ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರಕ್ಕೆ ನೀರು ಪೂರೈಕೆಗೆ ಕ್ರಮ

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ
Last Updated 7 ಸೆಪ್ಟೆಂಬರ್ 2013, 8:38 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಜನರ ಸಮಸ್ಯೆ, ಅಹವಾಲು, ಮನವಿ ಸ್ವೀಕರಿಸಲು ನಗರದ ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 116ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ತೆರೆಯಲಾಗಿದೆ.

ಗುರುವಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಸಚಿವ ಎಚ್.ಎಸ್. ಮಹದೇವಪ್ರಸಾದ್, `ಜಿಲ್ಲೆಯ ಸಾರ್ವಜನಿಕರು ತಮ್ಮನ್ನು ಸಂಪರ್ಕಿಸಿ ನೂತನವಾಗಿ ತೆರೆದಿರುವ ಕಚೇರಿಗೆ ಮನವಿ ಸಲ್ಲಿಸಬಹುದು. ಕಚೇರಿಯಲ್ಲಿ ಸಿಬ್ಬಂದಿ ನೇಮಿಸಿದ್ದು, ನಾಗರಿಕರ ಮನವಿ ಸ್ವೀಕರಿಸಿ ತಮ್ಮ ಗಮನಕ್ಕೆ ತರಲಿದ್ದಾರೆ' ಎಂದರು.

ತಾವು ವಾರದಲ್ಲಿ ಒಂದು ದಿನ ಕಚೇರಿಗೆ ಭೇಟಿ ನೀಡಲಿದ್ದೇನೆ. ಸಾಧ್ಯವಾದಷ್ಟು ಸೋಮವಾರ, ಮಂಗಳವಾರ ಜಿಲ್ಲೆ ಹಾಗೂ ಕ್ಷೇತ್ರ ಪ್ರವಾಸ ಕೈಗೊಳ್ಳುತ್ತೇನೆ. ಜಿಲ್ಲೆಗೆ ಭೇಟಿ ನೀಡುವ ಇತರೇ ಸಂದರ್ಭದಲ್ಲಿಯೂ ಜನರ ಕುಂದುಕೊರತೆ ಆಲಿಸುತ್ತೇನೆ. ಕಚೇರಿಗೂ ಭೇಟಿ ನೀಡಿ ಖುದ್ದು ಸಾರ್ವಜನಿಕರಿಂದ ಮನವಿ, ಸಮಸ್ಯೆ ಕೇಳಲಿದ್ದೇನೆ ಎಂದರು.

ತಮ್ಮ ಪ್ರವಾಸ ಕಾರ್ಯಕ್ರಮ, ಭೇಟಿ ಕುರಿತು ಮಾಹಿತಿ ನೀಡಲಾಗುವುದು. ತಾವು ಜಿಲ್ಲೆಯಲ್ಲಿ ಲಭ್ಯವಿಲ್ಲದ ವೇಳೆ ಕಚೇರಿಗೆ ಭೇಟಿ ನೀಡಿ ಮನವಿ ನೀಡಿದರೆ ಪರಿಶೀಲಿಸಿ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ನೀರಿನ ಸಮಸ್ಯೆ ಪರಿಹರಿಸಲು ಒತ್ತು: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಅಭಾವ ಉಂಟಾಗದಂತೆ ಕ್ರಮಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಆದ್ಯತೆ ಮೇರೆಗೆ ಸಮಸ್ಯೆ ಪರಿಹರಿಸಲು ತಿಳಿಸಿದ್ದಾರೆ. ಕೊಳವೆಬಾವಿ ಬತ್ತಿಹೋಗುವ ವೇಳೆ ಪರ್ಯಾಯ ವ್ಯವಸ್ಥೆ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಜಿಲ್ಲಾಮಟ್ಟದ ಸಭೆ ನಡೆಸಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಚರ್ಚೆ ನಡೆಸಲಾಗಿದೆ. ಮತ್ತೊಮ್ಮೆ ಸಭೆ ಕರೆದು ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು ಎಂದರು.

ಹೆಚ್ಚುವರಿ ಪರಿವರ್ತಕ ಅಳವಡಿಕೆ: ಜಿಲ್ಲಾ ಕೇಂದ್ರದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೂ ಕ್ರಮವಹಿಸಲಾಗಿದೆ. ತಿ. ನರಸೀಪುರದ ಪಂಪ್‌ಹೌಸ್‌ನಲ್ಲಿ ವಿದ್ಯುತ್ ಪರಿವರ್ತಕ ಸುಟ್ಟುಹೋಗಿದೆ. ಹೀಗಾಗಿ, ಮೈಸೂರಿನಿಂದ 1 ಸಾವಿರ ಕೆವಿ ಸಾಮರ್ಥ್ಯದ ಹೆಚ್ಚುವರಿ ವಿದ್ಯುತ್ ಪರಿವರ್ತಕ ತರಿಸಿಕೊಂಡು ಅಳವಡಿಸಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಶಾಸಕರು ಕೂಡ ತಿ. ನರಸೀಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾವೂ ಸಹ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ತ್ವರಿತವಾಗಿ ಸಮಸ್ಯೆ ಪರಿಹಾರ ಕಾಣಲಿದೆ. ಗೌರಿ-ಗಣೇಶನ ಹಬ್ಬಕ್ಕೂ ಮೊದಲೇ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ. ನಾಗಶ್ರೀ, ಸದಸ್ಯ ಬಿ.ಪಿ. ಪುಟ್ಟಬುದ್ಧಿ, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT