ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರದಲ್ಲಿ ಶೌಚಾಲಯಗಳಿಗೂ ಬರ

Last Updated 5 ಆಗಸ್ಟ್ 2013, 10:43 IST
ಅಕ್ಷರ ಗಾತ್ರ

ಯಾದಗಿರಿ: ನಗರ ಮೊದಲಿದ್ದಂತಿಲ್ಲ. ತಾಲ್ಲೂಕು ಕೇಂದ್ರವು ಜಿಲ್ಲಾ ಕೇಂದ್ರವಾಗಿ ಮಾರ್ಪಟ್ಟಿದೆ. ಸಾಕಷ್ಟು ಸುಧಾರಣೆಯೂ ಆಗಿದೆ ಎಂದುಕೊಂಡರೆ, ಅದು ಅಕ್ಷರಶಃ ತಪ್ಪಾದೀತು. ನಗರಕ್ಕೆ ಬರುವ ನಾಗರಿಕರು ಸ್ವಲ್ಪ ಎಚ್ಚರಿಕೆಯಿಂದಲೇ ಕಾಲಿಡಬೇಕು. ಈ ಊರಿನಲ್ಲಿ ಹುಡುಕಾಡಿದರೂ ಒಂದೂ ಸಾರ್ವಜನಿಕ ಶೌಚಾಲಯವಾಗಲಿ, ಮೂತ್ರಾಲಯವಾಗಲಿ ಸಿಗುವುದಿಲ್ಲ!

ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಗಾಂಧಿ ವೃತ್ತದ ಬಳಿ ಬಿಟ್ಟರೆ ಬೇರೆ ಯಾವುದೇ ಪ್ರದೇಶದಲ್ಲಿ ಸಾರ್ವಜನಿಕ ಮೂತ್ರಾಲಯಗಳಾಗಲಿ, ಶೌಚಾಲಯಗಳಾಗಲಿ ಕಾಣುವುದೇ ಇಲ್ಲ. ಜಿಲ್ಲಾ ಕೇಂದ್ರವಾಗಿ ನಾಲ್ಕು ವರ್ಷ ಆಗುತ್ತಾ ಬಂದಿದ್ದರೂ, ಇಲ್ಲಿ ಜನರಿಗೆ ಇಂತಹ ಸೌಕರ್ಯ ಕಲ್ಪಿಸುವ ಗೋಜಿಗೆ ಯಾರೂ ಹೋಗಿಲ್ಲ.

ನಗರದ ಪ್ರಮುಖ ರಸ್ತೆಗಳಲ್ಲಿ `ಕಸವನ್ನು ಕಸದ ತೊಟ್ಟಿಯಲ್ಲೇ ಹಾಕಿ,' `ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು' ಎಂದು ಸೂಚನೆಗಳನ್ನು ನಗರಸಭೆ ವತಿಯಿಂದ ಹಾಕಲಾಗಿದೆ. ಕಸ ಚೆಲ್ಲಲು ತೊಟ್ಟಿಯನ್ನೇನೋ ಇಡಲಾಗಿದೆ. ಆದರೆ ಮೂತ್ರ ವಿಸರ್ಜನೆಗೆ ಎಲ್ಲಿಗೆ ಹೋಗಬೇಕು ಎಂಬುದು ಮಾತ್ರ ಜನರಿಗೆ ತಿಳಿಯದಂತಾಗಿದೆ ಎನ್ನುತ್ತಾರೆ ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ.

ಗೋಡೆಗಳ ಮೇಲೆ ಬರಹ ಬರೆದಿರುವ ನಗರಸಭೆಯವರು, ನಗರದ ಜನನಿಬಿಡ ಪ್ರದೇಶಗಳಲ್ಲಿ ಶೌಚಾಲಯ, ಮೂತ್ರಾಲಯಗಳನ್ನು ನಿರ್ಮಾಣ ಮಾಡುವ ಗೋಜಿಗೆ ಹೋಗದೇ ಇರುವುದು ವಿಪರ್ಯಾಸ. ಜಿಲ್ಲಾಡಳಿತವೂ ಈ ಬಗ್ಗೆ ಯಾವುದೇ ಸೂಚನೆ ನೀಡದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳುತ್ತಾರೆ.

ನಗರದ ಸ್ಟೇಶನ್ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ, ನ್ಯಾಯಾಲಯ ಸಂಕೀರ್ಣ, ಜಿಲ್ಲಾ ಪಂಚಾಯಿತಿ ಕಚೇರಿಗಳಿರುವ ರಸ್ತೆ, ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶವಿರುವ ಗಂಜ್ ರಸ್ತೆಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಓಡಾಡುತ್ತಾರೆ. ಆದರೆ ಈ ಸ್ಥಳದಲ್ಲಿ ಶೌಚಾಲಯವಿರಲಿ, ಮೂತ್ರಾಲಯಗಳೂ ಇಲ್ಲದಾಗಿದೆ. 

ನಗರಸಭೆಯವರು ಗೋಡೆ ಬರಹ ಬರೆಯುವಲ್ಲಿ ತೋರಿರುವ ಕರ್ತವ್ಯ ನಿಷ್ಠೆಯನ್ನು ಶೌಚಾಲಯ, ಮೂತ್ರಾಲಯಗಳ ನಿರ್ಮಾಣ ಮಾಡುವುದರಲ್ಲಿ ತೋರಬೇಕು. ಅಂದಾಗ ಸುಂದರ, ಸ್ವಚ್ಛ ನಗರ ನಿರ್ಮಾಣದ ಕನಸು ನನಸಾಗುತ್ತದೆ. ಕೇವಲ ಕಸದ ತೊಟ್ಟಿಗಳನ್ನು ಇಟ್ಟು, ಕಸವನ್ನು ಇಲ್ಲೇ ಹಾಕಿ ಎನ್ನುವಂತೆ ಮೂತ್ರಾಲಯಗಳನ್ನು ನಿರ್ಮಿಸಲು ಮುಂದಾಗಬೇಕು ಎಂದು ಹೇಳುತ್ತಾರೆ.

ಜಿಲ್ಲಾ ಕೇಂದ್ರವಾಗಿರುವುದರಿಂದ ನಗರಕ್ಕೆ ಬರುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದಕ್ಕೆ ಅನುಗುಣವಾಗಿ ಸೌಲಭ್ಯಗಳನ್ನೂ ಕಲ್ಪಿಸಬೇಕು. ಇದೀಗ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಒಂದು ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಹೊರತು ಪಡಿಸಿದರೆ, ಹೊಸ ಮೂತ್ರಾಲಯಗಳಾಗಲಿ, ಶೌಚಾಲಯಗಳಾಗಲಿ ಇಲ್ಲದೇ ಇರುವುದರಿಂದ ಜನರು ತೊಂದರೆ ನುಭವಿಸುವಂತಾಗಿದೆ. ಈ ಬಗ್ಗೆ ಕೂಡಲೇ ಆಡಳಿತ ವರ್ಗ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಕರವೇ   ಜಿಲ್ಲಾ    ಘಟಕದ    ಅಧ್ಯಕ್ಷಟಿ. ಎನ್.ಭೀಮುನಾಯಕ.

ಜಿಲ್ಲೆಗೆ ಬರುವ ಜನರಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದರಿಂದ ಜನರು ಇಲ್ಲಿಗೆ ಬರಲು ಹಿಂದೇಟು ಹಾಕುವಂತಾಗಿದೆ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಯಾದಗಿರಿಯಲ್ಲಿ, ಶೌಚಾಲಯಗಳ ನಿರ್ಮಾಣದಲ್ಲೂ ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT