ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆಸ್ಪತ್ರೆಗೆ ರೂ 8.5 ಕೋಟಿ ಬಿಡುಗಡೆ

ಎಚ್‌ಐವಿ ಬಾಧಿತರಿಗೆ ಪ್ರತ್ಯೇಕ ಡಯಾಲಿಸಿಸ್ ಯಂತ್ರ
Last Updated 31 ಜುಲೈ 2013, 6:25 IST
ಅಕ್ಷರ ಗಾತ್ರ

ವಿಜಾಪುರ: ಇಲ್ಲಿಯ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರದಿಂದ ರೂ.8.5 ಕೋಟಿ ಅನುದಾನ ಬಿಡುಗಡೆಯಾಗಿದೆ. ಆಗಸ್ಟ್ 1ರಿಂದ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಿಳಿಸಿದರು.

ಜಿಲ್ಲಾ ಮಟ್ಟದ ಆರೋಗ್ಯ ಗುಣಮಟ್ಟ ಖಾತರಿ ಸಮಿತಿ, ಸಾಂಕ್ರಾಮಿಕ, ಕ್ಷಯ ರೋಗ ಮತ್ತು  ಏಡ್ಸ್ ಸಮನ್ವಯ ಸಮಿತಿ, ಜಿಲ್ಲಾ ಆರೋಗ್ಯ ಅಭಿಯಾನ, ಜಿಲ್ಲಾ ಮಟ್ಟದ ಆಶಾ ಸಲಹಾ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದ ಅವರು,  ಜಿಲ್ಲಾ ಆಸ್ಪತ್ರೆಗೆ ಎಂಟು ಡಯಾಲಿಸಿಸ್ ಯಂತ್ರಗಳು ಪೂರೈಕೆಯಾಗಿವೆ. ಈ ಪೈಕಿ ಎಚ್‌ಐವಿ ಬಾಧಿತರಿಗೆ ಡಯಾಲಿಸಿಸ್ ಮಾಡಿಸಲು ವಿಜಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಡಯಾಲಿಸಿಸ್ ಯಂತ್ರದ ವ್ಯವಸ್ಥೆ ಮಾಡಲಾಗಿದೆ ಎಂದರು.

ಎಚ್.ಐ.ವಿ. ಬಾಧಿತ ಮಕ್ಕಳ ಅಪೌಷ್ಠಿಕತೆ ನಿವಾರಣೆ ಹಾಗೂ ಆರೋಗ್ಯ ತಪಾಸಣೆಗೆ ಕ್ರಮಕೈಗೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಐ.ಸಿ.ಪಿ.ಎಸ್. ಯೋಜನೆಯಡಿ ಮಕ್ಕಳ ಪಾಲನೆ-ಪೋಷಣೆಗಾಗಿ ವಿಶೇಷ ವ್ಯವಸ್ಥೆ ಇದೆ. ಈ ಯೋಜನೆಯಡಿ ಎಚ್.ಐ.ವಿ. ಬಾಧಿತ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಬೇಕು. ಎಚ್.ಐ.ವಿ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ನಿರಾಕರಿಸಬಾರದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳಿಗೆ  ಸೂಚನೆ ನೀಡಬೇಕು ಎಂದು ಸೂಚಿಸಿದರು.

ಕಳೆದ ವರ್ಷದಲ್ಲಿ ಜಿಲ್ಲೆಯ 598 ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಸಲು ರೂ.10ಲಕ್ಷ ವೆಚ್ಚ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದರು.

ವೃತ್ತಿ ನಿರತ ಲೈಂಗಿಕ ಕಾರ್ಯಕರ್ತೆಯರು ಆಧಾರ್ ನೋಂದಣಿಗೆ ಕಾಯಂ ವಿಳಾಸ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅವರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ಸ್ಥಳೀಯ ಸಂಘದ ವಿಳಾಸ ನೀಡಿ, ಆಧಾರ್ ಹಾಗೂ ಯಶಸ್ವಿನಿ ಯೋಜನೆಯಡಿ ಅವರ ಹೆಸರು ನೋಂದಾಯಿಸಬೇಕು ಎಂದರು.

ತಾಯಿಭಾಗ್ಯ ಯೋಜನೆಯಡಿ ತಾಯಂದಿರರಿಗೆ ಅವಶ್ಯವಿರುವ ರಕ್ತವನ್ನು ಉಚಿತವಾಗಿ ಪೂರೈಸಬೇಕು.

ಜಿಲ್ಲೆಯಲ್ಲಿ ತಾಯಿ ಮರಣ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ವೈದ್ಯಾಧಿಕಾರಿಗಳು ಶ್ರಮಿಸಬೇಕು.  ಶಾಲಾ ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ನಡೆಸಬೇಕು. ಕಬ್ಬಿಣಾಂಶ ಮಾತ್ರೆ ವಿತರಣೆಯ ಜೊತೆಗೆ ಚಿಕೂನ್ ಗುನ್ಯಾ, ಡೆಂಗೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತಂತೆ ವಿಡಿಯೊ ಪ್ರದರ್ಶನ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದರು.

ಅಂಧತ್ವ ನಿವಾರಣೆ, ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ, ನೀರು ಪರೀಕ್ಷೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಆರೋಗ್ಯ ರಕ್ಷಣೆಗೆ ವಿಶೇಷ ಗಮನ ನೀಡಬೇಕು ಎಂದು ಕಳಸದ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಗುಂಡಪ್ಪ, ಡಾ: ಮಸಳಿ, ಡಾ.ಜಯಲಕ್ಷ್ಮಿ, ಡಾ.ಚವ್ಹಾಣ, ಆರೋಗ್ಯ ಇಲಾಖೆ ಕಾನೂನು ಸಲಹೆಗಾರ ಬಿ.ಎಂ.ಪಾಟೀಲ, ಏಡ್ಸ್ ಜಾಗೃತಿ ಮಹಿಳಾ ಸಂಘದ ಮಹಾದೇವಿ ಹುಲ್ಲೂರ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT