ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ನ್ಯಾಯಾಧೀಶರ ಪರೀಕ್ಷೆ: ಒಬ್ಬರೇ ಉತ್ತೀರ್ಣ!

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಕಳೆದ ವಾರ ಪ್ರಕಟಗೊಂಡಾಗ ವಕೀಲ ಸಮುದಾಯದಲ್ಲಿ ದಿಗ್ಭ್ರಮೆ. ಕಾರಣ, ಪರೀಕ್ಷೆ ತೆಗೆದುಕೊಂಡಿದ್ದ 518 ಮಂದಿ ವಕೀಲರ ಪೈಕಿ ತೇರ್ಗಡೆಗೊಂಡವರು ಒಬ್ಬರೇ ಒಬ್ಬರು!

ನ್ಯಾಯಾಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕನಿಷ್ಠ ಫಲಿತಾಂಶ ಪ್ರಕಟಗೊಂಡಿದೆ ಎನ್ನಲಾಗಿದ್ದು, ಇದು  ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅನುಭವಿ ವಕೀಲರೂ ಕನಿಷ್ಠ ಅಂಕ ಗಳಿಸದ ಪರಿಸ್ಥಿತಿ ಏಕೆ ಬಂದಿದೆ ಎನ್ನುವುದು ಚರ್ಚೆಯ ವಸ್ತುವಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇದ್ದ ಒಂಬತ್ತು ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ನಡೆದಿತ್ತು. ಹೈಕೋರ್ಟ್ ನಡೆಸುವ ಪರೀಕ್ಷೆ ಇದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಏಳು ವರ್ಷಗಳ ಕಾಲ ವಕೀಲಿ ವೃತ್ತಿ ನಡೆಸಿರುವುದು ಕಡ್ಡಾಯ. ಮೊದಲು ಲಿಖಿತ ಪರೀಕ್ಷೆ, ಇದರಲ್ಲಿ ತೇರ್ಗಡೆ ಹೊಂದಿದರೆ ಮೌಖಿಕ ಪರೀಕ್ಷೆ. ಹೈಕೋರ್ಟ್‌ನ ಹಿರಿಯ ವಕೀಲರು ಹಾಗೂ ಇತರ ತಜ್ಞರು ಸೇರಿ ಪ್ರಶ್ನೆ ಪತ್ರಿಕೆಯನ್ನು ತಯಾರು ಮಾಡುತ್ತಾರೆ. ಸಿವಿಲ್ ಹಾಗೂ ಕ್ರಿಮಿನಲ್ ವಿಷಯಗಳ ಎರಡು ಲಿಖಿತ ಪತ್ರಿಕೆಗಳ ಪರೀಕ್ಷೆ ನಡೆಸಲಾಗುತ್ತದೆ.

ಶೂನ್ಯ, ಒಂದಂಕಿ: ಒಟ್ಟು 300 ಅಂಕಗಳ ಪರೀಕ್ಷೆ ಇದು. ಸಂದರ್ಶನಕ್ಕೆ ಅರ್ಹತೆ ಪಡೆಯಲು ಎರಡೂ ಪತ್ರಿಕೆಗಳಲ್ಲಿ ತಲಾ ಕನಿಷ್ಠ 75 ಅಂಕಗಳು ಕಡ್ಡಾಯ. ಆದರೆ ಕಳೆದ ವಾರ ಪ್ರಕಟಗೊಂಡ ಫಲಿತಾಂಶ ಎಲ್ಲರಿಗೂ ಅಚ್ಚರಿ ಉಂಟು ಮಾಡಿತ್ತು. 518 ಮಂದಿ ಪೈಕಿ, ಕೇವಲ 12 ಅಭ್ಯರ್ಥಿಗಳು ಸಿವಿಲ್ ವಿಷಯದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರೆ, ಕ್ರಿಮಿನಲ್ ವಿಷಯದಲ್ಲಿ `ಜಯ ಸಾಧಿಸಿದವರು~ ಒಬ್ಬರೇ ಒಬ್ಬರು! ಮೌಖಿಕ ಪರೀಕ್ಷೆಗೆ ಇವರೊಬ್ಬರೇ ಅರ್ಹತೆ ಪಡೆದವರು. ಕೆಲವರು ಶೂನ್ಯ ಗಳಿಸಿದ್ದರೆ, ಇನ್ನು ಹಲವರು ಒಂದಂಕಿ ಗಳಿಸಿದ್ದಾರೆ. 

ಈ ಫಲಿತಾಂಶ ತಜ್ಞ ವಕೀಲರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಕೀಲ ಸಮುದಾಯದಲ್ಲಿ ನುರಿತವರ ಕೊರತೆ ಇದೆಯೇ ಅಥವಾ ನುರಿತ ವಕೀಲರು ನ್ಯಾಯಾಧೀಶರಾಗಲು ಹಿಂಜರಿಯುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಪರೀಕ್ಷೆ ತೆಗೆದುಕೊಂಡ ಕೆಲ ವಕೀಲರು ಪ್ರಶ್ನೆ ಪತ್ರಿಕೆ ಬಹಳ ಕಠಿಣ ಇತ್ತು ಎಂದು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ತಾವು ಚೆನ್ನಾಗಿಯೇ ಬರೆದಿದ್ದರೂ ಫಲಿತಾಂಶ ಮಾತ್ರ ತದ್ವಿರುದ್ಧವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಅವಕಾಶ ಕಡಿಮೆ: ಈ ಕುರಿತು `ಪ್ರಜಾವಾಣಿ~ ಕೆಲ ಹಿರಿಯ ವಕೀಲರನ್ನು ಸಂಪರ್ಕಿಸಿದಾಗ ಅವರು, `ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ~ಯಂತಹ ಪ್ರಸಿದ್ಧ ಕಾಲೇಜುಗಳಲ್ಲಿ ಕಲಿತಿರುವ ಹಲವು ವಿದ್ಯಾರ್ಥಿಗಳು ನ್ಯಾಯಾಧೀಶರಾಗಲು ಮುಂದೆ ಬರುವುದಿಲ್ಲ. ಅವರಿಗೆ ಕಾರ್ಪೋರೇಟ್ ವಲಯದಲ್ಲಿ ಅವಕಾಶಗಳು ಹೆಚ್ಚಾಗಿ ಇದ್ದು ಸಂಬಳವೂ ಚೆನ್ನಾಗಿ ಸಿಗುತ್ತದೆ. ಜೊತೆಗೆ ಅವರಿಗೆ ವೃತ್ತಿಯಲ್ಲಿ ಬೆಳೆಯಲು ಅವಕಾಶಗಳೂ ಇವೆ. ಆದರೆ ನ್ಯಾಯಾಧೀಶರ ಹುದ್ದೆ ಹಾಗಲ್ಲ. ಸಂಬಳ ಇದ್ದರೂ, ಇದರಲ್ಲಿ ಬಡ್ತಿಗೆ ಹೆಚ್ಚಿನ ಅವಕಾಶ ಇಲ್ಲ, ಇದರಿಂದ ವೃತ್ತಿಯಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಪ್ರತಿಭಾನ್ವಿತರ ಪೈಕಿ ಹೆಚ್ಚಿನವರು ಇದನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ.

`ಇನ್ನೊಂದೆಡೆ, ಇತರ ವಿದ್ಯಾಲಯಗಳಲ್ಲಿ ಕಲಿತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಸಂಪೂರ್ಣ ತಯಾರಿಯೊಂದಿಗೆ ಹೋಗುವುದಿಲ್ಲ. ವಕೀಲಿ ವೃತ್ತಿಯಲ್ಲಿ ಅಧ್ಯಯನ ಬಹಳ ಮುಖ್ಯ. ಆದರೆ ಯುವ ವಕೀಲರಲ್ಲಿ ಅಧ್ಯಯನದ ಕೊರತೆ ಇದೆ. ಒಮ್ಮೆ ಕಾಲೇಜು ಮುಗಿದ ಮೇಲೆ ಪುಸ್ತಕದತ್ತ ದೃಷ್ಟಿ ಹಾಯಿಸುವುದಿಲ್ಲ. ಈ ವೃತ್ತಿಯ ಬಗ್ಗೆ ತಿಳಿದುಕೊಳ್ಳುವ ಮುಂಚೆಯೇ ವೃತ್ತಿಗೆ ಧುಮುಕುತ್ತಾರೆ. ಎನ್‌ರೋಲ್ (ವಕೀಲಿ ವೃತ್ತಿ ನಡೆಸಲು ಸಿಗುವ ಅನುಮತಿ) ಆದ ದಿನದಿಂದ ಏಳು ವರ್ಷಗಳ ಅವಧಿಯನ್ನು ಗಣನೆಗೆ ತೆಗೆದುಕೊಂಡು ಅರ್ಜಿ ಸಲ್ಲಿಸುತ್ತಾರೆ. ಆದರೆ ಈ ಏಳು ವರ್ಷಗಳಲ್ಲಿ ಅವರು ಯಾವ ರೀತಿ ವೃತ್ತಿ ನಡೆಸಿದ್ದರು ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ. ಇವೆಲ್ಲ ಇಂತಹ ಫಲಿತಾಂಶಕ್ಕೆ ಕಾರಣ ಆಗಿರಬಹುದು~ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತರಬೇತಿ ಕೊರತೆ: `ನ್ಯಾಯಾಧೀಶರ ಹುದ್ದೆಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿಂದ ತರಬೇತಿ ನೀಡಲಾಗುತ್ತದೆ. ಕಳೆದ ಬಾರಿ ಕೆಲವು ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ. ಆದರೆ ಬೆಂಗಳೂರಿನ ಕೆಲವೇ ಜನರಿಗೆ ತರಬೇತಿ ನೀಡಲಾಗಿತ್ತು. ಆದರೆ ಅವರೂ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲಿಲ್ಲ. ತಾವು ಚೆನ್ನಾಗಿಯೇ ಪರೀಕ್ಷೆ ಬರೆದಿದ್ದರೂ ಈ ರೀತಿ ಆಗಿದೆ ಎಂಬುದು ಅಭ್ಯರ್ಥಿಗಳ ಉತ್ತರ. ಈ ಹಿನ್ನೆಲೆಯಲ್ಲಿ ನಿಜವಾಗಿ ಏನಾಗಿದೆ ಎನ್ನುವುದು ತಿಳಿಯುತ್ತಿಲ್ಲ. ಇಂತಹ ಗೊಂದಲ ನಿವಾರಣೆಗೆ ಮೌಲ್ಯಮಾಪನ ಪಾರದರ್ಶಕವಾಗಿರಬೇಕು. ಈಚೆಗೆ ಹಲವು ಪರೀಕ್ಷೆಗಳಲ್ಲಿ ನಡೆಸುತ್ತಿರುವಂತೆ ಉತ್ತರ ಪತ್ರಿಕೆಯ ಪ್ರತಿಯನ್ನು ಅಭ್ಯರ್ಥಿಗಳಿಗೆ ನೀಡುವುದು ಒಳ್ಳೆಯದು~ ಎಂಬುದು `ಫೋರಂ ಫಾರ್ ಜ್ಯುಡಿಷಿಯಲ್ ಅಕೌಂಟಬಿಲಿಟಿ~ಯ ರಾಜ್ಯ ಘಟಕದ ಸಂಚಾಲಕ ಹಾಗೂ ಪರಿಷತ್ತಿನ ಮಾಜಿ ಅಧ್ಯಕ್ಷ ವೈ.ಆರ್. ಸದಾಶಿವರೆಡ್ಡಿ ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT