೊರಡಿಸಿದ್ದೀರಿ. ಮತ್ತು ನೇರವಾಗಿ ನೇಮಕ ಮಾಡಿಕೊಂಡಿದ್ದೀರಿ. ಈ ಕಾರಣಕ್ಕಾಗಿ ನಿಮ್ಮ ವಿರುದ್ಧ ಸಿಸಿಎ ನಿಯಮಾವಳಿಗಳಂತೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಏಕೆ ಶಿಫಾರಸು ಮಾಡಬಾರದು ಎಂಬುದಕ್ಕೆ ನೋಟಿಸ್ ತಲುಪಿದ ಮೂರು ದಿನದೊಳಗೆ ಲಿಖಿತ ಸಮಜಾಯಿಷಿ ನೀಡಬೇಕು. ತಪ್ಪಿದ್ದಲ್ಲಿ ನಿಮ್ಮ ಹೇಳಿಕೆ ಏನೂ ಇಲ್ಲವೆಂದು ಪರಿಗಣಿಸಿ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಸ್ಪಷ್ಟವಾಗಿ ಎಚ್ಚರಿಸಿದ್ದರು.

ಉತ್ತರವಿಲ್ಲ: ಮೂರು ದಿನವಲ್ಲ, ನೋಟಿಸ್ ಪಡೆದು ಮೂವತ್ತು ದಿನ ಮೀರಿದರೂ ಜಿಲ್ಲಾ ಆರೋಗ್ಯಾಧಿಕಾರಿ ಇಲ್ಲಿವರೆಗೆ ಉತ್ತರವನ್ನೇ ನೀಡಿಲ್ಲ. ‘ನನ್ನ ನೋಟಿಸ್‌ಗೆ ಡಿಎಚ್‌ಓ ಇದುವರೆಗೂ ಉತ್ತರ ನೀಡಿಲ್ಲ. ಅದು ಅವರ ನಿರ್ಲಕ್ಷ್ಯವನ್ನು ತೋರುತ್ತದೆ. ಹೀಗಾಗಿ ನಾನು ಸರ್ಕಾರಕ್ಕೆ ನೇರವಾಗಿ ಪತ್ರ ಬರೆಯಲಿದ್ದೇನೆ’ ಎಂದು ಶಾಂತಪ್ಪ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಈ ನೇಮಕದಲ್ಲಷ್ಟೆ ಅಲ್ಲದೆ, ಮತ್ತಿತರ ಸಂಗತಿಗಳಲ್ಲೂ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳಿವೆ. ಹೀಗಾಗಿ ಆರೋಗ್ಯಾಧಿಕಾರಿಯ ಇಡೀ ಕಚೇರಿಯನ್ನೆ ತಪಾಸಣೆ ನಡೆಸಲು ತೀರ್ಮಾನಿಸಿರುವೆ. ಕಚೇರಿಯ ಪ್ರತಿಯೊಂದು ವಿಭಾಗವನ್ನೂ ತಪಾಸಣೆ ನಡೆಸಲಾಗುವುದು. ಜಿಲ್ಲಾ ಮುಖ್ಯ ಲೆಕ್ಕಾಧಿಕಾರಿ ಮತ್ತು ಮುಖ್ಯ ಯೋಜನಾಧಿಕಾರಿ ತಂಡ ಶೀಘ್ರದಲ್ಲೆ ತಪಾಸಣೆಗೆ ಹೊರಡಲಿದೆ’ ಎಂದರು.

‘ತಪಾಸಣೆ ಮಾಡಿದ ತಂಡವು ನೀಡುವ ವರದಿಯನ್ನು ಆಧರಿಸಿ ಸಂಬಂಧಿಸಿದವರಿಗೆ ಮೊದಲು ನೋಟಿಸ್ ನೀಡಲಾಗುವುದು. ನಂತರ ತನಿಖೆಗೆ ಶಿಫಾರಸು ಮಾಡಲಾಗುವುದು. 1 ಮತ್ತು 2ನೇ ದರ್ಜೆ ಅಧಿಕಾರಿಗಳು ತಪ್ಪೆಸಗಿದ್ದಲ್ಲಿ ಕ್ರಮಕೈಗೊಳ್ಳುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. 3,4ನೇ ದರ್ಜೆ ಸಿಬ್ಬಂದಿ ತಪ್ಪೆಸಗಿದ್ದರೆ ನಾನೇ ತನಿಖೆ ನಡೆಸುವೆ’ ಎಂದು ಅವರು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲೂ ಆರೋಪಿ !
ಕೋಲಾರ:
ಶುಶ್ರೂಷಕಿಯರ ನೇಮಕಾತಿಯಲ್ಲಿ ಅವ್ಯವಹಾರ ನಡೆಸಿ ಡಾ.ಎಚ್,.ಸಿ.ರಮೇಶ್ ಅವರು ಜಿಲ್ಲಾ ಪಂಚಾಯಿತಿಯಿಂದ ನೋಟಿಸ್ ಪಡೆದಿರುವುದು ಇದೇ ಮೊದಲಲ್ಲ ಎಂಬುದು ವಿಶೇಷ.

ಕಳೆದ ವರ್ಷ ಅಕ್ಟೋಬರ್ 10ರಂದು ಅಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಡಾ.ರಮೇಶ್ ಅವರಿಗೆ ನೋಟಿಸ್ ನೀಡಿದ್ದರು. ಕೋಲಾರ ತಾಲ್ಲೂಕಿನ ಅಣ್ಣಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿ.ಜಿ.ಮೀನಾಕ್ಷಿ ಎಂಬುವವರನ್ನು ಮತ್ತು ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿ.ನೇತ್ರಾವತಿ ಎಂಬುವವರನ್ನು ಡಾ.ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಧ್ಯಕ್ಷರಾದ ಸಿಇಓ ಗಮನಕ್ಕೆ ತರದೆ, ಹಿಂದಿನ ದಿನಾಂಕಗಳನ್ನು ನಮೂದಿಸಿ ನೇಮಿಸಿದ್ದರು!
‘ಅಧ್ಯಕ್ಷರ ಗಮನಕ್ಕೆ ತರದೆ, ಅವರ ಅನುಮೋದನೆ ಪಡೆಯದೆ ಯಾವುದೋ ಪ್ರಲೋಭಕ್ಕೆ ಒಳಪಟ್ಟು, ಹಿಂದಿನ ದಿನಾಂಕಗಳನ್ನು ನಮೂದಿಸಿ ನೇಮಕಾತಿ ಆದೇಶಗಳನ್ನು ಹೊರಡಿಸಿರುವುದು ಅಕ್ಷಮ್ಯ ಅಪರಾಧ. ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ.

ಸಮುಚಿತ ಮಾರ್ಗದಲ್ಲಿ ಕಡತವನ್ನು ಚಾಲನೆಗೊಳಿಸಿ ನಿಯಮಾನುಸಾರ ಏಕೆ ಕ್ರಮ ಕೈಗೊಂಡಿಲ್ಲ? ಅದಕ್ಕಾಗಿ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು? ಎಂದು ನೋಟಿಸ್ ನೀಡಿದ್ದರು. ಒಂದು ವರ್ಷದಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಿರ್ವಹಿಸಿರುವ ಪೂರ್ಣ ಕಡತಗಳನ್ನು ಕೂಡಲೇ ಪರಿಶೀಲನೆಗೆ ಕಳುಹಿಸಬೇಕು ಎಂದೂ ಸೂಚಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT