ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ರಂಗಮಂದಿರದ ಕಾಮಗಾರಿ ಚುರುಕು

Last Updated 23 ಜನವರಿ 2012, 6:35 IST
ಅಕ್ಷರ ಗಾತ್ರ

ಚಾಮರಾಜನಗರ: ಜನಪ್ರತಿನಿಧಿಗಳು ಮತ್ತು ಅಧಿಕಾರ ಶಾಹಿಯ ನಿರ್ಲಕ್ಷ್ಯದ ಪರಿಣಾಮ ಕೆಲವೊಮ್ಮೆ ಕಾಮಗಾರಿ ಗಳು ಆರಂಭವಾಗುವುದು ವಿಳಂಬ. ಅನುದಾನವಿದ್ದರೂ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಜನಪ್ರತಿನಿಧಿಗಳ ನಡುವೆ ಹಗ್ಗಜಗ್ಗಾಟ ನಡೆಯುವುದು ಉಂಟು.

ಕೆಲವು ಬಾರಿ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಕಾಮಗಾರಿಗಳು ತಡವಾಗಿ ಆರಂಭಗೊಂಡು ನಿರ್ಮಾಣದ ದರವೂ ಹೆಚ್ಚಾಗುತ್ತದೆ. ಇದಕ್ಕೆ ನಗರದ ಜಿಲ್ಲಾಡಳಿತ ಭವನದ ಬಳಿ ನಿರ್ಮಾಣ ಮಾಡುತ್ತಿರುವ `ಚಾಮರಾಜ ರಂಗಮಂದಿರ~  ನಿದರ್ಶನವಾಗಿದೆ.

ನಿಗದಿತ ಅವಧಿಯಲ್ಲಿ ರಂಗಮಂದಿರದ ಕಾಮಗಾರಿ ಆರಂಭಿಸಿದ್ದರೆ ಈ ವೇಳೆಗೆ ಸಾರ್ವಜನಿಕರು ಮತ್ತು ಕಲಾವಿದರ ಬಳಕೆಗೆ ಮಂದಿರ ಲಭ್ಯವಾಗಬೇಕಿತ್ತು. ತೀವ್ರ ವಿಳಂಬವಾಗಿ ಆರಂಭಗೊಂಡಿರುವ ಈ ರಂಗಮಂದಿರದ ಕಾಮಗಾರಿ ಈಗ ಶೇ. 40ರಷ್ಟು ಪೂರ್ಣಗೊಂಡಿದ್ದು, ಭರದಿಂದ ಸಾಗಿರುವುದೇ ಕೊಂಚಮಟ್ಟಿಗೆ ಸಮಾಧಾನ ಮೂಡಿಸಿದೆ.

ಜಿಲ್ಲೆಯಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಅವರಿಗೆ ಸೂಕ್ತ ವೇದಿಕೆಯೇ ಇಲ್ಲ. ಪ್ರತಿಭೆಯ ಅಭಿವ್ಯಕ್ತಿಗೆ ಸುಸಜ್ಜಿತ ಸಭಾಂಗಣವೂ ಇಲ್ಲ. ಜಿಲ್ಲಾಡಳಿತದ ಉಸ್ತುವಾರಿಯಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣ ಉತ್ತಮವಾಗಿದ್ದರೂ ನಾಟಕ, ಸಾಮೂಹಿಕ ನೃತ್ಯರೂಪಕ ಪ್ರದರ್ಶಿಸಲು ಉಪಯುಕ್ತವಾಗಿಲ್ಲ. ಉಳಿದಂತೆ ಕೋಟ್ಯಂತರ ರೂಪಾಯಿ ವೆಚ್ಚದಡಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರತಿಧ್ವನಿಯ ಕಿರಿಕಿರಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಅಪರೂಪ.

ಜಿಲ್ಲೆಗೆ ರಂಗಮಂದಿರ ಬೇಕೆಂಬ ಕಲಾವಿದರ ಕೂಗಿನ ನಡುವೆಯೇ ರಾಜ್ಯ ಸರ್ಕಾರ ಜಿಲ್ಲೆಗೊಂದು ರಂಗಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿತು. ಇದರನ್ವಯ ಗಡಿ ಜಿಲ್ಲೆಯಲ್ಲಿಯೂ ರಂಗಮಂದಿರ ನಿರ್ಮಾಣಕ್ಕೆ 2009-10ನೇ ಸಾಲಿನಡಿ 3.30 ಕೋಟಿ ರೂ ವೆಚ್ಚದಡಿ ಅಂದಾಜುಪಟ್ಟಿ ತಯಾರಿಸಲಾಯಿತು. ವಿಳಂಬದ ಪರಿಣಾಮ ಈ ಮೊತ್ತ 4 ಕೋಟಿ ರೂಗೆ ಮುಟ್ಟಿದೆ.

ಲೋಕೋಪಯೋಗಿ ಇಲಾಖೆಗೆ ಮಂದಿರ ನಿರ್ಮಾಣದ ಉಸ್ತುವಾರಿವಹಿಸಲಾಗಿದೆ. ಮೈಸೂರಿನ ಗುತ್ತಿಗೆದಾರರೊಬ್ಬರಿಗೆ ಮಂದಿರ ನಿರ್ಮಾಣದ ಗುತ್ತಿಗೆ ನೀಡಲಾಗಿದೆ. 2010ರ ಮಾರ್ಚ್ ತಿಂಗಳಲ್ಲಿ ಕಾಮಗಾರಿ ಪ್ರಾರಂಭಕ್ಕೆ ಆದೇಶ ನೀಡಲಾಗಿದ್ದು, 2011ರ ಸೆಪ್ಟೆಂಬರ್‌ನೊಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸಿದ್ದರೆ ಈ ವೇಳೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.

ಆದರೆ, ಮಂದಿರದ ಅಡಿಪಾಯದ ಸುತ್ತ ನೀರು ನಿಲ್ಲುತ್ತಿದ್ದ ಪರಿಣಾಮ ಕಾಮಗಾರಿ ವಿಳಂಬವಾಯಿತು. ತ್ವರಿತವಾಗಿ ಕಾರ್ಯ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡ ಉತ್ಸಾಹ ತೋರಿದ್ದು ಕಡಿಮೆ. ಹೀಗಾಗಿ, ಮಂದಿರ ನಿರ್ಮಾಣಕ್ಕೆ ತೀವ್ರ ವಿಳಂಬವಾಗಿದೆ ಎಂಬುದು ಕಲಾವಿದರ ದೂರು.

750 ಆಸನ ವ್ಯವಸ್ಥೆಯ ಈ ರಂಗಮಂದಿರ ಸಾರ್ವಜನಿಕರಿಗೆ ಲಭ್ಯವಾದರೆ ಜಿಲ್ಲಾ ಕೇಂದ್ರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಜೀವ ಬರಲಿದೆ. ಜತೆಗೆ, ಯಾವುದೇ ಅಡೆತಡೆ ಇಲ್ಲದೇ ಕಲೆಯ ಅಭಿವ್ಯಕ್ತಿಗೆ ಅನುಕೂಲವಾಗಲಿದೆ.

`ನಿಗದಿತ ವೇಳೆಗೆ ರಂಗಮಂದಿರದ ಕಾಮಗಾರಿ ಆರಂಭಗೊಂಡಿದ್ದರೆ ಈ ವೇಳೆಗೆ ಉದ್ಘಾಟನೆಗೊಳ್ಳಬೇಕಿತ್ತು. ಪ್ರಸ್ತುತ ಕಾಮಗಾರಿ ಬಿರುಸುಗೊಂಡಿರುವುದೇ ಕೊಂಚಮಟ್ಟಿಗೆ ನೆಮ್ಮದಿ ತಂದಿದೆ. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಾಮಗಾರಿ ಬಗ್ಗೆ ನಿಗಾವಹಿಸಿ ತ್ವರಿತವಾಗಿ ಪೂರ್ಣಗೊಳಿಸಲು ಆಸಕ್ತಿವಹಿಸಬೇಕು~ ಎಂದು ಒತ್ತಾಯಿಸುತ್ತಾರೆ ಹಿರಿಯ ನಾಗರಿಕ ಜಗನ್ನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT