ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಉತ್ಸವಕ್ಕೆ ಬ್ಯಾಡಗಿ ತಾಲ್ಲೂಕು ಕ್ರೀಡಾಂಗಣ ಸಜ್ಜು

Last Updated 6 ಫೆಬ್ರುವರಿ 2012, 8:05 IST
ಅಕ್ಷರ ಗಾತ್ರ

ಬ್ಯಾಡಗಿ: ಅನಿಶ್ಚಿತತೆಯ ನಡುವೆ ಬ್ಯಾಡಗಿ ಪಟ್ಟಣದಲ್ಲಿ ಫೆ. 11ರಿಂದ ಮೂರು ದಿನಗಳವರೆಗೆ ನಡೆಯಲಿರುವ 5ನೇ ಹಾವೇರಿ ಜಿಲ್ಲಾ ಉತ್ಸವಕ್ಕೆ ಕೊನೆಗೂ ಹಸಿರು ನಿಶಾನೆ ದೊರೆತಿರುವುದು ಪಟ್ಟಣದ ಜನತೆಗೆ ಸಂತಸ ತಂದಿದೆ.

ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ ಹಿನ್ನೆಲೆಯಲ್ಲಿ ಸರಕಾರ ವಿವಿಧ ಉತ್ಸವಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದರಿಂದ  ಹಾವೇರಿ ಜಿಲ್ಲಾ ಉತ್ಸವ ನಡೆಯುವುದು ಅನುಮಾನವಾಗಿತ್ತು. ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಕಳೆದೆರಡು ದಿನಗಳ ಹಿಂದೆ ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವುದಾಗಿ ಪ್ರಕಟಿಸಿ ಅದನ್ನು ಮುಂದೂಡಿದ್ದರಿಂದ ಜಿಲ್ಲಾ ಉತ್ಸವ ನಡೆಯವುದು ಮತ್ತಷ್ಟು ಅನುಮಾನವಾಗಿತ್ತು.

ಶುಕ್ರವಾರ ಮಧ್ಯಾಹ್ನ ಬ್ಯಾಡಗಿ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ತಾಲ್ಲೂಕು ಕ್ರೀಡಾಂಗಣದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಶನಿವಾರ ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾ ಉತ್ಸವ ಆಚರಿಸುವ ಕುರಿತು ಜನತೆಯಲ್ಲಿದ್ದ ಅನುಮಾನವನ್ನು ದೂರಮಾಡಿದ್ದಾರೆ.

ಭಾನುವಾರ ಬೆಳಿಗ್ಗೆಯಿಂದಲೇ ತಾಲ್ಲೂಕು ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ಕೆಲ ಕಾರ್ಮಿಕರು ಕ್ರೀಡಾಂಗಣದ ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯಲು ಆರಂಭಿಸಿರುವುದು ಜಿಲ್ಲಾ ಉತ್ಸವ ನಡೆಯುವುದು ಖಚಿತವಾದಂತಾಗಿದೆ.

ಈಗಾಗಲೆ ಜಿಲ್ಲಾ ಉತ್ಸವಕ್ಕೆ 20ಲಕ್ಷ ರೂ. ಬಿಡುಗಡೆಯಾಗಿದ್ದು, ಕ್ರೀಡಾಂಗಣದಲ್ಲಿ ಎರಡು ಮಹಾದ್ವಾರ ಹಾಗೂ ಮೂರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಮಹಾದ್ವಾರಗಳಿಗೆ ಮಹಾತ್ಮ ಮಹದೇವ ಮೈಲಾರ ಹಾಗೂ ಸಂತ ಶಿಶುನಾಳ ಶರೀಫರ ಹೆಸರುಗಳನ್ನಿಡಲಾಗುತ್ತದೆ.
 
ಮುಖ್ಯ ವೇದಿಕೆಗೆ ಭಕ್ತ ಕನಕದಾಸರ ಹೆಸರನ್ನು ಹಾಗೂ ಇನ್ನುಳಿದ ಎರಡು ವೇದಿಕೆಗಳಿಗೆ ಆಧುನಿಕ ವಚನಾಕಾರ ಮಹದೇವ ಬಣಕಾರ ಹಾಗೂ ತ್ರಿಪದಿ ಕವಿ ಸರ್ವಜ್ಞ ಹೆಸರಿನ್ನಿಡಲಾಗುವುದು. ಉತ್ಸವದ ಅಂಗವಾಗಿ ರಾಜ್ಯ ಮಟ್ಟದ ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳನ್ನು ಎರಡು ದಿನ ಆಯೋಜಿಸಿರುವುದು ಇಲ್ಲಿಯ ಕ್ರೀಡಾಸಕ್ತರಿಗೆ ಸಂತಸವನ್ನುಂಟು ಮಾಡಿದೆ.

ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಪುರುಷರ ಸುಮಾರು 20 ತಂಡಗಳು ಭಾಗವಹಿಸಲಿವೆ. ಉತ್ಸವದಲ್ಲಿ ಮಹಿಳಾ ಗೋಷ್ಠಿ, ಕೃಷಿ ಗೋಷ್ಠಿ, ಜಿಲ್ಲಾ ದರ್ಶನಗೋಷ್ಠಿ ಹಾಗೂ ಸಂಕಿರ್ಣಗೊಷ್ಠಿಗಳನ್ನು ಆಯೋಜಿಸಲಾಗಿದೆ. ಜಿಲ್ಲಾ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಸಾಹಿತಿ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ದೊಡ್ಡರಂಗೇಗೌಡ ಪಾಲ್ಗೊಳ್ಳಲಿದ್ದಾರೆ.

ಹಾಸ್ಯ ಕಲಾವಿದ ಲೀಚರ್ಡ್‌ ಲೂಯಿಸ್, ಗಾಯಕರಾದ ಮಂಜುಳಾ ಗುರುರಾಜ, ಗುರುಕಿರಣ ಸೇರಿದಂತೆ ಹಿರಿಯ ಕಲಾವಿದರು ಆಗಮಿಸುವರು. ಸ್ಥಳೀಯ ಕಲಾವಿದರಿಗೆ ಸಹ ಹೆಚ್ಚಿನ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ. ಆದರೆ ಈ ಕುರಿತು ಆಮಂತ್ರಣ ಪತ್ರಿಕೆಗಳು ಕೈಸೇರದೆ ಇರುವುದು ಸೋಜಿಗವೆನಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT