ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಉಸ್ತುವಾರಿ ಯೋಗೇಶ್ವರ್ ವಹಿಸಿಕೊಳ್ಳಲಿ

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಂ.ಪಿ.ರೇಣುಕಾಚಾರ್ಯ ಅವರನ್ನು ಬದಲಿಸಿ, ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಂದುವರೆಸುವಂತೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ನಿಯೋಗ ಮನವಿ ಮಾಡಿದೆ.

ಕೆಎಂಎಫ್ ನಿರ್ದೇಶಕ ಪಿ.ನಾಗರಾಜು, ರಾ-ಚ ಪ್ರಾಧಿಕಾರದ ಅಧ್ಯಕ್ಷ ಕೆ.ಶೇಷಾದ್ರಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸದಾನಂದಗೌಡ ಅವರ ಗೃಹ ಕಚೇರಿ ಅನುಗ್ರಹಕ್ಕೆ ಭೇಟಿ ನೀಡಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯರೇ ಆಗಿರುವ ಯೋಗೇಶ್ವರ್ ಅವರಿಗೆ ಜಿಲ್ಲೆಯ ಆಗುಹೋಗುಗಳು, ಸಮಸ್ಯೆಗಳ ಪರಿಚಯ ಇದೆ. ಅವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಂದುವರೆಸುವುದರಿಂದ ಜಿಲ್ಲೆಯಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ನಿಯೋಗದ ಸದಸ್ಯರು ಮಾಜಿ ಸಿ.ಎಂಗೆ ತಿಳಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಅವರ ಮೇಲೆ ಒತ್ತಡಹೇರಿ ಆದಷ್ಟು ಬೇಗ ರೇಣುಕಾಚಾರ್ಯ ಅವರನ್ನು ಬದಲಿಸಿ ಯೋಗೇಶ್ವರ್ ಅವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿಸುವಂತೆ ಕೋರಿದರು ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿ.ಎಂ ಸದಾನಂದಗೌಡ ಅವರು, ಈ ಬಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಮಾಜಿ ಸಿ.ಎಂಗೆ ಸನ್ಮಾನ: ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಮನಗರ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಚನ್ನಪಟ್ಟಣದ ಕನ್ನಮಂಗಲದ ಬಳಿ ಪಶು ಆಹಾರ ಘಟಕ ನಿರ್ಮಾಣ ಮಾಡಲು 20 ಎಕರೆ ಜಮೀನು ಮಂಜೂರು ಮಾಡಿಕೊಟ್ಟಿದಲ್ಲದೇ ಸರ್ಕಾರದಿಂದ 30 ಕೋಟಿಯ ನೆರವು ದೊರೆತಿದೆ. ಅಲ್ಲದೆ ಕುಡಿಯುವ ನೀರಿನ ಯೋಜನೆಗಳಿಗೆ ಸಂಪುಟ ಒಪ್ಪಿಗೆ ದೊರೆತಿದೆ. ಆದ್ದರಿಂದ ತಮ್ಮನ್ನು ಜಿಲ್ಲೆಯಲ್ಲಿ ಅಭಿನಂದಿಸಲು ಉದ್ದೇಶಿಸಲಾಗಿದೆ ಎಂದು ಕೆಎಂಎಫ್ ನಿರ್ದೇಶಕ ನಾಗರಾಜು ಮತ್ತು ರಾ-ಚ ಪ್ರಾಧಿಕಾರದ ಅಧ್ಯಕ್ಷ ಶೇಷಾದ್ರಿ ಅವರು ಸದಾನಂದಗೌಡರಿಗೆ ತಿಳಿಸಿದರು.

ಈ ಆಮಂತ್ರಣವನ್ನು ಮಾಜಿ ಸಿ.ಎಂ ಸ್ವೀಕರಿಸಿದ್ದಾರೆ. ಅಲ್ಲದೆ ಹಾಲಿನ ಬೆಲೆ ಹೆಚ್ಚಳ ಕುರಿತು ಮುಖ್ಯಮಂತ್ರಿ ಜತೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ನಿಯೋಗದಲ್ಲಿದ್ದ ಮುಖಂಡರು ತಿಳಿಸಿದ್ದಾರೆ.

ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಚ್.ಕೃಷ್ಣಮೂರ್ತಿ, ಜಿ.ಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಮಾಗಡಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಣ್ಣೇಗೌಡ, ಮುಖಂಡರಾದ ಐಯ್ಯಂಡಳ್ಳಿ ರಂಗಸ್ವಾಮಿ, ಧನಂಜಯ, ಕನಕಪುರ ತಾಲ್ಲೂಕು ಅಧ್ಯಕ್ಷ ಕೆ.ಪಿ.ಕುಮಾರ್, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವರಾಜು, ರಾಮನಗರ ನಗರಸಭಾ ಸದಸ್ಯರಾದ ದೊಡ್ಡಿ ಸುರೇಶ್, ಶಿವಕುಮಾರಸ್ವಾಮಿ, ಮಾಯಗಾನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಿ.ಲೋಕೇಶ್, ಮುಖಂಡರಾದ ಚನ್ನಕೇಶವ, ಶಿವಾನಂದ್, ರಾಜ್ಯ ಸಮಿತಿ ಸದಸ್ಯ ಎಲ್.ಎನ್.ಕೃಷ್ಣಪ್ಪ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT