ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೋರ್ಟ್: ನ್ಯಾಯಿಕ ಸೇವಾ ಕೇಂದ್ರ ಶುರು

Last Updated 12 ಸೆಪ್ಟೆಂಬರ್ 2011, 6:10 IST
ಅಕ್ಷರ ಗಾತ್ರ

ಗದಗ: ಕೋರ್ಟ್ ಕಲಾಪಗಳು ಹಾಗೂ ನ್ಯಾಯದಾನ ಪ್ರಕ್ರಿಯೆಗಳನ್ನು ಅನ್‌ಲೈನ್‌ಗೊಳಿಸುವತ್ತ ಮುಂದಡಿ ಇಟ್ಟಿರುವ ಗದುಗಿನ ಜಿಲ್ಲಾ ನ್ಯಾಯಾಲಯ ಇದಕ್ಕೆ ಪೂರಕವಾಗಿ ನ್ಯಾಯಿಕ ಸೇವಾ ಕೇಂದ್ರವನ್ನು ಪ್ರಾರಂಭಿಸಿದೆ.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇರುವ ಉಚಿತ ಕಾನೂನು ಸಲಹಾ ಕೇಂದ್ರದ ಸಮೀಪದಲ್ಲಿ ನ್ಯಾಯಿಕ ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಈ ಕೇಂದ್ರದಲ್ಲಿ ಮೂರ‌್ನಾಲ್ಕು ಮಂದಿ ಕೋರ್ಟ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಕೀಲರೊಬ್ಬರು ತಮ್ಮ ಕಕ್ಷಿದಾರರ ಪರವಾಗಿ ಕೋರ್ಟ್‌ನಲ್ಲಿ ದಾವೆ ಹೂಡುವುದಕ್ಕೆ ಪ್ರಥಮವಾಗಿ ಮೊಕದ್ದಮೆಯನ್ನು ನೋಂದಣಿ ಮಾಡಿಸಬೇಕಾಗುತ್ತದೆ. ನ್ಯಾಯಿಕ ಸೇವಾ ಕೇಂದ್ರದ ಕಾರ್ಯ ಇಲ್ಲಿಂದ ಆರಂಭವಾಗುತ್ತದೆ. ಮೊಕದ್ದಮೆಯನ್ನು ನೋಂದಣಿ ಮಾಡಿಕೊಂಡು, ಅದಕ್ಕೆ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ. ನೋಂದಣಿಯ ಹಿರಿತನದ ಆಧಾರದ ಮೇಲೆ ಅಹವಾಲು ಕೇಳುವ ದಿನವನ್ನು ಗೊತ್ತು ಮಾಡಲಾಗುತ್ತದೆ. ಇಷ್ಟು ಪ್ರಕ್ರಿಯೆಗಳು ಅನ್‌ಲೈನ್‌ನಲ್ಲಿ ದಾಖಲಾಗಿಬಿಡುತ್ತವೆ.

ಈ ದಾಖಲೆಗಳನ್ನು ಸಂಬಂಧಿಸಿದ ಕೋರ್ಟ್‌ನ ಒಳಗೆ ನ್ಯಾಯಾಧೀಶರ ಮಗ್ಗುಲಲ್ಲಿ ಇರುವ ಕಂಪ್ಯೂಟರ್‌ನಲ್ಲಿ ನೋಡಬಹುದು. ವಕೀಲರು ತಮ್ಮ ಕೇಸಿನ ನೋಂದಣಿ ಸಂಖ್ಯೆಯನ್ನು ತಿಳಿಸಿದಾಗ, ಕೋರ್ಟ್‌ನ ಸಿಬ್ಬಂದಿ ಕಂಪ್ಯೂಟರ್‌ನಲ್ಲಿ ಆ ಕೇಸಿನ ಫೈಲ್ ತೆರೆದು ನ್ಯಾಯಾಧೀಶರ ಅವಗಾಹನೆಗೆ ತರುತ್ತಾರೆ. ಕಾರ್ಯ-ಕಲಾಪ ಮಗಿದ ನಂತರ ಸಂಬಂಧಿಸಿದ ಕೇಸಿನ ವಿವರಗಳು, ಮುಂದಿನ ದಿನಾಂಕ ಎಲ್ಲವನ್ನು ಅಲ್ಲೇ ಕಂಪ್ಯೂಟರ್‌ನಲ್ಲಿ ಅನ್‌ಲೈನ್‌ಗೊಳಿಸಲಾಗುತ್ತದೆ.

ದಿನದ ಕಾರ್ಯ-ಕಲಾಪ ಮುಗಿದ ನಂತರ ಇಡೀ ಒಂದು ವರದಿಯನ್ನು ಒಳಗೊಂಡ `ಎ-ಡೈರಿ~ಯನ್ನು ಅನ್‌ಲೈನ್ ಮೂಲಕವೇ ಹೈಕೋರ್ಟ್‌ಗೆ ಕಳುಹಿಸಲಾಗುತ್ತದೆ.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಒಟ್ಟು ಎಂಟು ಕೋರ್ಟ್‌ಗಳಿವೆ. ಜಿಲ್ಲಾ ನ್ಯಾಯಾಲಯ, ತ್ವರಿತ ನ್ಯಾಯಾಲಯ, ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಕೋರ್ಟ್ (ಸೀನಿಯರ್ ಡಿವಿಜನ್), ಅಡಿಷನಲ್ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಕೋರ್ಟ್ ( ಸೀನಿಯರ್ ಡಿವಿಜನ್), ಪ್ರಿನ್ಸಿಪಲ್ ಮುನ್ಸಿಫ್ ಕೋರ್ಟ್ (ಜ್ಯೂನಿಯರ್ ಡಿವಿಜನ್), ಜೆಎಂಸಿ-1, ಜೆಎಂಸಿ-2 (ಜ್ಯೂನಿಯರ್ ಡಿವಿಜನ್) ಕೋರ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಆರು ಕೋರ್ಟಿಗೆ ಮಾತ್ರ ನ್ಯಾಯಿಕ ಸೇವಾ ಕೇಂದ್ರದ ಸೌಲಭ್ಯ ಒದಗಿಸಲಾಗಿದೆ.

ಸೇವಾ ಕೇಂದ್ರ ಪ್ರಾರಂಭಕ್ಕಾಗಿ ಸುಮಾರು 30 ಕಂಪ್ಯೂಟರ್ ಅಳವಡಿಸಲಾಗಿದೆ. ಕೋರ್ಟ್ ಒಳಗೆ, ಸೇವಾ ಕೇಂದ್ರದಲ್ಲಿ ಹಾಗೂ ಶಿರಸ್ತೇದಾರರ ಬಳಿ ಕಂಪ್ಯೂಟರ್ ಇಡಲಾಗಿದೆ. ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಸೇವಾ ಕೇಂದ್ರದ ಉಸ್ತುವಾರಿಯನ್ನು ವಹಿಸಿಕೊಂಡಿರುವ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದ (ಎನ್‌ಐಸಿ)ಯ ಅಧಿಕಾರಿ ತುಂಬೇಟಿ ಸುಬ್ಬರಾವ್ `ಪ್ರಜಾವಾಣಿ~ಗೆ ತಿಳಿಸಿದರು.

ನ್ಯಾಯಿಕ ಸೇವಾ ಕೇಂದ್ರದಿಂದ ನ್ಯಾಯಾಲಯದ ಕಾರ್ಯ-ಕಲಾಪ ಅನ್‌ಲೈನ್ ಆಗಿರುವುದು ಉತ್ತಮ ಹೆಜ್ಜೆಯಾಗಿದೆ. ಇದು ಹೀಗೆ ಮುಂದುವರಿದು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಕೋರ್ಟ್‌ನಲ್ಲೂ ಸಹ ಕಾಗದರಹಿತ ಆಡಳಿತವನ್ನು ಕಾಣಬಹುದು ಎಂದು ವಕೀಲ ಎಂ.ಎಂ.ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT