ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ವರ್ಗಾವಣೆಗೆ ಆಗ್ರಹ

ಚರ್ಚೆಗೆ ಬಾರದ ಕುಡಿಯುವ ನೀರು ಸಮಸ್ಯೆ: ಸಭೆಯಿಂದ ಹೊರನಡೆದ ಸದಸ್ಯರು
Last Updated 14 ಸೆಪ್ಟೆಂಬರ್ 2013, 6:21 IST
ಅಕ್ಷರ ಗಾತ್ರ

ಬೀದರ್: ಕುಡಿಯುವ ನೀರು ಸಮಸ್ಯೆ ಕುರಿತು ಚರ್ಚಿಸಲು ಶುಕ್ರವಾರ ಕರೆಯಲಾಗಿದ್ದ ಜಿಲ್ಲಾ ಪಂಚಾಯಿತಿಯ ವಿಶೇಷ ಸಭೆಯು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ವಿರುದ್ಧ ಸದಸ್ಯರು ಪಕ್ಷ ಭೇದ ಮರೆತು ಆಕ್ರೋಶ ವ್ಯಕ್ತಪಡಿಸಲು ವೇದಿಕೆಯಾಯಿತು.

‘ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಸದಸ್ಯರ ಗಮನಕ್ಕೂ ತಾರದೇ ಅವರ ಕ್ಷೇತ್ರದಲ್ಲಿ ಪಿಡಿಒ­ಗಳನ್ನು ಅಮಾನತು ಮಾಡಿ­ದ್ದಾರೆ. ರೂ. 1 ಲಕ್ಷ ಒಳಗಿನ ಕಾಮ­ಗಾರಿಗೆ ನಿಯಮದಲ್ಲಿ ಅವಕಾಶ ಇರದಿದ್ದರೂ 3ನೇ ವ್ಯಕ್ತಿಯಿಂದ ತಪಾಸಣೆ ಮಾಡಿ­ಸುತ್ತಿದ್ದಾರೆ’ ಎಂದು ಆರೋಪಿಸಿದರು.

  ‘ಇಂಥ ಅಧಿಕಾರಿ ನಮಗೆ ಅಗತ್ಯವಿಲ್ಲ. ಇವರನ್ನು ವರ್ಗಾವಣೆ ಮಾಡಬೇಕು. ಅಲ್ಲಿಯವರೆಗೂ ಸಭೆಯಲ್ಲಿ ಭಾಗ­ವಹಿಸುವುದಿಲ್ಲ’ ಎಂದು ಧ್ವನಿಮತದ ನಿರ್ಣಯ ಅಂಗೀಕರಿಸಿದರು.

  ಸದಸ್ಯ ವಸಂತ ಬಿರಾದಾರ ಅವರ ಈ ಮಾತಿಗೆ ಎಲ್ಲ ಸದಸ್ಯರು ಕೈ ಎತ್ತುವ ಮೂಲಕ ಅನುಮೋದನೆ ನೀಡಿದರು.

  ‘ಇದು, ಕುಡಿಯುವ ನೀರಿನ ಸಮಸ್ಯೆ ಚರ್ಚಿಸಲು ಕರೆಯಲಾದ ಸಭೆ’ ಎಂದು ಒಂದು ಹಂತದಲ್ಲಿ ಸಿಇಒ ಅವರು ಹೇಳಿದಾಗ, ‘ಮೊದಲು ಈ ಪ್ರಶ್ನೆಗಳಿಗೆ ಉತ್ತರ ನೀಡಿ. ಅಧ್ಯಕ್ಷರ ಸಮ್ಮತಿ ಪಡೆದೇ ಈ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೇವೆ’ ಎಂದು ಸದಸ್ಯರು ವಾಗ್ದಾಳಿ ನಡೆಸಿದರು.

ಸಭೆಯಿಂದ ಹೊರ ನಡೆದರು: ನಿರ್ಣ­ಯ ಕುರಿತು ಸಮ್ಮತಿ ವ್ಯಕ್ತಪಡಿಸಿದ ಸದಸ್ಯರು ಸಭೆಯಿಂದ ಹೊರನಡೆದರು. ಈ ಹಂತದಲ್ಲಿ ಅಧ್ಯಕ್ಷೆ ಸಂತೋಷಮ್ಮಾ ಮಾತನಾಡಲು ಮುಂದಾದಾಗ, ‘ಅಧಿಕಾರಿ ವರ್ಗಾವಣೆ ಆಗುವವರೆಗೂ ಸಭೆ­ಯನ್ನು ಕರೆಯಬೇಡಿ. ಕುಡಿಯುವ ನೀರು ವಿಷಯವನ್ನು ಚರ್ಚಿಸುವುದು ಬೇಡ’ ಎಂದು ವಸಂತ ಬಿರಾದಾರ್ ಹೇಳಿದರು.

ಸಭೆ ಆರಂಭ ಆಗುತ್ತಿದ್ದಂತೆ ಸದಸ್ಯೆ ಪ್ರಜಾದೇವಿ, ‘ಸಿಇಒ ನಮ್ಮ ಮನೆಯವರಿಗೆ ಗೌರವ ಕೊಡುತ್ತಿಲ್ಲ. ಮೊದಲು ಆ ವಿಷಯ ಚರ್ಚಿಸಿ’ ಎಂದರು. ಹಿಂದೆಯೇ ಮಾಜಿ ಅಧ್ಯಕ್ಷರೂ ಆದ ಕುಶಾಲ ಪಾಟೀಲ್ ಗಾದಗಿ, ‘ಪಿಡಿಒಗಳನ್ನು ಅಮಾನತು ಪಡಿಸಿರುವ ವಿಷಯ ಉಲ್ಲೇಖಿಸಿದರು.

‘ಸಿಇಒ ಈಚೆಗೆ ಅನೇಕ ಪಿಡಿಒಗಳನ್ನು ಅಮಾನತು ಪಡಿಸಿದ್ದಾರೆ. ಅಮಾನತು ಪಡಿಸುವ ಮುನ್ನ ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೂ ತರ­ಲಾಗಿಲ್ಲ. ಜನಪ್ರತಿನಿಧಿಗಳು, ಸಾರ್ವ­ಜನಿಕರ ದೂರು ಆಧರಿಸಿ ಅಮಾನತು­-­­ಮಾಡಲಾಗಿದೆ ಎಂದು ಆದೇಶದಲ್ಲಿ ಇದೆ. ದೂರು ನೀಡಿ­ದವರು ಯಾರು, ಅದರ ಪ್ರತಿಗಳ­ನ್ನಾದರೂ ನೀಡಿ’ ಎಂದು  ಪ್ರಶ್ನಿಸಿದರು.

ಡಿಸಿ ಕಚೇರಿಯಲ್ಲೇ ಇರುತ್ತಾರೆ:  ಉಪಾಧ್ಯಕ್ಷೆ ಲತಾ, ‘ಸಿಇಒ ಅವರು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡು­ತ್ತಾರೆ. ನಮಗೆ ಅರ್ಥ ಆಗುವುದಿಲ್ಲ. ಹೆಚ್ಚಿನ ಭಾಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಇರುತ್ತಾರೆ’ ಎಂದು ಆರೋಪಿಸಿದರು.

ಸದಸ್ಯ ಮಹಾಂತಯ್ಯಾ ತೀರ್ಥ, ‘ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ಪಿಡಿಒ ಅನ್ನು ವರ್ಗಾವಣೆ ಮಾಡಿದ್ದೀರಿ. ಇದು ಸರಿಯೇ?  ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಸಿಇಒ ಪಿಡಿಒ ವರ್ಗಾವಣೆ ಕುರಿತು ಬಳಿಕ ತಿಳಿಸುತ್ತೇನೆ ಎಂದರು. ಇದಕ್ಕೆ ವೆಂಕಟ ಬಿರಾದಾರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ ಸಿಇಒ ವಿರುದ್ಧ ನಿರ್ಣಯಕ್ಕೆ ಸಹ ಮತ ವ್ಯಕ್ತಪಡಿಸಿ ಸಭೆಯಿಂದ ಸದಸ್ಯರು ಹೊರನಡೆದರು.

ಸಭೆಯಲ್ಲಿ ಕೇಳಿದ್ದು...

‘ಕುಡಿವ ನೀರು ಸಮಸ್ಯೆ ಚರ್ಚಿಸೋಣ’
‘ಆಡಳಿತಾತ್ಮಕ ವಿಷಯಗಳಿಗೆ ಅನುಗುಣವಾಗಿ ಕೆಲ ಪಿಡಿಒಗಳನ್ನು ವರ್ಗಾವಣೆ ಮಾಡಲಾಗಿದೆ. ಈ ವಿಶೇಷ ಸಭೆ ಕುಡಿಯುವ ನೀರು ಸಮಸ್ಯೆ ಕುರಿತು ಚರ್ಚಿಸಲು ಕರೆಯಲಾಗಿದೆ. ಆ ಬಗೆಗೆ ಮಾತನಾಡೋಣ’.
-ಉಜ್ವಲ್ ಕುಮಾರ್ ಘೋಷ್, ಸಿಇಒ

‘ಸದಸ್ಯರಿಗೆ ಗೌರವ ಕೊಡುತ್ತಿಲ್ಲ’

‘ಸಿಇಒ ಅವರು ಸದಸ್ಯರಿಗೆ ಗೌರವ ಕೊಡುತ್ತಿಲ್ಲ. ವಿಶ್ವಾಸಕ್ಕೂ ತೆಗೆದುಕೊಳ್ಳುತ್ತಿಲ್ಲ. ಅವರನ್ನು ವರ್ಗಾವಣೆ ಮಾಡಬೇಕು ಎಂಬುದು ಸದಸ್ಯರ ಒತ್ತಾಯ. ಸರ್ಕಾರ ಈ ಬಗೆಗೆ 15 ದಿನದಲ್ಲಿ ನಿರ್ಧಾರ ಕೈಗೊಳ್ಳಬೇಕು’
ಸಂತೋಷಮ್ಮಾ, ಅಧ್ಯಕ್ಷೆ

ಯಾವಾಗಲೂ ಡಿಸಿ ಕಚೇರಿಯಲ್ಲೇ ಇರ್ತಾರೆ’
‘ಸಿಇಒ ಅವರು ಬರೀ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಾರೆ. ನಮಗೆ ಅರ್ಥ ಆಗುವುದಿಲ್ಲ. ಫೋನ್ ಮಾಡಿದರೆ ಸಭೆಯಲ್ಲಿದ್ದೇನೆ ಎನ್ನುತ್ತಾರೆ. ಹೆಚ್ಚಿನ ಭಾಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಇರುತ್ತಾರೆ’
–ಲತಾ, ಉಪಾಧ್ಯಕ್ಷೆ

‘ತೋಚಿದಂತೆ ಆಡಳಿತ ಮಾಡ್ತಾ ಇದ್ದಾರೆ’
‘ಒಂದು ಲಕ್ಷ ರೂಪಾಯಿ ಒಳಗಿನ ಕಾಮಗಾರಿಗಳಿಗೆ ಮೂರನೇ ವ್ಯಕ್ತಿಯಿಂದ ತಪಾಸಣೆ ಅಗತ್ಯವಿಲ್ಲ. ಆದರೂ, ನೀವು ಮೂರನೇ ವ್ಯಕ್ತಿ ತಪಾಸಣೆಗೆ ಆದೇಶಿಸಿದ್ದರು. ಎಲ್ಲಿದೆ ರೂಲ್ಸು. ಅದನ್ನಾದರೂ ತೋರಿಸಿ. ನಿಮಗೆ ಬೇಕಾದ ಹಾಗೇ ಆಡಳಿತ ಮಾಡುತ್ತಿದ್ದೀರಿ’.
ಕುಶಾಲ ಪಾಟೀಲ ಗಾದಗಿ, ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT