ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಉತ್ಸವಕ್ಕೆ ಸಾಂಸ್ಕೃತಿಕ ಮೆರಗು

Last Updated 11 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಜನತೆಗೆ ಕಲೆ, ಸಂಸ್ಕೃತಿಯ ರಸದೌತಣ ಉಣಬಡಿಸುವ ನಾಲ್ಕು ದಿನಗಳ ಜಿಲ್ಲಾ ಉತ್ಸವ ಗುರುವಾರ ಸಂಜೆ ಸಾವಿರಾರು ಜನರ ಸಮ್ಮುಖದಲ್ಲಿ ವಿಧ್ಯುಕ್ತವಾಗಿ ಆರಂಭಗೊಂಡಿತು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ತೀನಂಶ್ರೀ ವೇದಿಕೆಯಲ್ಲಿ ಜಿಲ್ಲಾ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಂಗಭೂಮಿ ಹಿರಿಯ ಕಲಾವಿದೆ ಹಾಗೂ ರಾಜ್ಯಸಭೆ ಸದಸ್ಯೆ ಬಿ.ಜಯಶ್ರೀ, ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಚಾಲನೆ ನೀಡಿದರು.

ನಂತರ ಮಾತನಾಡಿದ ಬಿ.ಜಯಶ್ರೀ, ಜಿಲ್ಲಾ ಉತ್ಸವ ಪ್ರತಿಯೊಬ್ಬರಲ್ಲೂ ನಾಡಿನ ಸಂಸ್ಕೃತಿ, ಭಾಷೆಯ ಮೇಲೆ ಅಭಿಮಾನ ಮೂಡಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.‘ನಾನು ರಾಜಕಾರಣಿಯಲ್ಲ, ಬದುಕಿನ ಕೊನೆವರೆಗೂ ಕಲಾವಿದೆಯಾಗಿಯೇ ಉಳಿಯಲು ಇಷ್ಟಪಡುತ್ತೇನೆ. ಕಲಾ ವಿದರ ಬಳಗದಲ್ಲಿ ಗುರುತಿಸಿಕೊಂಡು, ಕಲಾವಿದರ ಧ್ವನಿಯಾಗುತ್ತೇನೆ’ ಎಂದರು.
ಉತ್ಸವದ ‘ಸಂಸ್ಕೃತಿ’ ಸಂಚಿಕೆ ಬಿಡುಗಡೆ ಮಾಡಿದ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಉತ್ಸವ ಯಶಸ್ವಿಯಾಗುವಂತೆ ಹಾರೈಸಿದರು.

ಬಿ.ಜಯಶ್ರೀ, ಚಿತ್ರನಟ ಕೋಮಲ್, ನಟಿ ರೂಪಿಕಾ, ಸಂಗೀತ ನಿರ್ದೇಶಕ ಕಲ್ಯಾಣ್ ಅವರನ್ನು ಅಭಿನಂದಿಸಲಾಯಿತು.ಶುಕ್ರವಾರ ತೆರೆಕಾಣಲಿರುವ ತಮ್ಮ ಅಭಿನಯದ ‘ಕಳ್‌ಮಂಜ’ ಚಿತ್ರದಲ್ಲಿನ ಅಲ್ಕಾನಂದ ಸ್ವಾಮೀಜಿ ಪಾತ್ರದ ಪ್ರಸಂಗವೊಂದನ್ನು ಕೋಮಲ್ ಮೆಲುಕು ಹಾಕಿ, ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದರು.

ಶಾಸಕ ಸೊಗಡು ಶಿವಣ್ಣ, ಪಾಲಿಕೆ ಮೇಯರ್ ಯಶೋಧ ಗಂಗಪ್ಪ, ಟುಡಾ ಅಧ್ಯಕ್ಷ ಎಸ್.ಆರ್.ಶ್ರೀಧರಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಇನ್ನಿತರರು ಇದ್ದರು.

ಕಣ್ಮನ ಸೆಳೆದ ನೃತ್ಯಲೋಕ:
ಹೃದಯ ಅರಳಿಸುವ ಸಂಗೀತ ನಿನಾದ, ಹೃನ್ಮನ ತಣಿಸುವ ನೃತ್ಯದ ಮೋಡಿಗೆ ನೆರೆದಿದ್ದ ಪ್ರೇಕ್ಷರು ತಲೆದೂಗಿದರು. ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಪ್ತಸ್ವರ ಆರ್ಟ್ಸ್ ಮತ್ತು ಕ್ರಿಯೇಷನ್ಸ್‌ನ ಮಂಜುಳಾ ಪರಮೇಶ್ವರ್ ತಂಡದವರು ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು.

ಮಾತೃದೇವೋಭವ, ನಾಡಗೀತೆ, ರೈತ ಗೀತೆಗೆ ಕಲಾವಿದರು ಪ್ರದರ್ಶಿಸಿದ ನೃತ್ಯ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿತು. ಅಂತರರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದರಾದ ಶ್ರೀಧರ್ ಮತ್ತು ಅನುರಾಧ ದಂಪತಿ ಪ್ರಸ್ತುತ ಪಡಿಸಿದ ಭರತನಾಟ್ಯವೂ ಕಲಾ ರಸಿಕರ ಹೃದಯ ಗೆದ್ದಿತು.

ಶುಭಾ ಮಾಲ್ಗುಡಿ ಮೋಡಿ: ಖ್ಯಾತ ಗಾಯಕಿ ಶುಭ ಮಾಲ್ಗುಡಿ ಅವರ ಗಾಯನವೂ ಸಹಸ್ರಾರು ಸಂಗೀತ ಪ್ರೇಮಿಗಳಿಗೆ ಮುದ ನೀಡಿತು. ಜತೆಗೆ ಶುಭ ಮಾಲ್ಗುಡಿ ತಂಡದ ಕಲಾವಿದರು ಪ್ರದರ್ಶಿಸಿದ ನೃತ್ಯವೂ ಜನಮನ ಸೂರೆಗೊಂಡಿತು.ಮೊದಲ ದಿನದ ಉತ್ಸವದಲ್ಲಿ ನಗರದ ಜನತೆ, ಸಂಗೀತ-ನೃತ್ಯ ರಸಸಂಜೆಯಲ್ಲಿ ಮಿಂದೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT