ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ

Last Updated 3 ಫೆಬ್ರುವರಿ 2011, 7:00 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಗದ್ದುಗೆ ಹಿಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಲ್ಲಿ ಅಸಮಾಧಾನ ಹೊಗೆಯಾಡಲು ಆರಂಭಿಸಿದೆ. ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿಯೇ ಈ ಅಸಮಾಧಾನ ಸ್ಪೋಟಗೊಂಡಿರುವುದು ಇದಕ್ಕೆ ಪುಷ್ಠಿ ನೀಡಿದೆ.

ಬುಧವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಅದರಂತೆ ಕಳೆದ ಒಂದು ವಾರದಿಂದ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕಗಳೂ ಆರಂಭವಾಗಿದ್ದವು. ಜಿಲ್ಲೆಯಿಂದ ಬೆಂಗ ಳೂರಿಗೆ ಸ್ಥಳಾಂತರಗೊಂಡಿದ್ದ ಜಿ.ಪಂ. ಅಧ್ಯಕ್ಷರ ವಿಷಯ, ಮುಖಂಡರ ನಡುವಿನ ಹೊಂದಾಣಿಕೆಯ ಕೊರತೆಯಿಂದ ಕೊನೆಯ ಕ್ಷಣದವರೆಗೂ ಕಗ್ಗಂಟಾಗಿ ಉಳಿಯಿತು. ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಅಸಾಧ್ಯವಾಯಿತು.  ಸುರಪುರ, ಶಹಾಪುರ ಹಾಗೂ ಗುರು ಮಠಕಲ್ ಕ್ಷೇತ್ರದ ಮುಖಂಡರು ತಮ್ಮದೇ ಪಟ್ಟು ಮುಂದುವರಿಸಿದ್ದರಿಂದ ಯಾವುದೇ ನಿರ್ಧಾರ ಕೈಗೊಳ್ಳು ವಲ್ಲಿ ಸಭೆ ವಿಫಲವಾಗಿತ್ತು.

ಆದರೆ ರಾತ್ರಿ ನಡೆದ ಬಿರುಸಿನ ಚಟುವಟಿಕೆಯಲ್ಲಿ ಗುರುಮಠಕಲ್ ಕ್ಷೇತ್ರದ ಶಾಸಕ ಬಾಬುರಾವ ಚಿಂಚನಸೂರ ಅವರು, ಅನಸೂಯಾ ಬೋರಬಂಡ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಮುಂದಾದರು. ಆದರೆ ಸುರಪುರ ಮತ್ತು ಶಹಾಪುರ ತಾಲ್ಲೂಕುಗಳಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಮಾಜಿ ಸಚಿವ ರಾಜಾ ವೆಂಕಟಪ್ಪ ನಾಯಕ ಹಾಗೂ ಶರಣಬಸಪ್ಪ ದರ್ಶನಾಪೂರ ಸಹ ತಮ್ಮ ಪಟ್ಟು ಹಿಡಿದಿದ್ದರಿಂದ ಮಂಗಳವಾರ ರಾತ್ರಿಯವರೆಗೂ ಯಾವುದೇ ನಿರ್ಣಯ ಕೈಗೊಳ್ಳಲು ಆಗಲಿಲ್ಲ.

ಬುಧವಾರ ಬೆಳಿಗ್ಗೆಯೂ ಸಹ ಕಾಂಗ್ರೆಸ್ ವೀಕ್ಷಕ ಸಿ. ನಾರಾಯಣಸ್ವಾಮಿ ಸಮ್ಮುಖದಲ್ಲಿಯೇ ಅಸಮಾಧಾನ ಸ್ಫೋಟಗೊಂಡಿತು. ಒಂದು ಸಂದರ್ಭದಲ್ಲಿ ಸುರಪುರ ತಾಲ್ಲೂಕಿಗೆ ಅಧ್ಯಕ್ಷ ಸ್ಥಾನ ಹಾಗೂ ಯಾದಗಿರಿ ತಾಲ್ಲೂಕಿಗೆ ಉಪಾಧ್ಯಕ್ಷ ಸ್ಥಾನ ನೀಡಲು ಒಪ್ಪಿಗೆ ಸೂಚಿಸಿದ್ದ ಶಾಸಕ ಬಾಬುರಾವ ಚಿಂಚನಸೂರ, ನಂತರ ಅಧ್ಯಕ್ಷ ಸ್ಥಾನಕ್ಕೆ ಬಿಗಿಪಟ್ಟು ಹಿಡಿದಿದ್ದು, ಮುಖಂಡರ ಆಕ್ರೋಶಕ್ಕೆ ಕಾರಣ ವಾಯಿತು. ಕಾಂಗ್ರೆಸ್ ಪಕ್ಷದ ಮೂಲ ಗಳ ಪ್ರಕಾರ ಒಂದು ಹಂತದಲ್ಲಿ ಗುರು ಮಠಕಲ್ ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ ನೀಡದಿದ್ದಲ್ಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಬಾಬು ರಾವ ಚಿಂಚನಸೂರ ಬೆದರಿಕೆ ಹಾಕಿದ್ದರು. ಇದರಿಂದಾಗಿ ಪಕ್ಷದ ರಾಜ್ಯ ಮುಖಂಡರು, ಅಧ್ಯಕ್ಷ ಸ್ಥಾನವನ್ನು ಗುರುಮಠಕಲ್ ಮತಕ್ಷೇತ್ರಕ್ಕೆ ಬಿಟ್ಟುಕೊಡಲು ಸಮ್ಮತಿ ಸಬೇಕಾಯಿತು ಎಂದು ತಿಳಿದು ಬಂದಿದೆ.

ಬಹಿರಂಗಗೊಂಡ ಅಸಮಾಧಾನ: ಯಾದಗಿರಿ, ಶಹಾಪುರ, ಗುರುಮಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ರಿದ್ದು, ಸುರಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಪಕ್ಷದ ದೃಷ್ಟಿಯಿಂದ ಅಧ್ಯಕ್ಷ ಸ್ಥಾನವನ್ನು ಸುರಪುರ ತಾಲ್ಲೂ ಕಿಗೆ ನೀಡಿ. ಇದರಿಂದ ತಾಲ್ಲೂಕಿನಲ್ಲಿ ಪಕ್ಷವನ್ನು ಸಂಘಟಿಸಲು ಅನುಕೂಲ ವಾಗಲಿದೆ ಎಂಬ ವಾದ ವನ್ನು ಸುರಪುರ ಕ್ಷೇತ್ರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ರಾಜ ಶೇಖರ ವಜ್ಜಲ ಅವರು ಮುಖಂಡರ ಮುಂದಿಟ್ಟಿದ್ದರು.

ಆದರೆ ಕೊನೆಯ ಕ್ಷಣದಲ್ಲಿ ಗುರುಮಠಕಲ್ ಕ್ಷೇತ್ರಕ್ಕೆ ಜಿ.ಪಂ. ಅಧ್ಯಕ್ಷ ಸ್ಥಾನ ನೀಡಲು ಮುಖಂಡರು ತೀರ್ಮಾನ ತೆಗೆದುಕೊಂಡಿದ್ದು, ಸುರಪುರದ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಬಹಿರಂಗವಾಗಿಯೇ ಸುರಪುರ ತಾಲ್ಲೂಕಿನ ಮುಖಂಡರು, ವರಿಷ್ಠರನ್ನು ತರಾಟೆಗೆ ತೆಗೆದುಕೊಂಡರು. ಅಸಮಾಧಾನ ದಿಂದಾಗಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಅವರ ಬೆಂಬಲಿಗರು ಪ್ರವಾಸಿ ಮಂದಿರ ದಿಂದಲೇ ಸುರಪುರಕ್ಕೆ ವಾಪಸ್ಸಾದರು.

ಅದೇ ರೀತಿ ಶಹಾಪುರ ತಾಲ್ಲೂಕಿನ ಗೋಗಿ ಕೆ. ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಾಯವನ್ನು ಮುಂದಿಟ್ಟಿದ್ದ ಶಾಸಕ ಶರಣಬಸಪ್ಪ ದರ್ಶನಾಪೂರ ಸಹ ಅಸಮಾಧಾನಗೊಂಡಿದ್ದರು. ಇನ್ನೊಂದೆಡೆ ಯಾದಗಿರಿ ಕ್ಷೇತ್ರದ ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ತಟಸ್ಥ ನಿಲುವು ತಳೆದಿದ್ದು ಎದ್ದು ಕಾಣುತ್ತಿತ್ತು. ಸಭೆಯ ನಂತರ ವೀಕ್ಷಕ ಸಿ. ನಾರಾಯಣಸ್ವಾಮಿ ನಡೆ ಸಿದ ಪತ್ರಿಕಾಗೋಷ್ಠಿಯಲ್ಲೂ ಅಲ್ಲಮ ಪ್ರಭು ಪಾಟೀಲರನ್ನು ಹೊರತುಪಡಿಸಿ, ಯಾವುದೇ ಶಾಸಕರು ಕಾಣಲಿಲ್ಲ.

ಜಿ.ಪಂ. ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಅನಸೂಯಾ ಬೋರಬಂಡ್ ಹಾಗೂ ನಾಗನಗೌಡ ಸುಬೇದಾರ ಅವರನ್ನು ಅಭಿನಂದಿಸುವಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿನ ಅಸಮಾಧಾನ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಶಾಸಕ ಬಾಬುರಾವ ಚಿಂಚನಸೂರ, ಅಲ್ಲಮಪ್ರಭು ಪಾಟೀಲ ಮಾತ್ರ ವೇದಿಕೆಯಲ್ಲಿ ಕಾಣಿಸಿ ಕೊಂಡರು.

ಶರಣಬಸಪ್ಪ ದರ್ಶನಾಪುರ, ಡಾ. ಎ.ಬಿ. ಮಾಲಕರೆಡ್ಡಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್ ಸೇರಿದಂತೆ ಯಾರೋಬ್ಬರೂ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸುವ ಗೋಜಿಗೆ ಹೋಗಲಿಲ್ಲ. ಇದೆಲ್ಲವನ್ನೂ ವೀಕ್ಷಿಸುತ್ತಿದ್ದ ಕಾರ್ಯಕರ್ತರು, ಅಧಿಕಾರದ ಬೆನ್ನಲ್ಲೇ ಅಸಮಾಧಾನ ಸ್ಪೋಟಗೊಂಡಿರುವುದು ಸ್ಪಷ್ಟವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದುದು ಕೇಳಿ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT